
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಲುಷಿತ ನೀರು ಸೇವಿಸಿ ಮೂವರು ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ, ಕೊಪ್ಪಳ ಜಿಲ್ಲಾ ಪಂಚಾಯತ್ ಸಿಇಒ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಜ್ಯದ 8 ಜಿಲ್ಲೆಗಳಲ್ಲಿ ಕುಡಿಯುವ ನೀರು ಸಮಸ್ಯೆ ಹಿನ್ನೆಲೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ 8 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಸಿಇಒಗಳ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ, ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ಸಮಸ್ಯೆ ಆಗಬಾರದು. ಅಗತ್ಯ ಕ್ರಮಗಳನ್ನು ತಕ್ಷಣ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಇದೇ ವೇಳೆ ಕೊಪ್ಪಳದಲ್ಲಿ ಕಲುಷಿತ ನೀರು ಸೇವಿಸಿ ಮೂವರು ಸಾವನ್ನಪ್ಪಿದ ಪ್ರಕರಣ ಪ್ರಸ್ತಾಪಿಸಿದ ಸಿಎಂ ಸಿದ್ದರಾಮಯ್ಯ, ಕೊಪ್ಪಳ ಜಿಲ್ಲಾ ಪಂಚಾಯತ್ ಸಿಇಒ ಅವರನ್ನು ತರಾಟೆಗೆ ತೆಗೆದುಕೊಂಡರು. ನೀವು ಜನರನ್ನು ಸಾಯಿಸಲು ಇರುವುದಾ? ಕಳಪೆ ಕಾಮಗಾರಿಯೇ ಕಲುಷಿತ ನೀರಿಗೆ ಕಾರಣ. ಮೊದಲ ಪ್ರಕರಣ ನಡೆದಾಗಲೇ ಯಾಕೆ ಎಚ್ಚೆತ್ತುಕೊಂಡಿಲ್ಲ? ಅಧಿಕಾರಿಗಳು ಘಟನಾ ಸ್ಥಳಕ್ಕೆ ಗ್ರಾಮಕ್ಕೆ ಭೇಟಿ ನಿಡಿ ಪರಿಶೀಲನೆಯನ್ನೂ ನಡೆಸಿಲ್ಲ ಯಾಕೆ ಎಂದು ಪ್ರಶ್ನಿಸಿದ್ದಾರೆ.
ಇನ್ನೊಮ್ಮೆ ಇಂತಹ ಪ್ರಕರಣ ನಡೆದರೆ ಕೊಪ್ಪಳ ಜಿಲ್ಲಾ ಪಂಚಾಯತ್ ಸಿಇಒ ಅವರೇ ಹೊಣೆಯಾಗಲಿದ್ದಾರೆ. ಮತ್ತೆ ಈ ರೀತಿ ಬೇಜವಾಬ್ದಾರಿಯಿಂದ ನಡೆದರೆ ಸಿಇಒ ಅವರನ್ನು ಅಮಾನತುಗೊಳಿಸುವುದಾಗಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಪ್ರಕರಣ ಸಂಬಂಧ ಅಧಿಕಾರಿಗಳ ವಿಶೇಷ ತಂಡ ರಚನೆ ಮಾಡಿ ತನಿಖೆ ನಡೆಸಿ ಎಂದು ಸೂಚನೆ ನೀಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ