ಸನ್ಮಾನ್ಯ ಮುಖ್ಯಮಂತ್ರಿಗಳೆ… ಸಿದ್ದರಾಮಯ್ಯಗೆ ಬೊಮ್ಮಾಯಿ ಪತ್ರ

ಶ್ರೀ ಸಿದ್ದರಾಮಯ್ಯ ನವರು
ಸನ್ಮಾನ್ಯ ಮುಖ್ಯಮಂತ್ರಿಗಳು
ಕರ್ನಾಟಕ ಸರ್ಕಾರ,
ಬೆಂಗಳೂರು.

ಸನ್ಮಾನ್ಯ ಮುಖ್ಯಮಂತ್ರಿಗಳೆ,

ತಾವು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದು ತಮಗೆ ನನ್ನ ಅಭಿನಂದನೆಗಳು.
ಕಳೆದ ಎರಡು ವಾರದಿಂದ ತಾವು ತಮ್ಮ ಪಕ್ಷ ನೀಡಿರುವ ಐದು ಗ್ಯಾರೆಂಟಿಗಳ ಅನುಷ್ಠಾನಕ್ಕಾಗಿ ಹಲವಾರು ಸಭೆಗಳನ್ನು ನಡೆಸಿದ್ದೀರಿ. ಅದರಲ್ಲಿಯೂ ಆರ್ಥಿಕ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿರುವುದು ಎಲ್ಲರಿಗೂ ತಿಳಿದಿದೆ‌.
ತಾವೇ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿರುವಂತೆ ಎಲ್ಲ ಗ್ಯಾರೆಂಟಿ ಯೋಜನೆಗಳನ್ನು ಅನುಷ್ಠಾನ ಮಾಡಲು ಸುಮಾರು ಐವತ್ತು ಸಾವಿರ ಕೋಟಿ ರೂಪಾಯಿ ಬೇಕೆಂದು ರಾಜ್ಯದ ಜನತೆಗೆ ತಿಳಿಸಿದ್ದೀರಿ.
ಈ ಯೋಜನೆಗಳ ಅನುಷ್ಠಾನದ ಸಂದರ್ಭದಲ್ಲಿ ಕೆಲವು ಎಚ್ಚರಿಕೆ ವಹಿಸುವುದು ರಾಜ್ಯದ ಪ್ರಮುಖ ಕ್ಷೇತ್ರಗಳಾದ ಶಿಕ್ಷಣ, ಆರೋಗ್ಯ, ಮಹಿಳಾ ಅಭಿವೃದ್ಧಿ, ಮೂಲಭೂತ ಸೌಕರ್ಯ, ರೈತರ, ದೀನ ದಲಿತರ ಹಾಗೂ ಹಿಂದುಳಿದ ವರ್ಗಗಳ ಹಿತ ಕಾಪಾಡುವುದು ಅವಶ್ಯಕತೆ ಇದೆ ಎನ್ನುವ ಮಾತು ಜನರಲ್ಲಿ ಕೇಳಿ ಬರುತ್ತಿದೆ. ಅದನ್ನು ತಮ್ಮ ಗಮನಕ್ಕೆ ತರಲು ಬಯಸಿರುತ್ತೇನೆ.
ರೈತರಿಗೆ ನೀಡಲಾಗುವ ಬಡ್ಡಿ ರಹಿತ ಅಲ್ಪಾವಧಿ ಸಾಲದ ಮಿತಿ ಮೂರು ಲಕ್ಷದಿಂದ ಐದು ಲಕ್ಷಕ್ಕೆ ಏರಿಸಿರುವುದು ಯಾವುದೇ ಹಣಕಾಸಿನ ಕಡಿತ ಮಾಡುವುದು ಸೂಕ್ತವಲ್ಲ. ರೈತರ ಕನಿಷ್ಟ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಆವರ್ತ ನಿಧಿ 3500 ಕೋಟಿಗೆ ಹೆಚ್ಚಿಸಲು 2023-24 ರ ಆಯವ್ಯಯದಲ್ಲಿ 1500 ಕೋಟಿ ಒದಗಿಸಲಾಗಿದ್ದು ಇದು ಅತ್ಯಂತ ಅಗತ್ಯವಾಗಿದ್ದು ಇದನ್ನು ಕಡಿತಗೊಳಿಸಬಾರದು.
ವಿವೇಕ ಯೋಜನೆ ಅಡಿಯಲ್ಲಿ 7601 ಶಾಲಾಕೊಠಡಿಗಳು ಹಾಗೂ ಇತರ ಯೋಜನೆ ಅಡಿಯಲ್ಲಿ ಸೇರಿ ಒಟ್ಟು 9556 ಶಾಲಾ ಕೊಠಡಿಗಳ ನಿರ್ಮಾಣವನ್ನು ಪ್ರಸ್ತುತ ವರ್ಷ ಪೂರ್ಣಗೊಳಿಸುವ ಉದ್ದೇಶವಿದ್ದು ಇದರಲ್ಲಿ ಅನುದಾನದ ಕಡಿತ ಮಾಡಬಾರದು.
ರೈತರು, ಕಾರ್ಮಿಕರು, ಮೀನುಗಾರರು, ನೇಕಾರರು ಇತರರಿಗೆ ರೈತ ವಿದ್ಯಾನಿಧಿ ಕಾರ್ಯಕ್ರಮ ಮುಂದುವರೆಸುವುದು ಅತ್ಯಂತ ಅವಶ್ಯವಿದ್ದು ಸೂಕ್ತ ಅನುದಾನ ಆಯವ್ಯಯದಲ್ಲಿ ಒದಗಿಸಿದ್ದು ಕಡಿತಗೊಳಿಸಬಾರದು.
ಉಚಿತ ಡಯಾಲಿಸಿಸ್ ಸೇವೆ ಒಂದು ಲಕ್ಷ ಸೈಕಲ್ ಗೆ ವಿಸ್ತರಣೆ ಮಾಡಿದ್ದು, ಹಾಗೂ ಕ್ಯಾನ್ಸರ್ ಪೀಡಿತ ರೋಗಿಗಳಿಗೆ ಕಿಮೊ ಥೆರಪಿ ಸೈಕಲ್ ಗಳನ್ನು ಹೆಚ್ಚಿಸುವಂತಹದ್ದು, ಮತ್ತು ಪಿಎಚ್ ಸಿಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳಾಗಿ ಉನ್ನತಿಕರಣ ಮಾಡುವ ಯೊಜನೆಗಳನ್ನು ಯಾವುದೇ ಕಾರಣಕ್ಕು ನಿಲ್ಲಿಸಬಾರದು.
ಮಹಿಳೆಯರಿಗೆ ಸ್ತ್ರೀ ಸಾಮರ್ಥ್ಯ ಯೋಜನೆ, ಮಹಿಳಾ ಮತ್ತು ಮಕ್ಕಳ ಪೌಷ್ಟಿಕ ಕಾರ್ಯಕ್ರಮಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭಿವೃದ್ಧಿಗೆ ಎಸ್ಸಿಪಿ, ಟಿಎಸ್ ಪಿ ಅನುದಾನವನ್ನು ಕಡಿತಗೊಳಿಸಬಾರದು. ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ನೀಡಿದ ಹಾಸ್ಟೆಲ್ ಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು ಅದಕ್ಕೆ ಅನುದಾನ ಕಡಿತಗೊಳಿಸಬಾರದು.
ಹಾಗೂ ಗ್ರಾಮೀಣ ಮೂಲಭೂತ ಸೌಕರ್ಯ ಯೋಜನೆಗಳಾದ ಜಲಜೀವನ ಮಿಷನ್, ಗೃಹ ನಿರ್ಮಾಣ, ನೀರಾವರಿ ಯೋಜನೆ, ಪಂಚಾಯತಿಗೆ ಅನುದಾನ ಕೊರತೆಯಾಗದಂತೆ ನೋಡಿಕೊಳ್ಳುವುದು. ಅದೇ ರೀತಿ ರಾಜ್ಯ, ಜಿಲ್ಲಾ ರಸ್ತೆಗಳ ನಿರ್ಮಾಣ ಪ್ರಗತಿ ಮೊಟಕುಗೊಳಿಸಬಾರದು ಹಾಗೂ ಕೇಂದ್ರ ರಾಜ್ಯ ಸಹಭಾಗಿತ್ವದಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಿಗೆ ಹಣಕಾಸು ಒದಗಿಸುವುದು. ರಾಜ್ಯದ ಹಿತದೃಷ್ಟಿಯಿಂದ ಅತ್ಯಂತ ಅವಶ್ಯವಿದೆ.
ನಗರ ಪ್ರದೇಶಗಳಲ್ಲಿ ನಗರೊತ್ಥಾನ ಸ್ಮಾರ್ಟ್ ಸಿಟಿ ಯೊಜನೆ ಮೆಟ್ರೊ, ಸಬರಬನ್ ಯೋಜನೆಗಳನ್ನು ಮುಂದುವರೆಸುವುದು ಬೆಂಗಳೂರಿನ ಅಭಿವೃದ್ಧಿಗೆ ಅತಿ ಅವಶ್ಯವಿರುತ್ತದೆ.
ಮೇಲೆ ಕಾಣಿಸಿದ ವಿಷಯಗಳ ಜೊತೆಗೆ ಇತರ ಇಲಾಖೆಗಳ ಎಲ್ಲ ಅಭಿವೃದ್ಧಿ ಯೋಜನೆಗಳನ್ನು ಮುಂದುವರೆಸಿಕೊಂಡು ಹೊಗುವುದು ಕರ್ನಾಟಕದ ಸರ್ವಾಂಗೀಣ ಅಭಿವೃದ್ದಿಯ ದೃಷ್ಟಿಯಿಂದ ಅವಶ್ಯಕತೆ ಇದೆ. ಇದರ ಬಗ್ಗೆ
ಅನುದಾನವನ್ನು ಖಚಿತ ಪಡಿಸುವುದು ಹಾಗೂ ಸಮಗ್ರ ಮಾಹಿತಿಯನ್ನು ರಾಜ್ಯದ ಜನತೆಗೆ ಕೊಡಬೇಕಾಗಿ ನಾನು ಆಗ್ರಹ ಮಾಡುತ್ತೇನೆ.
ತಾವು ಕೊಡುತ್ತಿರುವ ಗ್ಯಾರೆಂಟಿ ಯೋಜನೆಗಳಿಗೆ 50 ಸಾವಿರ ಕೋಟಿ ರೂ. ಅಗತ್ಯವಿರುವ ಹಿನ್ನೆಲೆಯಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಬಾರದು ಹಾಗೂ ರಾಜ್ಯದ ಜನತೆಯ ಮೇಲೆ ಅಪರೊಕ್ಷವಾಗಿ ಹೆಚ್ಚಿನ ಭಾರ ಬೀಳಬಾರದೆಂದು ಈ ಪತ್ರ ಬರೆಯುತ್ತಿದ್ದೇನೆ.

ಧನ್ಯವಾದಗಳೊಂದಿಗೆ..

ಬಸವರಾಜ ಬೊಮ್ಮಾಯಿ
ಮಾಜಿ ಮುಖ್ಯಮಂತ್ರಿ

ಯಡಿಯೂರಪ್ಪ ಮನೆಗೆ ತೆರಳಿ ಮಾತುಕತೆ ನಡೆಸಿದ ಡಿ.ಕೆ.ಶಿವಕುಮಾರ

https://pragati.taskdun.com/dk-sivakumar-who-went-to-yeddyurappas-house-and-talked/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button