Kannada NewsKarnataka NewsLatestPolitics

*ಬಿಚ್ಚಿಡುವವರನ್ನು, ಬಿಚ್ಚಾಕುವವರನ್ನು ತಡೆಯಲು ಆಗುವುದಿಲ್ಲ: HDKಗೆ ಟಾಂಗ್ ನೀಡಿದ ಡಿಸಿಎಂ ಡಿ.ಕೆ. ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬಿಚ್ಚಿಡುವವರನ್ನು, ಬಿಚ್ಚಾಕುವವರನ್ನು ತಡೆಯಲು ಆಗುವುದಿಲ್ಲ. ಆದರೆ ಬಿಚ್ಚಿಡುವುದ್ದಕ್ಕೆ ಎಲ್ಲರಿಗೂ ಅವಕಾಶವಿದೆ. ಹೀಗಾಗಿ ಅವರು ಬಿಚ್ಚಿ, ಬಿಚ್ಚಿ ಬಯಲು ಮಾಡಲಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

“ಬಿಬಿಎಂಪಿಯಲ್ಲಿ ಏನಾಗುತ್ತಿದೆ ಎಂಬುದನ್ನು ಬಿಚ್ಚಿಡುತ್ತೇನೆ” ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಮಾಧ್ಯಮದವರು ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್, ಕುಮಾರಸ್ವಾಮಿ ಅವರು ಏನು ಬೇಕಾದರೂ ಮಾಡಲಿ, ಅವರ ಬಳಿ ಇರುವ ಮಾಹಿತಿ ಬಹಿರಂಗಪಡಿಸಲಿ ಎಂದು ತಿಳಿಸಿದರು.

ಪೆನ್ ಡ್ರೈವ್ ಮಾಹಿತಿ ಬಹಿರಂಗಪಡಿಸಿದರೆ ಸಿಒಡಿ ತನಿಖೆ ಮಾಡಿಸಿ ತಮ್ಮ ಪರ ವರದಿ ಮಾಡಿಸುತ್ತಾರೆ ಎಂಬ ಕುಮಾರಸ್ವಾಮಿ ಆರೋಪದ ಬಗ್ಗೆ ಕೇಳಿದಾಗ, “ನಮಗೆ ಅವರಷ್ಟು ಅನುಭವವಿಲ್ಲ. ಈಗ ಅವರನ್ನು “ಅಣ್ಣ” ಎಂದು ಕರೆಯುವಂತಿಲ್ಲ. ಮುಂದಿನ ಜನ್ಮದ ಬಗ್ಗೆ ಬೇರೆ ಮಾತಾಡಿದ್ದಾರೆ. ಇರಲಿ, ಎಲ್ಲಾ ಪಕ್ಷಗಳಿಗೂ ಬಿಚ್ಚಿಡುವುದಕ್ಕೆ ಅವಕಾಶವಿದೆ” ಎಂದರು.

ಈ ಜಟಾಪಟಿ ವೈಯಕ್ತಿಕವೋ, ರಾಜಕಿಯವೊ ಎನ್ನುವ ಪ್ರಶ್ನೆಗೆ, “ನಾನ್ಯಾಕೆ ಅವರ ಜೊತೆ ವೈಯಕ್ತಿಕ ಜಟಾಪಟಿ ಮಾಡಲಿ. ರಾಜಕೀಯ ಯುದ್ಧ ಮಾಡಿ ಮುಗಿದಿದೆ. ರಾಜ್ಯದ ಜನ ನಮಗೆ ಆಶೀರ್ವಾದ ಮಾಡಿದ್ದಾರೆ. ಅದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಅವರಿಗೆ ಅಸೂಯೆ. ನನಗೆ ಅಧಿಕಾರ, ಅವಕಾಶ ಸಿಗಲಿಲ್ಲ ಎಂದು ಕೈ, ಕೈ ಹಿಸುಕಿಕೊಳ್ಳುತ್ತಿದ್ದಾರೆ” ಎಂದು ತಿಳಿಸಿದರು.

ಬಿಬಿಎಂಪಿ ಕರ್ಮಕಾಂಡ ವಿಚಾರವಾಗಿ ಯಾವಾಗ ದಾಖಲೆ ಸಮೇತ ಮಾತನಾಡುತ್ತೀರಿ ಎಂಬ ಪ್ರಶ್ನೆಗೆ, “ಅದಕ್ಕೆ ಯಾಕಿಷ್ಟು ಆತುರ? ಶುಭ ಗಳಿಗೆ, ಮುಹೂರ್ತ ಎಲ್ಲಾ ಕೂಡಿಬರಲಿ. ಯಾರು ಏನೇನು ಬಿಚ್ಚಿಡುತ್ತಾರೋ ಬಿಚ್ಚಿಟ್ಟು ಮುಗಿಸಲಿ. ನನಗೆ ಅವಸರವೇನಿಲ್ಲ. ಎಲ್ಲರ ಪಿಕ್ಚರ್ ಮುಗಿಯಲಿ. ತನಿಖೆಯ ಅಂಶಗಳು ಕೈ ಸೇರಿದ ತಕ್ಷಣ ಬಿಡುಗಡೆ ಮಾಡುತ್ತೇವೆ” ಎಂದು ತಿಳಿಸಿದರು.

6-7 ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಇರಲ್ಲ ಎನ್ನುವ ಬಸನಗೌಡ ಪಾಟೀಲ ಯತ್ನಾಳ ಅವರ ಮಾತಿಗೆ ಉತ್ತರಿಸುತ್ತಾ, “ಕೆಲವರಿಗೆ ಮಾನಸಿಕ ಅಸ್ವಸ್ಥತೆ ಇರುತ್ತದೆ, ಅಂತವರಿಗೆ ಕನಸು ಕಾಣಬೇಡಿ ಎಂದು ಹೇಳುವುದಕ್ಕೆ ಆಗುತ್ತದೆಯೇ? ಆಸೆಪಡಲಿ, ಏನು ಬೇಕಾದರೂ ಮಾಡಿಕೊಳ್ಳಲಿ. ಜನ ನಮಗೆ ಆಶೀರ್ವಾದ ಮಾಡಿದ್ದು, ಗ್ಯಾರಂಟಿ ಯೋಜನೆಗಳನ್ನು ತಲುಪಿಸಬೇಕು. ಕೊಟ್ಟ ಮಾತು ಉಳಿಸಿಕೊಳ್ಳಬೇಕು. ಅದಕ್ಕಾಗಿ ನಮ್ಮ ಕೆಲಸ ನಾವು ಮಾಡುತ್ತೇವೆ” ಎಂದು ತಿಳಿಸಿದರು.

ಕುಮಾರಸ್ವಾಮಿ ಅವರ ಬಗ್ಗೆ ಯಾಕಿಷ್ಟು ಮೃದು ಧೋರಣೆ ಎಂದು ಕೇಳಿದಾಗ, “ಅವರಿಗೆ ಪ್ರಮೋಷನ್ ಕೊಟ್ಟಿದ್ದೆವು. ಅದನ್ನು ಬೇಡ ಎಂದಿದ್ದಾರೆ. ಮುಂದಿನ ಜನ್ಮದಲ್ಲಾದರೂ ಸಿಗಲಿದೆ ಎಂದು ಹೇಳಿದ್ದಾರಲ್ಲ ಬಹಳ ಸಂತೋಷ” ಎಂದು ತಿಳಿಸಿದರು.

ಪಕ್ಷ ಬಿಟ್ಟು ಹೋದವರನ್ನು ಮತ್ತೆ ಪಕ್ಷಕ್ಕೆ ಕರೆತರುವ ಚಿಂತನೆ ಇದೆಯಾ ಎಂದು ಕೇಳಿದಾಗ, “ಈ ವಿಚಾರವಾಗಿ ಯಾರ ಜತೆಯೂ ಮಾತನಾಡಿಲ್ಲ. ರಾಜಕೀಯದಲ್ಲಿ ಯಾರೂ ಯಾವ ನಿರ್ಧಾರ ಕೈಗೊಳ್ಳುತ್ತಾರೋ ಗೊತ್ತಿಲ್ಲ. ಅವರವರ ಭವಿಷ್ಯದ ಬಗ್ಗೆ ಆಲೋಚಿಸಿ ಅವರು ತೀರ್ಮಾನ ಮಾಡುತ್ತಾರೆ. ನನ್ನ ಜೊತೆ ಯಾರೂ ಯಾವ ಚರ್ಚೆಯನ್ನು ಮಾಡಿಲ್ಲ. ನಾನು ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗಬೇಕು, ಮತ ಪ್ರಮಾಣ ಹೆಚ್ಚಿಸಿಕೊಳ್ಳಬೇಕು ಎಂದು ಕಾರ್ಯಕರ್ತರಿಗೆ ಸೂಚಿಸಿದ್ದೇನೆ” ಎಂದು ತಿಳಿಸಿದರು.

ಬಿಜೆಪಿ ನಾಯಕರ ಆರೋಪಗಳ ಬಗ್ಗೆ ಕೇಳಿದಾಗ, “ಬಿಜೆಪಿಯ ನವರಂಗಿ ನಾರಾಯಣ ಮತ್ತು ತಂಡಡವರು ನಾವು ತನಿಖೆ ಮಾಡುತ್ತಿರುವುದಕ್ಕೆ ಹೆದರಿಕೊಂಡಿದ್ದಾರೆ. ಅದರಿಂದ ಇಲ್ಲ, ಸಲ್ಲದ ಆರೋಪ ಮಾಡುತ್ತಿದ್ದಾರೆ. ಯಾವ ಗುತ್ತಿಗೆದಾರರಿಗೂ ನಾವು ತೊಂದರೆ ನೀಡುವುದಿಲ್ಲ. ಯಾರು ಕೆಲಸ ಮಾಡಿದ್ದಾರೋ ಅವರಿಗೆ ಹಣ ಸಿಗಲಿದೆ. ಬಿಜೆಪಿ ಸರ್ಕಾರ ಕಳೆದ ಎರಡು ಮೂರು ವರ್ಷಗಳಿಂದ ಬಿಲ್ ಪಾವತಿ ಮಾಡದೇ ಬಾಕಿ ಉಳಿಸಿಕೊಂಡಿರುವುದೇಕೆ? ಈ ಬಗ್ಗೆ ಅಂಕಿ ಅಂಶಗಳ ಸಮೇತ ಮಾತನಾಡುತ್ತೇನೆ. ನಮ್ಮ ಸರ್ಕಾರ ಕಮಿಷನ್ ಕೇಳಿಲ್ಲ ಎಂದು ಸತ್ಯಹೇಳಿದ್ದಕ್ಕೆ ಕೆಂಪಣ್ಣ ಅವರಿಗೆ ಹಾಗೂ ಬಿಬಿಎಂಪಿ ಗುತ್ತಿಗೆದಾರರ ಸಂಘದವರಿಗೆ ಧನ್ಯವಾದ ಹೇಳುತ್ತೇನೆ. ದಕ್ಷ ಆಡಳಿತ ನೀಡುವುದು ನಮ್ಮ ಗುರಿ. ಹೀಗಾಗಿ ಬಿಜೆಪಿ ಸುಳ್ಳು ಆರೋಗಳಿಗೆ ಹೆದರದೆ ನಮ್ಮ ನಿರ್ಧಾರಕ್ಕೆ ಬದ್ಧರಾಗಿದ್ದೇವೆ” ಎಂದು ತಿಳಿಸಿದರು.

ಎನ್‌ಇಪಿ ರದ್ದು ಮಾಡುತ್ತಿರುವುದು ಮೋದಿ ಅವರ ಮೇಲಿರುವ ದ್ವೇಷದಿಂದ ಎಂಬ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, “ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶ, ಗುಜರಾತ್, ಮಧ್ಯಪ್ರದೇಶ, ಹರಿಯಾಣ ಇಲ್ಲೆಲ್ಲ ಏಕೆ ಎನ್‌ಇಪಿ ಜಾರಿಗೆ ತಂದಿಲ್ಲ? ಮೊದಲು ಅಲ್ಲಿ ಜಾರಿ ಮಾಡಲಿ. ಅವರಿಗೆ ಕರ್ನಾಟಕದ ಮೇಲೆ ಏಕೆ ಕಣ್ಣು? ಎನ್‌ಇಪಿ ಎಂದರೆ “ನಾಗ್ಪುರ ಎಜುಕೇಷನ್‌ ಪಾಲಿಸಿ” ಅದು ನಮಗೆ ಬೇಕಾಗಿಲ್ಲ. ನಮ್ಮ ಮಕ್ಕಳ ಭವಿಷ್ಯದ ಜೊತೆ ಆಟವಾಡಲು ಬಿಡುವುದಿಲ್ಲ. ಇಷ್ಟು ದಿನ ನಮ್ಮ ರಾಜ್ಯದಲ್ಲಿ ಉತ್ತಮ ಶಿಕ್ಷಣ ವ್ಯವಸ್ಥೆ ಇತ್ತು. ಇಲ್ಲಿ ಓಡಿರುವವರು ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ನಮ್ಮ ಶಿಕ್ಷಣ ನೀತಿ ಬಗ್ಗೆ ನಮಗೆ ಹೆಮ್ಮೆ ಇದೆ. ಎನ್ ಇಪಿ ರದ್ದು ಮಾಡುವುದಾಗಿ ನಾವು ನಮ್ಮ ಪ್ರಣಾಳಿಕೆಯಲ್ಲಿ ಹೇಳಿದ್ದೆವು. ರಾಜ್ಯ ಪಟ್ಟಿಯಲ್ಲಿ ಬರುವ ವಿಷಯದ ಬಗ್ಗೆ ಅವರಿಗೆ ಚಿಂತೆ ಬೇಡ” ಎಂದು ಹೇಳಿದರು.

ಎರಡೂವರೆ ವರ್ಷಗಳ ಬಳಿಕ ಹಿರಿಯರು ಅಧಿಕಾರ ಬಿಟ್ಟುಕೊಡಬೇಕು ಎಂಬ ಮುನಿಯಪ್ಪ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಈ ಬಗ್ಗೆ ನಾನು ಏನೂ ಹೇಳುವುದಿಲ್ಲ. ಇದು ಪಕ್ಷದ ಆಂತರಿಕ ವಿಚಾರ. ಈ ವಿಚಾರವಾಗಿ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡಲಿದೆ. ನಾವು ಸರ್ಕಾರ ಮಾಡುತ್ತಿದ್ದು, ನಮ್ಮ ಐದು ವರ್ಷಗಳ ಅವಧಿಯಲ್ಲಿ ಕೊಟ್ಟ ಮಾತು ಉಳಿಸಿಕೊಳ್ಳುವಂತೆ ಕೆಲಸ ಮಾಡುತ್ತೇವೆ” ಎಂದು ತಿಳಿಸಿದರು.

ಬಿಬಿಎಂಪಿ ಕಾಮಗಾರಿ ತನಿಖೆ ಯಾವಾಗ ಮುಗಿಯಲಿದೆ ಎಂದು ಕೇಳಿದಾಗ, “ಈ ಬಗ್ಗೆ ನಾನು ದಾಖಲೆ ಸಮೇತ ಮಾತನಾಡುತ್ತೀನಿ. ಎಲ್ಲ ಮಾಧ್ಯಮದವರನ್ನು ಕರೆದು ಮಾತನಾಡುತ್ತೇನೆ. ನನ್ನ ಘನತೆಗೆ ಧಕ್ಕೆಯಾಗುವಂತೆ ರಾಷ್ಟ್ರೀಯ ಮಟ್ಟದಲ್ಲಿ ಅಪಪ್ರಚಾರ (ಪ್ರಾಪೊಗಂಡ) ಮಾಡಲಾಗಿದೆ. ಎಲ್ಲದರ ಬಗ್ಗೆಯೂ ಮಾಹಿತಿ ನೀಡುತ್ತೇನೆ” ಎಂದು ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button