
ಪ್ರಗತಿವಾಹಿನಿ ಸುದ್ದಿ; ಥಾಣೆ: ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಕೇವಲ 12 ಗಂಟೆಗಳಲ್ಲಿ 17 ರೋಗಿಗಳು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.
ಥಾಣೆಯ ಕಲ್ವಾದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್ ಆಸ್ಪತ್ರೆಯಲ್ಲಿ ಕಳೆದ 12 ಗಂಟೆಯಲ್ಲಿ ಈ ದುರಂತ ಸಂಭವಿಸಿದೆ. ಆಸ್ಪತ್ರೆಅಲ್ಲಿನ ಸಾವಿನ ಕೇಕೆಗೆ ಸಾರ್ವಜನಿಕರು ಕಂಗಾಲಾಗಿದ್ದಾರೆ. ತೀವ್ರ ನಿಗಾ ಘಟಕದಲ್ಲಿದ್ದ 12 ರೋಗಿಗಳು ಹಾಗೂ ಇತರ ವಿಭಾಗದ 5 ರೋಗಿಗಳು ಸಾವನ್ನಪ್ಪಿದ್ದಾರೆ.
ಸಾವಿನ ಸರಣಿ ಆಸ್ಪತ್ರೆಯ ಚಿಕಿತ್ಸಾ ವ್ಯವಸ್ಥೆಯ ಮೇಲೆಯೇ ಸಾಕಷ್ಟು ಅನುಮಾನ ಹುಟ್ಟಿಸಿದ್ದು, ರೋಗಿಗಳ ಕುಟುಂಬ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ.
ಆದರೆ ಆಸ್ಪತ್ರೆ ಆಡಳಿತ ಮಂಡಳಿ ಹೇಳುವ ಪ್ರಕಾರ, ಥಾಣೆಯಲ್ಲಿನ ಜಿಲ್ಲಾಸ್ಪತ್ರೆಯನ್ನು ಮುಚ್ಚಿದ್ದರಿಂದ ಎಲ್ಲಾ ರೋಗಿಗಳು ಈ ಆಸ್ಪತ್ರೆಗೆ ಬರುತ್ತಿದ್ದಾರೆ. ರೋಗಿಗಳ ಸಂಖ್ಯೆ ಹೆಚ್ಚಳವಾಗಿದೆ. ವೈದ್ಯಕೀಯ ಸಿಬ್ಬಂದಿಗಳು ಹಾಗೂ ವೈದ್ಯಕೀಯ ಉಪಕರಣಗಳ ಕೊರತೆಯಿದೆ. ಅಲ್ಲದೇ ರೋಗಿಗಳು ಕೊನೇ ಕ್ಷಣದಲ್ಲಿ ಆಸ್ಪತ್ರೆಗೆ ಬಂದು ಅಡ್ಮಿಟ್ ಆಗುತ್ತಿದ್ದಾರೆ ಇದರಿಂದಾಗಿ ಸಮಸೆ ಆಗಿದೆ ಎಂದು ತಿಳಿಸಿದೆ. ಆದರೆ ಕೇವಲ 12 ಗಂಟೆಯಲ್ಲಿ ಆಸ್ಪತ್ರೆಯಲ್ಲಿ 17 ರೋಗಿಗಳು ಉಸಿರು ಚಲ್ಲಿರುವುದು ವಿವಾದಕ್ಕೆ ಕಾರಣವಾಗಿದೆ.
 
					 
				 
					 
					 
					 
					
 
					 
					 
					


