ಕುಮಾರಸ್ವಾಮಿ ಮುಂದಿದೆ 3 ಆಯ್ಕೆಗಳು…
ಎಂ.ಕೆ.ಹೆಗಡೆ, ಬೆಳಗಾವಿ – ರಾಜ್ಯದ ಜನರು, ಜನಪ್ರತಿನಿಧಿಗಳು ಖಾತರದಿಂದ ಕಾಯುತ್ತಿದ್ದ ತೀರ್ಪು ಹೊರಬಂದಾಗಿದೆ. ಸರ್ವೋಚ್ಛ ನ್ಯಾಯಾಲಯ ಅತ್ಯಂತ ಚಾಣಾಕ್ಷತನದ ತೀರ್ಪು ನೀಡಿದೆ. ಅತ್ತ ಸ್ಪೀಕರ್ ಅಧಿಕಾರವನ್ನೂ ಪ್ರಶ್ನಿಸಲು ಹೋಗಲಿಲ್ಲ, ಇತ್ತ ಬಂಡಾಯ ಶಾಸಕರ ಭಾವನೆಗೂ ಧಕ್ಕೆ ಉಂಟು ಮಾಡಲಿಲ್ಲ ತೀರ್ಪು.
ರಾಜಿನಾಮೆ ವಿಚಾರದಲ್ಲಿ ತನಗೆ ಸುಪ್ರಿಂ ಅಧಿಕಾರವಿದೆ. ಹಾಗಾಗಿ ಈ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ಸುಪ್ರಿಂ ಕೋರ್ಟ್ ಗೆ ಅಧಿಕಾರವಿಲ್ಲ ಎಂದು ಸ್ಪೀಕರ್ ವಾದಿಸಿದ್ದರು. ಅದನ್ನು ಸುಪ್ರಿಂ ಕೋರ್ಟ್ ಒಪ್ಪಿದೆ. ಕಾಲಮಿತಿಯಲ್ಲಿ ತೀರ್ಮಾನಿಸಿ ಎಂದಷ್ಟೆ ಹೇಳಿದೆ.
ಆದರೆ ನೀವು ರಾಜಿನಾಮೆ ಬಗ್ಗೆ ತೀರ್ಮಾನಿಸುವವರೆಗೆ ಬಂಡಾಯ ಶಾಸಕರ ಮೇಲೆ ಯಾವುದಕ್ಕೂ ಒತ್ತಡ ಹೇರುವಂತಿಲ್ಲ. ಅವರು ಅಧಿವೇಶನದಲ್ಲಿ ಭಾಗವಹಿಸುವಂತೆ ಆದೇಶಿಸುವಂತಿಲ್ಲ, ಅವರಿಗೆ ವಿಪ್ ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಅಂದರೆ ರಾಜಿನಾಮೆ ಶಾಸಕರ ಹಕ್ಕು, ಅದನ್ನು ಪ್ರಶ್ನಿಸುವಂತಿಲ್ಲ ಎಂದೂ ಕೋರ್ಟ್ ಸೂಚ್ಯವಾಗಿ ಹೇಳಿದೆ. ರಾಜಿನಾಮೆ ಬಗ್ಗೆ ನೀವು ಮಾಡಿದ ತೀರ್ಮಾನವನ್ನು ಸುಪ್ರಿಂ ಕೋರ್ಟ್ ಗೆ ತಿಳಿಸಿ ಎಂದೂ ಸ್ಪೀಕರ್ ಗೆ ಹೇಳಿದೆ.
ಈ ತೀರ್ಪು ಸ್ಪೀಕರ್ ರಮೇಶ ಕುಮಾರ್ ಗೂ ಸಮಾಧಾನ ತರಿಸಿದೆ, ಬಂಡಾಯ ಶಾಸಕರಿಗೂ ಸಮಾಧಾನ ತಂದಿದೆ. ಇಬ್ಬರಿಗೂ ಅವರವರ ನಿರೀಕ್ಷೆಯಂತೆ ತೀರ್ಪು ಬಂದಿದೆ.
ಕುಮಾರಸ್ವಾಮಿ ನಡೆ ಏನು?
ಈಗ ಸರಕಾರದ ಭವಿಷ್ಯವೇನು? ಸರಕಾರದ ನಡೆ ಏನು? ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮುಂದಿರುವ ಆಯ್ಕೆಗಳೇನು?
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಗುರುವಾರ ವಿಶ್ವಾಸಮತ ಯಾಚಿಸುವುದಾಗಿ ಈಗಾಗಲೆ ತೀರ್ಮಾನವಾಗಿದೆ. ಗುರುವಾರ ವಿಶ್ವಾಸಮತ ಯಾಚಿಸಲು ಸುಪ್ರಿಂ ಕೋರ್ಟ್ ಅಡ್ಡಿಯಾಗಿಲ್ಲ. ಹಾಗಾಗಿ ವಿಶ್ವಾಸಮತ ಯಾಚನೆ ನಡೆಯಲಿದೆ.
ಆದರೆ ಬಂಡಾಯ ಶಾಸಕರು ಹಾಜರಾಗುವುದಿಲ್ಲ ಎಂದು ಈಗಾಗಲೆ ಘೋಷಿಸಿದ್ದಾರೆ. ಮುಂಬೈಯಲ್ಲಿರುವ 15 ಶಾಸಕರು ನಾಳೆ ಸದನಕ್ಕೆ ಬರುವುದಿಲ್ಲ. ಹಾಗಾಗಿ ವಿಶ್ವಾಸಮತ ಯಾಚಿಸಿದರೆ ಸರಕಾರ ಬೀಳುವುದು ಬಹುತೇಕ ಖಚಿತ.
ಹಾಗಾಗಿ ಕುಮಾರಸ್ವಾಮಿ ಮುಂದೆ 3 ಆಯ್ಕೆಗಳಿವೆ. ಮೊದಲನೆಯದಾಗಿ, ಇಂದೇ ರಾಜಿನಾಮೆ ನೀಡಿ ವಿಶ್ವಾಸಮತ ಯಾಚಿಸುವ ಸಾಹಸಕ್ಕೆ ಇಳಿಯದಿರುವುದು.
ಎರಡನೆಯದಾಗಿ, ನಾಳೆ ಸದನದಲ್ಲಿ ಸುದೀರ್ಘ ಭಾಷಣ ಮಾಡಿ, ತಮ್ಮ ಸರಕಾರದ ಯೋಜನೆಗಳು (ಈಗಾಗಲೆ ಜಾರಿ ಮಾಡಿರುವುದು ಮತ್ತು ಮುಂದೆ ಜಾರಿಗೊಳಿಸಲು ಯೋಚಿಸಿದ್ದು) ಮತ್ತು ಅದಕ್ಕೆ ಎದುರಿಸಿದ ಅಡೆತಡೆಗಳನ್ನು ವಿವರಿಸುವುದು. ಸಮ್ಮಿಶ್ರ ಸರಕಾರ ನಡೆಸುವ ಸಂದರ್ಭದಲ್ಲಿ ಎದುರಿಸಿದ ಸಂಕಷ್ಟಗಳನ್ನು ಭಾವನಾತ್ಮಕವಾಗಿ ವಿವರಿಸುವ ಮೂಲಕ ಜನರ ಅನುಕಂಪ ಗಿಟ್ಟಿಸುವ ಪ್ರಯತ್ನ ಮಾಡುವುದು. ನಂತರ ವಿಶ್ವಾಸ ಮತ ಯಾಚಿಸುವ ಬದಲು ರಾಜಿನಾಮೆ ನಿರ್ಧಾರಪ್ರಕಟಿಸುವುದು.
ಮೂರನೆಯದಾಗಿ ಏನಾದರೂ ಆಗಲಿ, ವಿಶ್ವಾಸ ಮತ ಯಾಚಿಸಿ ನಂತರವೇ ತೀರ್ಮಾನಿಸೋಣ ಎಂದು ಮುನ್ನುಗ್ಗುವುದು.
ಈ ಮೂರರಲ್ಲಿ ಕುಮಾರಸ್ವಾಮಿ ಯಾವ ಆಯ್ಕೆ ಮಾಡಿಕೊಳ್ಳಲಿದ್ದಾರೆ ಕಾದು ನೋಡಬೇಕು.ಈಗಾಗಲೆ ಕುಮಾರಸ್ವಾಮಿ ತಂದೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ತಜ್ಞರೊಂದಿಗೆ ಚರ್ಚಿಸುತ್ತಿದ್ದಾರೆ. ಸಚಿವಸಂಪುಟದ ಸಭೆಯನ್ನೂ ಕರೆಯಬಹುದು. ಕಾಂಗ್ರೆಸ್ ನಾಯಕರೊಂದಿಗೆ ಸುದೀರ್ಘ ಚರ್ಚೆ ನಡೆಸಬಹುದು.
ಇಂದು ಸಂಜೆಯ ಹೊತ್ತಿಗೆ ಮುಖ್ಯಮಂತ್ರಿಗಳ ನಿರ್ಧಾರ ಬಹುತೇಕ ಗೊತ್ತಾಗಬಹುದು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ