*ರಾಜ್ಯ ಸರ್ಕಾರದ ಸಿಸ್ಟಮ್ ನ್ನು ಕೇಂದ್ರ ಸರ್ಕಾರ ಹ್ಯಾಕ್ ಮಾಡಿದೆ; ಸಚಿವ ಸತೀಶ್ ಜಾರಕಿಹೊಳಿ ಆರೋಪ*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೇಂದ್ರ ಸರ್ಕಾರ ಇವಿಎಂ ರೀತಿ ನಮ್ಮ ಸರ್ವರ್ ಹ್ಯಾಕ್ ಮಾಡಿದೆ ಹಾಗಾಗಿ ಯೋಜನೆಗಳ ಜಾರಿ ವಿಳಂಬವಾಗುತ್ತಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜರಕಿಹೊಳಿ ಆರೋಪಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ರಾಜ್ಯ ಸರ್ಕಾರದ ಸಿಸ್ಟಮ್ ನ್ನು ಕೇಂದ್ರ ಸರ್ಕಾರ ಹ್ಯಾಕ್ ಮಾಡಿದೆ. ಹಾಗಾಗಿ ನಮ್ಮ ಸರ್ವರ್ ಡೌನ್ ಆಗಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಇಲಾಖೆಯ ಸಿಸ್ಟಮ್ ಕೂಡ ಹ್ಯಾಕ್ ಮಾಡಿದೆ. ಹಾಗಾಗಿ ಗೃಹಲಕ್ಷ್ಮೀ ಯೋಜನೆ ಅರ್ಜಿ ಸಲ್ಲಿಕೆ ವಿಳಂಬವಾಗುತ್ತಿದೆ ಎಂದು ಹೇಳಿದರು.
ನಾವು ಪ್ಲಾನ್ ಮಾಡಿಯೇ ಯೋಜನೆಗಳನ್ನು ರೂಪಿಸಿದ್ದೇವೆ. ಆದರೆ ಕೇಂದ್ರದವರು ನಮ್ಮ ಮಷಿನ್ ಹ್ಯಾಕ್ ಮಾಡಿ ಸ್ಥಗಿತ ಮಾಡಿದ್ದಾರೆ. ಅದನ್ನು ಸರಿ ಮಾಡಲು ಪ್ರಯತ್ನಿಸುತ್ತಿದ್ದೇವೆ. ಹಾಗಾಗಿ ಸ್ವಲ್ಪ ವಿಳಂಬವಾಗುತ್ತಿದೆ. ಹೆಚ್ಚೆಂದರೆ ಯೋಜನೆ ಒಂದು ತಿಂಗಳು ತಡವಾಗಬಹುದಷ್ಟೇ. ಎಷ್ಟೇ ಹ್ಯಾಕ್ ಮಾಡಿ ತೊಂದರೆ ಕೊಟ್ಟರೂ ನಾವು ಘೋಷಿಸಿದಂತೆ ಯೋಜನೆ ಜಾರಿಗೊಳಿಸುತ್ತೇವೆ ಎಂದು ಹೇಳಿದರು.
ಕೇಂದ್ರ ಸರ್ಕಾರದಿಂದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ: ಸಚಿವ ಸತೀಶ್ ಜಾರಕಿಹೊಳಿ ಆಕ್ರೋಶ
ರಾಜ್ಯ ಸರ್ಕಾರದ ಯೋಜನೆಗಳಿಗೆ ಅಡ್ಡಿಪಡಿಸುವ ಮೂಲಕ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಅನ್ನಭಾಗ್ಯ ಯೋಜನೆಗೆ ರಾಜ್ಯ ಸರ್ಕಾರಕ್ಕೆ ಅಕ್ಕಿ ನೀಡದೆ ಅನ್ಯಾಯ ಎಸಗುತ್ತಿರುವ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ನಗರದ ಕಾಂಗ್ರೆಸ್ ಭವನದಿಂದ ರಾಣಿ ಚೆನ್ನಮ್ಮ ವೃತ್ತದ ವರೆಗೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈ ತಿಂಗಳು 10 ಕೆಜಿ ಅಕ್ಕಿ ಜನತೆಗೆ ನೀಡಲು ವಿಳಂಬ ಆಗಬಹುದು, ಮುಂದಿನ ತಿಂಗಳಿಂದ 10 ಕೆ.ಜಿ ಅಕ್ಕಿ ನೀಡಲು ಎಲ್ಲಾ ರೀತಿಯ ಸಿದ್ದತೆಗಳನ್ನು ಸರ್ಕಾರ ಮಾಡುತ್ತಿದೆ. ಜನರಿಗೆ ಸಂದೇಶ ಕೊಡಲು ಇಂದು ಪ್ರತಿಭಟನೆ ಮಾಡುತ್ತಿದ್ದೇವೆ. ಕೇಂದ್ರದಲ್ಲಿ ಏಳು ಲಕ್ಷ ಟನ್ ಅಕ್ಕಿ ದಾಸ್ತಾನು ಇದೆ. ನಾವು ಎರಡು ಲಕ್ಷ ಟನ್ ಅಕ್ಕಿಗೆ ಡಿಮ್ಯಾಂಡ್ ಮಾಡಿದ್ದೇವೆ. ನಿಮಗೆ ಕೊಡಲು ಆಗಲ್ಲಾ ಅಂತಾ ಹೇಳಿದ್ದಾರೆ. ಖಾಸಗಿಯವರಿಗೆ ನೀಡುತ್ತೇವೆ ಅಂತಾ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ ಎಂದು ತಿಳಿಸಿದರು.
ಪ್ರವಾಹ ಬಂದಾಗಲೂ ಪರಿಹಾರದ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯ ಆಗಿದೆ. ಕೇಂದ್ರ ಸರ್ಕಾರದ ಜನವಿರೋಧಿ ನೀತಿಯನ್ನ ಜನರಿಗೆ ತಿಳಿಸಲು ಪ್ರತಿಭಟನೆ ಮಾಡುತ್ತಿದ್ದೇವೆ. ಪಡಿತರದಲ್ಲಿ ಜೋಳ ಮತ್ತು ಗೋಧಿ ಕೊಡುವ ವಿಚಾರವಾಗಿ ಮಾತನಾಡಿದ ಅವರು, ಸರ್ಕಾರ ಮಟ್ಟದಲ್ಲಿ ಚಿಂತನೆ ನಡೆಸಿದ್ದೇವೆ, ಜೋಳ ಕೊಡಲು ಸಾಧ್ಯವಿಲ್ಲ. ಬೇರೆ ರಾಜ್ಯಗಳಿಂದ ಹೆಚ್ಚುವರಿ ಅಕ್ಕಿ ಪಡೆಯಲು ಪ್ರಯತ್ನ ನಡೆದಿದೆ ಎಂದರು.
ಗ್ಯಾರಂಟಿ ಯೋಜನೆಯಿಂದ ಬಿಜೆಪಿಗೆ ಭಯ ಹುಟ್ಟಿದೆಯಾ ಎಂಬ ವಿಚಾರವಾಗಿ ಮಾತನಾಡಿದ ಸಚಿವರು, ಲೋಕಸಭೆ ಚುನಾವಣೆವರೆಗೂ ಅಷ್ಟೇ ಅಲ್ಲಾ ಐದು ವರ್ಷದವರೆಗೂ ಗ್ಯಾರಂಟಿ ಯೋಜನೆಗಳು ಮುಂದುವರೆಯುತ್ತವೆ. ಕೇಂದ್ರ ಸರ್ಕಾರ ಕೇಳಿ ಯೋಜನೆಗಳನ್ನು ಘೋಷಣೆ ಮಾಡುವ ಅವಶ್ಯಕತೆ ಇಲ್ಲಾ. ಅವರ ಬಳಿ ಅಕ್ಕಿ ದಾಸ್ತಾನು ಇದೆ ಅಂತಾ ಕೇಳುತ್ತಿದ್ದೇವೆ. ಉಚಿತವಾಗಿ ಕೇಳುತ್ತಿಲ್ಲ, ದುಡ್ಡು ಕೊಡುತ್ತೇವೆ ಕೊಡಿ ಅಂತ ಕೇಳುತ್ತಿದ್ದೇವೆ, ಆದರೂ ಕೊಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಶಾಸಕರಾದ ರಾಜು ಸೇಠ್, ವಿಶ್ವಾಸ ವೈದ್ಯಾ, ಬಾಬಾ ಸಾಹೇಬ್ ಪಾಟೀಲ್, ಬೆಳಗಾವಿ ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಸೇರಿದಂತೆ ಹಲವು ಕಾಂಗ್ರೆಸ್ ಮುಂಚೂಣಿ ಘಟಕದ ಪದಾಧಿಕಾರಿಗಳು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ