*ಕಾವೇರಿ ವಿಚಾರದಲ್ಲಿ ಒಗ್ಗಟ್ಟು, ಸರ್ವಪಕ್ಷ ಸಂಸದರ ಬೆಂಬಲ: ಡಿಸಿಎಂ ಡಿ.ಕೆ.ಶಿವಕುಮಾರ್*
ಪ್ರಗತಿವಾಹಿನಿ ಸುದ್ದಿ; ನವದೆಹಲಿ: ರಾಜಕೀಯ ಭಿನ್ನಾಭಿಪ್ರಾಯಗಳು ಇದ್ದರೂ ಕಾವೇರಿ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ರಾಜ್ಯದ ಪರ ನಿಲ್ಲುವುದಾಗಿ ಸರ್ವಪಕ್ಷಗಳ ಸಂಸದರು ಮಾತುಕೊಟ್ಟಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ,ಕೆ,ಶಿವಕುಮಾರ್ ಅವರು ತಿಳಿಸಿದ್ದಾರೆ.
ದೆಹಲಿಯ ತಾಜ್ ಹೋಟೆಲ್ನಲ್ಲಿ ಸರ್ವಪಕ್ಷ ಸಂಸದರ ಸಭೆಯ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು “ ಕಾವೇರಿ ವಿಚಾರವಾಗಿ ಸಂಸತ್ ಅಧಿವೇಶನದಲ್ಲಿ ದನಿ ಎತ್ತುವುದಾಗಿ ಎಲ್ಲಾ ಸಂಸದರು ಭರವಸೆ ನೀಡಿದ್ದಾರೆ” ಎಂದರು.
“ಮಂಗಳವಾರ ತಡ ರಾತ್ರಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರನ್ನು ಮುಖ್ಯಮಂತ್ರಿಗಳು ಹಾಗೂ ನಾನು ಭೇಟಿಯಾಗಿ ಚರ್ಚೆ ನಡೆಸಿದ್ದೇವೆ. ಅವರು ಕೇಂದ್ರ ಜಲಶಕ್ತಿ ಸಚಿವರಾದ ಗಜೇಂದ್ರ ಸಿಂಗ್ ಶೆಖಾವತ್ ಅವರಿಗೆ ಪರಿಸ್ಥಿತಿ ವಿವರಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಮಳೆ ಕಡಿಮೆ ಬಿದ್ದಾಗ ನೀರನ್ನು ಎಷ್ಟು ಹಂಚಿಕೆ ಮಾಡಬೇಕು ಎನ್ನುವ ಬಗ್ಗೆ ಕಾವೇರಿ ನೀರು ನಿರ್ವಹಣಾ ಸಮಿತಿ ಸರಿಯಾದ ಸೂತ್ರ ಹಂಚಿಕೆ ಮಾಡಿಲ್ಲ. 5 ಸಾವಿರ ಕ್ಯೂಸೆಕ್ಸ್ ನೀರು ಹರಿಸಿ ಎಂದು ಹೇಳಿರುವುದು ಅವೈಜ್ಞಾನಿಕ ಎಂದು ಹೇಳಿದರು.
ಸುಪ್ರೀಂ ಕೋರ್ಟಿನಲ್ಲಿ ನ್ಯಾಯ ಸಿಗುವ ಭರವಸೆ:
“ರಾಜ್ಯದಲ್ಲಿ ಕಾವೇರಿ ನೀರಿನ ಲಭ್ಯತೆ ಅತ್ಯಂತ ಕಡಿಮೆ ಇದ್ದು, ಇದನ್ನು ಸುಪ್ರೀಂ ಕೋರ್ಟಿಗೆ ಮನವರಿಕೆ ಮಾಡುತ್ತೇವೆ. ಅಲ್ಲಿ ನಮಗೆ ನ್ಯಾಯ ಸಿಗುವ ಭರವೆಯಿದೆ. ಕಳೆದ 120 ವರ್ಷಗಳಲ್ಲೇ ಅತ್ಯಂತ ಕಷ್ಟದ ಸಂದರ್ಭವನ್ನು ಕರ್ನಾಟಕ ಎದುರಿಸುತ್ತಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ 5 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆಗೆ ಆದೇಶ ನೀಡಿದ್ದು ಇಷ್ಟೆಲ್ಲಾ ಸಂಕಷ್ಟಗಳಿಗೆ ದಾರಿ ಮಾಡಿಕೊಟ್ಟಿದೆ” ಎಂದರು.
“ರಾಜ್ಯದ ನೆಲ- ಜಲದ ಸಂರಕ್ಷಣೆ ಸದಾ ಬೆನ್ನೆಲುಬಾಗಿ ನಾವು ನಿಲ್ಲುತ್ತೇವೆ ಎಂದು ಸಭೆಗೆ ಬಂದಿದ್ದಂತಹ ಬಿಜೆಪಿ, ಕಾಂಗ್ರೆಸ್, ಜನತದಳದ ಮತ್ತು ಪಕ್ಷೇತರ ಸಂಸದರು ಹಾಗೂ ರಾಜ್ಯಸಭಾ ಸದಸ್ಯರಿಗೆ ಕರ್ನಾಟಕ ಸರ್ಕಾರ ಅಭಾರಿಯಾಗಿರುತ್ತದೆ” ಎಂದು ಇದೇ ವೇಳೆ ಧನ್ಯವಾದಗಳನ್ನು ತಿಳಿಸಿದರು.
ಕಾಂಗ್ರೆಸ್ ಕಂಡ ಕನಸು ನನಸಾಗಿದೆ:
ಮಹಿಳಾ ಮೀಸಲಾತಿ ಮಸೂದೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, “ಮಹಿಳಾ ಮೀಸಲಾತಿ ಮಸೂದೆ ಕಾಂಗ್ರೆಸ್ ಪಕ್ಷದ ಕನಸಿನ ಕೂಸು. ರಾಜೀವ್ ಗಾಂಧಿ ಅವರು 73 ಮತ್ತು 74 ನೇ ತಿದ್ದುಪಡಿ ಮೂಲಕ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿಗೆ ಮುನ್ನುಡಿ ಬರೆದಿದ್ದರು, ಯುಪಿಎ ಎರಡನೇ ಅವಧಿಯಲ್ಲಿ ಸೋನಿಯಾ ಗಾಂಧಿ ಅವರ ಮುಂದಾಳತ್ವದಲ್ಲಿ ಈ ಮಸೂದೆಯನ್ನು ಮಂಡಿಸಲಾಗಿತ್ತು, ಆದರೆ ಲೋಕಸಭೆಯಲ್ಲಿ ಬಹುಮತ ದೊರೆತಿರಲಿಲ್ಲ. ಮಸೂದೆಗೆ ಈಗ ಒಪ್ಪಿಗೆ ದೊರೆತಿರುವುದನ್ನು ನಾವು ಸ್ವಾಗತಿಸುತ್ತೇವೆ, ಇದೊಂದು ಐತಿಹಾಸಿಕ ನಿರ್ಧಾರ” ಎಂದು ಬಣ್ಣಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ