ಮಕ್ಕಳ ರಕ್ಷಣೆ ನಮ್ಮೆಲ್ಲರ ಕರ್ತವ್ಯ: ಅಧ್ಯಕ್ಷರಾದ ಕೆ. ನಾಗಣ್ಣಗೌಡ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಒಂದು ಶ್ರೇಷ್ಠ ದೇಶ ಕಟ್ಟಬೇಕೆಂದರೆ ಮಕ್ಕಳು,ನೀರು, ಪರಿಸರ ಅತ್ಯವಶ್ಯಕ ಅವುಗಳನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ನಮ್ಮ ದೇಶದ ನ್ಯಾಯಾಲಯದ ಆಜ್ಞೆಯಂತೆ ಎಲ್ಲ ಇಲಾಖೆ ಸಹಯೋಗದೊಂದಿಗೆ ಮಾತ್ರ ಇವುಗಳು ರಕ್ಷಣೆ ಮಾಡಲು ಸಾದ್ಯ ಎಂದು ಕರ್ನಾಟಕ ರಾಜ್ಯ ಮಕ್ಕಳ ಆಯೋಗದ ಅಧ್ಯಕ್ಷರಾದ ಕೆ. ನಾಗಣ್ಣಗೌಡ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಪೊಲೀಸ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬಧವಾರ (ಅ.4) ಏರ್ಪಡಿಸಲಾಗಿದ್ದ “ಬಾಲನ್ಯಾಯ (ಅರೈಕ ಮತ್ತು ರಕ್ಷಣೆ) ಕಾಯ್ದೆ-2015, ಆರ್.ಟಿ.ಇ ಕಾಯ್ದೆ-2009 ಹಾಗೂ ಲೈಂಗಿಕ ದೌರ್ಜನ್ಯದಿಂದ ಮಕ್ಕಳ ಸಂರಕ್ಷಣಾ ಕಾಯ್ದೆ (ಪೋಕ್ಲೋ) 2012 ರ ಅನುಷ್ಠಾನ ಕುರಿತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಲಗಾ ಗ್ರಾಮ ವ್ಯಾಪ್ತಿಯಲ್ಲಿ ಮಕ್ಕಳ ರಕ್ಷಣೆ ಕುರಿತು ಯಾವುದೇ ಸಮಿತಿ, ಹಾಗೂ ಜಾಗೃತಿ ಮೂಡಿಸುವ ಕಾರ್ಯ ಕ್ರಮಗಳು ನಡೆದಿರುವುದಿಲ್ಲ ಎಂಬ ಮಾಹಿತಿ ಇದೆ ಆದ್ದರಿಂದ ಇಂತಹ ಗ್ರಾಮ ಪಂಚಾಯತಿಗಳಲ್ಲಿ ಹೆಚ್ಚಿನ ಕ್ರಮ ವಹಿಸಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಬಾಲ್ಯ ವಿವಾಹ ನಡೆಯುತ್ತಿದ್ದರೂ ಕೂಡಾ ಸರಿಯಾದ ಸಮಯಕ್ಕೆ ಹೋಗಿ ತಡೆಗಟ್ಟುವ ಕೆಲಸ ಆಗುತ್ತಿಲ್ಲ. ಅದಕ್ಕೆ ತಹಶೀಲ್ದಾರ ಒಳಗೊಂಡಂತೆ ತಾಲೂಕ ಮಟ್ಟದಲ್ಲಿ ಸಭೆ ನಡೆಸಿ ಬಾಲ್ಯ ವಿವಾಹ ತಡೆಗಟ್ಟಲೂ ಸೂಕ್ತ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.
ಬಾಲಕರ ಮತ್ತು ಬಾಲಕಿಯರ ವಸತಿ ನಿಲಯಗಳಿಗೆ ನಿಮ್ಮ ತಾಲೂಕ ಮಟ್ಟದ ಅಧಿಕಾರಿಗಳು ಜೊತೆಯಲ್ಲಿ ಸಭೆ ಮಾಡಿ ಮಕ್ಕಳಿಗೆ ಸಲಹೆ ಸೂಚನೆಗಳನ್ನು ನೀಡಿ ಮತ್ತು ಉತ್ತಮ ಪೌಷ್ಟಿಕಾಂಶ ಆಹಾರ ನೀಡುವುದರ ಜೊತೆಗೆ ಮಕ್ಕಳಿಗೆ ಸಂಸ್ಕೃತಿ ಕಲಿಸಿ ಎಂದು ಹೇಳಿದರು.
ಶಾಲೆಗಳಿಂದ ವಂಚಿತರಾಗಿದ್ದ ಮಕ್ಕಳ, ಮತ್ತು ವರ್ಗಾವಣೆಗಳಾದ ಮಕ್ಕಳು ಮತ್ತೊಂದು ಶಾಲೆಯಲ್ಲಿ ದಾಖಲಾಗಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದರು ಅಧಿಕಾರಿಗಳಿಗೆ ಸೂಚಿಸಿದರು.
ಶಾಲೆಗಳಲ್ಲಿ ದುರಸ್ತಿ ಕಟ್ಟಡಗಳ, ತೆರುವು ಕಟ್ಟಡ, ಹಾಗೂ ವಿದ್ಯುತ್ ಸಮಸ್ಯೆ ಇರುವ ಶಾಲೆಗಳ ಬಗ್ಗೆ ಪಟ್ಟಿ ಮಾಡಿ ಅವುಗಳ ಬಗ್ಗೆ ಮಾಹಿತಿ ನೀಡಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸಲಹೆ ನೀಡಿದರು
ಅಂಗನವಾಡಿಗಳಲ್ಲಿ ಮಕ್ಕಳಿಗೆ ಊಟದ ವ್ಯವಸ್ಥೆ ಸರಿಯಾಗಿ ಇರುವುದಿಲ್ಲ ಎಂಬ ದೂರುಗಳಿದ್ದು,ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಜೊತೆಗೆ ಸರಿಯಾದ ಹಾಜರಾತಿ ದಾಖಲೆಗಳು ಇರುವುದಿಲ್ಲ, ಮತ್ತು ಸಿ ಡಿ ಪಿ ಒ ಗಳ ಹಾಗೂ ಮತ್ತಿತರ ಅಧಿಕಾರಿಗಳ ಹಾಜರಾತಿ ದಾಖಲೆಗಳು ಇರುವುದಿಲ್ಲ ಆದ್ದರಿಂದ ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾತಿ ದಾಖಲಾತಿಗಳು ಇರಬೇಕು ಎಂದು ಹೇಳಿದರು.
ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದಾಗ ಮೂಲಸೌಕರ್ಯಗಳಾದ ಆಹಾರ ನೀರು ಗಾಳಿ ಬೆಡ್ ಹಾಗೂ ಮತ್ತಿತ್ತರ ಸೌಲಭ್ಯಗಳು ಸಿಗುತ್ತಿಲ್ಲ ಮತ್ತು ಮಕ್ಕಳ ಘಟಕಗಳಲ್ಲಿ ಯಾವುದೇ ವೈದ್ಯಾಧಿಕಾರಿಗಳು ಸಿಬ್ಬಂದಿಳು ಇರುವುದಿಲ್ಲ ಹಾಗೂ ಮಕ್ಕಳ ರಕ್ಷಣೆಗೆ ಯಾವುದೇ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಯಾಗಿರುವುದಿಲ್ಲ. ಈ ಎಲ್ಲ ಸಮಸ್ಯೆಗಳು ಜಿಲ್ಲಾ ಆಸ್ಪತ್ರೆಯಲ್ಲಿ ಗಮನಿಸಲಾಗಿದೆ. ಆದ್ದರಿಂದ ಶೀಘ್ರವಾಗಿ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು
ಕರ್ನಾಟಕ ರಾಜ್ಯ ಮಕ್ಕಳು ಆಯೋಗದ ಸದಸ್ಯರಾದ ಶಶಿಧರ ಕೋಸಂಬೆ ಅವರು ಸೂಚಿಸಿದರು.
ಮಕ್ಕಳ ಕಳ್ಳತನ ಹಾಗೂ ಮಕ್ಕಳ ಮಾರಾಟ ಹೆಚ್ಚಾಗಿರುವುದರಿಂದ ಅದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸ ಅಧಿಕಾರಿಗಳಿಗೆ ಸೂಚಿಸಿದರು.
ಮಕ್ಕಳಿಗೆ ಪೋಕ್ಸೋ ಕಾಯ್ದೆ, ಬಾಲ್ಯ ವಿವಾಹ ಎಲ್ಲ ಕಾರ್ಯಕ್ರಮಗಳ ಬಗ್ಗೆ ಸೂಕ್ತ ಮಾಹಿತಿ ಹಾಗೂ ರಕ್ಷಣೆಗಾಗಿ ಸಮಿತಿ, ಸಂಘಟನೆ ರಚಿಸಿ ಜೊತೆಗೆ ಶಿಕ್ಷಕರೊಳಗೊಂಡ ಕಾರ್ಯಗಾರವನ್ನು ಮಾಡಿ ಮಕ್ಕಳನ್ನು ಜಾಗೃತಗೊಳಿಸಬೇಕು ಎಂದು ಹೇಳಿದರು.
ಜಿಲ್ಲೆಯ ಎಲ್ಲ ಬಸ್ ನಿಲ್ದಾಣಗಳಲ್ಲಿ ಮಕ್ಕಳ ರಕ್ಷಣೆ ದೂರವಾಣಿ ಸಂಖ್ಯೆ 1098 ಫಲಕಗಳನ್ನು ಅಳವಡಿಸಲು ಕೆ.ಎಸ್.ಆರ್ ಟಿ.ಸಿ ಅಧಿಕಾರಿಗಳಿಗೆ ಸೂಚಿಸಿದರು
ಬಾಲಕ ಮತ್ತು ಬಾಲಕಿಯ ವಸತಿ ನಿಲಯಗಳಲ್ಲಿ ವಿವಿಧ ಸಮಸ್ಯೆಗಳು ಸೇರಿದಂತೆ ಸರಿಯಾದ ವೈದ್ಯಕೀಯ ತಪಾಸಣೆ ಆಗುತ್ತಿಲ್ಲ ಆದ್ದರಿಂದ ಅಧಿಕಾರಿಗೂ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಕರ್ನಾಟಕ ರಾಜ್ಯ ಮಕ್ಕಳು ಆಯೋಗದ ಸದಸ್ಯರಾದ ಶಶಿಧರ ಕೋಸಂಬೆ, ತಿಪ್ಪೇಸ್ವಾಮಿ ಕೆ.ಟಿ.,ವೆಂಕಟೇಶ, ಮಂಜುಳಾ,ಅಪರ್ಣಾ ಕೊಳ್ತಾ, ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಭೀಮಶಂಕರ್ ಗುಳೇದ ನಗರ ಉಪ ಪೊಲೀಸ್ ಆಯುಕ್ತರಾದ ಸ್ನೇಹಾ ಆರ್, ಅಪರ ಜಿಲ್ಲಾಧಿಕಾರಿಗಳಾದ ವಿಜಯಕುಮಾರ್ ಹೊನ್ನಕೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ನಾಗರಾಜ್ ಆರ್, ಜಿಲ್ಲಾ ಮಕ್ಕಳ ಸಂರಕ್ಷಣೆ ಅಧಿಕಾರಿಗಳಾದ ಮಾಂತೇಶ್ ಭಜಂತ್ರಿ ಹಾಗೂ ಮತ್ತಿತರ ಗಣ್ಯರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ