*ಏಕಗವಾಕ್ಷಿ ಮೂಲಕ ತಕ್ಷಣವೇ ಪರವಾನಿಗೆ ನೀಡಲು ಸಚಿವ ಸತೀಶ್ ಜಾರಕಿಹೊಳಿ ಸೂಚನೆ*
ಗಣೇಶೋತ್ಸವ ಪೂರ್ವಭಾವಿ ಸಭೆ: ಸಕಲ ಸಿದ್ಧತೆ
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ನಗರದಲ್ಲಿ ಅತ್ಯಂತ ಸಂಭ್ರಮದಿಂದ ಗಣೇಶೋತ್ಸವ ಆಚರಣೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಹಾಗೂ ಉತ್ಸವ ಮಂಡಳಿಗಳಿಗೆ ಯಾವುದೇ ರೀತಿಯ ವಿಳಂಬವಾಗದಂತೆ ಏಕಗವಾಕ್ಷಿ ಯೋಜನೆ ಮೂಲಕ ಕೂಡಲೇ ಪರವಾನಿಗೆ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗಣೇಶೋತ್ಸವ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಸೋಮವಾರ (ಆ.7) ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗಣೇಶೋತ್ಸವ ಮಂಡಳಿಗಳಿಗೆ ರಿಯಾಯಿತಿ ದರದಲ್ಲಿ ವಿದ್ಯುತ್ ಒದಗಿಸುವ ಕುರಿತು ಸರಕಾರದ ಮಟ್ಟದಲ್ಲಿ ಗಮನಸೆಳೆಯಲಾಗುವುದು.
ಏನೇ ಸಮಸ್ಯೆಗಳಿದ್ದರೆ ಅಧಿಕಾರಿಗಳ ಗಮನಕ್ಕೆ ತರಬೇಕು. ಬಗೆಹರಿಯದಿದ್ದರೆ ತಮ್ಮ ಗಮನಕ್ಕೆ ತರಬೇಕು ಎಂದು ತಿಳಿಸಿದರು.
ಗಣೇಶೋತ್ಸವ ಮಂಡಳಿಯವರು ಕೂಡ ನಿಗದಿತ ಅವಧಿಯಲ್ಲಿ ಮೆರವಣಿಗೆಯಲ್ಲಿ ಭಾಗವಹಿಸುವ ಮೂಲಕ ಆದಷ್ಟು ಬೇಗನೇ ವಿಸರ್ಜನೆಗೆ ಸಹಕರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಮನವಿ ಮಾಡಿಕೊಂಡರು.
ಪ್ರತಿವರ್ಷದಂತೆ ಈಗಾಗಲೇ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಹೊಂಡಗಳ ಸ್ವಚ್ಛತೆ, ರಸ್ತೆ ದುರಸ್ತಿ, ವಿದ್ಯುತ್ ತಂತಿಗಳ ತೆರವು, ಪೊಲೀಸ್ ಭದ್ರತೆ ಮತ್ತಿತರ ಅಗತ್ಯವಿರುವ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು.
ಮೆರವಣಿಗೆ ವೀಕ್ಷಣೆಗೆ ಆಗಮಿಸುವ ಮಹಿಳೆಯರಿಗೆ ಅನುಕೂಲವಾಗುವಂತೆ ಮಹಿಳಾ ಶೌಚಾಲಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕಲ್ಪಿಸಬೇಕು ಎಂದು ಸತೀಶ್ ಜಾರಕಿಹೊಳಿ ಅವರು ತಿಳಿಸಿದರು.
ಮಹಾನಗರ ಪಾಲಿಕೆಯ ಆಯುಕ್ತರಾದ ಅಶೋಕ ದುಡಗುಂಟಿ ಅವರು, ಗಣೇಶೋತ್ಸವವನ್ನು ಪ್ರತಿವರ್ಷದಂತೆ ಸಂಭ್ರಮದಿಂದ ಹಾಗೂ ಅಚ್ಚುಕಟ್ಟಾಗಿ ಆಚರಿಸಲು ಅನುಕೂಲವಾಗುವಂತೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುವುದು ಎಂದು ಹೇಳಿದರು.
ಒಂದು ಕೋಟಿ ಅನುದಾನ; ಪರವಾನಿಗೆ ನೀಡಲು ಏಕಗವಾಕ್ಷಿ ವ್ಯವಸ್ಥೆ:
ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು, ಗಣೇಶೋತ್ಸವವನ್ನು ಅಚ್ಚುಕಟ್ಟಾಗಿ ನಡೆಸಲು ಪಾಲಿಕೆಯಲ್ಲಿ ಒಂದು ಕೋಟಿ ರೂಪಾಯಿ ಅನುದಾನ ತೆಗೆದಿರಿಸಲಾಗಿದೆ ಎಂದು ತಿಳಿಸಿದರು.
ಗಣೇಶೋತ್ಸವ ಮಂಡಳಿಗಳಿಗೆ ಪರವಾನಿಗೆ ನೀಡಲು ಅನುಕೂಲವಾಗುವಂತೆ ಎಂಟು ಪೊಲೀಸ್ ಠಾಣೆಗಳಲ್ಲಿ ಏಕಗವಾಕ್ಷಿ ವ್ಯವಸ್ಥೆ ಮಾಡಲಾಗುತ್ತಿದೆ. ಮೆರವಣಿಗೆ ವೀಕ್ಷಿಸಲು ಅನುಕೂಲವಾಗುವಂತೆ ದೊಡ್ಡ ಗ್ಯಾಲರಿ ನಿರ್ಮಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮೆರವಣಿಗೆ ಸಾಗುವ ಮಾರ್ಗವನ್ನು ಪರಿಶೀಲಿಸಿ ಸುಗಮ ಮೆರವಣಿಗೆಗೆ ಅಗತ್ಯ ವ್ಯವಸ್ಥೆ ಮತ್ತು ಹೆಚ್ಚುವರಿ ಸಿಸಿಟಿವಿ ಅಳವಡಿಕೆ ಮಾಡಲಾಗುವುದು ಎಂದು ನಿತೇಶ್ ಪಾಟೀಲ ತಿಳಿಸಿದರು.
ಗಣೇಶೋತ್ಸವ ಮಹಾಮಂಡಳದ ಪದಾಧಿಕಾರಿ ವಿಕಾಸ್ ಕಲಘಟಗಿ, ನಗರದಲ್ಲಿ 378 ಗಣೇಶೋತ್ಸವ ಮಂಡಳಗಳು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಿವೆ. ಆದ್ದರಿಂದ ವಿದ್ಯುತ್ ಬಿಲ್ ನಲ್ಲಿ ರಿಯಾಯಿತಿ ನೀಡಬೇಕು. ಸಾಧ್ಯವಾದರೆ ಸಂಪೂರ್ಣ ಬಿಲ್ ಮನ್ನಾ ಮಾಡಲು ಸರಕಾರದ ಮಟ್ಟದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿಕೊಂಡರು.
ನೇತಾಜಿ ಜಾಧವ, ಗಣೇಶ ಮೂರ್ತಿಗಳ ವಿಸರ್ಜನೆಗೆ ಅನುಕೂಲವಾಗುವಂತೆ ಬಾವಿ ವ್ಯವಸ್ಥೆ ಮಾಡಿಕೊಡಬೇಕು. ವಿದ್ಯುತ್ ದೀಪಗಳನ್ನು ಮುಂಚಿಯವಾಗಿಯೇ ದುರಸ್ತಿ ಮಾಡಲು ಕ್ರಮ ತೆಗೆದುಕೊಳ್ಳಬೇಕು ಎಂದು ವಿನಂತಿಸಿದರು.
ರಮಾಕಾಂತ್ ಕೊಂಡುಸ್ಕರ್ ಅವರು ಮಾತನಾಡಿ, ಉಚಿತ ವಿದ್ಯುತ್ ಒದಗಿಸುವುದೆ ಜತೆಗೆ ಪರವಾನಿಗೆ ವ್ಯವಸ್ಥೆಯನ್ನು ಸರಳೀಕರಣ ಮಾಡಬೇಕು ಎಂದು ಮನವಿ ಮಾಡಿಕೊಂಡರು.
ಸಭೆಯಲ್ಲಿ ಮಾತನಾಡಿದ ಅನೇಕ ಗಣ್ಯರು ಮೈಸೂರು ದಸರಾ ಮಾದರಿಯಲ್ಲಿ ಬೆಳಗಾವಿ ಗಣೇಶೋತ್ಸವ ಮೆರವಣಿಗೆ ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು; ರಸ್ತೆ ದುರಸ್ತಿ, ವಿದ್ಯುತ್ ದೀಪಗಳ ಅಳವಡಿಕೆ, ಜೋತು ಬಿದ್ದಿರುವ ವಿದ್ಯುತ್ ತಂತಿಗಳ ಸರಿಪಡಿಸುವುದು; ಗಣೇಶ ವಿಸರ್ಜನೆಗೆ ಹೆಚ್ಚುವರಿ ಟ್ಯಾಂಕ್ ವ್ಯವಸ್ಥೆ ಸೇರಿದಂತೆ ಮನವಿಗಳನ್ನು ಮಾಡಿಕೊಂಡರು.
ಮೇಯರ್ ಶೋಭಾ ಸೋಮನಾಚೆ, ಉಪ ಮೇಯರ್ ರೇಷ್ಮಾ ಪಾಟೀಲ, ಶಾಸಕರಾದ ಆಸೀಫ್(ರಾಜು) ಸೇಠ್, ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ್ ಹಟ್ಟಿಹೊಳಿ, ಪೊಲೀಸ್ ಆಯುಕ್ತರಾದ ಎಸ್.ಎನ್.ಸಿದ್ದರಾಮಪ್ಪ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್ ಮತ್ತಿತರರು ಉಪಸ್ಥಿತರಿದ್ದರು. ಮಲ್ಲೇಶ್ ಚೌಗಲೆ, ಸಾಗರ ಪಾಟೀಲ ಮತ್ತಿತರರು ಸಲಹೆಗಳನ್ನು ನೀಡಿದರು.
ಬೆಳಗಾವಿ ನಗರದ ಗಣೇಶೋತ್ಸವ ಮಂಡಳಿಗಳ ಪದಾಧಿಕಾರಿಗಳು, ಮಹಾನಗರ ಪಾಲಿಕೆಯ ಸದಸ್ಯರು, ಗಣ್ಯರು, ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ