Kannada NewsKarnataka NewsLatest

*ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರ, ಬ್ಲ್ಯಾಕ್ ಮೇಲ್; ಗ್ರಾಮ ಪಂಚಾಯತ್ ಮಾಜಿ ಸದಸ್ಯ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ; ಕಾರವಾರ: ವಿವಾಹಿತ ಮಹಿಳೆಯನ್ನು ಲೈಂಗಿಕವಾಗಿ ಬಳಸಿಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯನನ್ನು ಉತ್ತರ ಕನ್ನಡ ಜಿಲ್ಲೆಯ ಕರವಾರ ಪೊಲೀಸರು ಬಂಧಿಸಿದ್ದಾರೆ.

ಪ್ರಶಾಂತ್ ಭಟ್ ಮಾಣಿಲ (35) ಬಂಧಿತ ಆರೋಪಿ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಆರ್ಲಪದವು ಮೂಲದ ನಿವಾಸಿಯಾಗಿರುವ ಪ್ರಶಾಂತ್ ಮಾಣಿಲ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಎಂದು ತಿಳಿದುಬಂದಿದೆ.

ಉತ್ತರ ಕನ್ನಡ ಜಿಲ್ಲೆಯ 28 ವರ್ಷದ ವಿವಾಹಿತ ಮಹಿಳೆಗೆ ಕ್ಲಬ್ ಹೌಸ್ ಆಪ್ ಮೂಲಕ 2020ರಲ್ಲಿ ಪರಿಚಯನಾದ ಪ್ರಶಾಂತ್ ಭಟ್, ಮಹಿಳೆಯೊಂದಿಗೆ ಚಾಟಿಂಗ್, ಸ್ನೇಹ, ಸಲುಗೆ ಬೆಳಸಿ ಬಳಿಕ 2023ರ ಜನವರಿಯಲ್ಲಿ ಇಬ್ಬರೂ ಪರಸ್ಪರ ಭೇಟಿಯಾಗಿದ್ದು, ಬಳಿಕ ಖಾಸಗಿ ಲಾಡ್ಜ್ ಗೆ ಮಹಿಳೆಯನ್ನು ಕರೆದೊಯ್ದಿದ್ದ. ಈ ವೇಳೆ ಮಹಿಳೆ ಮೇಲೆ ಪ್ರಶಾಂತ್ ಭಟ್ ಅತ್ಯಾಚಾರವೆಸಗಿದ್ದಾನೆ ಎನ್ನಲಾಗಿದೆ. ಇದಾದ ಬಳಿಕ ಫೆಬ್ರವರಿಯಲ್ಲಿಯೂ ಮತ್ತೆ ಲಾಡ್ಜ್ ಗೆ ಕರೆಸಿಕೊಂಡ ಆರೋಪಿ ಮತ್ತೆ ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಖಾಸಗಿ ಕ್ಷಣಗಳ ವಿಡಿಯೋ, ಫೋಟೋಗಳನ್ನು ಸೆರೆಹಿಡಿದಿದ್ದಾನೆ.

Home add -Advt

ನಂತರದ ದಿನಗಳಲ್ಲಿ ಆರೋಪಿ ಮಹಿಳೆಗೆ ವಿಡಿಯೋ ಕಾಲ್ ಮೂಲಕ ಬೆತ್ತಲಾಗುವಂತೆ ಒತ್ತಾಯಿಸುತ್ತಿದ್ದನಂತೆ. ಅಲ್ಲದೇ ವಿಡಿಯೋ, ಫೋಟೋಗಳನ್ನು ಇಟ್ಟುಕೊಂಡು ಮಹಿಳೆಗೆ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಟ್ಟು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ.

ಆರಂಭದಲ್ಲಿ 25,000 ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟು ದೋಚಿದ್ದ ಆರೋಪಿ ಪ್ರಶಾಂತ್ ಬಳಿಕ ಹಂತ ಹಂತವಾಗಿ 7 ಲಕ್ಷ ರೂಪಾಯಿವರೆಗೂ ದೋಚಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಬ್ಲ್ಯಾಕ್ ಮೇಲ್ ನಿಂದ ಬೇಸತ್ತ ಮಹಿಳೆ ಕಾರವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿ ಪ್ರಶಾಂತ್ ಭಟ್ ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.


Related Articles

Back to top button