ಮಾನವೀಯತೆಯ ರಾಜಕಾರಣಿ ಶಂಕರಗೌಡ ಪಾಟೀಲ
ಜನ್ಮದಿನದ ನಿಮಿತ್ತ ಈ ಲೇಖನ
ಪ್ರಸ್ತುತ ರಾಜಕೀಯ ವ್ಯವಸ್ಥೆ ಯಾವ ರೀತಿಯಲ್ಲಿ ಹದಗೆಟ್ಟಿದೆ ಎನ್ನವುದು ಎಲ್ಲರಿಗೂ ಗೊತ್ತಿದೆ. ಸಜ್ಜನರು ರಾಜಕಾರಣದಲ್ಲಿ ಕೆಲಸ ಮಾಡುವುದೇ ಕಷ್ಟ ಎಂಬುದನ್ನು ರಾಜಕಾರಣಿಗಳೂ ಒಪ್ಪಿಕೊಳ್ಳುತ್ತಾರೆ. ಕೆಲವರು ವ್ಯವಸ್ಥೆಗೆ ಹೊಂದಿಕೊಂಡು ರಾಜಕಾರಣ ಮಾಡಿದರೆ, ಇನ್ನು ಕೆಲವರು ಅನಿವಾರ್ಯವಾಗಿ ಕೆಲಸ ಮಾಡುತ್ತಿರುತ್ತಾರೆ.
ಆದರೆ ವ್ಯವಸ್ಥೆಯ ನಡುವೆ ಇದ್ದೂ ರಾಡಿಗೆ ತಮ್ಮನ್ನು ಒಗ್ಗಿಕೊಳ್ಳದೆ ಸಾಮಾಜಿಕ ಕೆಲಸ, ಬಡವರ ಕೆಲಸ, ಇದೊಂದು ಸಮಾಜ ಸೇವೆಗೆ ಸಿಕ್ಕ ಅವಕಾಶ ಎಂದು ಕೆಲಸ ಮಾಡುವವರು ತೀರಾ ಅಪರೂಪ. ಆ ರೀತಿಯಲ್ಲಿ ಕೆಟ್ಟ ವ್ಯವಸ್ಥೆಯೊಂದಿಗೆ ರಾಜಿಯಾಗದೆ, ಅಗತ್ಯ ಅಂತರ ಕಾಯ್ದುಕೊಂಡು, ಮಾನವೀಯ ನೆಲೆಯಲ್ಲಿ ಕೆಲಸ ಮಾಡುತ್ತಿರುವವರು ಬೆಳಗಾವಿಯ ಶಂಕರಗೌಡ ಪಾಟೀಲ.
ಶಂಕರಗೌಡ ಪಾಟೀಲ 1992ರಲ್ಲಿ ರಾಜಕೀಯಕ್ಕೆ ಪ್ರವೇಶಿಸಿದವರು. ಏಕಾಏಕಿ ಮೇಲೆ ಬಂದವರು ಅವರಲ್ಲ. ಭಾರತೀಯ ಜನತಾಪಾರ್ಟಿಯನ್ನು ಕೆಳಮಟ್ಟದಿಂದ ಕಟ್ಟಿಬೆಳೆಸುವಲ್ಲಿ ಕೆಲಸ ಮಾಡಿದವರು. ಬೆಳಗಾವಿಯಿಂದ ಕಾಶ್ಮೀರದವರೆಗೂ ನಡೆದ ವಿವಿಧ ಹೋರಾಟಗಳಲ್ಲಿ ತೊಡಗಿಕೊಂಡವರು. ಹೋರಾಟಕ್ಕಾಗಿ ಲಾಠಿ ರುಚಿಯನ್ನೂ ಕಂಡವರು, ಜೈಲಿನ ಕಂಬಿಯನ್ನೂ ಎಣಿಸಿದವರು.
ಆ ಸಂದರ್ಭದಲ್ಲಿ ಮುರಳಿಮನೋಹರ ಜೋಶಿ, ನರೇಂದ್ರ ಮೋದಿಯಂತಹ ನಾಯಕರೊಂದಿಗೆ ಕೆಲಸ ಮಾಡಿದ್ದಾರೆ. ಕಾಶ್ಮೀರದ ಲಾಲಚೌಕದಲ್ಲಿ ಧ್ವಜಾರೋಹಣ ಮಾಡಲು ಕರ್ನಾಟಕದ ತಂಡದ ನೇತೃತ್ವ ವಹಿಸಿ ಬಂಧನಕ್ಕೊಳಗಾಗಿದ್ದರು.
ಆ ಸಂದರ್ಭದಲ್ಲಿ ಇಡೀ ತಂಡಕ್ಕೆ ವೈಷ್ಣೋದೇವಿ ದರ್ಶನ ಮಾಡಿಸಿದ ಅಪರೂಪದ, ಪವಾಡ ರೀತಿಯ ಘಟನೆಯನ್ನು ಶಂಕರಗೌಡ ಪಾಟೀಲ ಇಂದಿಗೂ ಸ್ಮರಿಸುತ್ತಾರೆ.
ಅನಂತಕುಮಾರ, ಯಡಿಯೂರಪ್ಪ ಮಾರ್ಗದರ್ಶನ
ಆರಂಭದಲ್ಲಿ ಯುವಘಟಕದಲ್ಲಿ ಕೆಲಸ ಮಾಡಿದ ಶಂಕರಗೌಡ ಪಾಟೀಲ, ಮೂರು ಬಾರಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿದರೂ ಅತ್ಯಲ್ಪ ಮತಗಳ ಅಂತರದಿಂದ ವಂಚಿತರಾಗುತ್ತ ಬಂದಿದ್ದಾರೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಅನಂತಕುಮಾರ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಬ್ಬರೂ ಶಂಕರಗೌಡ ಪಾಟೀಲ ಅವರಿಗೆ ಮಾರ್ಗದರ್ಶನ ಮಾಡುತ್ತ ಬೆಳೆಸಿದ್ದಾರೆ. ಅವರೊಂದಿಗೆ ಒಳ್ಳೆಯ ಸಂಬಂಧ ಇಟ್ಟುಕೊಂಡು ಜೊತೆಯಾಗಿ ಕೆಲಸ ಮಾಡಿದ್ದಾರೆ.
ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಚೇರಮನ್ ಆಗಿ, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಚೇರಮನ್ ಆಗಿ ಮಾನವೀಯ ನೆಲೆಯಲ್ಲಿ, ಮಾದರಿ ಎನಿಸುವಂತೆ ಕೆಲಸ ಮಾಡಿರುವ ಶಂಕರಗೌಡ ಪಾಟೀಲ, ಪ್ರಸ್ತುತ ಬಿಜೆಪಿ ಕಿಸಾನ್ ಮೋರ್ಚಾ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಗೋವಾ, ಆಂಧ್ರಪ್ರದೇಶ ಮತ್ತು ತೆಲಂಗಾಣ ಉಸ್ತುವಾರಿಯನ್ನೂ ನೋಡಿಕೊಳ್ಳುತ್ತಿದ್ದಾರೆ.
ಮಾದರಿಯಾಗಿ ಜನ್ಮದಿನ
ಶಂಕರಗೌಡ ಪಾಟೀಲ ಪ್ರತಿವರ್ಷ ತಮ್ಮ ಜನ್ಮದಿನವನ್ನು ಮಾದರಿಯಾಗಿ ಆಚರಿಸುತ್ತ ಬಂದಿದ್ದಾರೆ. ಶಂಕರಗೌಡ ಪಾಟೀಲ ಪ್ರತಿಷ್ಠಾನದಿಂದ ಬಡವರಿಗೆ, ಸಾಧಕರಿಗೆ ಗೌರವಿಸುವ ಮೂಲಕ ಅನಾಥಾಶ್ರಮದ ಮಕ್ಕಳಿಗೆ ಊಟ, ಬಟ್ಟೆಗಳನ್ನು ವಿತರಿಸುವ ಮೂಲಕ, ವಿವಿಧ ರೀತಿಯ ಸಾಮಾಜಿಕ ಕಾರ್ಯಗಳನ್ನು ನಡೆಸುವ ಮೂಲಕ ಜನ್ಮದಿನ ಆಚರಿಸಿಕೊಳ್ಳುತ್ತಾರೆ.
ಎಎಂಇಸಿ ಕಲರ್ಸ್ ಅವಾರ್ಡ್
ಶಂಕರಗೌಡ ಪಾಟೀಲ ಅವರಿಗೆ ಈಚೆಗೆ ಅಮೇರಿಕನ್ ಸಿಟಿಜನ್ ಫೋರಮ್ ವತಿಯಿಂದ ಶ್ಯಾಮ್ ಪ್ರಸಾದ ಮುಖರ್ಜಿ ಹೆಸರಿನಲ್ಲಿ ಎಎಂಇಸಿ ಕಲರ್ಸ್ ಅವಾರ್ಡ್ ನೀಡಿ ಗೌರವಿಸಲಾಗಿದೆ.
ಎಲ್ಲ ನಾಯಕರೊಂದಿಗೂ ಸೌಹಾರ್ಧಯುತ ಸಂಬಂಧ ಇಟ್ಟುಕೊಂಡು ನಿರಂತರ ಕ್ರಿಯಾಶೀಲತೆ ಉಳಿಸಿಕೊಂಡು ಕೆಳಮಟ್ಟದ ಕಾರ್ಯಕರ್ತರಿಗೂ ಗೌರವ, ಪ್ರೀತಿ ತೋರಿಸುತ್ತ ಜೊತೆಗಿದ್ದವರನ್ನೂ ಬೆಳೆಸುತ್ತ, ತಾವೂ ಬೆಳೆಯುತ್ತ ಬರುತ್ತಿದ್ದಾರೆ ಶಂಕರಗೌಡ ಪಾಟೀಲ.
ಇಂದು (ಜುಲೈ 22) ಅವರ ಜನ್ಮದಿನ. ದೇವಸ್ಥಾನಗಳಲ್ಲಿ ಪೂಜೆ, ಅನಾಥ ಮಕ್ಕಳೊಂದಿಗೆ ಊಟ ಮೊದಲಾದ ಕಾರ್ಯಕ್ರಮಗಳನ್ನು ಅವರು ಹಮ್ಮಿಕೊಂಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ