ಪ್ರಗತಿವಾಹಿನಿ ಸುದ್ದಿ, ಅಥಣಿ: ರಾಜಕಾರಣದಲ್ಲಿ ಒಬ್ಬ ಪ್ರಬುದ್ಧ ವ್ಯಕ್ತಿಗೆ ದೂರದೃಷ್ಟಿ ಮತ್ತು ತಾಳ್ಮೆ ಇದ್ದಾಗ ಮಾತ್ರ ಯಶಸ್ವಿ ರಾಜಕಾರಣಿಯಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಲಿಶಾಸಕ ಲಕ್ಷ್ಮಣ ಸವದಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಎಲ್ಲ ಕಾರ್ಯಕರ್ತರು, ಅಭಿಮಾನಿಗಳು ತಮ್ಮ ಕ್ಷೇತ್ರದ ಶಾಸಕರು ಸಚಿವರಾಗಬೇಕು ಎಂಬ ಆಸೆ ಹೊಂದಿರುತ್ತಾರೆ. ಸ್ವಾಭಾವಿಕವಾಗಿ ವಂಚಿತರಾದಾಗ ನಿರಾಸೆ ಆಗುತ್ತದೆ. ಆದರೆ ಸರಕಾರದ ಸಚಿವ ಸಂಪುಟದಲ್ಲಿ ೩೪ ಜನರಿಗೆ ಮಾತ್ರ ಅವಕಾಶ ಇರುತ್ತದೆ, ಅಲ್ಲದೇ ಈ ಬಾರಿ ಅನೇಕ ಹಿರಿಯರು ಆಯ್ಕೆಯಾಗಿ ಬಂದಿರುವುದರಿಂದ ಅವರನ್ನು ಕಡೆಗಣಿಸಲು ಆಗುವದಿಲ್ಲ. ಈ ಎಲ್ಲ ಕಾರಣಕ್ಕೆ ಮತ್ತು ನಾನು ಇತ್ತೀಚೆಗೆ ಪಕ್ಷಕ್ಕೆ ಬಂದಿರುವುದರಿಂದ ಬಹುಶಃ ಸಾಧ್ಯವಾಗಿರಲಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಸಾಧ್ಯವಾಗಬಹುದು ಎಂಬ ಆಶಾಭಾವನೆ ನನ್ನದು. ಸಚಿವ ಸ್ಥಾನದ ಕುರಿತು ನಾನು ಯಾರ ಜೊತೆಗೂ ಮಾತನಾಡಲು ಹೋಗಿಲ್ಲ. ಪಕ್ಷಕ್ಕೆ ಸೇರ್ಪಡೆ ಸಂದರ್ಭದಲ್ಲೂ ಆ ರೀತಿಯ ಯಾವುದೇ ಆಶ್ವಾಸನೆ ಮೇಲೆ ಪಕ್ಷಕ್ಕೆ ಬಂದಿಲ್ಲ. ನಾನು ಎಂದೂ ಬಿಸಿಲು ಕುದುರೆ ಹಿಂದೆ ಓಡುವವನಲ್ಲ ಎಂದರು.
ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಮಾತನಾಡಿದ ಅವರು ಇಷ್ಟರಲ್ಲೇ ಸರ್ವೆ ಕಾರ್ಯ ಮುಗಿದ ಮೇಲೆ ಗೈಡಲೈನ್ಸ ದೊರಕಿದ ಕ್ಷಣ ಆದಷ್ಟು ಬೇಗ ಜಾರಿಗೆ ಬರಲಿದೆ, ಆ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಕಾರ್ಯಪವೃತರಾಗಿದ್ದು ಶೀಘ್ರದಲ್ಲಿಯೇ ಜಾರಿಗೆ ಬರುವದರಲ್ಲಿ ಯಾವ ಅನುಮಾನ ಬೇಡ ಎಂದರು. ಅಧಿಕಾರ ಹಸ್ತಾಂತರ ಕುರಿತು, ಅದು ನಾಲ್ಕು ಗೊಡೆಗಳ ಮಧ್ಯೆ ನಡೆದ ಮಾತುಕತೆ. ಊಹಾಪೋಹಗಳ ಬಗ್ಗೆ ಚರ್ಚೆ ಅನಾವಶ್ಯಕ. ಈ ಕುರಿತು ಯಾರು ಏನು ಮಾತನಾಡದೇ ಇರುವಾಗ ಯಾಕೇ ಚರ್ಚೆ ಎಂದು ಕೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ