ತಾಯಿ ನೀಡುವ ಸಂಸ್ಕೃತಿ, ಸಂಸ್ಕಾರ ಮತ್ತು ಪರಂಪರೆಯಿಂದಾಗಿ ಹೆಣ್ಣು ಮಕ್ಕಳು ವಿಶೇಷ ಸಾಧನೆ ಮಾಡಲು ಸಾಧ್ಯ – ಲಕ್ಷ್ಮೀ ಹೆಬ್ಬಾಳಕರ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇಂದು ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರು ವಿಶೇಷವಾದ ಸಾಧನೆಯನ್ನು ಮಾಡಿ ತಮ್ಮದೇ ಆದ ಗುರುತನ್ನು ಮೂಡಿಸಿದ್ದಾರೆ ಎಂದು ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಹಿರಿಯ ನಾಗರಿಕರು ಮತ್ತು ವಿಕಲಚೇತನರ ಸಬಲೀಕರಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದಲ್ಲಿ ಬುಧವಾರ ಸಂಜೆ ಪದ್ಮಾವತಿ ಷಣ್ಮುಖಪ್ಪ ಅಂಗಡಿ ಅವರ ಸ್ಮರಣಾರ್ಥ ಸ್ಥಾಪಿಸಲಾದ ಮಹಿಳಾ ರತ್ನ ಪ್ರಶಸ್ತಿಯನ್ನು ಬೆಳಗಾವಿಯಸಾಹಿತಿ ನೀಲಗಂಗಾ ಚಿರಂತಿಮಠ ಮತ್ತು ಅಕ್ಕನ ಬಳಗದ ಅಧ್ಯಕ್ಷೆ ಕಮಲಕ್ಕ ಸೊಂಟ ಅವರಿಗೆ ಪ್ರಧಾನ ಮಾಡಿ ಮಾತನಾಡುತ್ತಿದ್ದರು.
ಮಕ್ಕಳ, ವಿಶೇಷವಾಗಿ ಹೆಣ್ಣು ಮಕ್ಕಳ ಸಾಧನೆಯಲ್ಲಿ ತಾಯಿಯ ಪಾತ್ರ ಬಹು ಮುಖ್ಯವಾಗಿರುತ್ತದೆ, ತಾಯಿ ನೀಡುವ ಸಂಸ್ಕೃತಿ ಸಂಸ್ಕಾರ ಮತ್ತು ಪರಂಪರೆಯಿಂದಾಗಿ ಹೆಣ್ಣು ಮಕ್ಕಳು ವಿಶೇಷವಾದ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಈ ರೀತಿಯ ಸಂಸ್ಕಾರ ನೀಡುವ ಪರಂಪರೆ
ಮುಂದುವರಿಯಬೇಕು ಎಂದು ಅವರು ಹೇಳಿದರು.
63 ವರ್ಷದ ಹಿಂದೆ ತೀರಿಹೋದ ಪದ್ಮಾವತಿ ಅಂಗಡಿಯವರ ಸಾಧನೆಯನ್ನು ಇವತ್ತಿಗೂ ನಾವು ನೆನಪಿಸಿಕೊಳ್ಳುತ್ತಿದ್ದೇವೆ. ಮ್ಯಾಜಿಸ್ಟ್ರೇಟ್ ಪದವಿಗೆ ಏರಿದ್ದ ಪದ್ಮಾವತಿ ಅವರ ಸಾಧನೆ ಅಂದಿನ ಕಾಲಕ್ಕೆ ಅದ್ವಿತೀಯವಾಗಿತ್ತು, ಯಾವ ಮನೆಯಲ್ಲಿ ಹೆಣ್ಣು ಮಕ್ಕಳ ಪೂಜೆ ಗೌರವ ನಡೆಯುತ್ತದೆಯೋ ಆ ಮನೆಯಲ್ಲಿ ಲಕ್ಷ್ಮಿ ಸರಸ್ವತಿಯರು ನೆಲೆಸಿರುತ್ತಾರೆ ಎಂಬ ನಂಬಿಕೆ ಇದೆ ಎಂದು ಹೇಳಿದರು.
ನನಗೆ ದೊರೆತ ಮಹಿಳಾ ಮತ್ತು ಮಕ್ಕಳ ಖಾತೆಯಲ್ಲಿ ಅತ್ಯುತ್ತಮವಾದ ಕೆಲಸವನ್ನು ಮಾಡುತ್ತೇನೆ. ಮಹಿಳೆಯರಿಗೆ ಸ್ವಾವಲಂಬಿ ಮತ್ತು
ಸ್ವಾಭಿಮಾನದ ಬದುಕನ್ನು ನೀಡಲು ಶ್ರಮಿಸುತ್ತೇನೆ. ಎಲ್ಲರೂ ತಲೆಯೆತ್ತಿ ನೋಡುವಂತೆ ಇಲಾಖೆಯ ಸಾಧನೆ ಮಾಡುತ್ತೇನೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಐಎಎಸ್ ಪರೀಕ್ಷೆಯಲ್ಲಿ ೩೬೯ನೇ ರಾಂಕ್ ಪಡೆದ ಅರಭಾವಿಯ ಶೃತಿ ಯರಗಟ್ಟಿ ಅವರನ್ನು ಗೌರವಿಸಲಾಯಿತು. ಪದ್ಮಾವತಿ ಷಣ್ಮುಖಪ್ಪ ಅಂಗಡಿ ಅವರ ಪುತ್ರಿ ಕಲ್ಬುರ್ಗಿ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾದ ಉಜ್ವಲಾ ಹಿರೇಮಠ್ ಅವರು
ಪ್ರಾಸ್ತಾವಿಕವಾಗಿ ಮಾತನಾಡಿ, ತಮ್ಮ ತಾಯಿಯ ಸಾಧನೆಯನ್ನು ನೆನಪಿಸಿಕೊಂಡರು. ಮೈತ್ರಾಯಿಣಿ ಗದಿಗೆಪ್ಪಗೌಡರ್ ಉಪನ್ಯಾಸ ನೀಡಿದರು.
ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆಗಳಾದ ಪ್ರೌಢಶಾಲೆ ಹಾಗೂ ಪದವಿ ಪೂರ್ವ ವಿದ್ಯಾಲಯಗಳಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿಯರನ್ನು ಈ ಸಂದರ್ಭದಲ್ಲಿ ಸತ್ಕರಿಸಲಾಯಿತು. ಮಹಿಳಾ ರತ್ನ ಪ್ರಶಸ್ತಿ ಸ್ವೀಕರಿಸಿ ನೀಲಗಂಗಾ ಚರಂತಿಮಠ ಮತ್ತು ಕಮಲಕ್ಕ ಸೊಂಟ ಅವರು ಸನ್ಮಾನಕ್ಕೆ ಉತ್ತರವಾಗಿ ಮಾತನಾಡಿದರು.
ಗದುಗಿನ ತೋಂಟದಾರ್ಯ ಮಠದ ಜಗದ್ಗುರು ಡಾ.ತೋಂಟದ ಸಿದ್ಧರಾಮ ಸ್ವಾಮಿಜಿಯವರು ಸಮಾರಂಭದ ಸಾನಿಧ್ಯ ವಹಿಸಿ ಆಶಿರ್ವಚನ ನೀಡಿದರು. ಬೆಳಗಾವಿ ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಪತಿ ಡಾ. ಅಲ್ಲಮ ಪ್ರಭು ಮಹಾಸ್ವಾಮೀಜಿ ಅವರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕೆ.ಬಿ. ಹಿರೇಮಠ, ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ, ಕಾರ್ಯದರ್ಶಿ ಅಶೋಕ ಮಳಗಲಿ, ಪ್ರೊಫೆಸರ್ ಮಂಜುನಾಥ ಶರಣಪ್ಪನವರ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಸಹಾಯಕ ಅಧ್ಯಾಪಕರಾದ ಅನಿತಾ ಪಾಟೀಲ್ ಸ್ವಾಗತಿಸಿದರು. ಬಾಳೇಕುಂದ್ರಿ ಇಂಜನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಪಟಗುಂದಿ
ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ