ಜಯಶ್ರೀ ಜೆ.ಅಬ್ಬಿಗೇರಿ, ಇಂಗ್ಲೀಷ್ ಉಪನ್ಯಾಸಕರು, ಬೆಳಗಾವಿ
ಒಮ್ಮೆ ಭಗವಾನ್ ಬುದ್ಧನನ್ನು ಶಿಷ್ಯನೊಬ್ಬ ಕೇಳಿದ: ’ಭಗವಾನ್, ಕೆಲವರ ಬಳಿ ಆಸ್ತಿ, ಅಂತಸ್ತು, ಅಧಿಕಾರ ಯಾವೆಲ್ಲ ಅನುಕೂಲತೆಗಳು ಇದ್ದರೂ ತಮ್ಮ ಪ್ರಯತ್ನಗಳಲ್ಲಿ ವಿಫಲರಾಗುತ್ತಾರೆ. ಆದರೆ ಕೆಲವರು ಯಾವುದೇ ಅನುಕೂಲತೆಗಳು ಇಲ್ಲದೇ ಇದ್ದರೂ ಸಂಕಷ್ಟದ ಪರಿಸ್ಥಿತಿಯಲ್ಲೂ ಯಶಸ್ವಿಗಳಾಗಿ ರೂಪುಗೊಳ್ಳುತ್ತಾರಲ್ಲ ಅದು ಹೇಗೆ?’ ಅದಕ್ಕೆ ಉತ್ತರವೆಂಬಂತೆ ವಿರಾಟನಗರದ ರಾಜ ಸುಕೀರ್ತಿಯ ಹತ್ತಿರವಿದ್ದ ಲೋಹಶೃಂಗವೆಂಬ ಆನೆಯ ಕಥೆಯನ್ನು ಬುದ್ಧ ಹೇಳಿದನು. ರಾಜನು ಆ ಪರಾಕ್ರಮಿ ಆನೆಯ ಮೇಲೆ ಕುಳಿತು ಅನೇಕ ಯುದ್ಧಗಳನ್ನು ಗೆದ್ದಿದ್ದನು. ಕಾಲ ಕಳೆದಂತೆ ಆನೆ ಮುದಿಯಾಯಿತು. ಎಲ್ಲರಿಂದಲೂ ಅದು ಕಡೆಗಣಿಸಲ್ಪಟ್ಟಿತು. ಒಮ್ಮೆ ಅದು ಕೆರೆಯ ಕೆಸರಿನಲ್ಲಿ ಸಿಲುಕಿತು. ಅದನ್ನು ಹೊರತೆಗೆಯುವ ಎಲ್ಲ ಪ್ರಯತ್ನಗಳೂ ವಿಫಲವಾದವು. ಆಗ ಚತುರ ಸೈನಿಕನೊಬ್ಬ ಉಪಾಯವೊಂದನ್ನು ಮಾಡಿದ. ಜೋರಾಗಿ ರಣವಾದ್ಯ ಬಾರಿಸಿದ. ಆ ಶಬ್ದ ಕಿವಿಗೆ ಬೀಳುತ್ತಿದ್ದಂತೆಯೇ ಲೋಹಶೃಂಗ ತನ್ನೆಲ್ಲ ಶಕ್ತಿ ಒಂದುಗೂಡಿಸಿ ಆವೇಶ ಬಂದಂತೆ ಎದ್ದು ಸೈನಿಕರತ್ತ ಓಡತೊಡಗಿತು’. ಅಂದರೆ ಮನೋಸ್ಥೈರ್ಯ ಎಲ್ಲಕ್ಕಿಂತ ದೊಡ್ಡದು. ಅದು ದೃಢವಾಗಿದ್ದರೆ ಯಾವ ಕಾರ್ಯವೂ ಅಸಂಭವವಲ್ಲ. ಎಂಬ ಸಂದೇಶ ಈ ಕಥೆಯಿಂದ ಮನದಟ್ಟಾಗುತ್ತದೆ.
ಯೋಚನೆಗಳ ಕನ್ನಡಿಯಿದ್ದಂತೆ
’ನನಗಿದು ಸಾಧ್ಯವೆಂದರೆ ಸಾಧ್ಯ., ನನ್ನಿಂದಾಗದು ಎಂದರೆ ಅಸಾಧ್ಯ.’ ನಮ್ಮ ಬದುಕು ನಮ್ಮ ಯೋಚನೆಗಳ ಕನ್ನಡಿಯಿದ್ದಂತೆ. ನಾವು ಹೇಗೆ ಭಾವಿಸುತ್ತೇವೆಯೋ ಹಾಗೇ ಆಗುತ್ತೇವೆ ಎನ್ನುತ್ತದೆ ಸಂಸ್ಕೃತದ ಮಾತೊಂದು.(ಯದ್ಭಾವಂ ತದ್ಭವತಿ) ಆದ್ದರಿಂದ ನಮ್ಮನ್ನು ನಾವು ದುರ್ಬಲರೆಂದು ಭಾವಿಸದೇ ಬಲಿಷ್ಠರೆಂದು ಭಾವಿಸಬೇಕು. ಆಗ ಅಗಾಧವಾದ ಬದಲಾವಣೆಗಳು ನಮ್ಮಲ್ಲಿ ಉಂಟಾಗುತ್ತವೆ. ಅಸಾಧ್ಯವೂ ಸಾಧ್ಯವಾಗುತ್ತದೆ. ಮನಸ್ಸನ್ನು ಸಕಾರಾತ್ಮಕವಾಗಿ ಇರುವಂತೆ ತರಬೇತುಗೊಳಿಸಿದರೆ ಗಗನದೆತ್ತರಕ್ಕೆ ಏರಬಹುದು. ಬಲಿಷ್ಟ ಮನಸ್ಸು ಬಲಿಷ್ಟ ದೇಹದಲ್ಲಿ ಇರುತ್ತದೆ. ಎಷ್ಟೇ ಸಾಮಾನ್ಯ ಶರೀರದಲ್ಲಿಯೂ ಅಸಾಮಾನ್ಯ ಶಕ್ತಿಯನ್ನು ತುಂಬುವ ಶಕ್ತಿ ಮನಸ್ಸಿಗಿದೆ ಎಂಬುದನ್ನು ಮರೆಯುವಂತಿಲ್ಲ. ಸರಳ ಪದಗಳಲ್ಲಿ ಹೇಳುವುದಾದರೆ, ಮನೋಬಲವೇ ಸರ್ವಶ್ರೇಷ್ಠ ಬಲ. ಅದು ಸರ್ವ ಸುಖವನ್ನು ನೀಡಬಲ್ಲದು. ಮನೋದೌರ್ಬಲ್ಯವೇ ದುಃಖ. ದೌರ್ಬಲ್ಯವು ರೋಗ,ಭಯ, ಆತಂಕ. ಒತ್ತಡಗಳನ್ನು ಹೆಚ್ಚಿಸುವುದು. ಇಲ್ಲಸಲ್ಲದ ಅಪಾಯಗಳಿಗೆ ನೂಕಬಲ್ಲದು. ಆದರೆ ಅದೇ ಮನಸ್ಸು ಶಕ್ತಿಯುತವಾಗಿದ್ದರೆ ಸಂಕಟದಿಂದ ಪಾರು ಮಾಡಬಲ್ಲದು. ಎನ್ನುವ ಸಂಗತಿ ಮೇಲಿನ ಮಾತನ್ನೇ ಸಮರ್ಥಿಸುತ್ತದೆ.
ನಿರಂತರ ಯೋಚನಾ ಲಹರಿ
Continuous flow of thoughts is mind ಎನ್ನುವ ಆಂಗ್ಲೋಕ್ತಿಯು ಮನಸ್ಸೆಂದರೆ ನಿರಂತರ ಯೋಚನಾ ಲಹರಿ ಎಂಬ ವ್ಯಾಖ್ಯಾನ ನೀಡುತ್ತದೆ. ಇತ್ತೀಚಿನ ವೇಗದ ದುನಿಯಾದಲ್ಲಂತೂ ಹಲವು ದಿಕ್ಕಿನಲ್ಲಿ ಚದುರಿ ಹೋಗುತ್ತಿರುವ ಮನಸ್ಸನ್ನು ನಿಯಂತ್ರಣದಲ್ಲಿಡುವುದು ಸುಲಭವಲ್ಲ. ಯೋಚನಾಲಹರಿಗೆ ತಡೆಯೊಡ್ಡಬೇಕೆಂದರೆ ಸತ್ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಫ್ರಾಂಕ್ಲಿನ್ ರೂಸ್‌ವೆಲ್ಟ್ ಹೇಳಿದಂತೆ ’ಮನುಷ್ಯ ತನ್ನ ಹಣೆಬರಹದ ಸೆರೆಯಾಳಲ್ಲ. ಬದಲಿಗೆ ತನ್ನ ಮನಸ್ಸಿನ ಸೆರೆಯಾಳು.’ ಎಂಬುದು ಕಟು ವಾಸ್ತವ ಸಂಗತಿ.
ಸ್ವರ್ಗ-ನರಕಗಳ ತಾಣ
ಮನಸ್ಸು ಕಣ್ಣಿಗೆ ಕಾಣದಿದ್ದರೂ ಅದರ ಪ್ರಭಾವ ಅಪಾರವಾದದ್ದು ಅಷ್ಟೇ ಅಲ್ಲ ವಿಚಿತ್ರವಾದದ್ದು. ಅದರ ಕಲ್ಪನಾಲಹರಿ, ಸೂಪ್ತಶಕ್ತಿ, ಸಾಮರ್ಥ್ಯ ಅಳೆಯಲಾಗದ್ದು ಅಗಾಧವಾದದ್ದು. ಅದರ ಮಲಿನತೆಗೆ ಕಾರಣವಾಗಿರುವ ಆಸೆ ಆಮಿಷಗಳಿಗೆ ಮಿತಿಯೆಂಬುದೇ ಇಲ್ಲ ಎಂಬುದು ಅಷ್ಟೇ ಸೋಜಿಗದ ಸಂಗತಿ. ತಿರಸ್ಕಾರ, ಮೂದಲಿಕೆ,ನಿಂದೆ, ಬೆಂಕಿಯಂತಹ ಕೋಪ,ಅಪಹಾಸ್ಯ ಗೇಲಿ ಮಾಡುವುದು ಮನಸ್ಸಿನ ದೌರ್ಬಲ್ಯಗಳು. ಇವುಗಳನ್ನು ತಿದ್ದಲು ದೃಢಸಂಕಲ್ಪ ಬೇಕು. ಜತೆಗೆ ಪ್ರಾಮಾಣಿಕ ಪ್ರಯತ್ನವಂತೂ ಬೇಕೇಬೇಕು. ಸಾಮಾಜಿಕ ಬದುಕಿನಲ್ಲಿ ಕುಂದು ಕೊರತೆಯಿಲ್ಲದ ವ್ಯಕ್ತಿ ಇಲ್ಲವೇ ಇಲ್ಲ. ಬದುಕನ್ನು ಹಸನುಗೊಳಿಸಿ ಆದರ್ಶದ ಮಾರ್ಗದಲ್ಲಿ ಮುನ್ನಡೆಯಲು ಹರಿತವಾದ ಒಳ್ಳೆಯ ಮನಸ್ಸು ಮಹತ್ವದ್ದು. ’ಮನೋ ಏವ ಕಾರಣಂ ಬಂಧ ಮೋಕ್ಷಯೋಃ’ (ಮನುಷ್ಯನ ಬಂಧನಕ್ಕೂ ಮೋಕ್ಷಕ್ಕೂ ಮನಸ್ಸೇ ಕಾರಣ) The kingdom of heaven is not a place, but a state of mind. (ನಮ್ಮ ಮನಸ್ಸೇ ಸ್ವರ್ಗ-ನರಕಗಳ ತಾಣ) ಎನ್ನುತ್ತದೆ ಆಂಗ್ಲ ನುಡಿ.
ಕೊನೆ ಹನಿ
ಮನಸ್ಸನ್ನು ಹಿಡಿದಿಡಲು ನೋಡಿದಷ್ಟು ಪುಟಿದೇಳುತ್ತದೆ. ಅಂದರೆ ಗಂಟು ಬಿಚ್ಚಿ ಚೆಲ್ಲಿಹೋದ ಸಾಸಿವೆ ಕಾಳುಗಳನ್ನು ಒಂದುಗೂಡಿಸುವುದು ಎಷ್ಟು ಕಷ್ಟವೋ ಅಷ್ಟೇ ಕಷ್ಟ ಮನಸ್ಸನ್ನು ಜಯಿಸುವುದು ಕಷ್ಟವಾದರೂ ಮನಸ್ಸನ್ನು ಜಯಿಸುವುದು ಸಾಧ್ಯ ಎನ್ನುವುದಕ್ಕೆ ಅನೇಕ ಸಾಧಕರು ನಮ್ಮ ಕಣ್ಮುಂದಿದ್ದಾರೆ. ಅವರು ನಡೆದ ದಾರಿಯಲ್ಲಿ ನಾವು ನಡೆಯಬೇಕಿದೆ. ಮನದ ಕೊಳೆಯನ್ನು ಕಳೆಯಬೇಕಿದೆ ಮನದ ಹೊಳಪನ್ನು ಹೆಚ್ಚಿಸಬೇಕಿದೆ.ಎಂತಹ ದುಗುಡವನ್ನು ಹೊಡೆದೋಡಿಸುವ,ಜೀವನೋತ್ಸಾಹವನ್ನು ಮತ್ತಷ್ಟು ಮಗದಷ್ಟು ಏರಿಸುವ, ಇನ್ನಷ್ಟು ವರ್ಷ ಸವಿಸವಿಯಾಗಿ ಬದುಕಬೇಕೆಂಬ ಹರ್ಷ ಹುಟ್ಟಿಸುವ, ನಲಿವಿನಲಿ ಚಿಗುರುವ ಮತ್ತೆ ಮತ್ತೆ ಜೀವತಳೆದು ಬಣ್ಣಗಟ್ಟುವ ಮನಸ್ಸನ್ನು ನಮ್ಮದಾಗಿಸಿಕೊಳ್ಳುವುದು ನಮ್ಮ ಕೈಯಲ್ಲಿದೆ. ಮನಸ್ಸಿನ ಕುರಿತು ಜಗದ ಜನರಿಗೆ ತುಸು ಹೆಚ್ಚೇ ಅನಿಸುವಷ್ಟು ಕುತೂಹಲವಿದೆ ಎಂಬುದು ಸತ್ಯದ ಸಂಗತಿ. ಜೂಜಾಟವಾಡುವ ಮನಸ್ಸನ್ನು ಬೆನ್ನು ಹತ್ತಿದಷ್ಟು ಹೆಚ್ಚು ಹೆಚ್ಚು ಓಡಿ ಓಡಿ ಹೋಗುತ್ತದೆ. ಸ್ವರ್ಗ-ನರಕಗಳ ತಾಣವಾದ ಮನಸ್ಸಿನ ನೆಮ್ಮದಿಗಾಗಿ ಹಿಮ ಬೆರೆತ ಗಾಳಿ ಬೀಸುವಂತೆ ತುಸು ತಣ್ಣಗೆ ಇಟ್ಟುಕೊಳ್ಳುವುದು ಒಳಿತಲ್ಲವೇ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ