*ಆಷಾಢ ಶುಕ್ರವಾರದ ಕೊನೆಯ ದಿನ; ಮೈಸೂರು ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ಹುಕ್ಕೇರಿ ಹಾಗೂ ಬೇಬಿಮಠದ ಶ್ರೀಗಳು*
ಪ್ರಗತಿವಾಹಿನಿ ಸುದ್ದಿ; ಮೈಸೂರು: ಆಷಾಢ ಶುಕ್ರವಾರದ ಕೊನೆಯ ಶುಕ್ರವಾರ ಹಿನ್ನೆಲೆಯಲ್ಲಿ ಇಂದು ಮೈಸೂರಿನಲ್ಲಿ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹಾಗೂ ಬೇಬಿ ಗ್ರಾಮ ಶ್ರೀರಂಗಪಟ್ಟಣ ಚಂದ್ರವನ ಆಶ್ರಮದ ಶ್ರೀ ಡಾ.ತ್ರಿನೇತ್ರ ಮಹಾಂತ ಶಿವಯೋಗಿ ಮಹಾಸ್ವಾಮೀಜಿ ಅವರು ನಾಡದೇವಿತೆ ಚಾಮುಂಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.
ದೇಶದಲ್ಲಿ ಅತಿವೃಷ್ಟಿ, ಅನಾವೃಷ್ಟಿಯಾಗುತ್ತಿದೆ. ಇದರಿಂದ ರೈತರು ತುಂಬಾ ತೊಂದರೆಯಲ್ಲಿದ್ದಾರೆ. ಕೆಲವೆಡೆ ಡ್ಯಾಮ್ ಗಳು ಬತ್ತಿ ಹೋಗಿವೆ. ಇಂಥ ಸಂದರ್ಭದಲ್ಲಿ ವರುಣನ ಕೃಪೆ ಕೆಲ ಭಾಗದಲ್ಲಿ ಆಗಬೇಕಾಗಿದೆ. ಹಾಗೇಯೆ ಇನ್ನಷ್ಟು ಭಾಗದಲ್ಲಿ ಅತಿವೃಷ್ಟಿಯಾಗಿ ಜನರು ತೊಂದರೆಯಲ್ಲಿದ್ದಾರೆ. ಈ ಎಲ್ಲಾ ಸಮಸ್ಯೆ ನಿವಾರಿಸುವ ಶಕ್ತಿ ದೇವರಿಗೆ ಇದೆ. ನಾಡ ದೇವತೆ ಚಾಮುಂಡೇಶ್ವರಿ ನಾಡಿನ ಜನರಿಗೆ ಅನುಗ್ರಹಿಸಲಿ ಎಂದು ಉಭಯ ಶ್ರೀಗಳು ಪ್ರಾರ್ಥನೆ ಮಾಡಿದರು.
ರಾಜ್ಯದಲ್ಲಿ ಮುನಿಗಳ ಹತ್ಯೆಯಾಗಿರುವುದನ್ನು ಖಂಡಿಸಿದ ಶ್ರೀಗಳು ಇಂಥ ಮನಸ್ಥಿತಿಗಳು ಬರಬಾರದು. ದೇವಿ ಎಲ್ಲರಿಗೂ ಸಮಾಧಾನದ ಬುದ್ಧಿ ಅನುಗ್ರಹಿಸಬೇಕೆಂದು ಪ್ರಾರ್ಥಿಸಿದರು.
ಮೈಸೂರಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಅವರು ಇದೇ ಸಂದರ್ಭದಲ್ಲಿ ಉಭಯ ಶ್ರೀಗಳಿಂದ ಆಶೀರ್ವಾದ ಪಡೆದು ಮಾತನಾಡಿ, ನಾನು ಮೊದಲು ಬೆಳಗಾವಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿಯಾಗಿ ಕೆಲಸ ನಿರ್ವಹಿಸಿದ್ದೆ. ಹುಕ್ಕೇರಿಯ ಶ್ರೀಗಳು ಕೊರೊನಾ ಸಂದರ್ಭದಲ್ಲಿ ಎಲ್ಲರಿಗೂ ಕೂಡಾ ಸ್ಪಂದಿಸಿ ಮತ್ತು ನಮ್ಮ ಪೊಲೀಸ್ ಇಲಾಖೆಗೆ ದೈರ್ಯವನ್ನು ತುಂಬಿದ್ದುರು ಎದು ನೆನಪಿಸಿಕೊಂಡರು.
ಇಂದು ಮೈಸೂರಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಬಂದಿದ್ದೇನೆ. ಈ ಭಾಗದ ಜನತೆಗೆ ಶಾಂತಿ, ಸಮಾಧಾನದಿಂದ ಬದುಕನ್ನು ನಡೆಸಲು ನಮ್ಮ ಇಲಾಖೆ ಶ್ರಮಿಸುತ್ತಿದೆ. ಇಂದು ಶ್ರೀಗಳು ಬೆಳಗಾವಿಯಿಂದ ಬಂದು ಇಲ್ಲಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ್ದಾರೆ. ಹುಕ್ಕೇರಿ ಹಾಗೂ ಬೇಬಿಮಠದ ಶ್ರೀಗಳ ಆಶೀರ್ವಾದ ಎಲ್ಲರ ಮೇಲೆ ಇರಲಿ ಎಂದರು.
ಕೊನೆಯ ಶುಕ್ರವಾರದಂದು ಸುಮಾರು 1000 ಜನ ಪೊಲೀಸರನ್ನು ನೇಮಿಸಿ ಬಿಗಿ ಪೊಲೀಸ್ ಬಂದೋಬಸ್ತ ಮಾಡಲಾಗಿದೆ. ಜನರು ಕೂಡ ಅಷ್ಟೆ ಶಾಂತತೆಯಿಂದ ದೇವರ ದರ್ಶನ ಪಡೆಯುತ್ತಿದ್ದಾರೆ ಎಂದರು.
ಈ ವೇಳೆ ಮುಖ್ಯ ಪ್ರಧಾನ ಅರ್ಚಕರಾದ ಶಶೀಧರ ದೀಕ್ಷಿತ್, ನಾಗರಾಜ ಮಾಡಗೇರ, ಚಲನಚಿತ್ರ ನಟ ಆದಿ ಲೋಕೇಶ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ