ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಸ್ವಲ್ಪ ಮುಂದೂಡಿಕೆಯಾಗಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ, ಅರ್ಜಿ ಸಲ್ಲಿಕೆ 4-5 ದಿನಗಳ ಕಾಲ ವಿಳಂಬವಾಗಲಿದೆ ಎಂದಿದ್ದಾರೆ.
ಗ್ರಾಮ ಪಂಚಾಯಿತಿಯ ಬಾಪೂಜಿ ಸೇವಾ ಕೇಂದ್ರ, ನಾಡ ಕಚೇರಿಯಲ್ಲೂ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕೆನ್ನುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಿದೆ. ಹಾಗಾಗಿ ಆ್ಯಪ್ ಸಿದ್ಧಪಡಿಸಲು ಸ್ವಲ್ಪ ಸಮಯಾವಕಾಶ ಬೇಕಿರುವುದರಿಂದ ಅರ್ಜಿ ಸಲ್ಲಿಕೆಯನ್ನು ಸ್ವಲ್ಪ ಮುಂದೂಡೋಣ ಎನ್ನುವ ಸಲಹೆ ಹಿರಿಯರಿಂದ ಬಂದಿರುವುದರಿಂದ ಸ್ವಲ್ಪ ಮುಂದೂಡಲಾಗಿದೆ ಎಂದು ಅವರು ವಿವರಿಸಿದರು.
ಆನ್ ಲೈನ್ ಹಾಗೂ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತಿದೆ. ಸೇವಾಸಿಂಧು ಆಪ್, ಗ್ರಾಮ್ ಒನ್, ಬೆಂಗಳೂರು ಒನ್, ಕರ್ನಾಟಕ ಒನ್, ನಾಡಕಚೇರಿಗಳಿಗೂ ತೆರಳಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತಿದೆ. ಅಲ್ಲದೇ ಗೃಹಲಕ್ಷ್ಮೀ ಯೋಜನೆಗಾಗಿ ಹೊಸ ಆಪ್ ಸಿದ್ಧಪಡಿಸಲು ಇ-ಗವರ್ನನ್ಸ್ ಗೆ ಕೇಳಿಕೊಂಡಿದ್ದೆವು. ಹೊಸ ಆಪ್ ಸಿದ್ಧಪಡಿಸಲು 4-5 ದಿನ ಬೇಕಾಗುತ್ತದೆ ಎಂದು ಹೇಳಿದ್ದಾರೆ. ಇದರ ಜೊತೆಗೆ ಸ್ವಯಂಸೇವಾ ಸಂಸ್ಥೆಗಳಿಗೂ ಆಹ್ವಾನ ನೀಡಿದ್ದೆವು. ಅವರು ಕೂಡ 4-5 ದಿನ ಸಮಯ ನೀಡುವಂತೆ ಕೇಳಿದ್ದಾರೆ. ಈ ವಿಚಾರ ಸಚಿವ ಸಂಪುಟದಲ್ಲಿಯೂ ಪ್ರಸ್ತಾಪಿಸಲಾಗಿದ್ದು, ಸಂಪುಟ ಸದಸ್ಯರ ಸಲಹೆ ಮೇರೆಗೆ ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆ 4-5 ದಿನ ಮುಂದೂಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ