*ಮೊದಲ ಬಾರಿ ಆಪರೇಷನ್ ಮಾಡಿದ್ದೇ ಕಾಂಗ್ರೆಸ್; ಮಾಜಿ ಸಿಎಂ ಬೊಮ್ಮಾಯಿ ಹೇಳಿಕೆ*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷಗಳು ಮಾಡುತ್ತಿರುವ ವರ್ಗಾವಣೆ ದಂಧೆ ಆರೋಪ ಅಲ್ಲಗಳೆದಿರುವ ಸಿಎಂ ಸಿದ್ದರಾಮಯ್ಯ, ನನ್ನ ಸುದೀರ್ಘ ರಾಜಕಾರಣದಲ್ಲಿ ಯಾವ ಕಳಂಕವೂ ಇಲ್ಲ, ಹಗರಣಗಳೂ ಇಲ್ಲ ಎಂದು ಹೇಳಿದ್ದಾರೆ.
ವಿಧಾನಸಭೆಯಲ್ಲಿ ವಿಪಕ್ಷಗಳ ಆರೋಪ ನಿರಾಕರಿಸಿದ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಮಧ್ಯಪ್ರವೇಶ ಮಾಡಿದ ಮಾಜಿ ಸಿಎಂ ಬಸವಾರಾಜ್ ಬೊಮ್ಮಾಯಿ, ನಾವು ಮುಖ್ಯಮಂತ್ರಿಗಳು ಭ್ರಷ್ಟಾಚಾರ ಮಾಡಿದ್ದಾರೆ ಎಂದು ಹೇಳಿಲ್ಲ, ಇಲಾಖೆಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದಿದ್ದೇವೆ. ನಾನು ಸಿಎಂ ಆಗಿದ್ದಾಗ ಎಸ್ ಐ ಟಿ ರಚಿಸಿ ತನಿಖೆ ಮಾಡಿಸಿದ್ದೇವೆ. ನಿಮ್ಮ ಹಿಂದಿನ ಸರ್ಕಾರದ ಅವಧಿಯ ಎಲ್ಲ ಹಗರಣಗಳನ್ನು ಲೋಕಾಯುಕ್ತಕ್ಕೆ ಕೊಟ್ಟಿದ್ದೇವೆ ಎಂದು ಗುಡುಗಿದರು.
ಅಷ್ಟಕ್ಕೇ ಸುಮ್ಮನಾಗದ ಮಾಜಿ ಸಿಎಂ, ನಾವು ತನಿಖೆ ಮಾಡಿಸಿಲ್ಲ ಎಂದು ಹೇಳಬೇಡಿ. ಆಧಾರ ರಹಿತ ಆರೋಪ ಮಾಡಿದ್ದರೆ ತನಿಖೆಯಾಗಲಿ, ಯಾವ ಸರ್ಕಾರದಲ್ಲಿ ಭ್ರಷ್ಟಾಚಾರ ಆಗಿದೆ ಗೊತ್ತಾಗಲಿ ಎಂದು ಹೇಳಿದರು. ಈ ಹಿಂದೆ ನೀವು ಎಲ್ಲಾ ಭಾಗ್ಯ ಕೊಟ್ಟು ಅಧಿಕಾರಕ್ಕೆ ಬಂದಿರಲಿಲ್ಲ. 2013ರಲ್ಲಿ ನಮ್ಮಲ್ಲಿನ ಒಡಕುಗಳಿಂದ ನೀವು ಅಧಿಕಾರಕ್ಕೆ ಬಂದಿದ್ದು. ಈಗ ನೀವು ಸ್ವಂತ ಬಲದಿಂದ ಗೆದ್ದಿದ್ದೀರಿ ಒಪ್ಪಿಕೊಳ್ಳುತ್ತೇವೆ. ಇನ್ನು ಬಿಜೆಪಿ ವಿರುದ್ಧ ಆಪರೇಷನ್ ಕಮಲ ಎನ್ನುತ್ತೀರಲ್ಲ, ಹಿಂದೆ ಕೆಲವರು ರಾಜೀನಮೆ ಕೊಟ್ಟಿದ್ದರು. ಇದರಲ್ಲಿ ಯಾವ ಆಪರೇಷನ್ ಬಂತು? ಹಾಗೆ ನೋಡುವುದಾದರೆ ಮೊದಲು ಆಪರೇಷನ್ ಮಾಡಿದ್ದೇ ಕಾಂಗ್ರೆಸ್ ಎಂದರು.
ಬೊಮ್ಮಾಯಿ ಹೇಳಿಕೆಗೆ ಧ್ವನಿಗೂಡಿಸಿದ ಮಾಜಿ ಸಚಿವ ಆರ್.ಅಶೋಕ್, 80 ಸೀಟು ತಗೊಂಡು ನೀವು ದೇವೇಗೌಡರ ಮನೆ ಬಳಿ ಹೋಗಿ ಕಾದಿರಲಿಲ್ಲವೇ? ಎಂದು ಪ್ರಶ್ನಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ