*ಬ್ರಾಹ್ಮಣರನ್ನು ಕಂಡರೆ ನಿಮಗ್ಯಾಕೆ ಇಷ್ಟೊಂದು ದ್ವೇಷ?; ಬಸವೇಶ್ವರರು ಮೂಲದಲ್ಲಿ ಬ್ರಾಹ್ಮಣರಲ್ಲವೇ?; ಸಚಿವ ಎಂ.ಬಿ.ಪಾಟೀಲ್ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ*
ಪ್ರಗತಿವಾಹಿನಿ ಸುದ್ದಿ; ಮೈಸೂರು: ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ವಿರುದ್ಧ ಸಚಿವ ಎಂ.ಬಿ.ಪಾಟೀಲ್ ವ್ಯಂಗ್ಯವಾಡಿರುವ ವಿಚಾರವಾಗಿ ಸಂಸದ ಪ್ರತಾಪ್ ಸಿಂಹ ಕಿಡಿ ಕಾರಿದ್ದು, ಸಚಿವರ ವಿರುದ್ಧ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, ಎಂ.ಬಿ.ಪಾಟೀಲ್ ಅವರೇ ಬಿ.ಎಲ್.ಸಂತೋಷ್ ಬಗ್ಗೆ ಯಾಕೆ ಪದೇ ಪದೆ ಮಾತನಾಡುತ್ತೀರಾ? ಬ್ರಾಹ್ಮಣರನ್ನು ಪ್ರತಿ ದಿನವೂ ಯಾಕೆ ಬೈಯ್ಯುತ್ತೀರಾ? ನಿಮಗೆ ಯಾಕೆ ಬ್ರಾಹ್ಮಣರ ಮೇಲೆ ಇಷ್ಟೊಂದು ದ್ವೇಷ? ಬಸವೇಶ್ವರರು ಮೂಲದಲ್ಲಿ ಬ್ರಾಹ್ಮಣರಲ್ವಾ ಬಿ.ಎಲ್.ಸಂತೋಷ್ ನಿಮಗೆ ಹಾಗೂ ಕಾಂಗ್ರೆಸ್ ಗೆ ತಿವಿದಿದ್ದಾರಾ? ಎಂದು ಪ್ರಶ್ನಿಸಿದ್ದಾರೆ.
ಎಂ.ಬಿ.ಪಾಟೀಲ್ ರೇ ನೀವು ನಿಜವಾಗಿಯೂ ಲಿಂಗಾಯಿತರಾ? ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಜೈಲಿಗೆ ಕಳುಹಿಸಿದ್ದು ಕಾಂಗ್ರೆಸ್ ಕುತಂತ್ರ. ಲಿಂಗಾಯಿತರಿಗೆ ಕಾಂಗ್ರೆಸ್ ಅನ್ಯಾಯ ಮಾಡಿದ್ರೂ ಯಾಕೆ ಸುಮ್ಮನೇ ಇದ್ದೀರಿ? ಯಡಿಯೂರಪ್ಪ ಅವರನ್ನು ದಿನೇಶ್ ಗುಂಡೂರಾವ್ ಹುಚ್ಚ ಎಂದಿದ್ದರು. ಯಡಿಯೂರಪ್ಪ ವಿರುದ್ಧ ಷಡ್ಯಂತ್ರಕ್ಕೆ ಸುಪಾರಿ ತೆಗೆದುಕೊಂಡಿದ್ದು ನೀವೆ ತಾನೇ? ಲಿಂಗಾಯಿತ ಧರ್ಮ ಒಡೆಯುವಾಗ ಸುಪಾರಿ ಪಡೆದಿದ್ದೂ ನೀವೆ ಅಲ್ವಾ? ಎಂದು ಕಿಡಿಕಾರಿದ್ದಾರೆ.
ಈಗ ಸಿದ್ದರಾಮಯ್ಯನವರೇ ಪೂರ್ಣಾವಧಿ ಮುಖ್ಯಮಂತ್ರಿ ಎಂದು ಹೇಳುವ ಮೂಲಕ ಒಕ್ಕಲಿಗರನ್ನು ಮುಗಿಸಲು ಹೊರಟಿದ್ದೀರಾ ನೀವು? ಎಂ.ಬಿ.ಪಾಟೀಲ್ ಅವರು ಸಿದ್ದರಾಮಯ್ಯನವರ ಚೇಲಾ ಪಡೆಯ ಅಧ್ಯಕ್ಷ ಎಂದು ಗುಡುಗಿದ್ದಾರೆ.
ಇದೇ ವೇಳೆ ಪ್ರತಾಪ್ ಸಿಂಹ ಚಿಲ್ಲರೇ ರಾಜಕಾರಣ ಬಿಡಲಿ ಎಂಬ ಎಂ.ಬಿ.ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, ಎಂ.ಬಿ.ಪಾಟೀಲ್ ಅವರಿಗೆ ಈಗ ಸಿಕ್ಕಿರುವ ಖಾತೆಯಲ್ಲಿ ಬರೀ ಚಿಲ್ಲರೆ ಸಿಗುತ್ತದೆ. ಕೂತ ಕಡೆ ಕಂತೆ ಕಂತೆ ಕಾಸು ಬರುವ ಖಾತೆ ಸಿಗಲಿಲ್ಲ ಅಂತಾ ವಿಲವಿಲ ಒದ್ದಾಡ್ತಿದ್ದಾರೆ. ಅವರಿಗೆ ಬರಿ ಚಿಲ್ಲರೇ, ನೋಟು ಇದರ ಬಗ್ಗೆ ಮಾತ್ರ ಚಿಂತೆ. ಸಿದ್ದರಾಮಯ್ಯನವರನ್ನು ಓಲೈಸುವುದೇ ಕೆಲಸ ಎಂದು ಅಂದುಕೊಂಡಿದ್ದಾರೆ ಎಂದು ಟೀಕಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ