Kannada NewsLatest

ತಡರಾತ್ರಿ ಲಕ್ಷ್ಮಣ ಸವದಿ ನಿವಾಸಕ್ಕೆ ಭೇಟಿ ನೀಡಿ ಸಮಾಲೋಚಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬಿಜೆಪಿ ತೊರೆದು ಅಥಣಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿ ದಾಖಲೆ ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿರುವ ಲಕ್ಷ್ಮಣ ಸವದಿ ನಿವಾಸಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಮಂಗಳವಾರ ತಡರಾತ್ರಿ ಭೇಟಿ ನೀಡಿ ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ರಹಸ್ಯವಾಗಿ ಚರ್ಚಿಸಿದರು.

ಈ ಗೌಪ್ಯ ಸಭೆಗೆ ಶಾಸಕರು, ವಿಧಾನ ಪರಿಷತ್ ಸದಸ್ಯರಿಗೂ ಅವಕಾಶ ಇರಲಿಲ್ಲ. ಡಿಸಿಎಂ ಜತೆ ಕೇವಲ ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಮಾತ್ರ ಇದ್ದರು.

ಸಚಿವ ಸ್ಥಾನದ ಹಂಚಿಕೆಗೆ ಸಂಬಂಧಿಸಿದಂತೆ ಲಕ್ಷ್ಮಣ ಸವದಿ ಅವರೊಂದಿಗೆ ಸಮಾಲೋಚಿಸಿದ ಡಿ.ಕೆ.ಶಿವಕುಮಾರ್, ಸವದಿ ಹಾಗೂ ಜಗದೀಶ ಶೆಟ್ಟರ್ ಅವರನ್ನು ಪಕ್ಷ ಗೌರವಯುತವಾಗಿ ನಡೆಸಿಕೊಳ್ಳಲಿದ್ದು ಮುಂಬರುವ ದಿನಗಳಲ್ಲಿ ಒಳ್ಳೆಯ ಸ್ಥಾನಮಾನಗಳನ್ನು ನೀಡುವ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬುಧವಾರ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, “ಬೇರೆ ಬೇರೆ ಪಕ್ಷಗಳಿಂದ ಬಂದು ಕಾಂಗ್ರೆಸ್ ಗೆ ಶಕ್ತಿ ತುಂಬಿದವರು. ಗೆದ್ದಿರಬಹುದು, ಸೋತಿರಬಹುದು. ಅವರು ನಮ್ಮ ನಾಯಕರು. ಬಿಜೆಪಿ, ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರ್ಪಡೆಗೊಂಡು ಕಾಂಗ್ರೆಸ್ ಗೆ ಶಕ್ತಿ ತುಂಬಿ ರಾಜ್ಯದಲ್ಲಿ ಸರಕಾರ ರಚನೆಯಾಗಲು ಕಾರಣರಾಗಿದ್ದಾರೆ. ಚುನಾವಣೆಯ ಮುಗಿದ ಮೇಲೆ ಶಾಸಕಾಂಗದ ಸಭೆ, ಪ್ರಮಾಣ ವಚ‌ನ, ಸಚಿವ ಸಂಪುಟದ ಒತ್ತಡದಲ್ಲಿ ಅವರನ್ನು ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಸೋಲು ಕಂಡವರೂ ಹಲವರಿದ್ದು ಅವರಿಗೆ ಶಕ್ತಿ ತುಂಬುವ ಕರ್ತವ್ಯ ನಮ್ಮದಾಗಿದೆ. ಈ ನಿಟ್ಟಿನಲ್ಲಿ ಎಲ್ಲರನ್ನೂ ಭೇಟಿ ಮಾಡುತ್ತಿದ್ದೇನೆ” ಎಂದರು.

“ಸೋಲು ಕಂಡವರಲ್ಲಿ, ಪಕ್ಷ ಬಿಟ್ಟು ಬಂದು ಶಾಸಕರಾದವರಲ್ಲಿ ಯಾರೂ ಸಚಿವ ಸ್ಥಾನದ ಬೇಡಿಕೆ ಇಟ್ಟಿರಲಿಲ್ಲ. ಸದ್ಯ ಸಚಿವ ಸಂಪುಟ ಭರ್ತಿಯಾಗಿದ್ದು ಮುಂಬರುವ ದಿನಗಳಲ್ಲಿ ಅವರೆಲ್ಲರಿಗೆ ಪಕ್ಷದಲ್ಲಿ ಉತ್ತಮ ಸ್ಥಾನ ಮಾನ ನೀಡಲಾಗುವುದು” ಎಂದರು.

ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕರಾದ ಬಾಬಾಸಾಹೇಬ ಪಾಟೀಲ, ಮಹೇಶ ತಮ್ಮಣ್ಣವರ, ವಿಶ್ವಾಸ ವೈದ್ಯ, ಚನ್ನರಾಜ ಹಟ್ಟಿಹೊಳಿ, ಆಸೀಫ್ ಸೇಠ್ ಇನ್ನಿತರರು ಉಪಸ್ಥಿತರಿದ್ದರು.

https://pragati.taskdun.com/the-aim-is-to-get-permission-from-the-center-for-state-irrigation-projects-to-officials/

https://pragati.taskdun.com/we-will-curb-the-politics-of-hatred-cm-siddaramaiah/
https://pragati.taskdun.com/new-government-ready-to-face-any-investigation-ex-cm-bommai/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button