ಹೋಲ್ ಸೇಲ್ ಟ್ರೇಡಿಂಗ್ ಬಹಳ ಡೇಂಜರ್
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –
ಪ್ರಜಾಪ್ರಭುತ್ವ ಕೊಲೆ ಮಾಡಿ ಈ ರೀತಿ ಸರಕಾರ ಮಾಡಲು ಹೋದರೆ ಇದು ನಿಮಗೆ ತಿರುಗುಬಾಣವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪನವರಿಗೆ ಎಚ್ಚರಿಕೆ ನೀಡಿದ್ದಾರೆ.
ವಿಧಾನಸಭೆಯಲ್ಲಿ ವಿಶ್ವಾಸಮತ ಕುರಿತು ಚರ್ಚೆಯಲ್ಿ ಮಾತನಾಡುತ್ತಿರುವ ಅವರು, ಇವರನ್ನೆಲ್ಲ ಕಟ್ಟಿಕೊಂಡು ಸರಕಾರ ಮಾಡಲು ಸಾಧ್ಯವಿಲ್ಲ. ನೀವೂ ಮುಖ್ಯಮಂತ್ರಿಯಾದವರು. ಏನಾಯಿತು 2008ರಲ್ಲಿ? ನಿಮ್ಮ ಪಕ್ಷದವರು, ಪಕ್ಷೇತರರು ಎಲ್ಲ ಸೇರಿ ಏನು ಮಾಡಿದರು? ನಿಮಗೆ ಮುಖ್ಯಮಂತ್ರಿಯಾಗಲು ಬಿಟ್ರಾ ಎಂದು ಪ್ರಶ್ನಿಸಿದರು.
ಹೋಲ್ ಸೇಲ್ ಟ್ರೇಡಿಂಗ್ ಬಹಳ ಡೇಂಜರ್. ರೀಟೇಲ್ ಟ್ರೇಡಿಂಗ್ ಸರಕಾರಕ್ಕೆ ಅಪಾಯವಲ್ಲ. ಈಗ ಇವರು ಮಾಡುತ್ತಿರುವುದು ಹೋಲ್ ಸೇಲ್ ಟ್ರೇಡಿಂಗ್ . ಈ ರೋಗ ಹೀಗೆ ಬೆಳೆಯಲು ಬಿಟ್ಟರೆ ಯಾವ ಪಕ್ಷ ಉಳಿಯುತ್ತದೆ? ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಯಾವುದೇ ಸರ್ಕಾರ ಉಳಿಯಲು ಸಾಧ್ಯವೇ ಇಲ್ಲ ಎಂದರು.
85ರಲ್ಲಿ 10ನೇ ಪರಿಚ್ಛೇದ ಬರಲು ಎಷ್ಟು ವರ್ಷ ಬೇಕಾಯಿತು. ಎಷ್ಟೆಲ್ಲ ಚರ್ಚೆ ನಡೆಯಿತು. 1967ರಿಂದ ಶುರುವಾಗಿ 85ನೇ ಇಸವಿಯಲ್ಲಿ ಕಾನೂನಾಗಿದ್ದು. ಎಲ್ಲರ ಉದ್ದೇಶ ಏನಿತ್ತು? ಈ ರೋಗ ತೊಡೆದು ಹಾಕುವುದು. ಯಾವುದೋ ಒಂದು ಪಕ್ಷ ಮಾಡಿದ್ದಲ್ಲ.
ಎಲ್ಲ ರಾಜಕೀಯ ಪಕ್ಷಗಳೂ ಸೇರಿ ಈ ಕಾನೂನು ಮಾಡಿವೆ. ಪಕ್ಷಾಂತರ ಮಾಡುವುದಕ್ಕೆ ಕಡಿವಾಣ ಹಾಕಬೇಕು. ಯಾವುದೇ ಆಸೆ ಆಮಿಷಗಳಿಲ್ಲದೆ ಸಹಜವಾಗಿ ರಾಜೀನಾಮೆ ಕೊಡಬೇಕು. ಶಾಸಕರನ್ನು ಅನರ್ಹಗೊಳಿಸುವ ಅಧಿಕಾರ ಸ್ಪೀಕರ್‌ಗೆ ಇದೆ ಎಂದು ಸಿದ್ದರಾಮಯ್ಯ ಹೇಳಿದರು.
ನನ್ನ ಪ್ರಕಾರ 2018ರಲ್ಲಿ ಯಡಿಯೂರಪ್ಪ ಸರ್ಕಾರ ರಚಿಸಲು ಮುಂದಾಗಲೇಬಾರದಿತ್ತು. ನಿಮಗೆ ಪಕ್ಷೇತರ ಶಾಸಕರೂ ಇರಲಿಲ್ಲ. ಕಾಂಗ್ರೆಸ್, ಜೆಡಿಎಸ್ ಶಾಸಕರು ಪಕ್ಷಾಂತರ ಮಾಡದೆ ಇದ್ದಿದ್ದರೆ ನೀವು ಸರ್ಕಾರ ರಚಿಸಲು ಹೇಗೆ ಸಾಧ್ಯವಿತ್ತು? ಇದು ಸ್ಪಷ್ಟವಾಗಿ ಹೇಳುತ್ತದೆ, ನೀವು ಪಕ್ಷಾಂತರ ಮಾಡಿಸುವ ಉದ್ದೇಶವಿಟ್ಟುಕೊಂಡೇ ಹೊರಟಿದ್ದೀರಿ. ನಿಮಗೆ ಪಕ್ಷಾಂತರ ಮಾಡಿಸದೆಯೇ ಹೇಗೆ ಸಿಎಂ ಆಗುತ್ತಿದ್ದೀರಿ? ಎಂದು ಪ್ರಶ್ನಿಸಿದರು.
ಕರ್ನಾಟಕದಲ್ಲಿ 1983ರಲ್ಲಿ ಜನತಾ ಪಾರ್ಟಿ- ಬಿಜೆಪಿ ಸೇರಿ ಮೊದಲ ಸಮ್ಮಿಶ್ರ ಸರ್ಕಾರ ರಚನೆಯಾಯ್ತು. 2004ರಲ್ಲಿ ಎರಡನೆಯ ಸರ್ಕಾರ. ನಾನು ಆಗ ಜೆಡಿಎಸ್‌ನಿಂದ ಉಪ ಮುಖ್ಯಮಂತ್ರಿಯಾಗಿದ್ದೆ. ಧರಂ ಸಿಂಗ್ ಸಿಎಂ ಆಗಿದ್ದರು. ಇನ್ನೊಂದು ಸಮ್ಮಿಶ್ರ ಸರ್ಕಾರ ಆಯ್ತು. 2008ರಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾಗಲೂ ಬಹುಮತ ಬಂದಿರಲಿಲ್ಲ. 110 ಸ್ಥಾನ ಗೆದ್ದಿದ್ದರು. ಆರು ಜನ ಪಕ್ಷೇತರ ಶಾಸಕರ ಬೆಂಬಲ ಪಡೆದು ಸರ್ಕಾರ ರಚಿಸಿದರು ಎಂದರು.
ಯಡಿಯೂರಪ್ಪ ಅವರಿಗೆ ಅವಕಾಶ ಕೊಟ್ಟಿದ್ದರು. ಅವರು ಅವಕಾಶದಲ್ಲಿ ವಿಫಲರಾದರು. ನಿಮಗೆ ಬಹುಮತ ಸಾಬೀತುಪಡಿಸಲು ಆಗಲಿಲ್ಲ. ಅದಾದ ಬಳಿಕ ಕುಮಾರಸ್ವಾಮಿ ಅವರನ್ನು ಕರೆದಿದ್ದು. ಅವರು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ಬಹುಮತದಿಂದ ಸಿಎಂ ಆದರು. ಸಂವಿಧಾನ, ಕಾನೂನಿನ ಪ್ರಕಾರ ಸಮ್ಮಿಶ್ರ ಸರ್ಕಾರ ರಚನೆಯಾಯ್ತು. ಸಮ್ಮಿಶ್ರ ಸರ್ಕಾರದ ಯುಗ ಕರ್ನಾಟಕ ಅಥವಾ ದೇಶದಲ್ಲಿ ಇದೇ ಮೊದಲ ಬಾರಿ ಆಗಿರುವುದಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ಭಾಷಣ ಮುಂದುವರಿದಿದೆ. 4 ಗಂಟೆವರೆಗೆ ಮುಗಿಸುತ್ತೇನೆ ಎಂದು ನಿನ್ನೆಯೇ ಹೇಳಿದ್ದರು. ಇಂದು ಭಾಷಣ ಆರಂಭಿಸುವಾಗ, ಸ್ವಲ್ಪ ಹೆಚ್ಚುಕಡಿಮೆಯಾದರೂ ವಿನಾಯಿತಿ ಕೊಡಬೇಕು ಎಂದು ಕೋರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ