Kannada NewsLatest

*ಅವನೆಷ್ಟೇ ಕ್ರೂರಿಯಿರಲಿ, ಅಗೋಚರ ಅಸ್ತ್ರದ ಮುಂದೆ ಶರಣಾಗದ ಮನುಜನಿಲ್ಲ…*

ಲೇಖನ – ರವಿ ಕರಣಂ

ಸುಮ್ಮನೆ ಕುಳಿತು ಯೋಚಿಸುತ್ತಿದ್ದಾಗ, ಇದೊಂದು ಮಾತು ಒಳತೂರಿ,ಬೆನ್ನು ಹತ್ತಿಕಾಡತೊಡಗಿತು. ಜಗತ್ತಿನಲ್ಲಿಯೇ ಅತ್ಯಂತ ಹರಿತವಾದ,ಪ್ರಬಲವಾದ ಆಯುಧ ಯಾವುದು? ಶ್ರೀ ಕೃಷ್ಣನಲ್ಲಿದ್ದ ಚಕ್ರವೋ? ಬಲರಾಮನ ನೇಗಿಲೋ? ಶಿವನ ಕೈಯಲ್ಲಿದ್ದ ತ್ರಿಶೂಲವೋ? ಅರ್ಜುನನ ಪಾಶುಪತಾಸ್ತ್ರವೋ? ಭೀಮ-ದುರ್ಯೋಧನರ ಗದೆಗಳೋ? ಇತ್ಯಾದಿ ಇತ್ಯಾದಿ … ಎಂದುಕೊಂಡಾಗ, ಪ್ರಬಲ ಅಸ್ತ್ರ “ಮನಸಾಕ್ಷಿ” ಯಲ್ಲದೇ ಮತ್ತೊಂದಿಲ್ಲ ಅನಿಸಿತು.

ಎಲ್ಲಾ ಆಯುಧಗಳಿಗಿಂತಲೂ ಅತ್ಯಂತ ಹರಿತವಾದದ್ದು ಯಾವುದು ಎಂದು ಕೇಳಿದರೆ ನಿಮಗೆ ತೋಚಿದಂತೆ ಉತ್ತರ ಕೊಡುತ್ತೀರಿ. ಚಾಕು, ಚೂರಿ, ಖಡ್ಗ,ಈಟಿ,ಭರ್ಚಿ, ಕುಡುಗೋಲು, ಮತ್ತೇನಾದರೂ ಆಗಿರಬಹುದು.ಅದಕ್ಕಿಂತ ಪಿಸ್ತೂಲ್ ತೀಕ್ಷ್ಣ ಎನಿಸುತ್ತದೆ. ಸಿಡಿಗುಂಡು ದೇಹವನ್ನು ಸೀಳಿ ಬಿಡುತ್ತದೆ. ಮತ್ತೆ ಕೆಲವರು ಎಲ್ಲಾ ಆಯುಧಗಳಿಂದ ಹರಿತವಾದದ್ದು ಮಾತು ಎಂದು ಬಿಡಬಹುದು ಅದು ಕೂಡ ಸರಿಯೇ ಏಕೆಂದರೆ ಆಯುಧಗಳು ಕೇವಲ ದೇಹವನ್ನು ಗಾಯಗೊಳಿಸಿದರೆ, ಮಾತುಗಳು ಮನಸ್ಸನ್ನು ಅತ್ಯಂತ ನೋಯಿಸುತ್ತವೆ. ಜೀವನ ಪರ್ಯಂತ ನೆನಪಲ್ಲುಳಿದು, ಘಾಸಿಗೊಳಿಸುತ್ತಿರುತ್ತದೆ. ಹೀಗೆ ತರಾವರಿ ಉತ್ತರಗಳನ್ನೆಲ್ಲಾ ನಾವು ನೋಡುತ್ತೇವೆ. ಆದರೆ ನಿಜಕ್ಕೂ ಅತ್ಯಂತ ಹರಿತವಾದ ಆಯುಧ ಎಂದರೆ ಅಗೋಚರವಾದ,ಗಾತ್ರ,ಬಣ್ಣ,ವಾಸನೆ ಇಲ್ಲದ, ಭೌತಿಕ ರೂಪವಿರದ “ಮನಸ್ಸಾಕ್ಷಿ” ಎನ್ನುತ್ತೇನೆ.

ನಾವು ಮಾಡುವ ಕಾರ್ಯಗಳನ್ನು ಸಮರ್ಥಿಸಿಕೊಳ್ಳುತ್ತೇವೆ. ನಮ್ಮದು ತಪ್ಪು ಎಂದು ಗೊತ್ತಿದ್ದರೂ ಕೂಡ, ವಾದ ವಿವಾದಕ್ಕಿಳಿದು, ಎದುರಿಗಿದ್ದವರ ಬಾಯಿ ಮುಚ್ಚಿಸಿ, ನಾವು ಹೇಗೋ ಗೆದ್ದು ಬಿಡುತ್ತೇವೆ. ಮತ್ತು ಬೀಗಿ ಬಿಡುತ್ತೇವೆ. ಆದರೆ ನಿಜಕ್ಕೂ ನಮ್ಮ ಆತ್ಮ ಸಾಕ್ಷಿ ಎಂದು ಕೂಡ ಒಪ್ಪಿಕೊಂಡಿರುವುದಿಲ್ಲ. ಮತ್ತು ಒಪ್ಪಲು ಬಿಡಲಾರದು. ಬೆನ್ನು ಹತ್ತಿ ಕಾಡುತ್ತಲೇ ಇರುತ್ತದೆ. ನಮ್ಮ ಒಳ ಮನಸ್ಸು ಚುಚ್ಚುತ್ತಲೇ ಇರುತ್ತದೆ ಅಲ್ಲವೇ? ಆ ಒಳ ಮನಸ್ಸೇ ಆತ್ಮದ ಛಾಯೆ. ಇಡೀ ಜೀವನದ ನೆಮ್ಮದಿ, ಸಂತೋಷ ಎಲ್ಲವೂ ಕೂಡ ಸರ್ವನಾಶವಾಗಿ ಬಿಡುತ್ತದೆ. ಪ್ರತಿಯೊಂದು ಘಟನೆಗಳನ್ನು ಕಣ್ಣ ಮುಂದೆ ತಂದಿಟ್ಟು, ಸರಿ ತಪ್ಪುಗಳನ್ನು ತುಲನೆ ಮಾಡಿ, ನಮ್ಮ ವ್ಯಕ್ತಿತ್ವದ ನಿಜ ರೂಪವನ್ನು ಕಣ್ಣ ಮುಂದೆ ತಂದು ನಿಲ್ಲಿಸುತ್ತದೆ. ಆಗ ನಮ್ಮ ವ್ಯಕ್ತಿತ್ವ ಅದೆಷ್ಟು ಗಟ್ಟಿ ಕಾಳು? ಅಥವಾ ಪೊಳ್ಳು? ಎಂಬುದನ್ನು ನಿರೂಪಿಸಿ ಬಿಡುತ್ತದೆ. ಅದಕ್ಕೂ ಕೂಡ ಒಪ್ಪಿಕೊಳ್ಳಲು ಸಾಧ್ಯವಿರುವುದಿಲ್ಲ. ಮತ್ತೆ ನಮ್ಮದನ್ನೇ ಸರಿ ಎಂದು ವಾದಿಸಲು ಮುಂದಾಗುತ್ತೇವೆ. ಆದರೆ ಮನಸ್ಸಾಕ್ಷಿ ಎಂಬುದು ಯಾವತ್ತೂ ಕೂಡ ಬೆಂಬಿಡದ ಆಯುಧವೇ ಅದು. ಬೇಟೆಯಾಡುತ್ತಲೇ ಇರುತ್ತದೆ.

ಗೊತ್ತಿಲ್ಲದೆ ಮಾಡಿದ ತಪ್ಪಿಗೆ ನಾವು ಪಶ್ಚಾತ್ತಾಪ ಪಟ್ಟು ಅದನ್ನು ತಿದ್ದಿಕೊಳ್ಳಲು ಪ್ರಯತ್ನಿಸುತ್ತೇವೆ. ಆದರೆ ಗೊತ್ತಿದ್ದೂ ಉದ್ದೇಶಪೂರ್ವಕವಾಗಿ, ಒಬ್ಬರಿಗೆ ಮೋಸ,ವಂಚನೆ, ದ್ರೋಹವೆಸಗಿದಾಗ, ಆತ್ಮಸಾಕ್ಷಿ “ತಪ್ಪುಗಳನ್ನು ತಿದ್ದಿಕೊಳ್ಳಲು ಅವಕಾಶವನ್ನು ಮಾಡಿಕೋ” ಎಂದು ಹೇಳುತ್ತದೆ. ಕೆಲವರು ಅದನ್ನು ಕಡೆಗಣಿಸಿ ಬಿಡುತ್ತಾರೆ. ಅದನ್ನೇ ಮತ್ತೆ ಮುಂದಿಟ್ಟುಕೊಂಡು, ನನ್ನದು ಏನೂ ತಪ್ಪಿಲ್ಲ. ಎಲ್ಲರೂ ನಮ್ಮ ಮೇಲೆ ಅಪವಾದ ಹೊರಿಸುತ್ತಿದ್ದಾರೆ. ನಮ್ಮನ್ನ ಕೆಟ್ಟವರನ್ನಾಗಿ ಬಿಂಬಿಸುತ್ತಿದ್ದಾರೆ. ಹೆಸರನ್ನು ಕೆಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದೆಲ್ಲ ಸಬೂಬುಗಳನ್ನು ಕೊಡಲು ಮುಂದಾಗಿ ಬಿಡುತ್ತಾರೆ. ಆಗಲಾದರೂ ಅಂಥವರಿಗೆ ತೃಪ್ತಿ ದೊರಕೀತೆ? ನಿಜಕ್ಕೂ ಆತ್ಮ ಸಾಕ್ಷಿಯನ್ನೇ ಕೇಳಿಕೊಳ್ಳಬೇಕು.

ನ್ಯಾಯಾಲಯಗಳಲ್ಲಿ ನ್ಯಾಯಾಧೀಶರಿಗೆ ತೀರ್ಪನ್ನು ಕೊಡುವುದು ಕಷ್ಟದ ಕೆಲಸ. ಎಷ್ಟೋ ಸಂದರ್ಭಗಳಲ್ಲಿ ಒಬ್ಬ ನಿರಪರಾಧಿಯನ್ನು ಅಪರಾಧಿಯನ್ನಾಗಿ ಎಳೆದು ತಂದು ಕಟಕಟೆಯಲ್ಲಿ ನಿಲ್ಲಿಸಿ ಬಿಟ್ಟಿರುತ್ತಾರೆ. ಅವನು ವ್ಯವಸ್ಥೆಗೆ ಹೆದರಿಕೊಂಡು, ಮಾಡಿರದ ತಪ್ಪನ್ನು “ಹೌದು ನಾನು ಮಾಡಿದ್ದೇನೆ” ಎಂದು ಒಪ್ಪಿಕೊಂಡು ಬಿಡಲು ಬಹುದು. ಕಾರಣ ಲಾಠಿ ಏಟುಗಳು, ಒದೆತಗಳು ಅವನನ್ನ ಜರ್ಜರಿತನನ್ನಾಗಿಸಬಹುದೇನೋ! ಹಾಗಾಗಿ ಅವನು “ಸುಮ್ಮನೆ ಯಾಕೆ ಬೇಕು ? ಇದನ್ನು ಒಪ್ಪಿಕೊಂಡು ಸುಮ್ಮನೆ ಜೀವವನ್ನು ಉಳಿಸಿಕೊಂಡರಾಯಿತು” ಎನ್ನುವ ಮಟ್ಟಕ್ಕೂ ಬಂದು ಬಿಡಬಹುದು. ಯಾರಿಗೆ ಗೊತ್ತು? ಇಂಥ ಘಟನೆಗಳು ಅನೇಕ. ಪ್ರತ್ಯಕ್ಷ ಕಂಡೂ ಪ್ರಾಮಾಣಿಸಿ ನೋಡುವ ಸದುದ್ದೇಶದಿಂದ ನ್ಯಾಯ ಸ್ಥಾನದಲ್ಲಿರುವವರು, ಸಾಕಷ್ಟು ಕಾಲಾವಕಾಶ ತೆಗೆದುಕೊಳ್ಳುತ್ತಾರೆ. ಸಮಯ,ಸಂದರ್ಭ,ಹಿನ್ನೆಲೆ,ಕಾರಣ,ಪ್ರಚೋದನೆ, ಸಾಕ್ಷ್ಯಾಧಾರಗಳು, ಸಂಬಂಧಿಸಿದ ಸಲಕರಣೆಗಳು ಇತ್ಯಾದಿಗಳ ಕ್ರೋಢೀಕರಣ ಕಷ್ಟದಾಯಕ. ಆದರೆ ಆತ್ಮಸಾಕ್ಷಿ ಮಾತ್ರ, ಅವರಿಗಿಂತಲೂ ಕರಾರುವಕ್ಕಾಗಿ, ನಿಖರವಾಗಿ, ಸ್ಪಷ್ಟವಾಗಿ ಉತ್ತರವನ್ನು ಕೊಟ್ಟುಬಿಡುತ್ತದೆ. ಆದರೆ ಒಪ್ಪಿಕೊಳ್ಳುವ ಮನಸ್ಸು ನಮ್ಮಲ್ಲಿರಬೇಕು ಅಷ್ಟೇ.

ಎಲ್ಲ ಸಂದರ್ಭಗಳಲ್ಲಿಯೂ ಎಲ್ಲಾ ರೀತಿಯಲ್ಲಿಯೂ ನಾವು ಸರಿಯಾಗಿ ಇದ್ದೇವೆ ಎಂದು ಭಾವಿಸಿಕೊಳ್ಳುತ್ತೇವೆ ಮತ್ತು ಅದನ್ನೇ ಪ್ರತಿಪಾದಿಸುತ್ತೇವೆ. ಆದರೆ ನಮ್ಮಿಂದಾದ ತಪ್ಪುಗಳು ನಮ್ಮ ಕಣ್ಣಿಗೆ ಕಾಣುವುದಿಲ್ಲ. ಅಂಥದ್ದನ್ನು ತೆರೆದ ಕಣ್ಣಿನಿಂದ ನೋಡಲು ಕೂಡ ಇಷ್ಟಪಡುವುದಿಲ್ಲ. ಆಗ ನಮ್ಮ ಮನಸ್ಸು ನಿಜಕ್ಕೂ ಗೊಂದಲದಲ್ಲಿ ಬಿದ್ದಿರುತ್ತದೆ. ಆದರೆ ರಾತ್ರಿ ವೇಳೆಯಲ್ಲಿ ಆತ್ಮಸಾಕ್ಷಿ ತಾನು ಎಚ್ಚರಗೊಳ್ಳುತ್ತದೆ. ಸರಿ ತಪ್ಪುಗಳ ನಿರ್ಣಯವನ್ನು ಮಾಡಿ, ಅದನ್ನು ಸರಿಪಡಿಸಿಕೊಳ್ಳಲು ಅವಕಾಶವನ್ನು ಮಾಡಿಕೊಡುತ್ತದೆ. ಹಾಗಾಗಿ ಆತ್ಮಸಾಕ್ಷಿ ಎಂಬುದು ನಿಜಕ್ಕೂ ನಮಗೆ ಗುರುವೇ ಆಗಿರುತ್ತದೆ. ಅದನ್ನು ಅಷ್ಟು ಸುಲಭವಾಗಿ ಕಡೆಗಣಿಸುವಂತಿಲ್ಲ.

ಜಗತ್ತಿನ ಮಹಾಕ್ರೂರಿಗಳ ಪಟ್ಟಿಯನ್ನು ಮಾಡಿ, ಅವರ ಜೀವನ ಚರಿತ್ರೆಯನ್ನು ಓದುತ್ತೇವೆ. ಆಗ ಅವರೊಳಗೆ ಎಂತಹ ಕ್ರೂರಿ ವಾಸವಾಗಿದ್ದ ಎಂಬುದನ್ನು ನಾವು ಗಮನಿಸುತ್ತೇವೆ. ಹಾಗೆಯೇ ಅವನಲ್ಲಿನ ಆತ್ಮಸಾಕ್ಷಿಯ ಒಳ್ಳೆಯ ಗುಣವನ್ನು ಮೆಚ್ಚಿಕೊಳ್ಳಬೇಕಾಗುತ್ತದೆ. ಒಬ್ಬ ಅಂಗುಲಿಮಾಲ ಅದೆಷ್ಟು ಕ್ರೂರಿ ಆಗಿದ್ದನೋ! ಸುತ್ತಮುತ್ತಲ ಗ್ರಾಮದ ಜನರುಗಳಿಗೆ ಭಯಭೀತಿಯನ್ನು ಉಂಟುಮಾಡುತ್ತಿದ್ದನಂತೆ. ಕೈಗೆ ಸಿಕ್ಕವರ ಕೈ ಬೆರಳುಗಳನ್ನು ಕತ್ತರಿಸಿ ಮಾಲೆಯನ್ನು ಮಾಡಿಕೊಂಡು ಹಾಕಿಕೊಳ್ಳುತ್ತಿದ್ದನಂತೆ. ಈ ಕಥೆಯನ್ನು ಬುದ್ಧನ ಚರಿತ್ರೆಯೊಳಗೆ ಓದಿದ್ದೇವೆ. ಆದರೆ ಬುದ್ಧನ ಪ್ರೀತಿಯಿಂದ, ಅವನೊಳಗಿನ ದುಷ್ಟತನ ಕಳೆದುಹೋಗುತ್ತದೆ.ಅವನ ಆತ್ಮಸಾಕ್ಷಿ, ತಾನು ಇದುವರೆಗೂ ಎಂತಹ ಘೋರ ಕೃತ್ಯಗಳನ್ನು ಮಾಡಿದೆನಲ್ಲ ! ಎಂದು ಪಶ್ಚಾತ್ತಾಪಪಡುವಂತೆ ಮಾಡುತ್ತದೆ. ಬದಲಾವಣೆಗೆ ಮತ್ತಿನ್ನೇನು ಬೇಕು? ಇವೆಲ್ಲ ಸಹಜ ಗುಣಗಳೇ. ಮನುಷ್ಯನು ಕೂಡ ಕ್ರೂರ ಪ್ರಾಣಿಗಳಲ್ಲಿ ಒಬ್ಬ.ಅವನೇನೂ ಕ್ರೂರ ರಹಿತನಲ್ಲ. ಎಲ್ಲ ಪ್ರಾಣಿಗಳಲ್ಲಿರುವಂತೆ ಅವನಲ್ಲಿಯೂ ಕೂಡ ದುಷ್ಟ ಗುಣಗಳು ಇದ್ದೇ ಇವೆ. ಆದರೆ ನಾಗರಿಕತೆ,ಸಂಸ್ಕೃತಿ, ಆಚಾರ – ವಿಚಾರ, ಧರ್ಮ ಹೀಗೆ ಎಲ್ಲಾ ಬಂಧನಗಳ ನಡುವೆ, ಮನುಷ್ಯ ತನ್ನನ್ನು ತಾನು ನಿಯಂತ್ರಿಸಿಕೊಳ್ಳುವುದು ಅನಿವಾರ್ಯವಾಗಿದೆ. ನಿಜದಲ್ಲಿ ಅವನು ಕ್ರೂರ ಪ್ರಾಣಿಗಳಲ್ಲಿ ಅತಿ ಕ್ರೂರ ಎಂದೇ ಹೇಳಬಹುದು.

ಒಬ್ಬ ಕಳ್ಳ ಪರರ ವಸ್ತುವನ್ನು ಕಳ್ಳತನ ಮಾಡಿ ಅವನು ಸಂತಸದಿಂದ ಇದ್ದಾನೆ ಎಂದಿಟ್ಟುಕೊಳ್ಳೋಣ. ಪರರ ವಸ್ತುವನ್ನು ಕದಿಯುವುದು, ಲಪಟಾಯಿಸುವುದು ಸಭ್ಯತೆಯ ಲಕ್ಷಣವಲ್ಲ. ನೋಡಿ, ರಾತ್ರಿ ಮಲಗಿದಾಗ ಅವನ ಆತ್ಮಸಾಕ್ಷಿ ಎಚ್ಚರಗೊಳ್ಳುತ್ತದೆ. “ಪರರ ವಸ್ತುವನ್ನು ಕದ್ದ ನೀನು, ಸುಖದಿಂದ ನಗುತ್ತಾ ಇದ್ದೀಯಾ. ಆದರೆ ಕಳೆದುಕೊಂಡವರ ಕಷ್ಟ ನೋವು ಎಂತಹುದು ಎಂಬುದನ್ನು ಒಂದು ಕ್ಷಣ ಯೋಚಿಸು” ಎಂದು ಹೇಳುತ್ತದೆ. ಆಗ ಅವನಿಗೆ ಅದನ್ನು ತಿರುಗಿಸಿ ಕೊಟ್ಟುಬಿಡಬೇಕು ಎನಿಸುತ್ತದೆ. ಆದರೆ ಒಮ್ಮೆ ಕಳ್ಳತನ ಮಾಡಿ, ತಿರುಗಿಸಿ ಕೊಟ್ಟಾಗ, “ಇವನು ಕಳ್ಳತನ ಮಾಡಿದ್ದ” ಎಂಬ ಪಟ್ಟವನ್ನು ಹೊರಬೇಕಾದಿತಲ್ಲ ಎಂದು, ಅವನು ಸುಮ್ಮನೆ ಇದ್ದುಬಿಡುತ್ತಾನೆ. ಅವನಿಗೆ ತಿದ್ದಿಕೊಳ್ಳಲು ಅವಕಾಶವಿಲ್ಲದಂತಾಗಿ ಬಿಟ್ಟಿರುತ್ತದೆ. ಅದೇ ಒಂದು ಗಾದೆ ಮಾತು ಇದೆಯಲ್ಲ “ಅಡಕೆಗೆ ಹೋದ ಮಾನ ಆನೆ ಕೊಟ್ಟರು ಬಾರದು” ಎಂಬಂತೆ, ಅವನು ಮುಚ್ಚಿಟ್ಟುಕೊಳ್ಳುತ್ತಾನೆ. ಅದೇ ಕಾರ್ಯ ಅವನಿಗೆ ಅಭ್ಯಾಸವಾಗಿ ಬಿಡುತ್ತದೆ. ಹೀಗೆ ಕಳ್ಳನು ನಿರಂತರವಾಗಿ ಆ ಕೃತ್ಯಕ್ಕಿಳಿಯುತ್ತಾನೆ. ಆತ್ಮಸಾಕ್ಷಿಗೆ ವಿರುದ್ಧವಾಗಿ ! ಇದೊಂದು ಉದಾಹರಣೆ. ನೀವೇ ಸಾಕಷ್ಟು ಕೊಟ್ಟುಬಿಡುವಿರಿ.

ಈ ಒಳ್ಳೆಯತನದ ಪ್ರದರ್ಶನಕ್ಕೆ ಒಂದು ಉದಾಹರಣೆ. ಸಾಕಷ್ಟು ದಾನ-ಧರ್ಮ ಮಾಡಿದ ಮಹನೀಯರ ಪಟ್ಟಿ ದೊಡ್ಡದಾಗಿ ಕಣ್ಣ ಮುಂದಿದೆ. ಹಿಂದೆ ತಿನ್ನಲು ಗತಿಯಿಲ್ಲದವ, ಕೋಟಿ ಕೋಟಿ ಒಡೆಯರಾಗಿ ಬಿಡುತ್ತಾರೆ. ನಿಮಗೆ ಗೊತ್ತಾಗುತ್ತದೆ. ಯಾವ ಪ್ರಾಮಾಣಿಕ ವ್ಯಕ್ತಿಯೂ ನೂರಾರು, ಸಾವಿರಾರು ಕೋಟಿ ರೂಗಳನ್ನು ಗಳಿಸಲಿಕ್ಕಿಲ್ಲ. ಅದು ವಾಮ ಮಾರ್ಗವೇ ಅತಿ ಹೆಚ್ಚು ಜನರದ್ದು. ಅವರು ಒಳ್ಳೆಯವರಾಗಿ ಬಿಂಬಿತವಾಗಲು ಮಾಡಿಕೊಂಡ ಆಯ್ಕೆಯೇ ದಾನ-ಧರ್ಮ! ಇದು ನಿಜಕ್ಕೂ ಪಾಪದ ಕರ್ಮ. ಪುಣ್ಯ ಕಾರ್ಯವಲ್ಲ. ತಮ್ಮ ಪಾಪದ ಕೂಪದೊಳಗೆ ಅಮಾಯಕರನ್ನೂ ಸೆಳೆದುಕೊಂಡು, ಪರೋಕ್ಷವಾಗಿ ಪಾಪಿಗಳನ್ನಾಗಿಸಿದ್ದು. ಅಂದರೆ ಪಾಪದ ಪಾಲು ಹಂಚಿ ಬಿಡುವುದು!

ಅಂದರೆ ನಮ್ಮ ಬದುಕು ನಮ್ಮ ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆಯುತ್ತಿದೆಯೇನೋ ಎಂದೆನಿಸಿಬಿಡುತ್ತದೆ. ಎಲ್ಲರೂ ಒಳ್ಳೆಯವರಾಗಿ ಕಾಣಿಸಿಕೊಳ್ಳುವತ್ತ ಮುನ್ನಡೆಯುತ್ತೇವೆ. ಅದು ಹೊರ ಜಗತ್ತಿನ ದೃಷ್ಟಿಯಲ್ಲಿ ಒಳ್ಳೆಯವಾಗಿ ಬಿಡಬಹುದು. ಅದು ದೊಡ್ಡ ಮಾತಲ್ಲ. ಒಳ ಜಗತ್ತಿನ ದೃಷ್ಟಿಯಲ್ಲಿ? ಹೇಗೋ ಏನೋ? ಆದರೆ ಒಳ್ಳೆಯತನ ಎಂದೂ ಆತ್ಮಸಾಕ್ಷಿಯ ಅಣತಿಯಲ್ಲಿರುತ್ತದೆ ಎಂಬುದು ನನ್ನ ಅಭಿಮತ. ಇದನ್ನು ಒಪ್ಪಬಹುದು ಇಲ್ಲವೇ ತಿರಸ್ಕರಿಸಬಹುದು. ಆದರೆ ಸತ್ಯದ ನಿಜ ಸ್ವರೂಪವನ್ನು ಬದಲಾಯಿಸಲಾಗದು. ಅಲ್ಲವೇ?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button