ಎಸ್.ಟಿ.ಸೋಮಶೇಖರ ಕಾಂಗ್ರೆಸ್ ಸೇರ್ತಾರಾ? ಇಲ್ವಾ? ಈ ಸುದ್ದಿ ಓದಿ ಗೊತ್ತಾಗುತ್ತೆ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಮಾಜಿ ಸಚಿವ, ಹಾಲಿ ಬಿಜೆಪಿ ಶಾಸಕ, ಆಪರೇಶನ್ ಕಮಲದ ಮೂಲಕ ಕಾಂಗ್ರೆಸ್ ನಿಂದ ಬಿಜೆಪಿಗೆ ಜಿಗಿದಿರುವ ಎಸ್.ಟಿ.ಸೋಮಶೇಖರ ಮರಳಿ ಕಾಂಗ್ರೆಸ್ ಸೇರ್ತಾರಾ?
ಹೆಮ್ಮಿಗೆಪುರದಲ್ಲಿ ನಾಗರಿಕರ ಅಹವಾಲು ಆಲಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಮಾತುಗಳನ್ನು ಕೇಳಿದರೆ ನಿಮಗೊಂದು ಸ್ಪಷ್ಟತೆ ಸಿಗಬಹುದು. ಇಲ್ಲಿದೆ ಓದಿ:
ಶಾಸಕ ಸೋಮಶೇಖರ ಅವರು ಎರಡು ಮೂರು ಬಾರಿ ನನ್ನ ಭೇಟಿ ಮಾಡಿ ಕ್ಷೇತ್ರದ ಸಮಸ್ಯೆ ಬಗೆಹರಿಸಬೇಕು ಎಂದು ಕೇಳಿಕೊಂಡರು.
ಯಶವಂತಪುರ ಕ್ಷೇತ್ರದ ಜನರ ಸಮಸ್ಯೆ ಬಗೆಹರಿಸಬೇಕು ಎಂದು ಸರ್ಕಾರದ ಅಧಿಕಾರಿಗಳನ್ನು ಕರೆದುಕೊಂಡು ಬಂದಿದ್ದೇನೆ.
ಕನಕಪುರ ರಸ್ತೆ ಬೇರೆ ಸ್ವರೂಪ ನೀಡಲು ನೀವು ಹೋರಾಟ ಮಾಡಿಕೊಂಡು ಬಂದಿದ್ದೀರಿ.
ನೀವು ಸ್ವಾರ್ಥಕ್ಕೆ ಏನೂ ಕೇಳಿಲ್ಲ. ಸಮಸ್ಯೆ ಪರಿಹಾರ ಕೇಳಿದ್ದೀರಿ. ಸೌಲಭ್ಯ ಕೇಳಿದ್ದೀರಿ. ಸೋಮಶೇಖರ್ ಈ ಮೊದಲೇ ನನ್ನ ಗಮನಕ್ಕೆ ತಂದಿದ್ದಾರೆ. ರಾಜಕೀಯ ಪಕ್ಕಕ್ಕಿಟ್ಟು ನಿಮ್ಮ ಸಮಸ್ಯೆಗೆ ಕಿವಿಗೊಡುತ್ತೇನೆ. ನೀವು ಕೇಳಿದ್ದೆಲ್ಲ ಸಿಗುತ್ತೆ ಅನ್ನಲ್ಲ. ಆದರೆ ಗರಿಷ್ಠ ಪ್ರಮಾಣದಲ್ಲಿ ಬಗೆಹರಿಸುತ್ತೇನೆ.
ಪ್ರತಿ ಸಮಸ್ಯೆಗೂ ಪರಿಹಾರ ಇದೆ. ನಿಮ್ಮ ಸಮಸ್ಯೆಗೆ ಪರಿಹಾರ ಕೊಡಲು ಇಲ್ಲಿಗೆ ಬಂದಿದ್ದೇನೆ. ಸರಕಾರ ನಿಮ್ಮ ಜತೆ ಇದೆ.
ಸಮರ್ಪಕ ರಸ್ತೆ, ಒಳಚರಂಡಿ, ಸುಗಮ ವಾಹನ ಸಂಚಾರ, ಸರಕಾರಿ ಆಸ್ಪತ್ರೆ, ಅರಣ್ಯ ಇಲಾಖೆಯಿಂದ ಬಿಡಿಎ ನಿವೇಶನ ಸ್ವಾಧೀನ, ರಸ್ತೆ ಅಗಲೀಕರಣ, ಕಸ ವಿಲೇವಾರಿ ಘಟಕ, ಬಹುಮಹಡಿ ಪಾರ್ಕಿಂಗ್, ಬಿಎಂಟಿಸಿ ಬಸ್ ಡಿಪೋ, ಬಿಬಿಎಂಪಿ ಅನುಮೋದಿತ ಬಡಾವಣೆಗಳನ್ನು ಬಿಬಿಎಂಪಿಗೆ ಹಸ್ತಾಂತರ, ಸುಸಜ್ಜಿತ ಶಾಲೆ ಮತ್ತಿತರ ಸೌಲಭ್ಯಗಳಿಗಾಗಿ ಮನವಿ ಮಾಡಿದ್ದೀರಿ.
ಇಲ್ಲಿನ ಜನರ ಸಮಸ್ಯೆ ಬಗ್ಗೆ ಸೋಮಶೇಖರ್ ಅವರಿಂದ ಲಿಖಿತ ರೂಪದಲ್ಲಿ ಮಾಹಿತಿ ಪಡೆದಿದ್ದೆ. ಈ ಭಾಗದ ಖಾತೆ ವಿಚಾರ ಬಗ್ಗೆ ಕೇಳಿದ್ದೀರಿ. ಈ ಕೆಲಸ ಮೊದಲು ಮಾಡುವುದಾಗಿ ತುಷಾರ್ ಗಿರಿನಾಥ್ ಅವರು ಮಾತು ಕೊಟ್ಟಿದ್ದಾರೆ.
ಇಲ್ಲಿ ನೀರು ಸರಬರಾಜು, ಪಾಲಿಕೆ ಸೇರಿದಂತೆ ಎಲ್ಲಾ ಇಲಾಖೆ ಅಧಿಕಾರಿಗಳು ಇಲ್ಲಿ ಬಂದಿದ್ದು ನಿಮ್ಮ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ.
ಉತ್ತರಹಳ್ಳಿ ಕ್ಷೇತ್ರದ ಅಪಾರ್ಟ್ ಮೆಂಟ್ ಸಂಸ್ಥೆ ಪದಾಧಿಕಾರಿಗಳ ಬಗ್ಗೆ ಸರ್ಕಾರ ಹೆಚ್ಚಿನ ಕಾಳಜಿ ವಹಿಸಿದೆ. ನೀವು ಉತ್ತಮ ತೆರಿಗೆದಾರರು ನಿಮ್ಮ ಹಿತ ಕಾಯಲು ಸರ್ಕಾರ ಬದ್ಧ.
ಸೋಮಶೇಖರ್ ಅವರು ಈ ಭಾಗಕ್ಕೆ ಮೆಟ್ರೋ ತರಬೇಕು ಎಂದು ನಮ್ಮ ಸರ್ಕಾರದ ಅವಧಿಯಲ್ಲಿ ಒತ್ತಡ ಹಾಕಿದ್ದರು. ಬೆಂಗಳೂರು ದಕ್ಷಿಣ ಕ್ಷೇತ್ರದ ಜೊತೆಗೆ ಇದು ಬಹಳ ದೊಡ್ಡ ಕ್ಷೇತ್ರವಾಗಿದೆ.
ಮುಂದಿನ ದಿನಗಳಲ್ಲಿ ಅಧಿಕಾರಿಗಳ ಆಂತರಿಕ ಸಭೆ ಮಾಡಿ ಯಾವ ಕೆಲಸ ಆಗುತ್ತದೆ, ಯಾವುದು ಆಗುವುದಿಲ್ಲ ಎಂದು ನಿಮಗೆ ಮಾಹಿತಿ ನೀಡಲಾಗುವುದು.
ಎಲ್ಲಾ ಕೆಲಸ ಆಗದಿದ್ದರೂ ಸಾಧ್ಯವಾದಷ್ಟು ಕೆಲಸ ಮಾಡಿಕೊಡುತ್ತೇವೆ.
ಆಗಸ್ಟ್ 30ರಂದು ಗೃಹಲಕ್ಷ್ಮಿ ಯೋಜನೆ ಜಾರಿ ಮಾಡಲಾಗುತ್ತಿದೆ. ಕಳೆದ ಚುನಾವಣೆಯಲ್ಲಿ ಈ ಕ್ಷೇತ್ರದ ಜನ ನಮಗೆ ಬೆಂಬಲ ನೀಡಲಿಲ್ಲ.
ಜನ ನಮ್ಮ ಮೇಲೆ ವಿಶ್ವಾಸ ಇಟ್ಟು ಅಧಿಕಾರ ನೀಡಿದ್ದು, ಬೆಂಗಳೂರು ಹಾಗೂ ರಾಜ್ಯಕ್ಕೆ ಹೊಸ ಸ್ವರೂಪ ನೀಡಲು ಬದ್ಧವಾಗಿದೆ.
ಇಲ್ಲಿನ ಜನ ಕಸದ ಘಟಕದ ಬಗ್ಗೆ ಸಮಸ್ಯೆ ಹೇಳಿಕೊಂಡಿದ್ದಾರೆ. ಈ ವಿಚಾರವನ್ನು ನಾವು ಪರಿಶೀಲನೆ ಮಾಡುತ್ತೇವೆ.
ನಮ್ಮ ಸರ್ಕಾರದ ಮುಂದೆ ಮೂರು ಸವಾಲುಗಳಿವೆ. ಪೇರಿಫೆರಲ್ ರಸ್ತೆ, ಮೆಟ್ರೋ ವಿಸ್ತರಣೆ, ಹೊಸ ಬಡಾವಣೆಗೆ ಮೂಲಸೌಕರ್ಯ, ಸಂಚಾರ ದಟ್ಟಣೆ ನಿಯಂತ್ರಣ ನಮ್ಮ ಪ್ರಮುಖ ಆದ್ಯತೆ ಇದೆ.
ಇವುಗಳನ್ನು ಹೇಗೆ ಬಗೆಹರಿಸಬೇಕು ಎಂದು ಪರಿಶೀಲನೆ ಮಾಡುತ್ತಿದ್ದೇವೆ. ಎಲ್ಲವೂ ಒಂದೇ ದಿನದಲ್ಲಿ ಆಗುವುದಿಲ್ಲ. ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಟನಲ್ ರಸ್ತೆ ಮಾಡಲು ಯೋಜನೆ ರೂಪಿಸುತ್ತಿದ್ದೇವೆ. ಇದಕ್ಕೆ 50 ಸಾವಿರ ಕೋಟಿ ಅಗತ್ಯವಿದೆ. ನಮಗೆ ತೆರಿಗೆ ಮೂಲಕ ಬರುತ್ತಿರುವ ಆದಾಯ ಕೇವಲ 3 ಸಾವಿರ ಕೋಟಿ.
ಕೆಲವರಿಂದ ತೆರಿಗೆ ವಂಚನೆ ಆಗುತ್ತಿದೆ. ಇದನ್ನು ಸರಿಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.
ಬೆಂಗಳೂರಿನಲ್ಲಿ ಓದಿ, ಬೆಳೆದು, ರಾಜಕಾರಣ ಮಾಡುತ್ತಿದ್ದು, ಈ ನಗರದ ಮೇಲೆ ವಿಶೇಷ ಕಾಳಜಿ ಇದೆ. ಬೆಂಗಳೂರಿನಲ್ಲಿ ಬದಲಾವಣೆ ತರಲು ನಾನು ಈ ಜವಾಬ್ದಾರಿ ಪಡೆದಿದ್ದೇನೆ.
ಜನ ನಮ್ಮ ಮೇಲೆ ವಿಶ್ವಾಸ ಇಟ್ಟು ಹೊಸ ರೂಪ ನೀಡಲು ಅನೇಕ ಕಾರ್ಯಕ್ರಮ ರೂಪಿಸುತ್ತಿದ್ದೇವೆ.
ನಮ್ಮ ಸರ್ಕಾರ ಈಗಾಗಲೇ ಕೊಟ್ಟ ಐದು ಗ್ಯಾರಂಟಿ ಯೋಜನೆಗಳಿಗೆ ಮೊದಲ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ. ಆ ಪೈಕಿ ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ ಹಾಗೂ ಗೃಹಲಕ್ಷ್ಮಿ ಯೋಜನೆ ಜಾರಿ ಮಾಡಲಾಗಿದೆ.
ನಿಮ್ಮ ಸಮಸ್ಯೆಗಳಿಗೆ ಪರಿಹಾರ ನೀಡಿ ಸರ್ಕಾರ ನಿಮ್ಮ ಜೊತೆ ನಿಲ್ಲಲಿದೆ.
*ನಾವು ಗೊಬ್ಬರ ಹಾಕಿ ಬೆಳೆಸಿದ ಗಿಡ ದೊಡ್ಡ ಮರವಾಗಿದೆ:*
ನನ್ನದು ಮತ್ತು ಎಸ್ ಟಿ ಸೋಮಶೇಖರ್ ಅವರದು 35 ವರ್ಷದ ಸ್ನೇಹ. ಅವರನ್ನು ನೀರು, ಗೊಬ್ಬರ ಹಾಕಿ ರಾಜಕೀಯವಾಗಿ ಬೆಳೆಸಿದ್ದೇವೆ. ಹಣ್ಣು ಬಿಟ್ಟಿದೆ. ಅದನ್ನು ಬೇರೆಯವರು ಕಿತ್ಕೊಂಡು ತಿನ್ನೋದಕ್ಕೆ ಬಿಡಬಾರದು ಅನ್ನೋದು ಭಾವನೆ.
ಸೋಮಶೇಖರ್ ಇತ್ತೀಚೆಗೆ ಬಹಳ ಸುದ್ದಿಯಲ್ಲಿದ್ದಾರೆ. ನೀವು ಅವರು ಕೂತು ತೀರ್ಮಾನ ಮಾಡಿಕೊಳ್ಳಿ. ನಮ್ಮ ಸರಕಾರ ಅಂತೂ 5 ವರ್ಷ ಇರ್ತದೆ. ನೀವು ಪ್ರಜ್ಞಾವಂತರಿದ್ದೀರಿ. ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಿರಿ ಅಂತ ಗೊತ್ತಿದೆ.
ನಾನು ಕನಕಪುರಕ್ಕೆ ಹೋಗಲು ಆಗಿಲ್ಲ. ಆದರೆ ಈ ಸೋಮಶೇಖರ್ ಎರಡು ಬಾರಿ ನನ್ನನ್ನು ನಿಮ್ಮ ಕ್ಷೇತ್ರಕ್ಕೆ ಎಳೆದುಕೊಂಡು ಬಂದಿದ್ದಾರೆ. ನಿಮ್ಮ ಸಮಸ್ಯೆ ಬಗ್ಗೆ ನಮಗೂ ಕಾಳಜಿ ಇದೆ.
ಈ ಬಾರಿಯ ಚುನಾವಣೆಯಲ್ಲಿ ನೀವು ಕಾಂಗ್ರೆಸ್ ಗೆ ಬೆಂಬಲ ನೀಡಲಿಲ್ಲ. ಮುಂದಿನ ಚುನಾವಣೆಯಲ್ಲಿ ನೀವು ಮುಂದೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಬೆಂಬಲ ನೀಡಬೇಕು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ