Kannada NewsLatest

ಧಾರಾಕಾರ ಮಳೆಯಿಂದ ಕುಡಚಿ ಸೇತುವೆ ಮುಳುಗಡೆ

ಧಾರಾಕಾರ ಮಳೆಯಿಂದ ಕುಡಚಿ ಸೇತುವೆ ಮುಳುಗಡೆ

ಪ್ರಗತಿವಾಹಿನಿ ಸುದ್ದಿ – ಮಾಂಜರಿ : ನೆರೆಯ ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಎಡೆಬಿಡದೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಕೃಷ್ಣಾ, ದೂಧಗಂಗಾ ಹಾಗೂ ವೇಧಗಂಗಾ ನದಿಗಳು ಉಕ್ಕಿ ಹರಿಯುತ್ತಿದ್ದು, ಕರ್ನಾಟಕ-ಮಹಾರಾಷ್ಟ್ರ ಸಂಪರ್ಕ ಕಲ್ಪಿಸುವ ರಾಯಬಾಗ ತಾಲೂಕಿನ ಕುಡಚಿ ಸೇತುವೆ ಬುಧವಾರ ಬೆಳಗಿನ ಜಾವ ಮುಳುಗಡೆಗೊಂಡಿದ್ದು, ಇದರಿಂದ ಸಂಪರ್ಕ ಕಡಿತಗೊಂಡಿದೆ.

ಮಹಾರಾಷ್ಟ್ರದ ಜಲಘಟ್ಟ ಪ್ರದೇಶಗಳಾದ ಕೋಯ್ನಾ, ವಾರಣಾ, ಮಹಾಬಳೇಶ್ವರ ಮತ್ತು ನವಜಾ ಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಸುಮಾರು 150 ರಿಂದ 250 ಮಿ.ಮೀ ಮಳೆ ಸುರಿದಿದೆ. ಹೀಗಾಗಿ ಕೃಷ್ಣಾ ಮತ್ತು ಉಪನದಿಗಳಿಗೆ ಅಪಾರ ಪ್ರಮಾಣದ ನೀರು ಹರಿದು ಬರಲಾರಂಭಿಸಿದೆ. ಚಿಕ್ಕೋಡಿ ತಾಲೂಕಿನ ಕಲ್ಲೋಳ ಹತ್ತಿರ ಕೃಷ್ಣಾ ನದಿಗೆ ಬುಧವಾರ 1.80 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಒಂದೇ ದಿನ ಕೃಷ್ಣಾ ನದಿಗೆ 80 ಸಾವಿರ ಕ್ಯೂಸೆಕ್ ನೀರು ಹೆಚ್ಚಳವಾಗಿರುವುದರಿಂದ ನದಿ ಪಾತ್ರದ ಜನರಲ್ಲಿ ಆತಂಕ ಮೂಡಿಸಿದೆ.

ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚನೆ : ಮಹಾರಾಷ್ಟ್ರದ ಕೊಂಕಣ ಭಾಗ ಮತ್ತು ಗಡಿ ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ನದಿಗಳ ನೀರಿನ ಮಟ್ಟದಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡು ಬರುವ ಹಿನ್ನಲ್ಲೆಯಲ್ಲಿ ತೋಟಪಟ್ಟಿ ಜನರಿಗೆ ತೊಂದರೆಯಾಗದಂತೆ ಮುನ್ನಚರಿಕೆ ಕ್ರಮವಾಗಿ ಸುರಕ್ಷಿತ ಸ್ಥಳಗಳಿಗೆ ತೆರಳಬೇಕೆಂದು ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗನ್ನವರ, ತಹಶೀಲ್ದಾರ ಡಾ||ಸಂತೋಷ ಬಿರಾದಾರ ಸೂಚನೆ ನೀಡಿದ್ದಾರೆ.

ಪ್ರತಿ ಗಂಟೆಗೊಮ್ಮ ನದಿ ನೀರು ಹೆಚ್ಚಳವಾಗುವದರಿಂದ ಗುರುವಾರ ಮತ್ತಷ್ಟು ನೀರಿನಲ್ಲಿ ಹೆಚ್ಚಳವಾಗುವ ಸಂಭವವಿದೆ. ಹೀಗಾಗಿ ನದಿ ತೀರದ ತೋಟಪಟ್ಟಿಯಲ್ಲಿ ವಾಸ ಮಾಡುವ ಸಾರ್ವಜನಿಕರು ದನಕರುಗಳೊಂದಿಗೆ ಸುರಕ್ಷಿತ ಸ್ಥಳಗಳಿಗೆ ಹೋಗಬೇಕೆಂದು ಮನವಿ ಮಾಡಿದ್ದಾರೆ.Kudachi Bridge has been flooded with water

ಚಿಕ್ಕೋಡಿ ಉಪವಿಭಾಗದ ಏಳು ಸೇತುವೆ ಮುಳುಗಡೆ : ಕರ್ನಾಟಕ-ಮಹಾರಾಷ್ಟ್ರ ಸಂಪರ್ಕ ಕಲ್ಪಿಸುವ ರಾಯಬಾಗ ತಾಲೂಕಿನ ಕುಡಚಿ ಸೇತುವೆ ಜಲಾವೃತಗೊಂಡಿದೆ. ಸೇತುವೆ ಮೇಲೆ ಎರಡು ಅಡಿಯಷ್ಟು ನೀರು ಹರಿಯುತ್ತಿರುವುದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಸಂಚಾರ ಸ್ಥಗಿತಗೊಳಿಸಿದ್ದು, ಪ್ರಯಾಣಿಕರು ಸುತ್ತುಬಳಿಸಿ ಪ್ರಯಾಣ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ಇನ್ನೂ ಚಿಕ್ಕೋಡಿ ತಾಲೂಕಿನ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಕಲ್ಲೋಳ-ಯಡೂರ ಸೇತುವೆ, ದೂಧಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಕಾರದಗಾ-ಭೋಜ, ಮಲಿಕವಾಡ-ದತ್ತವಾಡ, ವೇಧಗಂಗಾ ನದಿಗೆ ಅಡ್ಡಲಾಗಿ ಕಟ್ಟರುವ ಭೋಜವಾಡಿ-ಕುನ್ನೂರ, ಅಕ್ಕೋಳ-ಸಿದ್ನಾಳ, ಜತ್ರಾಟ-ಭಿವಸಿ ಸೇತುವೆಗಳು ಮುಳುಗಡೆಗೊಂಡು ಸಂಚಾರ ಕಡಿತಗೊಂಡಿವೆ.

ಹೊಲಗದ್ದೆಗಳಿಗೆ ನುಗ್ಗಿದ ನೀರು : ಕೃಷ್ಣಾ ಮತ್ತು ಉಪನದಿಗಳು ಉಕ್ಕಿ ಹರಿಯುವುದರಿಂದ ನದಿ ನೀರು ರೈತರ ಜಮೀನುಗಳಿಗೆ ನುಗ್ಗಿದೆ. ಆಮೀನುಗಳಲ್ಲಿ ಬಿತ್ತನೆ ಮಾಡಿದ ಕಬ್ಬು, ಸೋಯಾ, ಹೆಸರು, ಗೋವಿನಜೋಳ, ಶೇಂಗಾ ಮುಂತಾದ ಬೆಳೆಗಳು ನೀರಿನಲ್ಲಿ ಮುಳುಗಿವೆ.

ಅದರಂತೆ ಚಿಕ್ಕೋಡಿ ತಾಲೂಕಿನ ಕಲ್ಲೋಳದ ಶ್ರೀ ದತ್ತ ದೇವಸ್ತಾನದ ಗರ್ಭಗುಡಿತನಕ ನೀರು ನುಗ್ಗಿದೆ. ಯಕ್ಸಂಬಾದ ಮುಲ್ಲಾನಕಿ ದರ್ಗಾ ಕೂಡಾ ದೂಧಗಂಗಾ ನದಿ ನೀರಿನಿಂದ ಮುಳುಗಡೆಗೊಂಡಿದೆ. ಕಾರದಗಾ ದರ್ಗಾ ಕೂಡಾ ನದಿಯು ಸುತ್ತು ಹಾಕಿದೆ. ಕೊಲ್ಲಾಪೂರ ಜಿಲ್ಲೆಯ ಶಿರೋಳ ತಾಲೂಕಿನ ಸುಕ್ಷೇತ್ರ ದತ್ತ ದೇವಸ್ಥಾನ ಜಲಾವೃತಗೊಂಡು ನಾಲ್ಕು ದಿನ ಕಳೆದಿವೆ.

ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜದಿಂದ ಕೃಷ್ಣಾ ನದಿಗೆ 149625 ಕ್ಯೂಸೆಕ್ ನೀರು ಹರಿದು ಬರಲಾರಂಭಿಸಿದೆ. ದೂಧಗಂಗಾ ಮತ್ತು ವೇಧಗಂಗಾ ನದಿಗಳಿಂದ 25520 ಕ್ಯೂಸೆಕ್ ನೀರು ಹರಿದು ಕೃಷ್ಣಾ ನದಿಗೆ ಸೇರುತ್ತದೆ. ಚಿಕ್ಕೋಡಿ ತಾಲೂಕಿನ ಕಲ್ಲೋಳ ಹತ್ತಿರ ಕೃಷ್ಣಾ ನದಿಗೆ ಒಟ್ಟು 1.75 ಲಕ್ಷ ಕ್ಯೂಸೆಕ್ ನೀರು ಹರಿದು ಹಿಪ್ಪರಗಿ ಬ್ಯಾರೇಜೆಗೆ ಹೋಗುತ್ತಿದೆ.

ಹಿಪ್ಪರಗಿ ಬ್ಯಾರೇಜದಿಂದ 2.17 ಲಕ್ಷ ಕ್ಯೂಸೆಕ್ ನೀರನ್ನು ಆಲಮಟ್ಟಿಗೆ ಹರಿದು ಬಡಲಾಗುತ್ತಿದೆ. ಅಲ್ಲಿಂದ 1.75 ಲಕ್ಷ ಕ್ಯೂಸೆಕ್ ನೀರು ನಾರಾಯಣಪೂರ ಆಣೆಕಟ್ಟಿಗೆ ಹೋಗುತ್ತಿದೆ ಎಂದು ತಹಶೀಲ್ದಾರ ಡಾ||ಸಂತೋಷ ಬಿರಾದಾರ ಉದಯವಾಣಿಗೆ ಮಾಹಿತಿ ನೀಡಿದರು.

ಮಹಾರಾಷ್ಟ್ರದ ಮಳೆ ವಿವರ : ಕೋಯ್ನಾ-294 ಮಿ.ಮೀ, ನವಜಾ-214 ಮಿ.ಮೀ, ಮಹಾಬಳೇಶ್ವರ-182ಮಿ.ಮೀ, ವಾರಣಾ-88 ಮಿ.ಮೀ, ಸಾಂಗಲಿ-29 ಮಿ.ಮೀ, ಕೊಲ್ಲಾಪೂರ-72 ಮಿ.ಮೀ, ಕಾಳಮ್ಮವಾಡಿ-102 ಮಿ.ಮೀ, ರಾಧಾನಗರಿ-204ಮಿ.ಮೀ, ಪಾಟಗಾಂವ-175 ಮಿ.ಮೀ ಮಳೆ ಸುರಿದಿದೆ.

ಚಿಕ್ಕೋಡಿ ತಾಲೂಕಿನ ಮಳೆ ವಿವರ : ಚಿಕ್ಕೋಡಿ-15.1 ಮಿಮೀ, ಅಂಕಲಿ-13.4 ಮಿ.ಮೀ, ನಾಗರಮುನ್ನೋಳ್ಳಿ-14.6 ಮಿ.ಮೀ, ಸದಲಗಾ-21.9 ಮಿ.ಮೀ, ಗಳತಗಾ-25 ಮಿ.ಮೀ, ಜೋಡಟ್ಟಿ-10.2 ಮಿಮೀ,ನಿಪ್ಪಾಣಿ ಪಿಡಬ್ಲೂಡಿ-36 ಮಿ.ಮೀ, ನಿಪ್ಪಾಣಿ ಎಆರ್‌ಎಸ್-36.4 ಮಿ.ಮೀ, ಸೌಂದಲಗಾ-45 ಮಿ.ಮೀ ಮಳೆ ಸುರಿದಿದೆ./////

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button