*ಬೆಳಗಾವಿ: ಇಬ್ಬರು ಅಂತರರಾಜ್ಯ ಕಳ್ಳರ ಬಂಧನ; ಬರೋಬ್ಬರಿ 23 ಬೈಕ್ ಗಳು ವಶಕ್ಕೆ*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಇತ್ತಿಚೆಗೆ ಗೋಕಾಕ ಹಾಗೂ ಅಂಕಲಗಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮನೆಯ ಮುಂದೆ ಹಾಗೂ ರಸ್ತೆಯ ಬದಿಗೆ ನಿಲ್ಲಿಸಿದ್ದ ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಂತರಾಜ್ಯ ಕಳ್ಳರನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.
ಅಂಕಲಗಿ, ಗೋಕಾಕ ಶಹರ ಹಾಗೂ ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿರುತ್ತವೆ. ಅಲ್ಲದೇ ಆಗಸ್ಟ್ 23ರಂದು ಕುಂದರಗಿ ಗ್ರಾಮದ ಶ್ರೀ ಲಕ್ಷ್ಮೀ ದೇವಸ್ಥಾನದ ಎದುರಿಗೆ ಇರುವ ಪಾಶ್ಚಾಪೂರ – ಅಂಕಲಗಿ ರಸ್ತೆಯ ಬದಿಗೆ ನಿಲ್ಲಿಸಿದ ಬೈಕ್ ಕಳ್ಳತನವಾದ ಬಗ್ಗೆ ಅಂಕಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರು ಅಂತರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರಿಂದ ಮಹಾರಾಷ್ಟ್ರದ ಕೊಲ್ಲಾಪೂರ, ಕರವೀರ, ಇಂಚಲಕರಂಜಿ, ಹಾಥಕಣಗಲಾ, ಹಾಗೂ ಕರ್ನಾಟಕದ ಬೆಳಗಾವಿ, ಗೋಕಾಕ, ಅಂಕಲಗಿ, ನಿಪ್ಪಾಣಿ, ಹುಕ್ಕೇರಿ, ಸಂಕೇಶ್ವರ, ಹಾಗೂ ವಿವಿದೆಡೆ ಕಳ್ಳತನವಾಗಿದ್ದ ಅಂದಾಜು 8,25,000 /- ರೂ ಮೌಲ್ಯದ ಒಟ್ಟು 23 ಬೈಕ್ ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಬೆಳಗಾವಿ ಎಸ್.ಪಿ. ಸೂಚನೆ ಹಿನ್ನೆಲೆಯಲ್ಲಿ ಪ್ರಕರಣದ ಪತ್ತೆಗಾಗಿ ಗೋಪಾಲ ಆರ್. ರಾಠೋಡ ಸಿ.ಪಿ.ಐ ಗೋಕಾಕ ವೃತ್ತರವರ ನೇತೃತ್ವದಲ್ಲಿ ತಂಡವನ್ನು ರಚಿಸಿ ಕಾರ್ಯಾಚರಣೆ ನಡೆಸಲಾಗಿತ್ತು. ಬೆಳಗಾವಿ ಹೆಚ್ಚುವರಿ ಎಸ್.ಪಿ. ಎಮ್.ವೇಣುಗೋಪಾಲ, ಗೋಕಾಕ ಡಿ.ಎಸ್.ಪಿ ಡಿ.ಎಚ್.ಮುಲ್ಲಾ ಮಾರ್ಗದರ್ಶನದಲ್ಲಿ ಸದರಿ ಬೈಕ್ ಕಳ್ಳರನ್ನು ಬಂಧಿಸಲಾಗಿದೆ.
ಅಂತರರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾದ ಗೋಪಾಲ ಆರ್. ರಾಠೋಡ ಸಿ.ಪಿ.ಐ ಗೋಕಾಕ ವೃತ್ತ, ಎಚ್.ಡಿ.ಯರಝರ್ವಿ ಪಿ.ಎಸ್.ಐ ಅಂಕಲಗಿ ಪೊಲೀಸ ಠಾಣೆ ಎಮ್.ಡಿ.ಘೋರಿ ಪಿ.ಎಸ್.ಐ ಗೋಕಾಕ ಶಹರ ಪೊಲೀಸ ಠಾಣೆ ಹಾಗೂ ಕಿರಣ ಮೋಹಿತೆ ಗೋಕಾಕ ಗ್ರಾಮೀಣ ಪೊಲೀಸ್ ಠಾಣೆ ಮತ್ತು ಸಿಬ್ಬಂದಿ ಜನರಾದ ಬಿ.ವಿ.ನೇರ್ಲಿ, ವಿಠಲ ನಾಯಕ ಡಿ.ಜಿ.ಕೊಣ್ಣೂರ, ಎಸ್.ವಿ.ಕಸ್ತೂರಿ, ಎಮ್.ಬಿ.ತಳವಾರ, ಎಸ್.ಎಚ್.ದೇವರ, ಎಸ್.ಬಿ.ಚಿಪ್ಪಲಕಟ್ಟಿ, ಎಸ್.ಬಿ.ಯಲ್ಲಪ್ಪಗೌಡರ, ಪಿ.ಕೆ.ಹೆಬ್ಬಾಳ, ಎಮ್.ಎಮ್.ಹಾಲೊಳ್ಳಿ, ಎ.ಆರ್.ಮಾಳಗಿ ಇವರ ಕಾರ್ಯವನ್ನು ಮಾನ್ಯ ಎಸ್.ಪಿ. ಸಾಹೇಬರು ಮುಕ್ತ ಕಂಠದಿಂದ ಶ್ಲಾಘಿಸಿರುತ್ತಾರೆ. ಹಾಗೂ ಇದೇ ರೀತಿ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಲು ಸೂಚಿಸಿರುತ್ತಾರೆ.
ಸಾರ್ವಜನಿಕರು ಬೈಕ್ ಗಳನ್ನು ಮನೆಯ ಮುಂದೆ ಅಥವಾ ರಸ್ತೆಯ ಬದಿಗೆ ನಿಲ್ಲಿಸುವಾಗ ಸರಿಯಾದ ರೀತಿಯಲ್ಲಿ ಹ್ಯಾಂಡ್ ಲಾಕ್ ಮಾಡುವಂತೆ ಹಾಗೂ ಸಾಧ್ಯವಾದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸಿ.ಸಿ.ಕ್ಯಾಮೆರಾಗಳು ಇರುವ ಕಡೆಗೆ ನಿಲ್ಲಿಸುವಂತೆ ಬೆಳಗಾವಿ ಎಸ್.ಪಿ ಮನವಿ ಮಾಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ