Kannada NewsKarnataka NewsLatest

*ನೈಸ್ ಯೋಜನೆಯಲ್ಲಿ ಅಕ್ರಮ; BJP-JDS ಒಟ್ಟಾಗಿ ಹೋರಾಟ; ಮಾಜಿ ಸಿಎಂ ಬೊಮ್ಮಾಯಿ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನೈಸ್ ಯೋಜನೆಯಲ್ಲಿ ಅಕ್ರಮದ ಬಗ್ಗೆ ನಮ್ಮ ಕಾಲದಲ್ಲಿ ಅನೇಕ ಕ್ರಮಗಳು ಆಗಿವೆ. ಆ ನಿಟ್ಟಿನಲ್ಲಿ ಜೆಡಿಎಸ್ – ಬಿಜೆಪಿ ಒಂದಾಗಿ ಹೋರಾಟ ಮಾಡಲು ನಿರ್ಧಾರ ಮಾಡಿವೆ. ಈ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ, ಬದಲಿಗೆ ಅನೇಕ ತಿರುವುಗಳು ಇರುತ್ತವೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಜೊತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಸವರಾಜ್ ಬೊಮ್ಮಾಯಿ, ನೈಸ್ ರಸ್ತೆ ಕಾಮಗಾರಿಗೆ ಹೆಚ್ಚುವರಿ ಸಾಕಷ್ಟು ಭೂಮಿಯನ್ನೂ ಪಡೆದುಕೊಳ್ಳಲಾಗಿದೆ. ಈ ಹೆಚ್ಚುವರಿ ಭೂಮಿಯನ್ನು ಏನು ಮಾಡಬೇಕು ಎನ್ನುವ ಬಗ್ಗೆ ನಿರ್ಧಾರ ಕೈಗೊಳ್ಳುವ ಅಧಿಕಾರ ಸರಕಾರಕ್ಕೆ ಇದೆ ಎಂಬ ಮಾತನ್ನು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಅಲ್ಲದೆ, ಮತ್ತೆ ಹೊಸದಾಗಿ ಜಾಮೀನು ಸ್ವಾಧೀನಕ್ಕೆ ಪಡೆಯುವ ಹುನ್ನಾರವನ್ನು ನೈಸ್ ಕಂಪನಿ ನಡೆಸಿದೆ ಎಂದರು.

ಮುಖ್ಯವಾಗಿ ನೈಸ್ ಯೋಜನೆಗೆ ನೀಡಲಾಗಿರುವ ಹೆಚ್ಚುವರಿ ಭೂಮಿಯನ್ನು ಕಾನೂನು ಪ್ರಕಾರವೇ ಹಿಂಪಡೆಯಲು ಸಂಪುಟ ಉಪ ಸಮಿತಿ ಕೂಡ ಸ್ಪಷ್ಟವಾಗಿ ಶಿಫಾರಸು ಮಾಡಿದೆ. ಈ ನಿಟ್ಟಿನಲ್ಲಿ ಈಗಿನ ರಾಜ್ಯ ಸರಕಾರ ನೈಸ್ ಯೋಜನೆಯಿಂದ ಹೆಚ್ಚುವರಿ ಭೂಮಿಯನ್ನು ಈ ಕೂಡಲೇ ವಾಪಸ್ ಪಡೆಯಲು ನಿರ್ಧಾರ ಕೈಗೊಳ್ಳಬೇಕು.

ಹೆಚ್ಚುವರಿ ಜಮೀನು ಅಂತಿಮವಾಗಿ ರಿಯಲ್ ಎಸ್ಟೇಟ್ ದಂಧೆಗೆ ಬಳಕೆ ಆಗುತ್ತಿದೆ. ಸರಕಾರ ಅದನ್ನು ತಡೆದು ವಶಕ್ಕೆ ಪಡೆಯಬೇಕು. ಈಗಾಗಲೇ ಬೆಂಗಳೂರು ಮೈಸೂರು ನಡುವೆ ಸುಸಜ್ಜಿತ ಎಕ್ಸ್ ಪ್ರೆಸ್ ಹೆದ್ದಾರಿ ನಿರ್ಮಾಣ ಆಗಿರುವುದರಿಂದ ನೈಸ್ ರಸ್ತೆ ಅಗತ್ಯ ಇಲ್ಲ. ಟೋಲ್ ಕೂಡ ಹೆಚ್ಚುವರಿಯಾಗಿ ಸಂಗ್ರಹ ಆಗಿದ್ದು, ಅದರ ಲೆಕ್ಕಪರಿಶೋಧನೆ ನಡೆಸಿ ಹಣವನ್ನು ವಸೂಲಿ ಮಾಡಬೇಕು ಎಂದು ಆಗ್ರಹಿಸಿದರು.

ಸದನ ಸಮಿತಿ ವರದಿ, ಸಂಪುಟ ಉಪ ಸಮಿತಿ ವರದಿ, ಸುಪ್ರೀಂ ಕೋರ್ಟ್ ಆದೇಶದ ಆಧಾರದಲ್ಲಿ ಸರಕಾರದ ಕ್ರಮ ಕೈಗೊಳ್ಳಬೇಕು. ಈ ವಿಚಾರದಲ್ಲಿ ರಾಜ್ಯ ಸರಕಾರದ ಸ್ಪಷ್ಟ ನಿಲುವು ತಿಳಿಸಬೇಕು. ಈ ಸರಕಾರದಲ್ಲಿ ಇರುವವರು ಈ ಹಿಂದೆ ಈ ಯೋಜನೆಗೆ ಸಂಬಂಧಿಸಿ ಹೇಗೆ ನಡೆದುಕೊಂಡಿದ್ದಾರೆ ಎನ್ನುವುದು ನಮಗೆ ಗೊತ್ತಿದೆ. ಈ ಸರಕಾರ ಭ್ರಷ್ಟಾಚಾರದ ವಿರುದ್ದ ಇದೆಯೊ‌ ಇಲ್ಲವೋ ಅನ್ನುವುದು ಈ ಪ್ರಕರಣದಿಂದ ತಿಳಿಯಲಿದೆ.

ಮಾಧ್ಯಮಗೋಷ್ಠಿಯಲ್ಲಿ ಮಾಜಿ ಸಚಿವರಾದ ಅರಗ ಜ್ಞಾನೇಂದ್ರ, ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕಿ ಶಾರದಾಪೂರ್ಯ ನಾಯಕ್, ಶಾಸಕರಾದ ನೆಮಿರಾಜ್ ನಾಯಕ್, ರಾಜೂಗೌಡ, ಕರೆಮ್ಮ ನಾಯಕ್, ಕೆ. ಎ.ತಿಪ್ಪೇಸ್ವಾಮಿ ಸೇರಿದಂತೆ ಅನೇಕರು ಹಾಜರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button