ಪ್ರಗತಿವಾಹಿನಿ ಸುದ್ದಿ; ಶಿರಸಿ: ಜಪ, ಅರ್ಚನೆಯ ಮೂಲಕ ದೇವರ ಸ್ಮರಣೆ ಮಾಡಿದರೆ ಕೇವಲ ಮಾಡಿದ ವ್ಯಕ್ತಿಗೆ ಮಾತ್ರ ಪ್ರಯೋಜನವಲ್ಲ. ಕುಳಿತು ಮಾಡುವ ಪ್ರದೇಶಕ್ಕೂ ಪ್ರಯೋಜನ ಇದೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶರಾದ ಶ್ರೀಮಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಗಳು ನುಡಿದರು.
ಚಾತುರ್ಮಾಸ್ಯ ಅವಧಿಯಲ್ಲಿ ಶಿರಸಿ ಸೀಮಾ ಒಳಭಾಗಿ ಶಿಷ್ಯರು ಭಕ್ತರು ಸಲ್ಲಿಸಿದ ಸೇವೆಗಳನ್ನು ಸ್ವೀಕರಿಸಿ ಆಶೀರ್ವಚನ ನುಡಿದರು.
ದೇವರ ಚಿಂತನೆಯಲ್ಲಿ ಶ್ರದ್ಧಾ ಭಕ್ತಿಯಿಂದ ಜಪ, ಪ್ರಾರ್ಥನೆ, ಪೂಜೆ, ಅರ್ಚನೆ ಮಾಡಿದರೆ ಆ ಭಾಗದಲ್ಲಿ ದಿವ್ಯತೆ, ಪುಷ್ಠಿ ಬರುತ್ತದೆ. ಸುತ್ತಲಿನ ಜನತೆಗೆ, ಸಮಾಜಕ್ಕೂ ಒಳ್ಳೆಯ ಪರಿಣಾಮ ಆಗುತ್ತದೆ. ಅಷ್ಟೊಂದು ಪವಿತ್ರವಾದ ಕಾರ್ಯವಿದು ಎಂದರು.
ದೇವರ ಧ್ಯಾನ ದಿನನಿತ್ಯ ಮಾಡುವದರಿಂದ ಅನೇಕ ಪ್ರಯೋಜನಗಳು ಹೊರಗಡೆ ಆಗುವದು ಕಾಣುತ್ತೇವೆ. ಅದಕ್ಕಿಂತ ನಮ್ಮೊಳಗೆ ಆಗುವ ಪ್ರಯೋಜನಗಳು ಇನ್ನೂ ಹಲವು. ಅದು ಬಹಳ ಮುಖ್ಯವಾದದ್ದು. ಆರೋಗ್ಯ, ಕೌಟುಂಬಿಕ ಸಮಸ್ಯೆ, ಚಿಂತೆಗಳು ಸೇರಿದಂತೆ ಅನೇಕ ಸಮಸ್ಯೆಗಳು ಇರುತ್ತವೆ. ಈ ಒಳಗಿನ ಸಮಸ್ಯೆಗಳೆಲ್ಲ ದೇವರ ಸ್ಮರಣೆಯಿಂದ ಕರಗುತ್ತದೆ ಎಂದು ವಿವರಿಸಿದರು.
ಪರಮಾತ್ಮ ಆನಂದ ಸ್ವರೂಪಿ. ಅವನ ಸ್ಮರಣೆ, ಧ್ಯಾನ ಮಾಡಿದರೆ ಆನಂದ ನಮಗೆ ಸಿಗುತ್ತದೆ. ನಮ್ಮ ಪ್ರಾಣೇಂದ್ರಿಯಗಳೂ ಸಂತೋಷ ಪಡುತ್ತವೆ. ಆ ಆನಂದ ಸಿಗಲು ನಮ್ಮ ಮನಸ್ಸು ಭಗವಂತನಲ್ಲಿ ನಿಲ್ಲಬೇಕು ಎಂದರು.
ಹೊರಗಿನ ವಿಷಯಗಳ ಅನುಭವಗಳ ಸಂತೋಷಕ್ಕೂ, ಒಳಗೆ ಸಿಗುವ ಸಂತೋಷಕ್ಕೂ ವ್ಯತ್ಯಾಸ ಇರುತ್ತವೆ. ಹೊರಗಿನ ಆನಂದಲ್ಲಿ ಅನೇಕ ಸಮಸ್ಯೆ ಆಗುತ್ತವೆ. ಒಳಗಿನ ದೇವರ ಧ್ಯಾನದಲ್ಲಿ ಸಮಸ್ಯೆ ಎದುರಿಸುವ ಶಕ್ತಿ, ನಮ್ಮ ಆರೋಗ್ಯಕ್ಕೂ ಪುಷ್ಠಿ ನೀಡುತ್ತದೆ ಎಂದರು.
ದೇವರ ಧ್ಯಾನದಲ್ಲಿ ನಿಂತು ಪಡುವ ಆನಂದ ಶ್ರೇಷ್ಠವಾದದ್ದು. ಮನದ ಆನಂದ ಸಾಧ್ಯವಾಗುತ್ತದೆ. ಮನಸ್ಸು ಆನಂದವಾಗಿದ್ದರೆ ಸಮಸ್ಯೆ ಎದುರಿಸಲು ಸಾಧ್ಯವಾಗುತ್ತದೆ. ಕರ್ತವ್ಯ ಮಾಡಲೂ ಉತ್ಸಾಹ ಬರುತ್ತದೆ. ಮನದ ಆರೋಗ್ಯವೂ ಚೆನ್ನಾಗಿ ಇರುತ್ತದೆ. ಮನಸ್ಸಿನ ಟಾನಿಕ್ ಆನಂದ. ಮನದ ಶಾಂತಿಯ ಕಾರಣದಿಂದ ಲೋಕ ಶಾಂತಿಯಾಗುತ್ತದೆ. ಈ ಮೂಲಕ ಜೀವನ ಸಮೃದ್ಧ ಮಾಡಿಕೊಳ್ಳಬಹುದು ಎಂದರು.
ನಮ್ಮ ಭಾರತ ದೇಶದಲ್ಲಿ ಕುಟುಂಬ ವ್ಯವಸ್ಥೆ ಶಿಥಿಲ ಆಗುತ್ತಿದೆ ಎಂದು ತೀವ್ರ ಕಳವಳ ವ್ಯಕ್ತಪಡಿಸಿದ ಶ್ರೀಗಳು, ಕುಟುಂಬ ವ್ಯವಸ್ಥೆ ಚೆನ್ನಾಗಿದ್ದರೆ
ಮಕ್ಕಳಿಗೂ ಒಳ್ಳೆಯ ಸಂಸ್ಕಾರ ಸಿಗುತ್ತದೆ. ಇಲ್ಲವಾದರೆ ಅವರ ಮಾನಸಿಕ ಆರೋಗ್ಯದಲ್ಲೂ ತೊಂದರೆ ಆಗುತ್ತದೆ. ಹುಟ್ಟಿನಿಂದ ಬರುವ ಮನೋ ರೋಗಕ್ಕಿಂತ ನಂತರದ ರೋಗಿಗಳ ಸಂಖ್ಯೆಯೇ ಅಧಿಕ ಆಗಲು ಇದೂ ಒಂದು ಕಾರಣ. ವಿವಾಹ ವ್ಯವಸ್ಥೆಯಲ್ಲಿ ವಿಳಂಬ ಧೊರಣೆಗೆ ಸಾಮೂಹಿಕ ಒಗ್ಗಟ್ಟು ಪ್ರದರ್ಶಿಸಿ ಕುಟುಂಬ ವ್ಯವಸ್ಥೆ ಹಾನಿಗೂ ಕಾರಣ ಆಗುತ್ತಿದ್ದೇವೆ ಎಂದೂ ವಿವರಿಸಿದರು.
ಪ್ರಪಂಚದ ಎಲ್ಲಡೆ ಭಾರತದ ಕುಟುಂಬ ವ್ಯವಸ್ಥೆ ಮೆಚ್ಚುಗೆ ಇದೆ. ಈ ವ್ಯವಸ್ಥೆ ಅಮೂಲ್ಯ ವ್ಯವಸ್ಥೆ. ಆದರೆ, ನಮ್ಮ ಅವಿವೇಕದಿಂದ ಕುಟುಂಬ ವ್ಯವಸ್ಥೆ ಕಳೆದುಕೊಳ್ಳುತ್ತಿದ್ದೇವೆ. ಕುಟುಂಬ ವ್ಯವಸ್ಥೆ ಹಾಳು ಮಾಡಿಕೊಂಡರೆ ಮನುಷ್ಯ ಮೃಗತ್ವದ ಕಡೆಗೆ ಸಾಗುತ್ತಾನೆ ಎಂದರು.
ಶಿರಸಿ ಸೀಮಾ ಒಳಭಾಗಿ ಪ್ರಮುಖರಾದ ಶ್ರೀಪಾದ ಗ ಹೆಗಡೆ ಸಣ್ಣಳ್ಳಿ, ಶಂಕರ ನಾರಾಯಣ ಹೆಗಡೆ ಅಡೆಮನೆ, ನರಸಿಂಹ ದೀಕ್ಷಿತ ಕಳವೆ, ಆರ್.ಎಸ್.ಹೆಗಡೆ ಭೈರುಂಬೆ ಇತರರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ