ತಿರುಪತಿ ದೇಗುಲದಿಂದ ಸನಾತನ ಧರ್ಮ ಪ್ರಚಾರಕ್ಕೆ ವಿಶೇಷ ಕಾರ್ಯಕ್ರಮ; ಭಕ್ತರಿಗೆ ವಿಶೇಷ ಕೊಡುಗೆ
ಪ್ರಗತಿವಾಹಿನಿ ಸುದ್ದಿ, ತಿರುಪತಿ: ಸನಾತನ ಧರ್ಮದ ವ್ಯಾಪಕ ಪ್ರಚಾರಕ್ಕೆತಿರುಮಲ ತಿರುಪತಿ ದೇವಸ್ಥಾನ ಮುಂದಾಗಿದೆ.
‘ಶ್ರೀ ರಾಮಕೋಟಿ’ ಮಾದರಿಯಲ್ಲಿ ‘ಗೋವಿಂದ ಕೋಟಿ’ ಗೋವಿಂದ ನಾಮಾವಳಿ ಎಂಬ ಹೊಸ ಕಾರ್ಯಕ್ರಮವನ್ನು ಟಿಟಿಡಿ ಪ್ರಾರಂಭಿಸಿದೆ. ಈ ಕುರಿತು ಟಿಟಿಡಿ ಚೇರ್ಮನ್ ಭೂಮನ ಕರುಣಾಕರ ರೆಡ್ಡಿ ಮಾತನಾಡಿ, “ಯುವಜನರಲ್ಲಿ ಧಾರ್ಮಿಕ ಭಾವ ಹೆಚ್ಚಿಸಲು ಹಾಗೂ ಸನಾತನ ಧರ್ಮದ ಬಗ್ಗೆ ವ್ಯಾಪಕ ಪ್ರಚಾರದ ನಿಟ್ಟಿನಲ್ಲಿ ಈ ಕಾರ್ಯಕ್ರಮ ಸಹಾಯಕಾರಿಯಾಗಲಿದೆ” ಎಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಪರಿಚಯಿಸಲಾಗಿರುವ ‘ಗೋವಿಂದ ಕೋಟಿ’ ಕಾರ್ಯಕ್ರಮದಲ್ಲಿ ಕೋಟಿ ಬಾರಿ ಗೋವಿಂದ ನಾಮ ಬರೆದ ಮಕ್ಕಳು, ಯುವಕರು ಹಾಗೂ ಅವರ ಕುಟುಂಬದ ಸದಸ್ಯರಿಗೆ ತಿರುಮಲ ಬೆಟ್ಟದಲ್ಲಿ ಒಮ್ಮೆ ಶ್ರೀ ವೇಂಕಟೇಶನ ವಿಐಪಿ ಬ್ರೇಕ್ ದರ್ಶನ, 10,01,116 ಬಾರಿ ಗೋವಿಂದನಾಮಗಳನ್ನು ಬರೆದವರಿಗೆ ಶ್ರೀ ದರ್ಶನ ನೀಡಲಾಗುವುದು ಎಂದು ನೀಡುವುದಾಗಿ ಟಿಟಿಡಿ ಘೋಷಿಸಿದೆ.
ಎಲ್ ಕೆಜಿಯಿಂದ ಪಿಜಿ ವರೆಗಿನ ವಿದ್ಯಾರ್ಥಿಗಳಿಗೆ ಶ್ರೀವಾರಿ ಪ್ರಸಾದವಾಗಿ 20 ಕೋಟಿ ಭಗವದ್ಗೀತೆ ಪುಸ್ತಕಗಳನ್ನು ಉಚಿತವಾಗಿ ವಿತರಿಸುವುದಾಗಿಯೂ ಟಿಟಿಡಿ ಹೇಳಿದೆ. ಮಂಗಳವಾರ ನಡೆದ ಟಿಟಿಡಿ ನೂತನ ಟ್ರಸ್ಟಿಗಳ ಮಂಡಳಿ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಂಡು ಪ್ರಕಟಿಸಲಾಗಿದೆ.
ಸನಾತನ ಧರ್ಮದ ಕುರಿತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಪುತ್ರ ಹಾಗೂ ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆಯ ಬೆನ್ನಲ್ಲೇ ಟಿಟಿಡಿ ಈ ನಿರ್ಧಾರ ಕೈಗೊಂಡಿದೆ. ಇದೇ ವೇಳೆ ಟಿಟಿಡಿ ಅಧ್ಯಕ್ಷ ಭೂಮನ ಕರುಣಾಕರ ರೆಡ್ಡಿ ಅವರು ಉದಯನಿಧಿ ಸ್ಟಾಲಿನ್ ಹೇಳಿಕೆ ಖಂಡಿಸಿದ್ದು, ಸನಾತನ ಧರ್ಮ ಕೇವಲ ಒಂದು ಧರ್ಮವಾಗಿರದೆ ಅದೊಂದು ಜೀವನ ಪದ್ಧತಿಯಾಗಿದೆ. ಪ್ರತಿಯೊಂದು ದೇಶಕ್ಕೂ ಒಂದು ಸಂಸ್ಕೃತಿ, ಸಂಪ್ರದಾಯವಿದ್ದು ಅನ್ನು ಅರಿಯದೆ ಟೀಕಿಸಿ ಸಮಾಜದಲ್ಲಿ ಅಶಾಂತಿ ಉಂಟುಮಾಡುವುದು ಸರಿಯಲ್ಲ” ಎಂದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ