*ಬೆಳಗಾವಿ: ಫೇಸ್ ಬುಕ್ ಲೈವ್ ಗೆ ಬಂದು ವಿಷ ಸೇವಿಸಿದ ಗುತ್ತಿಗೆ ನೌಕರ*
ಪ್ರಗತಿವಾಹಿನಿ ಸುದ್ದಿ; ರಾಯಬಾಗ: ಹೊರಗುತ್ತಿಗೆ ನೌಕರನೊಬ್ಬ ಫೇಸ್ ಬುಕ್ ಲೈವ್ ಗೆ ಬಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ನಡೆದಿದೆ.
ಹಾಲಪ್ಪ ಸುರಾಣಿ ಎಂಬಾತ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ವಕೀಲರೊಬ್ಬರ ಕಿರುಕುಳಕ್ಕೆ ಬೇಸತ್ತು ವಿಷಸೇವಿಸಿ ಆತ್ಮಹತ್ಯೆಗೆ ಹಾಲಪ್ಪ ಸುರಾಣಿ ಯತ್ನಿಸಿದ್ದು, ಇದನ್ನು ಕಂಡು ಪತ್ನಿ ಕೂಡ ವಿಷ ಸೇವಿಸಿದ್ದಾಳೆ.
ಸಧ್ಯ ಇಬ್ಬರನ್ನು ರಕ್ಷಿಸಿ ಹಾರೂಗೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಲಪ್ಪ ಸುರಾಣಿ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ತಹಶೀಲ್ದಾರ್ ಕಚೇರಿಯ ಭೂ ದಾಖಲಾತಿ ವಿಭಾಗದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ರಾಯಬಾಗದ ವಕೀಲ ಸದಾಶಿವ ನಿಡೋಣಿ ಎಂಬುವವರು 2018ರಲ್ಲಿ ಪರಿಚಯವಾಗಿದ್ದು, ಭೂ ದಾಖಲೆ ವಿಚಾರವಾಗಿ ಇಬ್ಬರ ನಡುವೆ ಮನಸ್ತಾಪ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ವಕೀಲ ಸದಾಶಿವ, ಹಲಪ್ಪ ಮೇಲೆ ಪ್ರಕರಣ ದಾಖಲಿಸಿದ್ದರು ಎಂದು ತಿಳಿದುಬಂದಿದೆ.
ಇದೇ ವಿಚಾರವಾಗಿ ತಡರಾತ್ರಿ ಫೇಸ್ ಬುಕ್ ಲೈವ್ ಗೆ ಬಂದ ಹಾಲಪ್ಪ, ವಕೀಲ ಸದಾಶಿವ ತನ್ನ ಮೇಲೆ ಸುಳ್ಳು ಕೇಸ್ದಾಖಲಿಸಿದ್ದು 2018ರಿಂದ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಕಚೇರಿಗೆ ಬಂದು ಅವಾಚ್ಯಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ವಿಷ ಸೇವಿಸಿದ್ದಾರೆ. ಇದನ್ನು ನೋಡಿದ ಪತ್ನಿಯೂ ವಿಷ ಸೇವಿಸಿದ್ದಾಳೆ. ಇಬ್ಬರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಾರೂಗೇರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ