ಮತ್ತೆ ಮುನ್ನೆಲೆಗೆ ಬಂದ ಬೆಳಗಾವಿ ಜಿಲ್ಲಾ ವಿಭಜನೆ ಕೂಗು – ನೂತನ ಸಚಿವರಾದ ಜಾರಕಿಹೊಳಿ, ಹೆಬ್ಬಾಳಕರ್ ಹೇಳಿದ್ದೇನು?
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ದೊಡ್ಡ ಜಿಲ್ಲೆ ಇಷ್ಟು ದೊಡ್ಡ ಜಿಲ್ಲೆಯನ್ನು ಮುನ್ನಡೆಸುವುದು ಸುಲಭವಲ್ಲ. ಹಾಗಾಗಿ ಅಭಿವೃದ್ಧಿಯ ದೃಷ್ಟಿಯಿಂದ ಜಿಲ್ಲಾ ವಿಭಜನೆ ಮಾಡಲೇಬೇಕಾಗಿದೆ ಎಂದು ನೂತನ ಸಚಿವರಾದ ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳಕರ್ ಘೋಷಿಸಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 50 ಲಕ್ಷ ಜನ, 18 ಶಾಸಕರು, ಎರಡೂವರೆ ಸಂಸದರು ಇರುವ ಜಿಲ್ಲೆಯನ್ನು ಮುನ್ನಡೆಸುವುದು ಸವಾಲಿನ ಕೆಲಸ. ಹಾಗಾಗಿ ಜಿಲ್ಲೆ ವಿಭಜನೆಯಾಗಲೇಬೇಕು. ಮಾಡೇ ಮಾಡುತ್ತೇವೆ ಎಂದು ಸತೀಶ್ ಹೇಳಿದರು.
ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲೆಯನ್ನು ವಿಭಜಿಸಬೇಕು ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ಎರಡು ಜಿಲ್ಲೆ ಕೇಳಲಿ, ಮೂರು ಜಿಲ್ಲೆ ಕೇಳಲಿ, ಕೇಳಲು ಎಲ್ಲರಿಗೂ ಹಕ್ಕಿದೆ. ಆದರೆ ಅಂತಿನ ತೀರ್ಮಾನ ಸರಕಾರದ್ದು ಎಂದು ಸತೀಶ್ ಸ್ಪಷ್ಟಪಡಿಸಿದರು.
ಬೆಳಗಾವಿ, ಚಿಕ್ಕೋಡಿ, ಗೋಕಾಕ ಮೂರು ಜಿಲ್ಲೆಯಾದರೂ ಸತೀಶ್ ಜಾರಕಿಹೊಳಿಗೆ ಪ್ರವೇಶವಿದೆ. ಗೋಕಾಕದಲ್ಲಿ, ಬೆಳಗಾವಿಯಲ್ಲಿ ನನ್ನ ಮನೆಯಿದೆ. ಚಿಕ್ಕೋಡಿಯಲ್ಲಿ ನನ್ನ ವಿಧಾನಸಭಾ ಕ್ಷೇತ್ರವಿದೆ ಎಂದು ಸತೀಶ್ ಹೇಳುತ್ತಿದ್ದಂತೆ, ಮಧ್ಯ ಪ್ರವೇಶಿಸಿದ ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ, ಬೈಲಹೊಂಗಲ ಜಿಲ್ಲೆಗೆ ನಮ್ಮ ಬೇಡಿಕೆ ಇದೆ ಎಂದು ಬಾಣ ಎಸೆದರು.
ಒಟ್ಟಾರೆ ಜಿಲ್ಲಾ ವಿಭಜನೆ ಈ ಸರಕಾರದ ಅವಧಿಯಲ್ಲಿ ಆಗೇ ಆಗುತ್ತದೆ ಎನ್ನುವ ಸುಳಿವನ್ನು ಸಚಿವರು ನೀಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ತಣ್ಣಗಾಗಿದ್ದ ಜಿಲ್ಲಾ ವಿಭಜನೆ ಕೂಗು ಮತ್ತೆ ಮುನ್ನೆಲೆಗೆ ಬಂದಂತಾಗಿದೆ.
ಇದೇ ವೇಳೆ, ಸುವರ್ಣ ವಿಧಾನಸೌಧಕ್ಕೆ ಕಚೇರಿಗಳ ಸ್ಥಳಾಂತರಕ್ಕೆ ಸತೀಶ್ ಜಾರಕಿಹೊಳಿ ವಿರೋಧ ವ್ಯಕ್ತಪಡಿಸಿದರು. ಇದಕ್ಕೆ ಮೊದಲಿನಿಂದಲೂ ನನ್ನ ವಿರೋಧವಿದೆ. ಒಬ್ಬ ಅಧಿಕಾರಿ ಇಲ್ಲಿ ಬಂದರೆ ಮತ್ತೊಬ್ಬ ಬೆಂಗಳೂರಲ್ಲೇ ಇರುತ್ತಾನೆ. ಇದರಿಂದ ೊಬ್ಬ ಸಹಿ ಹಾಕಿದರೆ ಮತ್ತೊಂದು ಸಹಿ ಆಗುವುದೇ ಇಲ್ಲ. ಅದು ಪೂರ್ಣ ಪ್ರಮಾಣದಲ್ಲಿ ಸಾಧ್ಯವಿಲ್ಲದ್ದು. ಇದಕ್ಕೆ ನಾನು ಯಾವತ್ತೂ ವಿರೋಧಿ. ಅದರ ಬದಲು ವಿವಿಧ ಸಭೆಗಳನ್ನು ನಡೆಸುವ ಮೂಲಕ ಸುವರ್ಣ ವಿಧಾನಸೌಧವನ್ನು ಸದ್ಭಳಕೆ ಮಾಡಿಕೊಳ್ಳುತ್ತೇವೆ. ಸಂಪುಟ ಸಭೆಗಳನ್ನು ಇಲ್ಲಿ ನಡೆಸಲು ಪ್ರಯತ್ನಿಸುತ್ತೇವೆ ಎಂದರು.
ಸಿಐಡಿ ತನಿಖೆ
ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಕ್ರಮ ನಡೆದಿರುವ ಬಗ್ಗೆ ಸಿಐಡಿ ತನಿಖೆ ನಡೆಸಲಾಗುವದು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಒಂದು ಕೋಟಿ ರೂ. ಬೆಲೆ ಬಾಳುವ ಆಸ್ತಿಯನ್ನು 20 ರಿಂದ 25 ಲಕ್ಷ ರೂ, ಗಳಿಗೆ ಮಾರಾಟ ಮಾಡಿದ್ದಾರೆ. ಅಧಿಕಾರಿಗಳು ಹೇಳುವ ಪ್ರಕಾರ ಎರಡು ಸಾರಿ ನೋಟಿಪಿಕೇಷನ್ ಮಾಡಿದರೂ ಜನ ಬಂದಿಲ್ಲ. ಬರದೆ ಇದ್ದರೆ ಆಕ್ಷನ್ ಮಾಡಲು ಅಧಿಕಾರ ಎನ್ನುತ್ತಾರೆ. ಅದು ಸರಿ ಇರಬಹುದು. ಆದರೆ ನಮ್ಮ ವಾದ ಪಕ್ಕದ ಆಸ್ತಿ ಒಂದು ಕೋಟಿ ರೂ. ಬೆಲೆಗೆ ಮಾರಾಟವಾಗುತ್ತದೆ, ಆದರೆ ನೀವು ಮಾರಾಟ ಮಾಡಿದ್ದು 25 ಲಕ್ಷ ರೂ.ಗೆ. ಸುಮಾರು 100 ಕೋಟಿ ರೂ. ನಷ್ಟವಾಗಿದೆ. ಯಾವುದೇ ಕಾರಣಕ್ಕೂ ಈ ಪ್ರಕರಣ ಬಿಡುವ ಮಾತೇ ಇಲ್ಲ ಎಂದರು.
ನಾಳೆಯಿಂದ ಶಾಲೆಗಳು ಪ್ರಾರಂಭವಾಗುತ್ತಿವೆ. ಹೊಸ ಶಿಕ್ಷಣ ನೀತಿಗೆ ನಮ್ಮ ಸರಕಾರದ ವಿರೋಧ ಇದೆ. ಪಠ್ಯಕ್ರಮದಲ್ಲಿನ ಅನಾವಶ್ಯಕವಾದ ವಿಷಯಗಳನ್ನು ತೆಗೆದು ಹಾಕಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಕೆಡಿಪಿ ಸಭೆಗೂ ಮುನ್ನ ಪ್ರತ್ಯೇಕ ಇಲಾಖೆಯ ಸಭೆ ನಡೆಸಲಾಗುತ್ತಿದೆ. ಜೂ.6 ರಂದು ಮಹಾನಗರ ಪಾಲಿಕೆಯ ವ್ಯಾಪ್ತಿಯ ವಿವಿಧ ಇಲಾಖೆಗಳ ಸಭೆ ನಡೆಸಲಾಗುತ್ತಿದೆ. ರಾಜ್ಯದ ಜನತೆ ನಮ್ಮ ಮೇಲೆ ಸಾಕಷ್ಟು ಭರವಸೆ ಇಟ್ಟಿದ್ದಾರೆ. ಜನ ಬಯಸುವ ಹಾಗೆ ಆಡಳಿತ ನಡೆಸಲಾಗುವುದು ಎಂದರು.
ಬಿಜೆಪಿ ಸರಕಾರದ ಅವಧಿಯಲ್ಲಿ ಸಾಕಷ್ಟು ರಸ್ತೆಗಳ ಸು ಧಾರಣೆಯಾಗಿಲ್ಲ. ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಸಾಕಷ್ಟಿದೆ. ಆ ಸಮಸ್ಯೆಯನ್ನು ಬಗೆ ಹರಿಸುವ ಕೆಲಸ ಮಾಡಲಾಗುವುದು. ಹಿಂದಿನ ಸರಕಾರದ ಸಚಿವರು ಈ ಕುರಿತು ಗಮನ ಹರಿಸಬೇಕಿತ್ತು. ಅದನ್ನು ಮಾಡದೆ ಇರುವುದು ಈಗ ಸಮಸ್ಯೆಯಾಗಿದೆ. ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಎಲ್ಲಿ ಅವಶ್ಯಕತೆ ಇದೆ ಕುಡಿಯುವ ನೀರನ್ನು ಪೂರೈಕೆ ಮಾಡಬೇಕೆಂದು ಸೂಚನೆ ನೀಡಲಾಗಿದೆ ಎಂದರು.
ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅವ್ಯವಹಾರವಾಗಿರುವ ಕುರಿತು ಅವಶ್ಯ ಬಿದ್ದರೆ ಬೆಂಗಳೂರಿನಿಂದ ತನಿಖೆ ನಡೆಸಲಾಗುವುದು. ಇದಕ್ಕೆ ಸೂಕ್ತವಾದ ದಾಖಲೆ ನೀಡಿದರೆ ಖಂಡಿತವಾಗಿಯೂ ಕ್ರಮ ಕೈಗೊಳ್ಳಲಾಗುವುದು. ಇದಕ್ಕೂ ಮುನ್ನ ಸಭೆ ನಡೆಸಿ ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮ ಎಂದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಶಾಸಕರಾದ ಆಸೀಫ್ ಸೇಠ್, ಮಹಾಂತೇಶ ಕೌಜಲಗಿ, ವಿಶ್ವಾಸ್ ವೈದ್ಯ, ಮಹೇಂದ್ರ ತಮ್ಮಣ್ಣವರ್, ಜಿಲ್ಲಾಧಿಕಾರಿ ನಿತೇಶ ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ