*ಕಾವೇರಿ ವಿಚಾರದಲ್ಲಿ ನಮ್ಮ ರೈತರ ಹಿತ ಹಾಗೂ ಕುಡಿಯುವ ನೀರು ಅಗತ್ಯ ರಕ್ಷಣೆಗೆ ಬದ್ಧ; ಡಿಸಿಎಂ ಡಿ.ಕೆ. ಶಿವಕುಮಾರ್*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ತಮಿಳುನಾಡು 24 ಸಾವಿರ ಕ್ಯೂಸೆಕ್ ನೀರು ಬಿಡಲು ಪಟ್ಟು ಹಿಡಿದಿತ್ತು. ಈಗಿನ ಪರಿಸ್ಥಿತಿಯಲ್ಲಿ ಇಷ್ಟು ನೀರು ಬಿಡಲು ಅಸಾಧ್ಯ ಎಂದು ನಮ್ಮ ಅಧಿಕಾರಿಗಳು ವಾದ ಮಂಡಿಸಿದ್ದಾರೆ. ನಾವು 3 ಸಾವಿರ ಕ್ಯೂಸೆಕ್ ನೀರು ಬಿಡುವುದಾಗಿ ಹೇಳಿದೆವು. ಪರಿಣಾಮ ಪ್ರಾಧಿಕಾರ 5 ಸಾವಿರ ಕ್ಯೂಸೆಕ್ ನೀರು ಬಿಡಲು ನಿರ್ದೇಶಿಸಿದೆ. ನಾವು ಅವರ ನಿರ್ಧಾರ ಗೌರವಿಸುತ್ತೇವೆ. ಅವರು ನಮ್ಮ ಆಣೆಕಟ್ಟುಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅಧ್ಯಯನ ಮಾಡಲಿ ಎಂದು ಮನವಿ ಮಾಡಿದ್ದೇವೆ. ಅವರು ಬಂದು ಪರಿಶೀಲನೆ ಮಾಡಿ ವಾಸ್ತವಾಂಶ ಅರಿಯಲಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಡಿ.ಕೆ.ಶಿವಕುಮಾರ್, ನಮಗೆ ಕುಡಿಯುವ ಉದ್ದೇಶಕ್ಕೆ ನೀರಿಲ್ಲ. ಹೀಗಾಗಿ ತಮಿಳುನಾಡಿನವರು ಸ್ವಲ್ಪ ಮೃದುಧೋರಣೆ ತಾಳಬೇಕು. ಕರ್ನಾಟಕದಲ್ಲಿ ಮಳೆ ಕೊರತೆ ಬಗ್ಗೆ ತಮಿಳುನಾಡಿನವರಿಗೆ ಅರಿವಿದೆ. ಕಳೆದ ವರ್ಷ ಅವರು ನಿಗದಿಗಿಂತ ಹೆಚ್ಚು ನೀರು ಬಳಕೆ ಮಾಡಿದ್ದರು. ಕಳೆದ ವರ್ಷ ಅವರು 80% ಹೆಚ್ಚುವರು ನೀರು ಬಳಸಿದ್ದಾರೆ. ಅವರ ನೀರನ್ನು ಅವರು ಯಾವ ಕಾರಣಕ್ಕೆ ಬಳಸುತ್ತಾರೆ ಎಂದು ನಾವು ಪ್ರಶ್ನಿಸುವುದಿಲ್ಲ. ಸಂಕಷ್ಟದ ಸಮಯದಲ್ಲಿ ಅವರು ಸಮಯೋಚಿತವಾಗಿ ನೀರು ಬಳಸಬಹುದಿತ್ತು ಎಂದರು.
ಇಂತಹ ಸಂಕಷ್ಟದ ಸಮಯದಲ್ಲಿ ಮೇಕೆದಾಟು ಯೋಜನೆಯೊಂದೇ ಪರಿಹಾರವಾಗಿದೆ. ಈ ಬಗ್ಗೆ ಪ್ರಾಧಿಕಾರದ ಮುಂದೆ ನಾವು ಪ್ರಸ್ತಾಪ ಮಾಡುತ್ತೇವೆ. ಈ ಯೋಜನೆಯಿಂದ ಕರ್ನಾಟಕಕ್ಕಿಂತ ತಮಿಳುನಾಡಿಗೆ ಹೆಚ್ಚು ಅನುಕೂಲವಾಗಲಿದೆ. ಮೇಕೆದಾಟು ಇದ್ದಿದ್ದರೆ ನಾವು ನೀರು ಶೇಖರಣೆ ಮಾಡಿಕೊಳ್ಳಬಹುದಾಗಿತ್ತು. ಈ ಆಣೆಕಟ್ಟಿನಿಂದ ನಾವು ನೀರು ಬಳಸಿಕೊಳ್ಳಲು ಆಗುವುದಿಲ್ಲ. ಸಂಕಷ್ಟದ ಸಮಯದಲ್ಲಿ ತಮಿಳುನಾಡಿಗೆ ನೀರು ಬಿಡಲು ಅನುಕೂಲವಾಗುತ್ತದೆ. ಈ ವಿಚಾರದ ಬಗ್ಗೆ ತಮಿಳುನಾಡಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತೇವೆ ಎಂದು ತಿಳಿಸಿದ್ದಾರೆ.
ವಿರೋಧ ಪಕ್ಷಗಳು ನೀರು ಹರಿಸಬೇಡಿ ಎಂದು ಹೇಳುತ್ತಿವೆ. ಆ ರೀತಿ ಮಾಡಲು ಆಗುವುದಿಲ್ಲ. ನಾವು ಏನೇ ಮಾಡಿದರೂ, ಮಾತನಾಡಿದರೂ ನ್ಯಾಯಾಲಯವನ್ನು ಗಮನದಟ್ಟುಕೊಂಡು ಮಾಡಬೇಕು. ಕಾನೂನು ತಜ್ಞರ ಜತೆ ಚರ್ಚೆ ಮಾಡಿದಾಗ ಮೊದಲು ಪ್ರಾಧಿಕಾರದ ಮುಂದೆ ವಾಸ್ತವಾಂಶ ಇಟ್ಟು, ನಂತರ ಸುಪ್ರೀಂ ಕೋರ್ಟ್ ಮೊರೆ ಹೋಗೋಣ ಎಂದು ಹೇಳಿದ್ದಾರೆ. ಪ್ರಾಧಿಕಾರದ 23ನೇ ಸಭೆಯಲ್ಲಿ ತಮಿಳುನಾಡು ಹೆಚ್ಚುವರಿ ಕಾವೇರಿ ನೀರನ್ನು ಬಳಸಿಕೊಂಡಿರುವ ಬಗ್ಗೆ ಪ್ರಸ್ತಾಪಿಸಿದ್ದೇವೆ. ಮತ್ತೆ ಮಳೆಯಾಗುವ ನಿರೀಕ್ಷೆ ಇತ್ತು. ಆದರೆ ಮಳೆ ಆಗಿಲ್ಲ.
ಸುಪ್ರೀಂ ಕೋರ್ಟ್ ನಲ್ಲಿ ಇಂದು ಈ ವಿಚಾರ ಚರ್ಚೆ ಆಗಿಲ್ಲ, ಮುಂದಿನ ಬುಧವಾರ ವಿಚಾರಣೆಗೆ ತೆಗೆದುಕೊಳ್ಳುವುದಾಗಿ ಕೋರ್ಟ್ ತಿಳಿಸಿದೆ ಎಂದರು.
ಪ್ರಶ್ನೋತ್ತರ:
ರಾಜ್ಯದಿಂದ ಹೆಚ್ಚುವರಿ ನೀರು ಬಿಡಲಾಗುತ್ತಿದೆ ಎಂದು ಕೇಳಿದಾಗ, ಪ್ರಾಧಿಕಾರ ನೀಡಿರುವ ದಿನಾಂಕದ ವೇಳೆಗೆ ಎಷ್ಟು ನೀರು ಬಿಳಿಗುಂಡ್ಲುವಿಗೆ ಹರಿಯಲಿದೆ ಎಂಬುದು ಮುಖ್ಯ. ನಿನ್ನೆ ಬೆಂಗಳೂರಿನಲ್ಲಿ ಮಳೆ ಆಗಿರುವ ಕಾರಣ ಅರ್ಕಾವತಿ ಮೂಲಕ ಆ ನೀರು ಕೂಡ ಹೋಗಿರಲಿದೆ ಎಂದು ತಿಳಿಸಿದರು.
ಬೆಂಗಳೂರಿಗೆ ಮುಂದೆ ಕುಡಿಯುವ ನೀರಿಗೆ ಸಮಸ್ಯೆ ಆಗಲಿದೆಯೇ ಎಂದು ಕೇಳಿದ ಪ್ರಶ್ನೆಗೆ, ಬೆಂಗಳೂರು, ಮೈಸೂರು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಕುಡಿಯಲು ಕಾವೇರಿ ನೀರು ಅವಲಂಬಿಸಿದ್ದೇವೆ. ನಾವು ಅದನ್ನು ಕಾಪಾಡುತ್ತೇವೆ. ನಾವು ರೈತರ ಹಿತ ಕಾಯಲು ಅವರಿಗೆ ಕೆಲವು ಸೂಚನೆ ನೀಡಿದ್ದೇವೆ. ರಾಜ್ಯದ ಹಿತಕ್ಕೆ ನಾವು ಬದ್ಧ. ಕಾನೂನಿಗೆ ಗೌರವ ನೀಡುವುದು ಅಷ್ಟೇ ಮುಖ್ಯ. ದೆಹಲಿಗೆ ಸರ್ವಪಕ್ಷ ನಿಯೋಗ ಕೊಂಡೊಯ್ಯುವ ಬಗ್ಗೆ ಸದ್ಯದಲ್ಲೇ ತಿಳಿಸುತ್ತೇವೆ ಎಂದು ಹೇಳಿದರು.
ಈ ವಿಚಾರವಾಗಿ ಬಿಜೆಪಿ ಹಾಗೂ ಜೆಡಿಎಸ್ ಪ್ರತಿಭಟನೆ ಮಾಡುವ ಬಗ್ಗೆ ಕೇಳಿದಾಗ, ರಾಜಕೀಯದಲ್ಲಿ ಅವರ ನಿರ್ಧಾರವನ್ನು ನಾವು ಪ್ರಶ್ನೆ ಮಾಡುವುದಿಲ್ಲ. ಅವರಿಗೆ ವಾಸ್ತವಾಂಶ ಗೊತ್ತಿದೆ. ಬೊಮ್ಮಾಯಿ ಅವರು ಜಲಸಂಪನ್ಮೂಲ ಸಚಿವರಾಗಿದ್ದರು. ಆದರೂ ಮಾತನಾಡುತ್ತಿದ್ದಾರೆ. ಅವರನ್ನು ಕರೆದು ಸಭೆ ಮಾಡಿ ಚರ್ಚೆ ಮಾಡಿದ್ದೇವೆ. ಸಭೆಯಲ್ಲಿ ಏನು ಚರ್ಚೆ ಮಾಡಿದ್ದೇವೆ ಎಂದು ಹೇಳುವುದಿಲ್ಲ. ನಾವಿಬ್ಬರೂ ಸೇರಿ ರಾಜ್ಯದ ಹಿತ ಕಾಯೋಣ. ಸರ್ವಪಕ್ಷ ನಿಯೋಗ ಭೇಟಿಗೆ ದಿನಾಂಕ ಕೇಳುತ್ತೇವೆ ಎಂದು ತಿಳಿಸಿದರು.
ಸಂತೋಷ್ ರಾಷ್ಟ್ರೀಯ ನಾಯಕರಂತೆ ಮಾತಾಡಬೇಕು:
ಸಂತೋಷ್ ಅವರು ತಮ್ಮ ಸಂಪರ್ಕದಲ್ಲಿ 40-45 ಕಾಂಗ್ರೆಸ್ ಶಾಸಕರಿದ್ದಾರೆ ಎಂಬ ಮಾತಿನ ಬಗ್ಗೆ ಕೇಳಿದಾಗ, ನಾನು ಸಂತೋಷ್ ಅವರನ್ನು ರಾಷ್ಟ್ರೀಯ ನಾಯಕರು ಎಂದು ಭಾವಿಸಿದ್ದೇನೆ. ಅವರು ಈಶ್ವರಪ್ಪ ಹಾಗೂ ಸಿ.ಟಿ ರವಿ ಮಾತನಾಡಿದಂತೆ ಮಾತನಾಡಿದರೆ ಏನೂ ಮಾಡಲಾಗುವುದಿಲ್ಲ. ಅವರು 136 ಶಾಸಕರ ಜತೆ ಸಂಪರ್ಕ ಇಟ್ಟುಕೊಳ್ಳಲಿ. ಅದರಲ್ಲಿ ತಪ್ಪೇನಿದೆ? ದೇಶ ಆಳುತ್ತಿರುವ ಪಕ್ಷದ ನಾಯಕರು ಅವರು. ಅವರ ಮಾತಿಗೆ ತೂಕ ಇರುತ್ತದೆ ಹೀಗಾಗಿ ಅವರು ಈ ರೀತಿ ಮಾತನಾಡಬಾರದು ಎಂದು ಮನವಿ ಮಾಡುತ್ತೇನೆ. ಅವರ ಘನತೆಗೆ ಧಕ್ಕೆಯಾಗಬಾರದು. ಕಾಂಗ್ರೆಸ್ ಪಕ್ಷದ ಶಾಸಕರು ಅವರ ಸಂಪರ್ಕದಲ್ಲಿರುವ ಬಗ್ಗೆ ಮಾಹಿತಿ ಇಲ್ಲ. ಈ ಹಿಂದೆ ನಮ್ಮ ವಿರುದ್ಧ ಷಡ್ಯಂತ್ರ ಮಾಡಲು ಸಭೆ ನಡೆದಿತ್ತು, ಈಗ ತಣ್ಣಗಾಗಿದೆ. ಹೆಚ್ಚಿನ ಮಾಹಿತಿಗೆ ಶಾಸಕರನ್ನೇ ಕೇಳಿ” ಎಂದು ತಿಳಿಸಿದರು.
ಒಂದು ದೇಶ ಒಂದು ಚುನಾವಣೆ ಬಗ್ಗೆ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ನೇತೃತ್ವದಲ್ಲಿ ಸಮಿತಿ ರಚನೆ ಬಗ್ಗೆ ಕೇಳಿದಾಗ, ಈ ವಿಚಾರ ಬಹಳ ಚರ್ಚೆ ಆಗುತ್ತಿದೆ. ಅನೇಕ ರಾಜ್ಯಗಳಲ್ಲಿ ಬೇರೆ ಸಮಯದಲ್ಲಿ ಚುನಾವಣೆ ನಡೆಯುತ್ತಿದೆ. ಕಾನೂನು ಸಮಿತಿ ಕೂಡ ಈ ಬಗ್ಗೆ ಚರ್ಚೆ ಮಾಡಿವೆ. ಈ ಬಗ್ಗೆ ನಮ್ಮ ರಾಷ್ಟ್ರೀಯ ನಾಯಕರು ಉತ್ತರಿಸುತ್ತಾರೆ ಎಂದು ತಿಳಿಸಿದರು.
ಪ್ರಜ್ವಲ್ ರೇವಣ್ಣ ಅವರ ಅನರ್ಹತೆ ವಿಚಾರವಾಗಿ ಕೇಳಿದಾಗ, ಎಲ್ಲಾ ಶಾಸಕರು ಸಂಸದರಿಗೆ ಇದು ಎಚ್ಚರಿಕೆ ಗಂಟೆ. ಜನಪ್ರತಿನಿಧಿಗಳು ಬಹಳ ಜಾಗರೂಕವಾಗಿ ಇರಬೇಕು. ತೀರ್ಪು ಏನಿದೆ ಎಂದು ನೋಡಿಲ್ಲ. ಆ ಬಗ್ಗೆ ಪರಿಶೀಲನೆ ಮಾಡಿ ಮಾತನಾಡುತ್ತೇನೆ ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ