ಉತ್ತರಕನ್ನಡ ಜಿಲ್ಲೆಯ ಹಲವೆಡೆ ಅಬ್ಬರದ ಮಳೆ; 5 ತಾಲೂಕಲ್ಲಿ ಶಾಲೆ, ಕಾಲೇಜಿಗೆ ರಜೆ
ಪ್ರಗತಿವಾಹಿನಿ ಸುದ್ದಿ, ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲೂ ಮಳೆ ಅಬ್ಬರ ಜೋರಾಗಿದ್ದು, 5 ತಾಲೂಕುಗಳ ಶಾಲೆ, ಕಾಲೇಜಿಗೆ ಬುಧವಾರ ರಜೆ ಘೋಷಿಸಲಾಗಿದೆ.
ಭಾರೀ ಮಳೆಗೆ ಕಾರವಾರ, ಭಟ್ಕಳ ನಗರ ರಸ್ತೆಗಳು ಜಲಾವೃತವಾಗಿವೆ. ಕಾರವಾರ ನಗರದ ರೈಲ್ವೆ ನಿಲ್ದಾಣಕ್ಕೆ ಸಾಗುವ ರಸ್ತೆ, ಹಬ್ಬುವಾಡ, ಕೆಎಚ್‌ಬಿ ಕಾಲೋನಿ, ಶಿರವಾಡ ರಸ್ತೆ,ಗುನಗಿ ವಾಡ ರಸ್ತೆಗಳು ಜಲಾವೃತವಾಗಿವೆ. ಕಾರವಾರ ನಗರದ ತಗ್ಗು ಪ್ರದೇಶದಲ್ಲಿ ಚರಂಡಿ ವ್ಯವಸ್ಥೆ ಸರಿಯಾಗಿಲ್ಲದ ಕಾರಣ ನಗರದ ರಸ್ತೆಯೆಲ್ಲ ನೀರಿನಿಂದ ತುಂಬಿಕೊಂಡಿದೆ.
ಹೆಚ್ಚಿನ ಮಳೆಯಾದಲ್ಲಿ ಸೋನಾರವಾಡ, ಎಲ್.ಐಸಿ ಕಾಲೋನಿ, ಗುನಿಗಿ ವಾಡ, ಸೋನಾರವಾಡದಲ್ಲಿ ಮನೆಗಳಿಗೆ ನೀರು ಹೊಕ್ಕುವ ಆತಂಕ ಎದುರಾಗಿದೆ. ಜಲಾವೃತ ರಸ್ತೆಗಳಲ್ಲಿ ವಾಹನ ಸಂಚಾರ ಅಸ್ಥವ್ಯಸ್ಥವಾಗಿದೆ. ಜಿಲ್ಲೆಯ ಭಟ್ಕಳ, ಅಂಕೋಲಾ, ಕುಮಟಾ ಹೊನ್ನಾವರದಲ್ಲೂ ಧಾರಾಕಾರ ಮಳೆಯಾಗುತ್ತಿದೆ.
ಭಟ್ಕಳ ಪಟ್ಟಣದ ಸಂಶುದ್ದೀನ್ ವೃತ್ತದಿಂದ ರಂಗಿಕಟ್ಟೆಯವರೆಗೆ ಜಲಾವೃತವಾಗಿದೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನೀರು ನಿಂತು ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡಲು ವಾಹನ ಸವಾರರು, ಪಾದಾಚಾರಿಗಳು ಸಂಕಷ್ಟ ಪಡುತ್ತಿದ್ದಾರೆ. ಮಳೆ ಮುಂದುವರಿದಲ್ಲಿ ಭಟ್ಕಳದಲ್ಲೂ ಮನೆಗಳ ಒಳಗೆ ನೀರು ಹೊಕ್ಕುವ ಸಾಧ್ಯತೆ ಇದೆ.
ರಾಷ್ಟ್ರೀಯ ಹೆದ್ದಾರಿ ಅಗಲಿಕರಣದ ಅರೆಬರೆ ಕಾಮಗಾರಿಯಿಂದ ಸಮಸ್ಯೆ ಇನ್ನಷ್ಟು ಹೆಚ್ಚಾಗಿದೆ.
ಭಾರಿ ಮಳೆ ಹಿನ್ನೆಲೆಯಲ್ಲಿ ನಾಳೆ, ಬುಧವಾರ ಶಾಲೆ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಜಿಲ್ಲೆಯಲ್ಲಿ ಜುಲೈ 5 ರಂದು ಭಾರಿ ಮಳೆ ಬೀಳುವ ಸೂಚನೆ ಹಿನ್ನೆಲೆಯಲ್ಲಿ ರಜೆ ಘೋಷಣೆ ಮಾಡಲಾಗಿದೆ. ಜಿಲ್ಲಾಡಳಿತಕ್ಕೆ ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮುನ್ಸೂಚನೆ ನೀಡಿದ್ದು, ಮುಂಜಾಗ್ರತೆಗಾಗಿ ಜುಲೈ 5 ರಂದು ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಮತ್ತು ಭಟ್ಕಳ ತಾಲೂಕಿನ ಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅದೇಶ ಹೊರಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ