Latest

ನನ್ನ ಗಂಡ ಹೀಗೇಕೆ?

ಎಂ.ಕೆ.ಹೆಗಡೆ
ನನ್ನ ಗಂಡ ಹೀಗೇಕೆ?  ಇದು ಬಹುಪಾಲು ವಿವಾಹಿತೆಯರ ಪ್ರಶ್ನೆ.
ನನ್ನ ಗಂಡನಿಗೆ ನನ್ನ ಬಗ್ಗೆ ಕಾಳಜಿಯೇ ಇಲ್ಲ. ಅವನಿಗೆ ಪ್ರೀತಿ ಮಾಡಲು ಬರುವುದೇ ಇಲ್ಲ. ಕೇವಲ ಹಣದಿಂದಲೇ ನನ್ನನ್ನು ತೃಪ್ತಿಪಡಿಸಲು ಪ್ರಯತ್ನಿಸುತ್ತಾನೆ. ಕೈ ಹಿಡಿದುಕೊಂಡು ನಾಲ್ಕು ಹೆಜ್ಜೆ  ವಾಕ್ ಮಾಡುವಂತ ನನ್ನ ಸಣ್ಣ ಆಸೆಯನ್ನೂ ಪೂರೈಸಲು ಅವನಿಗೆ ಮನಸ್ಸಿಲ್ಲ. ಮನಸ್ಸಿನಿಂದ ಒಂದು ಕಿಸ್ ಕೂಡ ಕೊಡುವುದಿಲ್ಲ…

ಇಂತಹ ಆರೋಪ ಬಹುತೇಕ ಮಹಿಳೆಯರದ್ದು. ವಿಚಿತ್ರವೆಂದರೆ, ಇಂತಹ ಸಣ್ಣ ಕೊರಗಿನಿಂದಲೇ ಹೆಚ್ಚಿನ ಮಹಿಳೆಯರು ಜೀವನವೇ ಸಾಕಾಗಿ ಹೋಗಿದೆ ಎನ್ನುವ ಸ್ಥಿತಿ ತಲುಪುತ್ತಾರೆ. ಮನೆಯಲ್ಲಿ ನಿತ್ಯ ಅಶಾಂತಿ ಮನೆ ಮಾಡುವುದಕ್ಕೂ ಇಂತಹ ಸಣ್ಣ ಸಣ್ಣ ಅಸಹನೆಗಳೇ ಕಾರಣವಾಗುತ್ತವೆ.

ಗಂಡಸರ ದೃಷ್ಟಿಯಲ್ಲಿ ಇದೇನು ದೊಡ್ಡ ಸಮಸ್ಯೆಯೇ ಅಲ್ಲ. ನಾನು ಅವಳಿಗೆ ಕೇಳಿದ್ದನ್ನೆಲ್ಲ ಕೊಡಿಸುತ್ತೇನೆ. ಅಡುಗೆ ಮಾಡಲು ಬೇಸರವಾದಾಗ ಹೊಟೆಲ್‌ಗೆ ಕರೆದುಕೊಂಡು ಹೋಗುತ್ತೇನೆ. ಊಟ-ತಿಂಡಿ ಅದೇ ಬೇಕು, ಇದೇ ಬೇಕು ಎಂದು, ಎಂದೂ ಕೇಳುವುದಿಲ್ಲ. ಅವಳು ಮಾಡಿದ್ದನ್ನು ತಿಂದುಕೊಂಡಿರುತ್ತೇನೆ. ಎಲ್ಲ ಸುಖಗಳನ್ನೂ ಕೊಟ್ಟಿದ್ದೇನೆ. ಆದಾಗ್ಯೂ ಕಾರಣವಿಲ್ಲದೆ ಹೆಂಡತಿ ನಿತ್ಯ ಸಿಟ್ಟು ಮಾಡುತ್ತಾಳೆ ಎನ್ನುತ್ತಾರೆ.

ಮನೋಸ್ಥಿತಿಗೆ ಸಂಬಂಧಿಸಿದ ವಿಷಯ

ಅನೇಕ ಕುಟುಂಬಗಳಲ್ಲಿ ಗಂಡ-ಹೆಂಡತಿ ಮಧ್ಯೆ ಇದೇ ಕಾರಣಕ್ಕೆ ನಿತ್ಯ ಕಲಹ, ಕಿರಿ ಕಿರಿ ಆಗುತ್ತದೆ. ಅನೇಕ ಮಹಿಳೆಯರು ಆತ್ಮಹತ್ಯೆ ಪ್ರಯತ್ನ  ನಡೆಸಿದ್ದಾರೆ. ಮನೆ ಬಿಟ್ಟು ಹೋಗುವ ಯೋಚನೆ ಮಾಡಿದ್ದಾರೆ. ವಿಚ್ಛೇದನ ಪಡೆಯುವ ಹಂತಕ್ಕೂ ಹೋಗಿದ್ದಾರೆ.
ಆದರೆ ಇಷ್ಟೊಂದು ದೊಡ್ಡ ಅವಾಂತರಗಳಿಗೆ ಕಾರಣ ಹುಡುಕಲು ಹೋದರೆ  ಸಿಗುವ ಉತ್ತರ ಮಾತ್ರ ತೀರಾ ಸಣ್ಣದು. ಹೊರಗೆ ನಿಂತು ನೋಡಿದರೆ ಇದು ಸಮಸ್ಯೆಯೇ ಅಲ್ಲ. ಇದು ಹೆಣ್ಣು-ಗಂಡಿನ ಮನೋಸ್ಥಿತಿಗೆ ಸಂಬಂಧಿಸಿದ ವಿಷಯ.

ಹೆಣ್ಣು ಯಾವುದಕ್ಕೆ ಅತ್ಯಂತ ಹೆಚ್ಚು ಮಹತ್ವ ನೀಡುತ್ತಾಳೆಯೋ ಗಂಡಿಗೆ ಅದು ಮಹತ್ವ ಎನಿಸುವುದೇ ಇಲ್ಲ. ಹೆಣ್ಣು ಸಣ್ಣ ಸಣ್ಣ ವಿಷಯವನ್ನೂ ಅತ್ಯಂತ ಗಂಭೀರವಾಗಿ ತೆಗೆದುಕೊಂಡರೆ ಗಂಡು ಅದನ್ನು ಕೇಳುವ ತಾಳ್ಮೆಯನ್ನೂ ಹೊಂದಿರುವದಿಲ್ಲ. ಅದು ಅವನಿಗೆ ದೊಡ್ಡದೆನಿಸುವುದೇ ಇಲ್ಲ.

ಮಾತನ್ನು ಆಲಿಸಿದರೆ ಸಾಕು…

ಗಂಡ ತನ್ನ ಮಾತನ್ನು ಆಲಿಸಿದರೆ, ಮನಸ್ಸನ್ನು ಅರ್ಥ ಮಾಡಿಕೊಂಡರೆ ಹೆಣ್ಣಿಗೆ ಅದರಂತಹ ಖುಷಿ ಬೇರೊಂದಿಲ್ಲ. ಆದರೆ ಬಹುತೇಕ ಗಂಡಸರು ತಾವು ವಸ್ತುಗಳನ್ನು ಕೊಡಿಸುವುದರಿಂದ, ದುಡ್ಡು ಕೊಡುವುದರಿಂದ ಅವಳನ್ನು ಸಂತುಷ್ಟವಾಗಿಡಬಹುದು ಎಂದುಕೊಂಡಿರುತ್ತಾರೆ.

ಹೀಗೆ ಅನೇಕ ವಿಚಾರಗಳಲ್ಲಿ ಹೆಣ್ಣು ಮತ್ತು ಗಂಡಿನ ಮಧ್ಯೆ ವೈರುಧ್ಯಗಳಿವೆ. ಹಾಗಾಗಿಯೇ ನಿರಂತರವಾಗಿ ಇಬ್ಬರ ನಡುವೆ ವಿಚಾರಭೇದ ಬರುವುದು. ಆದರೆ ಪರಿಸ್ಥಿತಿ ಗಂಭೀರವಾದರೂ ಮನೋವೈದ್ಯರ ಬಳಿ ಹೋಗಲು ಯಾರೂ ಮುಂದಾಗುವುದಿಲ್ಲ. ಇಬ್ಬರೂ ತಮ್ಮದೇ ಸರಿ ಎನ್ನುವ ಮೊಂಡುತನ ಪ್ರದರ್ಶಿಸುತ್ತಾರೆ. ಹೀಗಾದರೆ ಪರಿಸ್ಥಿತಿ ತಿಳಿಯಾಗುವುದು ಹೇಗೆ? ಕುಟುಂಬದಲ್ಲಿ ಶಾಂತಿ, ನೆಮ್ಮದಿ ನೆಲೆಸುವುದು ಹೇಗೆ?

ಉದಾ 1:
ಭಾರತಿ ಸಣ್ಣ ಹಳ್ಳಿಯೊಂದರಿಂದ ಬಂದವಳು. ತನ್ನೂರಿನ ಸರಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಾಳೆ. ಗಂಡ ರಘುನಾಥ ಸಹ ಹತ್ತಿರದ ಹಳ್ಳಿಯಿಂದ ಬಂದು, ನಗರದಲ್ಲಿ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಾನೆ. ಗಂಡನ ಕೆಲಸ, ಮಕ್ಕಳ ವಿದ್ಯಾಭ್ಯಾಸದ ಉದ್ಧೇಶದಿಂದ ನಗರದಲ್ಲೇ ಮನೆ ಮಾಡುತ್ತಾರೆ.

ಭಾರತಿ ನಿತ್ಯ ನಗರದಿಂದ ಹಳ್ಳಿ ಶಾಲೆಗೆ ಬಸ್‌ನಲ್ಲಿ ಹೋಗಿ ಬರುತ್ತಾಳೆ. ಸಣ್ಣ ಮಕ್ಕಳಿಬ್ಬರ ಜವಾಬ್ದಾರಿ ನಿರ್ವಹಿಸುತ್ತ, ಗಂಡನಿಗೆ ಅಡುಗೆ ಮಾಡಿಟ್ಟು ಹೋಗಬೇಕು. ನಿತ್ಯ ಅದೇ ಜಂಜಾಟ. ರಘುನಾಥನ ಕೆಲಸಕ್ಕೆ ಸಮಯವೆಂಬುದೇ ಇಲ್ಲ.

ಭಾನುವಾರವಾದರೂ ಗಂಡನೊಂದಿಗೆ ಹೊರಗೆ ಹೋಗೋಣವೆಂದರೆ ಆತ ಹಳ್ಳಿಯಲ್ಲಿರುವ ಹೊಲ, ವಯಸ್ಸಾದ ಅಪ್ಪ-ಅಮ್ಮನ ನೋಡುವುದಕ್ಕೆ ಹೋಗಿಬಿಡುತ್ತಾನೆ. ಭಾನುವಾರವೂ ಭಾರತಿಯೇ ಮಕ್ಕಳನ್ನು ನೋಡಿಕೊಳ್ಳುವ ಜೊತೆಗೆ ಮಾರುಕಟ್ಟೆಗೆ ಹೋಗಿ ವಾರದ ಸಂತೆ ಮಾಡಿಕೊಳ್ಳಬೇಕು. ವಾರವಿಡೀ ಏಕತಾನತೆಯಿಂದ ಭಾರತಿ ಕುದಿದು ಹೋಗುತ್ತಾಳೆ. ಇದರಿಂದ ನಿತ್ಯ ಅವರ ಮನೆಯಲ್ಲಿ ಜಗಳ.

ಉದಾ 2:
ಸುಷ್ಮಾ  ಸರಕಾರಿ ನೌಕರಿ ಮಾಡುತ್ತಾಳೆ. ಬೇರೆ ಊರಿನಲ್ಲಿ ಕೆಲಸ ಮಾಡುವ ಪತಿ ತಿಂಗಳಿಗೊಮ್ಮೆ ಬಂದು ಹೋಗುತ್ತಾನೆ. ವಯೋವೃದ್ಧ ಅತ್ತೆ ಹಾಗೂ ಚಿಕ್ಕ ಮಗನೊಂದಿಗೆ ಆಕೆ ಸಂಸಾರ ನಡೆಸುತ್ತಾಳೆ. ಬೆಳಗ್ಗೆ ಬೇಗ ಎದ್ದು ಮಗನನ್ನು ಸ್ಕೂಲ್‌ಗೆ ರೆಡಿ ಮಾಡಬೇಕು. ಉಪಾಹಾರ, ಮಗನಿಗೆ ಟಿಫನ್ ಬಾಕ್ಸ್‌, ಅತ್ತೆಗೆ ಅಡುಗೆ  ಎಲ್ಲ ಮಾಡಿಟ್ಟು  ತಾನು ಕೆಲಸಕ್ಕೆ ಹೊರಡಬೇಕು.

ಸಂಜೆ ಮತ್ತೆ ಬಂದು ರಾತ್ರಿ ಊಟಕ್ಕೆ  ತಯಾರಿ ಮಾಡಬೇಕು. ನಿತ್ಯವೂ ಇದೇ ಕೆಲಸ. ದಿನವೂ ಇದೇ ಆಗಿ ಆಕೆ ಬೇಸತ್ತುಹೋದಳು. ಭಾನುವಾರ ಕೂಡ ಹೊರಗೆ ಸುತ್ತಾಡಲು ಹೋಗಲು ಆಗುವುದಿಲ್ಲ. ಗಂಡ ತಿಂಗಳಿಗೊಮ್ಮೆ ಬಂದರೆ ಹೊರಗೆ ಓಡಾಡಲು ಮನಸ್ಸು ಮಾಡದೆ ತಿಂಗಳಿಡೀ ಕೆಲಸದ ಸುಸ್ತಿನಿಂದ ವಿಶ್ರಾಂತಿಗೆ ಮೊರೆ ಹೋಗುತ್ತಾನೆ. ಇತ್ತೀಚೆಗೆ ಆರೋಗ್ಯವೂ ಕೈಕೊಟ್ಟಿದ್ದರಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಉದಾ 3:
ಸ್ವಾತಿ ಗೃಹಿಣಿ. ಗಂಡನದ್ದು ಸರಕಾರಿ ನೌಕರಿ. ಆಕೆಗೆ ದಿನವಿಡೀ ಅಡುಗೆ ಕೆಲಸ. ಗಂಡನಿಗೆ ಮೂರು ಹೊತ್ತೂ ಫ್ರೆಶ್ ಆಗಿ ಅಡುಗೆಯಾಗಬೇಕು. ಬೆಳಗಿನಿಂದ ಕೆಲಸದಲ್ಲಿ ತೊಡಗಿಕೊಳ್ಳುವ ಹೆಂಡತಿ ಗಂಡನೊಂದಿಗೆ ಮಾತನಾಡಲು ಕಾಯುತ್ತಿರುತ್ತಾಳೆ.

ಆದರೆ ಕಚೇರಿಯ ಕಿರಿಕಿರಿ ಕೆಲಸಕ್ಕೆ ಬೇಸತ್ತು ಹೋಗುವ ಆತ ಮನೆಗೆ ಬಂದ ತಕ್ಷಣ ವಿಶ್ರಾಂತಿಗೆ ಮೊರೆ ಹೋಗುತ್ತಾನೆ. ಹೆಂಡತಿಯೊಂದಿಗೆ ಮಾತನಾಡುವುದಕ್ಕೂ ಮೂಡ್ ಇರುವುದಿಲ್ಲ. ಹೆಂಡತಿಗೇನು ಮನೆಯಲ್ಲಿ ಸುಖವಾಗಿದ್ದಾಳೆ ಎನ್ನುವ ಭಾವನೆ ಆತನದ್ದು. ಭಾನುವಾರವೂ ಆತನ ವಯಕ್ತಿಕ ಕೆಲಸದಲ್ಲೇ ಸಮಯ ಕಳೆದು ಹೋಗುವುದರಿಂದ ಹೆಂಡತಿಗೆ ಸಮಯ ಕೊಡುವುದಿಲ್ಲ.

ವರ್ಷಾನುಗಟ್ಟಲೇ ಇದನ್ನೇ ನೋಡಿ ನೋಡಿ ಆಕೆ ಡಿಫ್ರೆಶನ್ನಿಗೆ ಒಳಗಾಗುತ್ತಾಳೆ. ಸಣ್ಣ ಸಣ್ಣ ವಿಷಯಕ್ಕೂ ಕುದಿಯತೊಡಗುತ್ತಾಳೆ. ಜೀವನವೇ ಸಾಕೆನಿಸುತ್ತದೆ. ಮನೆ ಬಿಟ್ಟು ಹೋಗಿಬಿಡೋಣ ಎನಿಸುತ್ತದೆ. ಆತ್ಮಹತ್ಯೆಯ ಯೋಚನೆಯನ್ನೂ ಮಾಡುತ್ತಾಳೆ. ಆದರೆ ಇರುವ ಮಗಳ ಮುಖ ನೋಡಿ ಸಾಯುವ ಯೋಚನೆಯಿಂದ ವಿಮುಖಳಾಗುತ್ತಾಳೆ.

ಒಮ್ಮೆ ತಲೆ ನೇವರಿಸಿ ನೋಡಿ

ಇವೆಲ್ಲ ಕಾಲ್ಪನಿಕ ಉದಾಹರಣೆಗಳಾದರೂ ಪ್ರತಿ ಮನೆಯಲ್ಲಿನ ಘಟನೆಗಳು.
ಮಹಿಳೆಯರ ಮನಸ್ಥಿತಿ ಅರಿತು, ಅವರ ಕೊರಗನ್ನು, ಕೊರತೆಯನ್ನು ನಿವಾರಿಸಿದರೆ ಆಕೆಯನ್ನು ಆತ್ಮಹತ್ಯೆಯಂತಹ ದುಡುಕು ನಿರ್ಧಾರದಿಂದ ಹಿಂದೆ ಸರಿಯುವಂತೆ ಮಾಡಬಹುದು.

ಅವರ ಬೇಡಿಕೆ ಬಹುತೇಕ ದೊಡ್ಡದೇನೂ ಇರುವುದಿಲ್ಲ. ಸುಮ್ಮನೇ ಒಮ್ಮೆ ತಲೆ ನೇವರಿಸಿದರೂ ಆಕಾಶವೇ ಕೈಗೆ ಸಿಕ್ಕಷ್ಟು ಸಂಭ್ರಮಿಸುತ್ತಾರೆ. ಕೈ ಹಿಡಿದುಕೊಂಡು ನಾಲ್ಕು ಹೆಜ್ಜೆ ವಾಕ್ ಮಾಡಿದರೆ ನೀವು ಚಂದ್ರಲೋಕಕ್ಕೆ ಕರೆದುಕೊಂಡು ಹೋಗಿದ್ದಕ್ಕಿಂತ ಹೆಚ್ಚು ಖುಷಿಪಡುತ್ತಾರೆ.

ಆತನೂ ಸಮಸ್ಯೆಯಿಂದ ಮುಕ್ತನಲ್ಲ

ಗಂಡಿಗೂ ಅವರದ್ದೇ ಆದ ಹತ್ತು ಹಲವು ಸಮಸ್ಯೆಗಳಿರುತ್ತವೆ. ಆಫೀಸಿನ, ಬಿಸಿನೆಸ್ ನ ಕಿರಿಕಿರಿ ಮನಸ್ಸಿನಲ್ಲಿಟ್ಟುಕೊಂಡು ಹೊಯ್ದಾಟದಲ್ಲಿರಬಹುದು. ಅದನ್ನೆಲ್ಲ ಹೆಂಡತಿಗೆ ಹೇಳಿ ಅವಳನ್ನೇಕೆ ಚಿಂತೆಗೆ ಹಚ್ಚುವುದು ಎನ್ನುವ ಭಾವನೆ ಇರಬಹುದು. ಆದರೆ ತನ್ನ ಸಮಸ್ಯೆಯನ್ನು ಹೆಂಡತಿ ಬಳಿ ಹೇಳಿದರೆ ಆಕೆಗೂ ತನ್ನನ್ನು ಗಂಡ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾನೆ ಎನ್ನುವ ಭಾವನೆ ಬರುತ್ತದೆ ಎಂದು ಆತ ತಿಳಿದುಕೊಳ್ಳುವುದಿಲ್ಲ.

ಎಲ್ಲೋ ಒಂದು ಕಡೆ ರಾಜಿಯಾಗುವ, ಪ್ರತಿಷ್ಟೆ ಬಿಟ್ಟು ಕೆಳಗಿಳಿಯುವ ಮನಸ್ಸು ಇಬ್ಬರಲ್ಲೂ ಬೇಕಾಗುತ್ತದೆ. ಇರುವುದರಲ್ಲಿ ತೃಪ್ತರಾಗದೆ ಇಲ್ಲದ್ದೇನನ್ನೋ ಹುಡುಕುವ ಮನೋಭಾವವನ್ನು ಇಬ್ಬರೂ ಬಿಡಬೇಕು. ತಮಗಿಂತ ಮೇಲಿನವರಿಗೆ ಹೋಲಿಸಿಕೊಳ್ಳದೆ, ಕೆಳಗಿನವರನ್ನು ನೋಡಿ ಬದುಕುವುದನ್ನು ಕಲಿತುಕೊಳ್ಳಬೇಕು.
ಹೆಣ್ಣಿನ ಸೂಕ್ಷ್ಮ ಮನಸ್ಸಿಗೆ ಹತ್ತಿರವಾಗುವ ಕಲೆಯನ್ನು ಗಂಡು ಕಲಿತರೆ, ಗಂಡಿನ ಜವಾಬ್ದಾರಿ, ಒತ್ತಡ ಅರಿಯುವ ಮನಸ್ಸು ಹೆಣ್ಣಿನದ್ದಾದರೆ  ಸಂಸಾರವನ್ನು ಸುಲಲಿತವಾಗಿ ಮುನ್ನಡೆಸಬಹುದು.

  ([email protected],
watsapp -8197712235)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button