*ಗೃಹಲಕ್ಷ್ಮೀ ಯೋಜನೆ ಬಗ್ಗೆ ಲೇವಡಿ ಮಾಡಿದ್ದ ಸಂಸದ ಪ್ರತಾಪ್ ಸಿಂಹಗೆ ತಿರುಗೇಟು ನೀಡಿದ ಶಾಸಕ ತನ್ವೀರ್ ಸೇಠ್*
ಪ್ರಗತಿವಾಹಿನಿ ಸುದ್ದಿ; ಮೈಸೂರು: ಗೃಹಲಕ್ಷ್ಮೀ ಯೋಜನೆ ವಿಚಾರವಾಗಿ ವ್ಯಂಗ್ಯವಾಡಿದ್ದ ಸಂಸದ ಪ್ರತಾಪ್ ಸಿಂಹ, ಮುಸ್ಲಿಂ ಸಮುದಾಯದವರು ಎರಡು ಮದುವೆಯಾಗಿರುತ್ತಾರೆ ಅವರಿಗೆ ಮನೆ ಯಜಮಾನಿ ಎಂದು ಯಾರನ್ನು ಯಾವ ಮಾನದಂಡವನ್ನು ಸರ್ಕಾರ ಅನುಸರಿಸಲಿದೆ ಎಂದು ಪ್ರಶ್ನಿಸಿದ್ದರು. ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಶಾಸಕ ತನ್ವೀರ್ ಸೇಠ್ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊದಿಗೆ ಮಾತನಾಡಿದ ಶಾಸಕ ತನ್ವೀರ್ ಸೇಠ್, ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿ, ಪ್ರತಾಪ್ ಸಿಂಹಗೆ ಆಸೆಯಿದ್ದರೆ ಇನ್ನೊಂದು ಮದುವೆಯಾಗಲಿ, ನಂತರ ಅನುಭವವನ್ನು ಬಂದು ಹೇಳಲಿ ಎಂದು ಹೇಳಿದ್ದಾರೆ.
ಇದೇ ವೇಳೆ ಮತಾಂತರ ನಿಷೇಧ ಕಾಯ್ದೆ ವಾಪಸ್ ವಿಚಾರವಾಗಿಯೂ ಮಾತನಾಡಿದ ಶಾಸಕರು, ಸಂವಿಧಾನದಲ್ಲಿಯೇ ಎಲ್ಲಾ ವಿಚಾರಗಳನ್ನು ವಿವರಿಸಲಾಗಿದೆ, ಬಲವಂತದ ಮತಾಂತರ ಮಾಡಬಾರದು ಎಂದು ಸಂವಿಧಾನದಲ್ಲಿಯೇ ಸ್ಪಷ್ಟವಾಗಿ ಹೇಳಿದೆ. ಕೆಲ ಸಮುದಾಯವನ್ನು ಗುರಿ ಮಾಡಿ ಹಿಂದಿನ ಸರ್ಕಾರ ಕಾನೂನು ಜಾರಿ ಮಾಡಿತ್ತು. ಈ ವಿಚಾರವಾಗಿ ನಮ್ಮ ಸರ್ಕಾರ ತೀರ್ಮಾನ ಕೈಗೊಂಡ ಮೇಲೆ ಪ್ರತಿಕ್ರಿಯೆ ಕೊಡುತ್ತೇನೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ