Kannada NewsKarnataka NewsLatestPolitics

ಜೆಡಿಎಸ್ ದುರ್ಬಲಗೊಳಿಸುವ ದುಷ್ಪ್ರಯತ್ನಕ್ಕೆ ಅವಕಾಶ ನೀಡಲಾರೆ: ಜೆಡಿಎಸ್ ಮಹತ್ವದ ಸಭೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಜೆಡಿಎಸ್ ಪಕ್ಷ ಬಲಿಷ್ಠವಾಗಿದೆ. ಅದನ್ನು ದುರ್ಬಲಗೊಳಿಸುವ ದುಷ್ಪ್ರಯತ್ನಕ್ಕೆ ಅವಕಾಶ ನೀಡುವುದಿಲ್ಲ. ಈ ಪ್ರಾದೇಶಿಕ ಪಕ್ಷವನ್ನು ಉಳಿಸಿಕೊಳ್ಳಲು ಅವಿರತವಾಗಿ ಹೋರಾಟ ಮಾಡುತ್ತೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಶಪಥಗೈದಿದ್ದಾರೆ.

ಅವರು ಅನಾರೋಗ್ಯದಿಂದ ಚೇತರಿಸಿಕೊಂಡ ನಂತರ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಜೆಪಿ ನಗರ ನಿವಾಸದಲ್ಲಿ ಪಕ್ಷದ ಪ್ರಮುಖರ ಮೊದಲ ಸಭೆ ನಡೆಸಿ, ರಾಜ್ಯದ ಜನ ಎದುರಿಸುತ್ತಿರುವ ಸಮಸ್ಯೆಗಳು, ಸಂಘಟನೆ ಹಾಗೂ ಮುಂಬರುವ ಲೋಕಸಭೆ ಚುನಾವಣೆ ಬಗ್ಗೆ ಮಹತ್ವದ ಸಮಾಲೋಚನೆ ನಡೆಸಿದರು. “ನಾನು ಬದುಕಿರುವಾಗಲೇ ಈ ಪಕ್ಷ ಅಧಿಕಾರಕ್ಕೆ ಬರುತ್ತದೆ. ಅದನ್ನು ನೋಡಿಯೇ ನೋಡುತ್ತೇನೆ” ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

ಪಕ್ಷದ ಸುದೀರ್ಘ ಸಭೆಯಲ್ಲಿ ಪಾಲ್ಗೊಂಡ ಕುಮಾರಸ್ವಾಮಿ ಅವರು, ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಾತನಾಡಿ, ಮುಖಂಡರಿಗೆ ಅಗತ್ಯ ಸಲಹೆ, ಸೂಚನೆಗಳನ್ನು ನೀಡಿದರು.

ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡರು, ಮಾಜಿ ಸಚಿವರಾದ ಹೆಚ್.ಡಿ.ರೇವಣ್ಣ, ಸಿ.ಎಸ್.ಪುಟ್ಟರಾಜು, ಸಾ.ರಾ.ಮಹೇಶ್, ಬಂಡೆಪ್ಪ ಕಾಶೆಂಪುರ, ಮಾಜಿ ಸಂಸದ ಕುಪೇಂದ್ರ ರೆಡ್ಡಿ, ಎಚ್.ಕೆ.ಕುಮಾರಸ್ವಾಮಿ ಸೇರಿದಂತೆ ಪಕ್ಷದ ಎಲ್ಲಾ ಹಾಲಿ ಶಾಸಕರು, ಮಾಜಿ ಶಾಸಕರು, ಹಿರಿಯ ಮುಖಂಡರು ಹಾಗೂ ಜಿಲ್ಲಾ ಅಧ್ಯಕ್ಷರು ಹಾಜರಿದ್ದ ಈ ಸಭೆಯಲ್ಲಿ ಉಭಯ ನಾಯಕರು ಸಭೆಯಲ್ಲಿ ಕೆಲವಾರು ಗಂಭೀರ ವಿಷಯಗಳನ್ನು ಹಂಚಿಕೊಂಡರು.

ಕಾವೇರಿ ಜಲ ಸಂಕಷ್ಟ, ಬರಗಾಲ ಹಾಗೂ ಅಘೋಷಿತ ಲೋಡ್ ಶೆಡ್ಡಿಂಗ್ ಬಗ್ಗೆಯೂ ಕೂಡ ಸುದೀರ್ಘ ಚರ್ಚೆ ನಡೆಯಿತಲ್ಲದೆ, ಜನಪರ ವಿಷಯಗಳನ್ನು ಇಟ್ಟುಕೊಂಡು ಸರಕಾರದ ವಿರುದ್ಧ ಹೋರಾಟ ರೂಪಿಸಬೇಕು ಎಂದು ಉಭಯ ನಾಯಕರು ಪಕ್ಷದ ಮುಖಂಡರಿಗೆ ಹೋರಾಟದ ದಿಕ್ಸೂಚಿ ನಿಗದಿ ಮಾಡಿದರು.

ಸೆ.10 ರಂದು ಬೃಹತ್ ಸಮಾವೇಶ:

ಮುಂಬರುವ ಲೋಕಸಭೆ, ಬಿಬಿಎಂಪಿ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಿಗೆ ಪಕ್ಷ ಸಜ್ಜುಗೊಳಿಸುವ ನಿಟ್ಟಿನಲ್ಲಿ ಸೆ.10ರಂದು ನಗರದ ಅರಮನೆ ಮೈದಾನದಲ್ಲಿ ನಡೆಯಲಿರುವ ಜೆಡಿಎಸ್ ಪಕ್ಷದ ಬೃಹತ್ ಸಂಘಟನಾ ಸಮಾವೇಶದ ಬಗ್ಗೆ ಚರ್ಚೆ ನಡೆಸಿದ ದೇವೇಗೌಡರು, “ಸೋತೆವು ಎಂದು ಸುಮ್ಮನಿದ್ದರೆ ಆಗುವುದಿಲ್ಲ. ಛಲದಿಂದ ಕೆಲಸ ಮಾಡಿದರೆ ಜನ ಮೆಚ್ಚಿಕೊಳ್ಳುತ್ತಾರೆ. ಎಲ್ಲರೂ ಸೇರಿ ಪಕ್ಷ ಕಟ್ಟೋಣ” ಎಂದು ಮುಖಂಡರಿಗೆ ಹುರಿದುಂಬಿಸಿದರು.

“ಈ ವಯಸ್ಸಿನಲ್ಲಿಯೂ ನಾನು ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಲು ತಯಾರಿದ್ದೇನೆ. ಎಲ್ಲಿಗೆ ಬೇಕಾದರೂ ಬರಲು ಸಿದ್ಧನಿದ್ದೇನೆ. ಜನರ ಪರವಾಗಿ ಹೋರಾಟ ಮಾಡೋಣ” ಎಂದರು.

ಕಾವೇರಿಗಾಗಿ ಬೃಹತ್ ಹೋರಾಟ:

ಸಭೆಯ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಇಬ್ರಾಹಿಂ, ಜಿಟಿ ದೇವೇಗೌಡ, ಬಂಡೆಪ್ಪ ಕಾಶೆಂಪುರ ಮತ್ತು ಟಿ.ಎ.ಶರವಣ ಅವರು, “ಸಭೆಯಲ್ಲಿ ಕಾವೇರಿ ವಿಚಾರ ಕೂಡ ಚರ್ಚಿಸಲಾಗಿದೆ. ಜಿ.ಟಿ.ದೇವೇಗೌಡರ ನೇತೃತ್ವದಲ್ಲಿ ಈಗಾಗಲೇ ಹೋರಾಟ ನಡೆಸಲಾಗಿದೆ. ಮಂಡ್ಯ ಜಿಲ್ಲೆಯ ನಮ್ಮೆಲ್ಲ ಮುಖಂಡರು, ಕಾರ್ಯಕರ್ತರು ಹೋರಾಟದಲ್ಲಿ ಭಾಗಿಯಾಗಿದ್ದಾರೆ. ರಾಜ್ಯ ಮಟ್ಟಕ್ಕೆ ಈ ಹೋರಾಟವನ್ನು ವಿಸ್ತರಿಸಲಾಗುವುದು. ಕಾಂಗ್ರೆಸ್ ಸರಕಾರದಿಂದ ರಾಜ್ಯದ ಕಾವೇರಿ ಹಿತ ಕಾಯಲು ಸಾಧ್ಯವಿಲ್ಲ ಎಂದರು.

“ಸೆಪ್ಟೆಂಬರ್ 10ರಂದು ಪ್ರಮುಖ ಕಾರ್ಯಕರ್ತರ ಸಭೆ ಕರೆಯಲಾಗಿದೆ. ನಂತರ ಜಿಟಿಡಿ ನೇತೃತ್ವದಲ್ಲಿ ರಚಿಸಿರುವ ಕೋರ್ ಕಮಿಟಿ ರಾಜ್ಯ ಪ್ರವಾಸ ಮಾಡಲಿದೆ. ಎಲ್ಲ 28 ಲೋಕಸಭಾ ಕ್ಷೇತ್ರಗಳಿಗೆ ತೆರಳಿ ಪ್ರಮುಖರ ಅಭಿಪ್ರಾಯ ಪಡೆಯಲಾಗುವುದು. ಕುಮಾರಸ್ವಾಮಿ ಅವರ ಆರೋಗ್ಯ ಸುಧಾರಿಸಿದೆ. ಮುಂದಿನ ತಿಂಗಳು ಅವರೂ ಪ್ರವಾಸದಲ್ಲಿ ಭಾಗಿಯಾಗಲಿದ್ದಾರೆ” ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button