*ಸಂಕಷ್ಟ ಕಾಲದಲ್ಲಿ ಕಾವೇರಿ ನೀರು ಹರಿಸುವ ಹೊಸ ಸೂತ್ರಕ್ಕೆ ಆಗ್ರಹ: ಡಿಸಿಎಂ ಡಿ.ಕೆ.ಶಿವಕುಮಾರ್*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಳೆ ಇಲ್ಲದ ಸಂಕಷ್ಟದ ಕಾಲದಲ್ಲಿ ನೀರು ಹರಿಸುವ ಹೊಸ ಸೂತ್ರ ರೂಪಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿಗೆ ಆಗ್ರಹ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಸದಾಶಿವನಗರದ ನಿವಾಸದ ಬಳಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು “ಇಂದು ನಡೆಯುವ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರ ಸಭೆಯ ನಂತರ ಸಂಕಷ್ಟ ಸೂತ್ರದ ರೂಪುರೇಷೆ ಹೇಗಿರಬೇಕು ಎಂದು ತೀರ್ಮಾನ ಮಾಡಲಾಗುತ್ತದೆ ಎಂದು ತಿಳಿಸಿದರು.
ಸಂಕಷ್ಟ ಸೂತ್ರ ಆಗ್ರಹ ಮಾಡುವ ಮೊದಲು ನಮಗೆ ಅದರ ಬಗ್ಗೆ ಸ್ಪಷ್ಟತೆ ಇರಬೇಕು. ಅದಕ್ಕೆ ನಾವು ಮೊದಲು ಒಂದು ಸೂತ್ರದ ಬಗ್ಗೆ ಚರ್ಚೆ ಮಾಡುತ್ತೇವೆ. ಆದಕ್ಕಾಗಿ ಇಂದು ಸಂಜೆ (ಶುಕ್ರವಾರ) ಸಭೆ ಕರೆಯಲಾಗಿದೆ.
ರಾಜ್ಯದ ಹಿತವನ್ನು ಸುಪ್ರೀಂಕೋರ್ಟಿನಲ್ಲಿ ಕಾಪಾಡಿದಂತಹ ಹಿರಿಯ ನ್ಯಾಯವಾದಿಗಳು, ಅಡ್ವೋಕೇಟ್ ಜನರಲ್ ಹಾಗೂ ಹಿರಿಯ ನೀರಾವರಿ ತಜ್ಞರ ಜೊತೆ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಚರ್ಚೆ ನಡೆಸುತ್ತೇವೆ ಎಂದರು.
ಇಂದು ನಡೆಯುವ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆಗೆ ಆನ್‌ಲೈನ್ ಮೂಲಕ ಭಾಗವಹಿಸದೆ ಖುದ್ದಾಗಿ ಭಾಗವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
ನೀರಿನ ಬಿಡುಗಡೆ ಬಗ್ಗೆ ವಿರೋಧ ಪಕ್ಷದವರು, ಬೇರೆಯವರು ಏನೇನೋ ಹೇಳುತ್ತಾರೆ. ನನಗೆ ಅವರಿಗಿಂತ, ಬೇರೆಯವರಿಗಿಂತ ಹೆಚ್ಚು ಜವಾಬ್ದಾರಿ ಇದೆ. ಬಾಯಿಗೆ ಬಂದಂತೆ ಮಾತನಾಡುವ ಜಾಯಮಾನ ನನ್ನದಲ್ಲ, ನಾನು ಸಹ ರೈತ ಎಂದು ತಿರುಗೇಟು ನೀಡಿದರು.
ಸಾರ್ವಜನಿಕರಿಗೆ ತೊಂದರೆಯಾಗದ ರೀತಿ ಬಂದ್ ನಿರ್ವಹಣೆ ಮಾಡಿದ್ದೇವೆ
ಕರ್ನಾಟಕ ಬಂದ್ ಮಾಡುವುದು ಅವಶ್ಯಕತೆ ಇರಲಿಲ್ಲ. ಪ್ರತಿಭಟನೆ ಮಾಡಲು ಯಾರಿಗೂ ನಾವು ಅಡ್ಡಿ ಮಾಡುವುದಿಲ್ಲ ಎಂದು ಹೇಳಿದ್ದೆವು, ಅದರಂತೆ ಬಂದ್ ವೇಳೆಯಲ್ಲಿ ಸಾವರ್ಜನಿಕರಿಗೆ ತೊಂದರೆಯಾಗದಂತೆ ರಕ್ಷಣೆ ಕೊಟ್ಟಿದ್ದೇವೆ. ಸಾರಿಗೆ, ದಿನನಿತ್ಯ ಬಳಕೆಯ ವಸ್ತುಗಳ ಲಭ್ಯತೆಗೆ ತೊಂದರೆ ಆಗದಂತೆ ನೋಡಿಕೊಂಡಿದ್ದೇವೆ ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ