Latest

*ಮಕ್ಕಳಿಗಾಗಿ ಕಥೆಗಳನ್ನು ಹೇಳಿ… ನಿಮ್ಮ ಜೊತೆಗಿನ ಒಡನಾಟದ ನೆನಪುಗಳಿರಲಿ*

ರವಿ ಕರಣಂ

ಮನುಷ್ಯ ಇಂದಿದ್ದವನು ನಾಳೆ ಇರಲಿಕ್ಕಿಲ್ಲ. ಬದಲಾದ ಜೀವನ ಶೈಲಿಯಿಂದಾಗಿ, ಆಯುಷ್ಯ ರೇಖೆಯೇ ಬದಲಾಗಿದೆ. ನಾವು ಇರುವಷ್ಟು ಕಾಲ ಮಕ್ಕಳಿಗೆ, ಮೊಮ್ಮಕ್ಕಳಿಗೆ ಜೀವನದ ಸಂದೇಶ ಕೊಡಬೇಕಲ್ಲ. ಅದರೊಂದಿಗೆ ಜೀವನದ ಪಾಠಗಳ ವರ್ಗಾವಣೆಯೂ ಸಹ. ಹಾಗಾಗಿ ಕೆಲ ಅಭಿಪ್ರಾಯಗಳ ಹಂಚಿಕೆ ಇದಾಗಿದೆಯೇ ಹೊರತು, ಇದು ಉಪದೇಶವೂ ಅಲ್ಲ. ನಿರ್ದೇಶನವೂ ಅಲ್ಲ. ಧನಾತ್ಮಕವಾಗಿ ತೆಗೆದುಕೊಳ್ಳುತ್ತೀರಿ ಎಂಬ ನಂಬಿಕೆ ನನ್ನದು.

ಮಕ್ಕಳು ಕೇವಲ ಮಕ್ಕಳಲ್ಲ. ನಾಳೆಯ ಬದುಕಲ್ಲಿ ಮಹತ್ವದ ವ್ಯಕ್ತಿಗಳು. ಅವರ ಮನಸ್ಸು ವಿಶೇಷ ರೀತಿಯಲ್ಲಿ ಅರಳುವಂತೆ ಮಾಡುವುದು ಪ್ರತಿ ಕುಟುಂಬದ ಸದಸ್ಯರ ಹೊಣೆ. ಹಾಗಾಗಿ ಕೆಲವು ಅಂಶಗಳನ್ನು ಮರೆಯದೇ ಪಾಲಿಸುವ ಅವಶ್ಯಕತೆಯಿದೆ. ಮಕ್ಕಳಿಗೆ ಕಥೆಗಳನ್ನು ಹೇಳಿ. ಇದರಿಂದ ಕಲ್ಪನೆಗಳ ಜಗತ್ತು ತೆರೆದುಕೊಳ್ಳುತ್ತದೆ.

ಮಕ್ಕಳಲ್ಲಿ ಯೋಚನಾ ಮತ್ತು ಕಲ್ಪನಾ ಸಾಮರ್ಥ್ಯದ ಹೆಚ್ಚಳಕ್ಕೆ ಅತ್ಯಂತ ಸಹಕಾರಿಯಾಗುವ ದಾರಿಯಿದು. ಕಥೆಗಳನ್ನು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ವಿಶೇಷವಾಗಿ ಮಕ್ಕಳಿಗಾಗಿ ಬರೆದು, ಚಲನ ಚಿತ್ರಗಳನ್ನು ತಯಾರಿಸಿ ಕೊಡಲಾಗುತ್ತದೆ. ಅದರಲ್ಲಿನ ಚಿತ್ರ ವಿಚಿತ್ರ ಪಾತ್ರಗಳ ಬಗೆಗೆ ನಿಮಗೆ ಹೇಳಬೇಕಿಲ್ಲ. ನೋಡಿದ್ದೀರಿ ಮತ್ತು ಮಕ್ಕಳಿಗೆ ತೋರಿಸಿದ್ದೀರಿ ಸಹ. ಅಂದರೆ ಇದನ್ನು ನೀವು ಮನೋರಂಜನೆಯ ಭಾಗವಾಗಿ ನೋಡುತ್ತೀರಿ. ಇದರ ಹಿಂದೆ ಎಷ್ಟು ಪ್ರಯೋಜನಗಳಿವೆ ಎಂಬುದರ ಕಡೆಗೆ ಗಮನ ಹೋಗಿರಲಿಕ್ಕಿಲ್ಲ.

ಮಕ್ಕಳು ಮೆಲ್ಲಗೆ ಸಮಾಜದ ರೀತಿ ನೀತಿಗಳಿಗೆ, ಸಮೂಹ ಜೀವನಕ್ಕೆ ಹೊಂದಿಕೊಳ್ಳುವ ಪ್ರಕ್ರಿಯೆಯಲ್ಲಿರುತ್ತದೆ. ಅದಕ್ಕೆ ಈ ಜಗತ್ತಿನ ಆಗು-ಹೋಗುಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ತೀವ್ರತರವಾಗಿರುತ್ತದೆ. ಅಂದರೆ ಬೆಳೆಯಬೇಕೆಂಬ ಸಸಿಯೊಂದಕ್ಕೆ ನೀರು, ಸೂರ್ಯನ ಬೆಳಕು, ಇಂಗಾಲದ ಡೈಆಕ್ಸೈಡ್ ಮತ್ತು ನೈಟ್ರೋಜನ್, ಗೊಬ್ಬರ, ರಕ್ಷಣೆಯ ಅವಶ್ಯಕತೆ ಇರುತ್ತದೆ. ಹಾಗಿದ್ದಾಗ ಮಾತ್ರ ಸಸಿಯೊಂದು ಸಮೃದ್ಧವಾಗಿ ಬೆಳೆದು ಹೆಮ್ಮರವಾಗಿ ಬೆಳೆದು ನಿಲ್ಲುತ್ತದೆ. ಹಾಗೆಯೇ ಎಳೆಯ ಮನಸುಗಳಿಗೂ ಕೂಡಾ ಕಥೆಗಳು, ಐತಿಹಾಸಿಕ ಸ್ಥಳಗಳು, ನಿಸರ್ಗ ಧಾಮಗಳು, ವರ್ಣ ಚಿತ್ರಗಳು, ಹಾಡುಗಳು, ಮೃಗಾಲಯ ಮುಂತಾದವುಗಳೆಲ್ಲ, ಜ್ಞಾನದ ಬುತ್ತಿ ಕಟ್ಟಿ ಕೊಡಲು ಸಹಕಾರಿಯಾಗುತ್ತವೆ.

ಮಕ್ಕಳ ಕೂತುಹಲಗಳನ್ನು ತಣಿಸುವ ಚಾಣಾಕ್ಷತೆ ಪಾಲಕರಲ್ಲಿಯೂ, ಶಿಕ್ಷಕರಲ್ಲಿಯೂ ಇರಬೇಕಾಗುತ್ತದೆ. ಅವರು ನಮ್ಮೊಡನೆ ಒಳ್ಳೆಯ ಬಾಂಧವ್ಯವನ್ನು ಬೆಳೆಸಿಕೊಳ್ಳುತ್ತಾರೆ. ನಾವು ಬೇಡವೆಂದರೂ ನಮ್ಮ ಹತ್ತಿರವೇ ಬರುತ್ತಾರೆ.


ಹಿಂದೆ ಅವಿಭಕ್ತ ಕುಟುಂಬಗಳಿರುತ್ತಿದ್ದವು. ಮೂರು ನಾಲ್ಕು ತಲೆಮಾರುಗಳು ಒಟ್ಟಾಗಿಯೇ ಒಂದು ಸೂರಿನಡಿಯಿರುತ್ತಿದ್ದವಲ್ಲ, ಅಲ್ಲಿ ಮಕ್ಕಳು ವಿಶೇಷವಾಗಿ ಬೆಳೆಯುತ್ತಿದ್ದರು. ಕಾರಣ ಅವರಿಗೆ ಅಜ್ಜ ಅಜ್ಜಿಯಿಂದ ಹಿಡಿದು, ಎಲ್ಲರಿಂದಲೂ ಅನೌಪಚಾರಿಕ ಶಿಕ್ಷಣ ಸುಲಭವಾಗಿ, ಸಾರಯುಕ್ತವಾಗಿ ಸಿಗುತ್ತಿತ್ತು. ಈಗೆಲ್ಲಿದೆ ?

ವಿಭಕ್ತ ಕುಟುಂಬದಲ್ಲಿ ಕೇವಲ ತಂದೆ ತಾಯಿಗಳನ್ನು ಹೊರತು ಪಡಿಸಿ ಮತ್ತೆ ಯಾರ ಸಹಭಾಗಿತ್ವವೂ ಇಲ್ಲ. ಪಾಲಕರಿಬ್ಬರೂ ಕೆಲಸಕ್ಕೆ ಹೋಗುವವರು. ಮಗುವಿನ ಕೈಯಲ್ಲಿ ಹಣ ಕೊಟ್ಟು ಹೋಗಿ ಬಿಟ್ಟರೆ, ಅವರೇನು ಮಾಡಬಲ್ಲರು? ಹೇಗೆ ಕಲಿಯಬಲ್ಲರು? ಕಡೆಗೆ ಅವರನ್ನು ಹುಕ್ಕಾ ಬಾರ್ ಗಳಲ್ಲಿ ಹುಡುಕಬೇಕಾದೀತು ಅಷ್ಟೇ. ಹೋಗಲಿ ಬಿಡಿ.

ಕಥೆಗಳು ನೀತಿಯನ್ನು ಹೇಳುತ್ತವೆ. ಪಾತ್ರಗಳನ್ನು ಪರಿಚಯಿಸಿ ಕೊಡುವಾಗ, ವ್ಯಕ್ತಿ, ಪ್ರಾಣಿ, ಪಕ್ಷಿ, ಗಿಡ ಮರ, ಬೆಟ್ಟ ಗುಡ್ಡ, ಹಳ್ಳ ಕೊಳ್ಳ, ಸಮುದ್ರ, ಜಲಚರ ಜೀವಿಗಳು , ಮನುಷ್ಯನ ಹುಟ್ಟು, ಆಯುಧಗಳು, ಅರಣ್ಯಗಳು, ಸೂರ್ಯ – ಚಂದ್ರ – ನಕ್ಷತ್ರಗಳು, ಆಕಾಶ, ಗಾಳಿ,ನೀರು, ಬೆಂಕಿ, ಬೆಳಕು ಇತ್ಯಾದಿಯಾಗಿ ಮನಸ್ಸಿನಲ್ಲಿಯೇ ಚಿತ್ರಗಳ ರೂಪದಲ್ಲಿ ಕಲ್ಪಿಸಿಕೊಳ್ಳಲು ತೊಡಗುತ್ತದೆ. ಇದು ಮಾನಸಿಕ ಮತ್ತು ಭಾವನಾತ್ಮಕ ವಲಯಗಳ ವಿಸ್ತಾರಕ್ಕೆ ಅಡಿಗಲ್ಲು ಹಾಕಲು ಸಾಧ್ಯವಾಗುತ್ತದೆ. ಮಗು ಮತ್ತಷ್ಟು ಆಸಕ್ತಿ ತಳೆಯುತ್ತದೆ. ಅದರೊಂದಿಗೆ ಬದುಕಿನ ಮೌಲ್ಯಗಳನ್ನು ಪರಿಚಯಿಸಿಕೊಳ್ಳುತ್ತದೆ. ಮಾನಸಿಕ ಶಕ್ತಿ ಮತ್ತು ಆರೋಗ್ಯ ಉತ್ತಮವಾಗಿರುತ್ತದೆ. ಅದಕ್ಕಾಗಿ ಮಕ್ಕಳಿಗೆ ನಿರಂತರವಾಗಿ ಒಂದಲ್ಲಾ ಒಂದು ಕಥೆಯನ್ನು ಹೇಳುತ್ತಾ ಮಲಗಿಸಿ. ಅದರ ಜೀವನದಲ್ಲಿ ನಿಮ್ಮ ಜೊತೆಗಿನ ಒಡನಾಟದ ನೆನಪುಗಳಿರಲಿ.

ನಮ್ಮಲ್ಲಿ ನೀತಿ ಕಥೆಗಳಿಗಂತೂ ಬರವಿಲ್ಲ. ಜಾನಪದ ಕಥೆಗಳ ಮಹಾಪೂರವೇ ಇದೆ. ಅಲ್ಲದೆ ಬರೆಹಗಾರರಿಂದ ರಚಿತವಾದ ಸಾವಿರಾರು ಕಥೆಗಳಿವೆ. ದುರ್ಗಸಿಂಹನ ಪಂಚತಂತ್ರ ಕಥೆಗಳು, ಚಾಣಕ್ಯನ ನೀತಿ ಕಥೆಗಳು, ಅಕ್ಬರ್-ಬೀರಬಲ್, ಕೃಷ್ಣ ದೇವರಾಯ-ತೆನಾಲಿ ರಾಮಕೃಷ್ಣ, ನಾಸಿರುದ್ದೀನನ ಕಥೆಗಳು, ವಿಕ್ರಮ್ ಮತ್ತು ಬೇತಾಳ, ಅಡಗೋಲಜ್ಜಿಯ ಕಥೆಗಳು, ಪೌರಾಣಿಕ, ಐತಿಹಾಸಿಕ, ಜಾನಪದ ಕಥೆಗಳು ಅಭೂತಪೂರ್ವವಾಗಿವೆ. ನಾಗರಿಕತೆಯ ಉಗಮ, ಕೃಷಿ, ಸಮಾಜ ನಿರ್ಮಾಣ, ರಾಮಾಯಣ ಮತ್ತು ಮಹಾಭಾರತಗಳಂತೂ ರೋಚಕದ ಸಂಗತಿಗಳನ್ನೊಳಗೊಂಡಿವೆ. ಅವುಗಳನ್ನು ಹೇಗೆ ಪ್ರಸ್ತುತಪಡಿಸುತ್ತೀರಿ ಎಂಬುದರ ಮೇಲೆ, ಮಕ್ಕಳು ನಿಮ್ಮನ್ನು ನೆಚ್ಚಿಕೊಂಡು, ನಿಮ್ಮ ಮಾತುಗಳೇ ವೇದ ವಾಕ್ಯಗಳೆಂದು ನಂಬುತ್ತಾರೆ. ಅದರಲ್ಲೂ ಖಗೋಳದ ವಿದ್ಯಾಮಾನಗಳಂತೂ ಅವರ ಕುತೂಹಲವನ್ನು ಎಂದೂ ತಣಿಸಲಿಕ್ಕಿಲ್ಲ. ಕಾರಣ ಸಮರ್ಥ ಉತ್ತರ ನಮ್ಮಲ್ಲಿರಲ್ಲ.

ಇವುಗಳೆಲ್ಲವನ್ನು ಓದಿ ಹೇಳಿದರೆ ನಾವೇ ಜ್ಞಾನದ ಭಂಡಾರವಾಗಿ ಬಿಡುತ್ತೇವೆ. ಅಷ್ಟೊಂದು ತಾಳ್ಮೆ ನಮ್ಮಲ್ಲಿದೆಯೇ? ಎಷ್ಟು ಸಮಯವನ್ನು ಮಕ್ಕಳಿಗಾಗಿ ಮೀಸಲಿಡುತ್ತೇವೆ ? ಎಂಬುದನ್ನು ಗಮನಕ್ಕೆ ತಂದುಕೊಳ್ಳಬೇಕು. ಅವರ ಬೆಳವಣಿಗೆಯಲ್ಲಿ ನಮ್ಮ ಪಾಲೆಷ್ಟೆಂಬುದು ಗೊತ್ತಾಗುತ್ತದಲ್ಲವೇ? ನಮ್ಮ ದೈನಂದಿನ ಹೋರಾಟ ಅವರಿಗಾಗಿಯೇ ಇದೆ ಎಂದ ಮೇಲೆ, ಅವರ ಜೊತೆಗೆ ಮಾತು, ಕಥೆ, ಹರಟೆ, ಅಭ್ಯಾಸದಲ್ಲಿನ ಸಂತೋಷ ಮತ್ತು ತೊಂದರೆಗಳ ಬಗ್ಗೆಯೆಲ್ಲ ಇರುತ್ತದಲ್ಲವೇ? ವಿಚಾರ ಮಾಡಬೇಕು.

ಕಥೆಗಳು ಕೇವಲ ಮನೋರಂಜನೆಯ ವಿಷಯವಲ್ಲ. ಅದನ್ನು “Talk Therapy” ಯನ್ನಾಗಿ ಬಳಸಲಾಗುತ್ತದೆ. ಇದರ ಬಗ್ಗೆ ನಮಗೇ ಗೊತ್ತಿಲ್ಲದ ಅಂಶಗಳಿವೆ. ‘ಟಾಕ್ ಥೆರಪಿ’ಯನ್ನು ನಮ್ಮಲ್ಲಿ ಅಷ್ಟೇ ಅಲ್ಲ. ವಿದೇಶಗಳಲ್ಲೆಲ್ಲ ಬಳಸಲಾಗುತ್ತದೆ. ಮಾನಸಿಕ ಅಸ್ವಸ್ಥತೆಗೆ ತುತ್ತಾದ, ಕ್ರೌರ್ಯ ನಡೆವಳಿಕೆ, ಗುರಿ ತಲುಪುವಲ್ಲಿನ ಸೋಲುಗಳು, ಜೀವನದಲ್ಲಿ ನಿರಾಶೆ, ಹತಾಶಾ ಮನೋಭಾವನೆ, ಸಮಾಜದ ಬಗ್ಗೆ ಋಣಾತ್ಮಕ ಭಾವನೆಗಳನ್ನು ಹೊಂದಿದ ವ್ಯಕ್ತಿಗಳನ್ನೆಲ್ಲ ಒಂದು ಕಡೆ ತಂದು ಅವರ ಮನಸ್ಸನ್ನು ಅರ್ಥಮಾಡಿಕೊಳ್ಳಲಾಗುತ್ತದೆ. ಅವರ ಮನಸ್ಸಿನಲ್ಲಿ ಎಂತಹ ಭಾವನೆಗಳು, ಕಾರ್ಯಗಳು, ಯೋಚನೆಗಳು, ಚಟುವಟಿಕೆಗಳೇನು ? ಎಂಬುದನ್ನು ಮನೋವಿಜ್ಞಾನಿಗಳು ಪತ್ತೆ ಹಚ್ಚುತ್ತಾರೆ. ಔಷಧಿಗಳ ಪ್ರಭಾವಕ್ಕಿಂತ ಮಾತಿನ ಚಿಕಿತ್ಸೆಯೇ ಪರಿಣಾಮಕಾರಿಯಾಗಿರುತ್ತದೆ.

ಪಂಚತಂತ್ರ ಕಥೆಗಳು ಹುಟ್ಟಿ ಕೊಂಡಿದ್ದೇ ದಡ್ಡರೂ, ಅಯೋಗ್ಯರೂ, ನಿಷ್ಪ್ರಯೋಜಕರೂ, ಮುಠ್ಟಾಳರೂ ಆದ ರಾಜನ ಮಕ್ಕಳನ್ನು ವಿದ್ಯಾವಂತರನ್ನಾಗಿಸಲು ಎಂಬ ಸಂಗತಿ ಗೊತ್ತಾಗಿದೆ. ಅದು Talk Therapy ಯೇ ಆಗಿದೆ. ಮನೋರೋಗಿಗಳಿಗೆ, ಅಸ್ವಸ್ಥ ಮನಸುಗಳಿಗೆ ಸೂಕ್ತ ಸಂದರ್ಭದಲ್ಲಿ ಬಳಸಲಾಗುತ್ತದೆ. ಮಾತಿಗೆ ಅಷ್ಟೊಂದು ಶಕ್ತಿಯಿದೆ. ರೋಗವನ್ನು ಗುಣಪಡಿಸುವ ಶಕ್ತಿಯಿದೆ. ಹಾಗಾಗಿ “Doctors words are more important” ಎಂದು ಹೇಳುವುದು ಅದಕ್ಕೆ.

ಹಾಗಾಗಿ ಮಕ್ಕಳ ಮುಂದೆ ಉತ್ತಮವಾದ ಭಾಷೆಯಿಂದಲೇ ವ್ಯವಹರಿಸಬೇಕು. ಕಥೆಯಲ್ಲಿನ ಪದಗಳು ವಿಶೇಷವೂ ಆಗಿರಬೇಕು. ಧೈರ್ಯವಂತನನ್ನಾಗಿಸಿ ಬೆಳೆಸಲು ಸಹಾಯಕವಾಗುತ್ತವೆ. ನಿಮಗೆ ಇಂಥವೆಲ್ಲ ಸಾಧಾರಣ ಸಂಗತಿಗಳಾಗಿ ಕಂಡರೆ, ಜ್ಞಾನಿಗಳಿಗೆ ಮಹತ್ವದ ವಿಷಯಗಳಾಗಿರುತ್ತವೆ. ಇಂದಿನಿಂದಾದರೂ ಮಕ್ಕಳಿಗೆ ಕಥೆಗಳನ್ನು ಹೇಳಲು ಒಂದಿಷ್ಟು ಓದಲು ಒತ್ತಾಯಿಸುತ್ತೇನೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button