ನಾಳೆ ಉಡುಪಿಯಲ್ಲಿ ‘ಶಕ್ತಿ ಯೋಜನೆ’ಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಚಾಲನೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಕಾಂಗ್ರೆಸ್​ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ “ಶಕ್ತಿ ಯೋಜನೆ”ಗೆ ಭಾನುವಾರ ಬೆಳಗ್ಗೆ 12 ಗಂಟೆಗೆ ಉಡುಪಿಯ ಬನ್ನಂಜೆ ಬಸ್ ನಿಲ್ದಾಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಹಿರಿಯ ನಾಗರಿಕರು ಮತ್ತು ವಿಕಲಚೇತನರ ಸಬಲೀಕರಣ ಸಚಿವರೂ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಲಕ್ಷ್ಮೀ ಹೆಬ್ಬಾಳಕರ್ ಅವರು ಚಾಲನೆ ನೀಡಲಿದ್ದಾರೆ.

ಭಾನುವಾರ ಬೆಳಗ್ಗೆ 7.50ಕ್ಕೆ ಬೆಂಗಳೂರಿನಿಂದ ವಿಮಾನದಲ್ಲಿ ಹೊರಟು 8.35ಕ್ಕೆ ಬಜ್ಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಲಕ್ಷ್ಮೀ ಹೆಬ್ಬಾಳಕರ್, 10.15ಕ್ಕೆ ಉಡುಪಿಯ ಶ್ರೀಕೃಷ್ಣ ದೇವಾಲಯ ಮತ್ತು ಮಠಕ್ಕೆ ಭೇಟಿ ನೀಡಲಿದ್ದಾರೆ. ನಂತರ 11 ಗಂಟೆಗೆ ಉಡುಪಿಯ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡುವರು.

12 ಗಂಟೆಗೆ ಬನ್ನಂಜೆ ಡಾ.ವಿ.ಎಸ್.ಆಚಾರ್ಯ ಬಸ್ ನಿಲ್ದಾಣದಲ್ಲಿ ಕರ್ನಾಟಕ ಸರಕಾರದ ವತಿಯಿಂದ ರಾಜ್ಯಾದ್ಯಂತ ಮಹಿಳೆಯರಿಗೆ ನಗರ ಸಾರಿಗೆ, ಸಾಮಾನ್ಯ ಹಾಗೂ ವೇಗದೂತ ಸರಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆಗೆ ಲಕ್ಷ್ಮೀ ಹೆಬ್ಬಾಳಕರ್ ಚಾಲನೆ ನೀಡುವರು. ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ರಾತ್ರಿ 9.50ಕ್ಕೆ ಸಚಿವರು ಬಜ್ಪೆ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ತೆರಳುವರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button