ವಿಶ್ವಾಸ ಮತ ಯಾಚನೆಗೆ ಇನ್ನೂ 2 ದಿನ?
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –
ರಾಜ್ಯರಾಜಕಾರಣದ ಗೊಂದಲ 17 ದಿನ ಕಳೆದಿದೆ. ಪ್ರತಿ ದಿನ ಇಂದು ಮುಕ್ತಾಯವಾಗಬಹುದು, ನಾಳೆ ಮುಕ್ತಾಯವಾಗಬಹುದು ಎನ್ನುವ ನಿರೀಕ್ಷೆ ಹುಸಿಯಾಗುತ್ತಲೇ ಸಾಗಿದೆ.
ಇದೀಗ ಬಂದ ಲೇಟೆಸ್ಟ್ ಸುದ್ದಿ ಪ್ರಕಾರ ವಿಶ್ವಾಸ ಮತ ಯಾಚನೆ ಇಂದೂ ನಡೆಯುವುದು ಅನುಮಾನ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತ ಮಿತ್ರ ಪಕ್ಷಗಳ ನಾಯಕರು ಇದೀಗ ಸ್ಪೀಕರ್ ರಮೇಶ ಕುಮಾರ ಅವರನ್ನು ಭೇಟಿಯಾಗಿ 20 ನಿಮಿಷ ಮಾತುಕತೆ ನಡೆಸಿದ್ದಾರೆ.
ವಿಶ್ವಾಸಮತದ ಮೇಲೆ ಇನ್ನೂ ಅನೇಕರು ಮಾತನಾಡುವವರಿದ್ದಾರೆ. ಎಲ್ಲರಿಗೂ ಅವಕಾಶ ಕೊಡಬೇಕು. ಹಾಗಾಗಿ ಇನ್ನೂ 2 ದಿನ ಚರ್ಚೆಗೆ ಕಾಲಾವಕಾಶ ಕೊಡಿ ಎಂದು ನಿಯೋಗ ಸ್ಪೀಕರ್ ಬಳಿ ಮನವಿ ಮಾಡಿದೆ.
ಈ ಬೆಳವಣಿಗೆ ನೋಡಿದರೆ ಇಂದೂ ವಿಶ್ವಾಸಮತ ಯಾಚನೆ ಆಗುತ್ತೋ ಇಲ್ಲವೋ ಎನ್ನುವ ಸಂಶಯ ಮೂಡಿಸಿದೆ. ಆದರೆ ಸ್ಪೀಕರ್ ಈ ಬಗ್ಗೆ ಇನ್ನೂ ನಿರ್ಧಾರ ಪ್ರಕಟಿಸಿಲ್ಲ. 2 ದಿನ ಚರ್ಚೆಗೆ ಅವಕಾಶ ಕೊಡುತ್ತಾರೋ ಇಲ್ಲವೋ ಗೊತ್ತಾಗಿಲ್ಲ.
ಅಧಿವೇಶನದ ಆರಂಭದಲ್ಲೇ ಸ್ಪೀಕರ್ ಈ ಬಗ್ಗೆ ತಮ್ಮ ನಿರ್ಧಾರ ಪ್ರಕಟಿಸಬಹುದು.
ಇಂದು ಬೆಳಗ್ಗೆ ಪತ್ರಕರ್ತರೊಂದಿಗೆ ಮಾತನಾಡಿದ ಸ್ಪೀಕರ್ ಇಂದೇ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಮುಗಿಸುವುದಾಗಿ ಹೇಳಿದ್ದರು. ತಾವೇ ವಿನಾಕಾರಣ ವಿಳಂಬ ಮಾಡುತ್ತಿರುವುದಾಗಿ ಕೆಲವರು ಬಿಂಬಿಸುತ್ತಿದ್ದಾರೆ. ಆದರೆ ಕಾನೂನನ್ನೆಲ್ಲ ಗಾಳಿಗೆ ತೂರಿ ಮಾಡಲು ಸಾಧ್ಯವಿಲ್ಲ ಎಂದೂ ಅವರು ಹೇಳಿದ್ದರು.
ಈ ಮಧ್ಯೆ ಸುಪ್ರಿಂ ಕೋರ್ಟ್ ವಿಶ್ವಾಸಮತ ಯಾಚನೆಗೆ ಕಾಲಮಿತಿ ನಿಗದಿಪಡಿಸಿ ಸ್ಪೀಕರ್ ಗೆ ಸೂಚಿಸಲು ಸಾಧ್ಯವಿಲ್ಲ ಎಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ