ಐಎಂಎ ಸಂಸ್ಥೆ ಮುಖ್ಯಸ್ಥ ಮನ್ಸೂರ್ ಖಾನ್ ಬಂಧನ
ಪ್ರಗತಿವಾಹಿನಿ ಸುದ್ದಿ, ನವದೆಹಲಿ –
ಬಹುಕೋಟಿ ಹಗರಣದ ರೂವಾರಿ, ಐಎಂಎ ಸಂಸ್ಥೆಯ ಮುಖ್ಯಸ್ಥ ಮನ್ಸೂರ್ ಖಾನ್ ಬಲೆಗೆ ಬಿದ್ದಿದ್ದಾನೆ. ಶುಕ್ರವಾರ ನಸುಕಿನ ವೇಳೆ ಎಸ್‌ಐಟಿ ಹಾಗೂ ಜಾರಿ ನಿರ್ದೇಶನಾಲಯದ ತಂಡ ಅವರನ್ನು ಬಂಧಿಸಿದೆ. ಸಾವಿರಾರು ಕೋಟಿ ರೂಪಾಯಿ ವಂಚಿಸಿ ಪರಾರಿ ಆಗಿದ್ದ ಮನ್ಸೂರ್ ಖಾನ್ ಇಂದು ಬೆಳಿಗ್ಗೆ ದುಬೈನಿಂದ ನವದೆಹಲಿಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ವೇಳೆ, ಎಸ್‌ಐಟಿ ಮತ್ತು ಇಡಿ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾನೆ.
ಮನ್ಸೂರ್ ಖಾನ್ ದುಬೈನಲ್ಲಿ ಇದ್ದುದರ ಬಗ್ಗೆ ಖಚಿತ ಮಾಹಿತಿ ಎಸ್‌ಐಟಿಗೆ ಇತ್ತು. ಆತನಿಗಾಗಿ ಬ್ಲೂ ಕಾರ್ನರ್ ನೊಟೀಸ್ ಜಾರಿ ಮಾಡಲಾಗಿತ್ತು. ದುಬೈನಿಂದ ದೆಹಲಿಗೆ ಮನ್ಸೂರ್ ಹೊರಟಿರುವುದರ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡಿದ್ದ ಎಸ್‌ಐಟಿಯು ವಿಮಾನ ನಿಲ್ದಾಣದಲ್ಲಿ ಕಾದು ಆತನನ್ನು ಬಂಧಿಸಿದೆ.
ಮನ್ಸೂರ್ ಖಾನ್ ಮೇಲೆ 60,000 ಕ್ಕೂ ಹೆಚ್ಚು ಪ್ರಕರಣಗಳು ಕರ್ನಾಟಕ, ಹೊರ ರಾಜ್ಯ ಹಾಗೂ ಹೊರ ದೇಶಗಳಲ್ಲೂ ದಾಖಲಾಗಿವೆ.
ಐಎಂಎ ಹಗರಣ ಹೊರಬೀಳುತ್ತಿದ್ದಂತೆ, ಜೂನ್ 8 ರಂದು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ಕುಟುಂಬ ಸದಸ್ಯರ ಸಮೇತ ಮನ್ಸೂರ್ ಖಾನ್ ಪರಾರಿ ಆಗಿದ್ದ. ಅಲ್ಲಿಂದಲೇ ವಿಡಿಯೋಗಳನ್ನು ಬಿಡುಗಡೆ ಮಾಡಿ ಕೆಲವು ಗಣ್ಯರಿಗೆ ಕೋಟ್ಯಂತ ರೂಪಾಯಿ ಲಂಚ ನೀಡಿದ್ದಾಗಿ ಹೇಳಿದ್ದ, ಇದರಲ್ಲಿ ಶಾಸಕ ರೋಷನ್ ಬೇಗ್ ಸಹ ಒಬ್ಬರು.
ಎರಡು ದಿನಗಳ ಹಿಂದೆ ವಿಡಿಯೋ ಬಿಡುಗಡೆ ಮಾಡಿದ್ದ ಮನ್ಸೂರ್ ಖಾನ್, ಮುಂದಿನ 24 ಗಂಟೆ ಒಳಗೆ ಭಾರತಕ್ಕೆ ಬರುವುದಾಗಿ ಹೇಳಿದ್ದ. ಆದರೆ ಒಂದು ದಿನ ತಡವಾಗಿ ಆಗಮಿಸಿದ್ದು, ಎಸ್‌ಐಟಿ ಹಾಗೂ ಇಡಿ ಕೈಗೆ ಸಿಕ್ಕಿಬಿದ್ದಿದ್ದಾನೆ.
ಆತನನ್ನು ಬೆಂಗಳೂರಿಗೆ ಕರೆತರಲಾಗುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ