Uncategorized

*ಮುಖ್ಯಂತ್ರಿಗಳ ಕಚೇರಿ ವಿರುದ್ಧವೇ ಗಂಭೀರ ಆರೋಪ ಮಾಡಿದ ಮಾಜಿ ಸಿಎಂ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನವರು ಕಳೆದ ಒಂದು ತಿಂಗಳಿಂದ ಯಾವ ಕ್ರಮ ಕೈಗೊಂಡಿದ್ದೀರಿ? ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಿಎಂ ಕುಮಾರಸ್ವಾಮಿ, ಓರ್ವ ಶಾಸಕನಾಗಿ ಸರ್ಕಾರದ ಲೋಪದೋಷಗಳ ಬಗ್ಗೆ ಚರ್ಚಿಸುತ್ತಿದ್ದೇನೆ. ಮುಖ್ಯಮಂತ್ರಿಗಳ ಗೃಹಕಚೇರಿಯಲ್ಲಿಯೇ ಭ್ರಷ್ಟಾಚಾರ ನಡೆಯುತ್ತಿದೆ. ಶಾಸಕರು ಶಿಫಾರಸು ಪತ್ರ ತಂದ್ರೆ ಸಾಲದು ಹಣವನ್ನೂ ತರಬೇಕು ಎಂದು ಹೇಳುತ್ತಾರಂತೆ ಎಂದು ಸಿಎಂ ಕಚೇರಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಶಾಸಕರಿಗೆ ಶಿಫಾರಸು ಪತ್ರದ ಜೊತೆ 30 ಲಕ್ಷ ದುಡ್ಡು ತರಲು ಹೇಳಲಾಗುತ್ತಿದೆ. ಸಿಎಂ ಕಚೇರಿಯಿಂದಲೇ ಹಣಕ್ಕೆ ಬೇಡಿಕೆ ಇಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಸರ್ಕಾರ ಹೆಚ್ಚು ದಿನ ನಡೆಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಕ್ಷಿ ಇಡೀ ಅಂತಾರೆ. ದುಡ್ಡು ಕೊಟ್ಟೋನು ಸಾಕ್ಷಿ ಇಡ್ತಾನ? ಅವನಿಗೆ ಕೆಲಸ ಆದರೆ ಸಾಕು. ಇವರು ಪರಿಸ್ಥಿತಿಯ ದುರ್ಲಾಭ ಪಡೆದುಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಹೆಚ್ ಡಿಕೆ ವಾಗ್ದಾಳಿ ನಡೆಸಿದರು.

ನಾನು ಏನೇ ಮಾತಾಡಿದರೂ ವಿಷಯ ಇದ್ದರೆ ಮಾತ್ರ ಮಾತನಾಡುತ್ತೇನೆ, ಇಲ್ಲವಾದರೆ ಮೌನವಾಗಿ ಇರುತ್ತೇನೆ. ರಾಜ್ಯಪಾಲರ ಭಾಷಣದಲ್ಲಿ ವೀರಾವೇಶ ತೋರುವ ಇವರು, ಅಧಿಕಾರಕ್ಕೆ ಒಂದು ತಿಂಗಳ ಮೇಲಾಯಿತು. ಇದುವರೆಗೆ ಲಂಚಾವತಾರದ ಈ ಸರಕಾರ ಏನು ಕ್ರಮ ಕೈಗೊಂಡಿದೆ. ಜನರಿಗೆ ಹೇಳಬೇಕಲ್ಲವೇ? ಎಂದು ತರಾಟೆಗೆ ತೆಗೆದುಕೊಂಡರು.

ದಾಖಲೆ ಇದ್ದರೆ ಕೊಡಲಿ ಎಂದು ಕೆಲವರು ಹೇಳಿದ್ದನ್ನು ಕೇಳಿದ್ದೇನೆ. ದಾಖಲೆ ಕೊಡಿ ಎಂದವರೇ ಹಿಂದೆ ಬಿಜೆಪಿ ಸರಕಾರದ ವಿರುದ್ಧ 40% ಕಮಿಷನ್ ಆರೋಪ ಸೇರಿದಂತೆ ಅನೇಕ ಆರೋಪಗಳನ್ನು ಮಾಡಿದ್ದರು. ಅವರು ಆಗ ದಾಖಲೆ ಇಟ್ಟಿದ್ದರಾ? ಈಗ ಅವರದೇ ಸರಕಾರ ಇದೆ, ದಾಖಲೆ ಬಿಡುಗಡೆ ಮಾಡಬಹುದು, ಅಲ್ಲವೇ? ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು.

ಚುನಾವಣೆಗೆ ಭ್ರಷ್ಟಾಚಾರದ ಬಗ್ಗೆ ವೀರಾವೇಶದಿಂದ ಜನರ ಮುಂದೆ ಮಾತನಾಡಿದರು. ಹಾಗೆ ಮಾಡುತ್ತೇವೆ, ಹೀಗೆ ಮಾಡುತ್ತೇವೆ ಎಂದು ಕೊಚ್ಚಿಕೊಂಡರು. ಆ ವೀರಾವೇಶ ಈಗ ಎಲ್ಲಿ ಹೋಯಿತು ಎಂದು ಕೇಳಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button