*ಇಡೀ ನೈಸ್ ಯೋಜನೆಗೆ ಸಹಿ ಹಾಕಿದ್ದು ದೇವೇಗೌಡರು; ಅಕ್ರಮವಾಗಿದ್ದರೆ ಹೆಚ್.ಡಿ.ಕೆ ಸಿಎಂ ಆಗಿದ್ದಾಗ ತನಿಖೆ ನಡೆಸಬಹುದಿತ್ತು; ಟಾಂಗ್ ನೀಡಿದ ಡಿ.ಕೆ.ಶಿವಕುಮಾರ್*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನೈಸ್ ಯೋಜನೆ ಹಿಂಪಡೆದು ಅಕ್ರಮದ ಬಗ್ಗೆ ತನಿಖೆ ನಡೆಸಬೇಕು ಎಂಬ ಮಾಜಿ ಸಿಎಂ ಹೆಚ್.ಡಿ.ಕುಮರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಅಧಿಕಾರ ಇದ್ದಾಗ ಏನೂ ಮಾಡದೇ ಈಗ ಅಧಿಕಾರ ಹೋದ ನಂತರ ಮಾತನಾಡಿದರೆ ಏನು ಪ್ರಯೋಜನ? ಎಂದು ಪ್ರಶ್ನಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ನನಗೆ ಮಾಹಿತಿ ಇರುವ ಪ್ರಕಾರ ಇಡೀ ನೈಸ್ ಯೋಜನೆಗೆ ಸಹಿ ಹಾಕಿದ್ದು ಆಗಿನ ಮುಖ್ಯಮಂತ್ರಿಗಳಾದ ಹೆಚ್.ಡಿ ದೇವೇಗೌಡರು. ಅವರೇ ಈ ಯೋಜನೆ ತಂದವರು. ಈ ರಸ್ತೆಯಲ್ಲಿ ಅಕ್ರಮವಾಗಿದ್ದರೆ ಸ್ವತಃ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿದ್ದಾಗ ತನಿಖೆ ಮಾಡಿಸಬಹುದಿತ್ತು. ನಾವು ಯಾವುದೇ ಹಗರಣ ಮಾಡಿಲ್ಲ. ನಾವು ಈ ವಿಚಾರವನ್ನು ಸಕಾರಾತ್ಮಕವಾಗಿ ಪರಿಗಣಿಸುತ್ತೇವೆ ಎಂದರು.
ಯೋಜನೆಯಲ್ಲಿ ಏನಾದರೂ ತಪ್ಪು ನಡೆದಿದ್ದರೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಅನಗತ್ಯವಾಗಿ ನಾವು ದ್ವೇಷದ ರಾಜಕಾರಣ ಮಾಡುವುದಿಲ್ಲ. ಅಧಿಕಾರ ಇದ್ದಾಗ ಏನೂ ಮಾಡದೇ ಈಗ ಅಧಿಕಾರ ಹೋದ ನಂತರ ಮಾತನಾಡಿದರೆ ಏನು ಪ್ರಯೋಜನ? ಎಂದು ಪ್ರಶ್ನಿಸಿದರು.
ನಮಗೆ ರಾಜ್ಯ ಹಾಗೂ ಜನರ ಅಬಿವೃದ್ಧಿ ಮುಖ್ಯ. ಅವರು ನನ್ನ ಹೆಸರು ಹೇಳಿಕೊಳ್ಳಲಿ. ಯಾವ ಹಿನ್ನೆಲೆಯಲ್ಲಿ ಯಾರು ನನ್ನ ಬಗ್ಗೆ ಏನು ಹೇಳುತ್ತಾರೆ ಎಂಬುದು ನನಗೆ ಗೊತ್ತಿದೆ. ಕಾನೂನು ವಿರುದ್ಧವಾಗಿ ನಡೆದುಕೊಂಡಿದ್ದರೆ ಕಾನೂನು ಪ್ರಕಾರ ಸದನ ಹಾಗೂ ಕೋರ್ಟ್ ಗಳಲ್ಲಿ ಹೋರಾಟ ಮಾಡಲಿ ಎಂದು ತಿಳಿಸಿದರು.
ಮಣಿಪುರದ ದುರ್ಘಟನೆ ಬಗ್ಗೆ ಸುದ್ದಿಗಾರರು ಕೇಳಿದಾಗ, ಇದು ಅತ್ಯಂತ ಹೇಯ ಹಾಗೂ ಆಘಾತಕಾರಿ ಬೆಳವಣಿಗೆ. ರಾಷ್ಟ್ರಪತಿಗಳು ಮಣಿಪುರ ಸರ್ಕಾರವನ್ನು ವಜಾಗೊಳಿಸಬೇಕು. ಅಲ್ಲಿನ ಘಟನೆಗಳು ಇಡೀ ಮಾನವೀಯತೆ, ಸಂಸ್ಕೃತಿಗೆ ಧಕ್ಕೆ ತಂದಿವೆ. ಪ್ರಧಾನಮಂತ್ರಿಗಳು ಮಾತನಾಡಿರಬಹುದು, ಆದರೆ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಕಿಡಿಕಾರಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ