ಪ್ರಗತಿವಾಹಿನಿ ಸುದ್ದಿ, ನೋಯ್ಡಾ: ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಯೊಬ್ಬ ತನ್ನ ಗೆಳತಿಯನ್ನು ವಿವಿ ಕ್ಯಾಂಪಸ್ ನಲ್ಲೇ ಗುಂಡಿಟ್ಟು ಕೊಲೆಗೈದು ತಾನೂ ಗುಂಡು ಹಾರಿಸಿಕೊಂಡು ಸಾವು ಕಂಡಿದ್ದಾನೆ.
ನೋಯ್ಡಾದ ಶಿವ ನಾಡಾರ್ ವಿಶ್ವವಿದ್ಯಾಲಯದ ಆವರಣದಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದೆ. ಕೊಲೆ ಘಟನೆ ವಿವಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸ್ನೇಹಾ ಚೌರಾಸಿಯಾ (21) ಗುಂಡೇಟಿಗೆ ಬಲಿಯಾದವಳು. ಆಕೆಯ ಸಹಪಾಠಿ, ಪ್ರೇಮಿ ಅನುಜ್ (21) ಕೃತ್ಯವೆಸಗಿದ ವಿದ್ಯಾರ್ಥಿ. ಇವರಿಬ್ಬರೂ 3ನೇ ವರ್ಷದ ಬಿಎ ಸಮಾಜಶಾಸ್ತ್ರ ವಿದ್ಯಾರ್ಥಿಗಳಾಗಿದ್ದರು. ಇವರಿಬ್ಬರ ಮಧ್ಯೆ ಆಗಾಗ ಮುನಿಸು, ಕಲಹಗಳು ನಡೆಯುತ್ತಿದ್ದವು ಎಂದು ಸಹಪಾಠಿಗಳು ತಿಳಿಸಿದ್ದಾರೆ.
ಸದ್ಯ ವಿವಿಗೆ ಬೇಸಿಗೆ ರಜೆ ಇದ್ದು, ವಸತಿ ನಿಲಯಗಳಲ್ಲಿರುವ ಇಬ್ಬರು ಗುರುವಾರ ಮಧ್ಯಾಹ್ನ ಪರಸ್ಪರ ಭೇಟಿಯಾಗಿದ್ದರು. ಈ ವೇಳೆ ಇಬ್ಬರು ತಬ್ಬಿಕೊಂಡು ಮಾತನಾಡುತ್ತಿದ್ದಾಗ ಅನುಜ್ ನೀಡಿದ ಉಡುಗೊರೆಯೊಂದನ್ನು ಸ್ನೇಹಾ ನಿರಾಕರಿಸಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಅನುಜ್ ಆಕೆಯ ಹೊಟ್ಟೆಗೆ ಗುಂಡು ಹಾರಿಸಿದ್ದು ಆಕೆ ಸ್ಥಳದಲ್ಲೇ ಕುಸಿದು ಬಿದ್ದು ಅಸುನೀಗಿದ್ದಾಳೆ.
ಈ ಕೃತ್ಯವೆಸಗಿದ ನಂತರ ಬಾಲಕರ ವಸತಿ ನಿಲಯದ ಕೋಣೆಗೆ ಹೋಗಿ ಅನುಜ್ ತಾನೂ ಗುಂಡು ಹಾರಿಸಿಕೊಂಡು ಸಾವು ಕಂಡಿದ್ದಾನೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ