Kannada NewsKarnataka NewsLatestPolitics

ಕೇಂದ್ರದ ಮೇಲೆ ಒತ್ತಡ ತಂದು ಮೇಕೆದಾಟು ಯೋಜನೆ ಜಾರಿಗೊಳಿಸಲಿ; ರಾಜ್ಯ ಬಿಜೆಪಿ ನಾಯಕರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಸವಾಲು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: “ಬಿಜೆಪಿ ಸ್ನೇಹಿತರು ಕೆಆರ್ ಎಸ್ ಆಣೆಕಟ್ಟಿಗೆ ಭೇಟಿ ನೀಡುವ ಮೊದಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಮೇಕೆದಾಟು ಯೋಜನೆ ಜಾರಿಗೊಳ್ಳುವಂತೆ ನೋಡಿಕೊಳ್ಳಲಿ. ಆಗ ಬಿಜೆಪಿಯವರ ನಿಜವಾದ ಬಣ್ಣ ಬಯಲಿಗೆ ಬರುತ್ತದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ವಿಧಾನಸೌಧದಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಗುರುವಾರ ಪ್ರತಿಕ್ರಿಯಿಸಿದ ಅವರು, “ನಾವು ಮೇಕೆದಾಟು ಪಾದಯಾತ್ರೆ ಮಾಡಿದ ನಂತರ ಬೊಮ್ಮಾಯಿ ಅವರು ಬಜೆಟ್ ನಲ್ಲಿ 1 ಸಾವಿರ ಕೋಟಿ ಹಣ ಇಟ್ಟಿದ್ದು ಏಕೆ? ಕೇಂದ್ರ ಸರ್ಕಾರದಿಂದ ನಿರಾಕ್ಷೇಪಣಾ ಪತ್ರ ಏಕೆ ತರಲಿಲ್ಲ? ಮೊದಲು ಈ ಕೆಲಸ ಮಾಡಲಿ, ಆಗ ಬಿಜೆಪಿಯವರ ಹೋರಾಟಕ್ಕೆ ಬೆಲೆ ಬರುತ್ತದೆ” ಎಂದರು.

ಕಾವೇರಿ ನೀರಿನ ವಿಚಾರವಾಗಿ ಸರ್ವಪಕ್ಷ ನಿಯೋಗ ಯಾವಾಗ ಕರೆದುಕೊಂಡು ಹೋಗುತ್ತೀರ ಎನ್ನುವ ಪ್ರಶ್ನೆಗೆ “ನಾವು ಪ್ರಧಾನಿಯವರ ಭೇಟಿಗೆ ಪತ್ರ ಬರೆದಿದ್ದೇವೆ. ಅವರು ದಿನಾಂಕ ನಿಗಧಿ ಮಾಡಿದ ತಕ್ಷಣ ಹೋಗುತ್ತೇವೆ. ಬಿಜೆಪಿಯವರಿಗೆ ಸುದ್ದಿಯಲ್ಲಿ ಇರಬೇಕು ಎನ್ನುವ ಹಂಬಲ ಅದಕ್ಕೆ ಅನವಶ್ಯಕ ಹೋರಾಟಗಳನ್ನು ಮಾಡುತ್ತಿದ್ದಾರೆ. ನೀರಿನ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಮಾಡಲಿ. ಕುಡಿಯುವ ನೀರು ನಮ್ಮ ಮೊದಲ ಆದ್ಯತೆ” ಎಂದು ಹೇಳಿದರು.

ಭಾರತ ಜೋಡೋ ವಿಚಾರವಾಗಿ ಮಾತನಾಡಿ, “ಭಾರತ್ ಜೋಡೋ ಯಾತ್ರೆಗೆ ಇಂದಿಗೆ 1 ವರ್ಷವಾಗುತ್ತಿದೆ. ಇದರ ಸಂಭ್ರಮಾಚರಣೆಯನ್ನು ರಾಮನಗರದಲ್ಲಿ ಸಂಜೆ 5 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ. ಸಚಿವ ಸಂಪುಟ ಸಭೆ ಇರುವ ಕಾರಣ ಜಿಲ್ಲಾ ಮಂತ್ರಿಗಳಿಗೆ ಎರಡು ದಿನ ಕಾಲಾವಕಾಶ ನೀಡಿದ್ದೇವೆ” ಎಂದು ತಿಳಿಸಿದರು.

ಕುಮಾರಸ್ವಾಮಿ, ಯೋಗಿಶ್ವರ್ ಒಂದಾಗಿರೋದು ಸಂತೋಷದ ವಿಷಯ:

ಡಿ.ಕೆ.ಸುರೇಶ್ ಅವರ ನೇತೃತ್ವದಲ್ಲಿ ಲೋಕಸಭಾ ಚುನಾವಣೆಗೆ ಸಿದ್ದತೆ ನಡೆಯುತ್ತಿದೆಯೇ ಎನ್ನುವ ಪ್ರಶ್ನೆಗೆ “ಅವರ ಕ್ಷೇತ್ರದಲ್ಲಿ ಅವರು ಮಾಡಿಕೊಳ್ಳುತ್ತಿದ್ದಾರೆ. ಯಾರನ್ನು ಸೇರಿಸಿಕೊಳ್ಳಬೇಕು ಅನ್ನುವುದೆಲ್ಲ ಅವರಿಗೆ ಬಿಟ್ಟಿದ್ದು. ಸಿ.ಪಿ.ಯೋಗೇಶ್ವರ್ ಮತ್ತು ಕುಮಾರಸ್ವಾಮಿ ಇಬ್ಬರೂ ಒಂದಾಗುತ್ತಿದ್ದಾರೆ ಎನ್ನುವ ಸುದ್ದಿ ಕೇಳಿ ಸಂತೋಷವಾಯಿತು” ಎಂದು ತಿಳಿಸಿದರು.

ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಅವರು ಹಾಗೂ ಶಿವರಾಮೇಗೌಡ ಅವರು ನಿಮ್ಮನ್ನು ಭೇಟಿ ಮಾಡಿದ ಉದ್ದೇಶ ಏನು ಎನ್ನುವ ಪ್ರಶ್ನೆಗೆ “ನಾನು ಅದನ್ನು ಹೇಳಲು ಆಗುವುದಿಲ್ಲ, ಅವರ ಒಂದಷ್ಟು ಕೆಲಸ ಕಾರ್ಯಗಳಿಗಾಗಿ ಭೇಟಿ ಮಾಡಲು ಬಂದಿದ್ದರು, ತಪ್ಪೇನಿದೆ?” ಎಂದರು.

ಬೈಂದೂರಿನ ಮಾಜಿ ಶಾಸಕ ಸುಕುಮಾರ್ ಶೆಟ್ಟಿ ಹಾಗೂ ಗೋಪಾಲ್ ಪೂಜಾರಿ ಇವರ ನಡುವೆ ಸಂಧಾನ ಮಾಡಿಸಿದ್ದೀರಾ ಎನ್ನುವ ಪ್ರಶ್ನೆಗೆ “ನಾವೆಲ್ಲಾ ಸ್ನೇಹಿತರು, ಪ್ರಸ್ತುತ ವಿದ್ಯಮಾನಗಳ ಬಗ್ಗೆ ಚರ್ಚೆ ಮಾಡಿದೆವು. ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದ ಅಭಿವೃದ್ದಿಯ ವಿಚಾರ ಮಾತನಾಡಲಾಯಿತು” ಎಂದು ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button