Kannada NewsKarnataka NewsLatestPolitics

*ಸಂಸದರ ಆದರ್ಶ ಗ್ರಾಮ ಯೋಜನೆ ಯಶಸ್ವಿಗೆ ಗ್ರಾಮದ ಜನರ ಒಗ್ಗಟ್ಟು ಅಗತ್ಯ; ಸಂಸದ ಈರಣ್ಣ ಕಡಾಡಿ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಸರಕಾರದ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಜೊತೆಗೆ ಜನಸಾಮಾನ್ಯರ ಸಹಭಾಗಿತ್ವ ಅತೀ ಮುಖ್ಯ. `ಸಂಸದರ ಆದರ್ಶ ಗ್ರಾಮ ಯೋಜನೆ’ ಯಶಸ್ವಿಯಾಗಬೇಕಾದರೆ ಗ್ರಾಮದ ಜನರೆಲ್ಲಾ ಒಗ್ಗಟಿನಿಂದ ಈ ಕಾರ್ಯಕ್ಕೆ ಕೈಜೊಡಿಸಬೇಕೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಗ್ರಾಮಸ್ಥರಲ್ಲಿ ವಿನಂತಿಸಿದರು.

ಸಂಸದರ ಆದರ್ಶ ಗ್ರಾಮ ಯೋಜನೆಯಡಿಯಲ್ಲಿ ಆಯ್ಕೆ ಮಾಡಿದ ಬೆಳಗಾವಿ ತಾಲೂಕಿನ ಕುಕಡೊಳ್ಳಿ ಗ್ರಾಮದಲ್ಲಿ ಯೋಜನೆಯ ಅನುಷ್ಠಾನದ ಬಗ್ಗೆ ನಡೆದ ತಾಲೂಕಾ ಮಟ್ಟದ ಅಧಿಕಾರಿಗಳ ಹಾಗೂ ಗ್ರಾಮಸ್ಥರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶದ ಮೂಲಭೂತ ಸೌಲಭ್ಯಗಳಾದ ಆರೋಗ್ಯ, ಶಿಕ್ಷಣ, ಕುಡಿಯುವ ನೀರು, ರಸ್ತೆ, ಸ್ವಚ್ಛತೆ ಈ ರೀತಿ ಎಲ್ಲ ಸೌಲಭ್ಯಗಳನ್ನು ಒದಗಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. ಗ್ರಾಮಾಂತರ ಪ್ರದೇಶದ ಜನರು ನಗರ ಪ್ರದೇಶದ ಸೌಲಭ್ಯಗಳಿಗೆ ಮಾರುಹೋಗಿ ನಗರ ಪ್ರದೇಶಕ್ಕೆ ವಲಸೆ ಹೊಗುತ್ತಿದ್ದಾರೆ. ಇದರಿಂದಾಗಿ ನಗರ ಪ್ರದೇಶಗಳು ಕೂಡಾ ಜನದಟ್ಟಣೆಯ ಒತ್ತಡಕ್ಕೆ ಸಿಲುಕಿಹೊಗಿವೆ. ಈಗ ಅದನ್ನು ಹೊಗಲಾಡಿಸುವ ನಿಟ್ಟಿನಲ್ಲಿ ಗ್ರಾಮಾಂತರ ಪ್ರದೇಶದಲ್ಲೂ ನಗರದ ನಾಗರಿಕರಿಗೆ ಸಿಗುವಂತಹ ಎಲ್ಲಾ ಸೌಲಭ್ಯಗಳು ಸಿಗಬೇಕು, ಗ್ರಾಮೀಣ ಪ್ರದೇಶದ ಜನ ನಗರ ಪ್ರದೇಶಗಳಿಗೆ ವಲಸೆ ಹೊಗುವುದನ್ನು ತಪ್ಪಿಸಬೇಕು ಮತ್ತು ಅದರ ಜೊತೆಗೆ ಗ್ರಾಮೀಣ ಪ್ರದೇಶದ ಜನರಿಗೂ ಕೂಡಾ ಸುಸಜ್ಜಿತವಾದ ಸೌಲಭ್ಯಗಳು ಸಿಗಬೇಕು ಎನ್ನುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಸಂಸದರ ಆದರ್ಶ ಗ್ರಾಮ ಯೋಜನೆಯನ್ನು ಜಾರಿಗೆ ತಂದಿದ್ದಾರೆ ಎಂದರು.

ನಾನು ನನ್ನ ಅವಧಿಯಲ್ಲಿ ಈಗಾಗಲೇ ನಾಲ್ಕು ಗ್ರಾಮಗಳನ್ನು ಅಭಿವೃದ್ದಿ ಪಡಿಸುತ್ತಿದ್ದು, ಬರುವ ದಿನಗಳಲ್ಲಿ ಇನ್ನೂ ಎರಡು ಗ್ರಾಮಗಳನ್ನು ಆಯ್ಕೆ ಮಾಡಿ ಅವುಗಳನ್ನು ಕೂಡಾ ಅಭಿವೃದ್ಧಿ ಪಡಿಸಲು ಅಧಿಕಾರಿಗಳು ಸಹಕಾರ ಕೊಡುತ್ತಿದ್ದಾರೆ. ಗ್ರಾಮಸ್ಥರು ಕೂಡ ಸಹಕಾರ ಕೊಡುವ ಮೂಲಕ ಈ ಯೋಜನೆಯ ಯಶಸ್ವಿಗೆ ಕೈ ಜೋಡಿಸಬೇಕೆಂದು ಸಂಸದ ಈರಣ್ಣ ಕಡಾಡಿ ಕರೆ ನೀಡಿದರು.

ಈ ಸಂದರ್ಭದಲ್ಲಿ ಜಿ.ಪಂ ಯೋಜನಾ ನಿರ್ದೇಶಕ ರವಿ ಬಂಗಾರಪ್ಪನವರ, ತಾ ಪಂ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ ಧನವಾಡಕರ, ಬಿ.ಇ.ಒ ವಾಸಪ್ಪನವರ, ಸಮಾಜ ಕಲ್ಯಾಣ ಇಲಾಖೆ ಸಹಾಯ ನಿರ್ದೇಶಕ ಮಹಾಂತೇಶ ಚಿವಟಗುಂಡಿ, ತಾಲೂಕಾ ಆರೋಗ್ಯಾಧಿಕಾರಿ ಡಾ. ಮಾಸ್ತಿಹೊಳಿ, ಶಂಕರ ದೇಸಾಯಿ, ತಾಲೂಕಾ ಪಶು ವೈದ್ಯಾಧಿಕಾರಿ ಆನಂದ ಪಾಟೀಲ, ಕುಕಡೊಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷೆ ಸಿದ್ದವ್ವಾ ಹೊಸುರ, ಉಪಾಧ್ಯಕ್ಷೆ ಕರೆವ್ವಾ ಹುಚ್ಚನ್ನವರ, ಪಿ.ಡಿ.ಒ ಚಂದ್ರಕಾಂತ ದೇಶಪಾಂಡೆ, ಬೆಳಗಾವಿ ಗ್ರಾಮೀಣ ಬಿಜೆಪಿ ಮಂಡಲ ಅಧ್ಯಕ್ಷ ಧನಂಜಯ ಜಾಧವ ಸೇರಿದಂತೆ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾ..ಪಂ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button