*ಹಾಡ ಹಗಲೇ ಜ್ಯುವೆಲ್ಲರಿ ಅಂಗಡಿಗೆ ನುಗ್ಗಿದ ಕಳ್ಳರು; ಗುಂಡಿನ ದಾಳಿ ನಡೆಸಿ ಕೆ.ಜಿಗಟ್ಟಲೇ ಚಿನ್ನಾಭರಣ ಕದ್ದು ಪರಾರಿ*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಹಾಡ ಹಗಲೇ ಚಿನ್ನಾಭರಣ ಅಂಗಡಿಗೆ ನುಗ್ಗಿದ ಕಳ್ಳರ ಗ್ಯಾಂಗ್ ಗುಂಡಿನ ದಾಳಿ ನಡೆಸಿ ಒಂದು ಕೆಜಿ ಆಭರಣಗಳನ್ನು ದೋಚಿ ಪrರಾರಿಯಾಗಿರುವ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿಯ ಪೈಪ್ ಲೈನ್ ರಸ್ತೆಯಲ್ಲಿ ನಡೆದಿದೆ.
ಪೈಪ್ ಲೈನ್ ರಸ್ತೆಯಲ್ಲಿರುವ ವಿನಾಯಕ ಜ್ಯುವೆಲ್ಲರಿ ಶಾಪ್ ನಲ್ಲಿ ಈ ಘಟನೆ ನಡೆದಿದೆ. ಮನೋಜ್ ಎಂಬಾತನಿಗೆ ಗುಂಡೇಟು ತಗುಲಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಿಗ್ಗೆ 11 ಗಂಟೆ ಸುಮಾರಿಗೆ ಗ್ರಾಹಕರ ಸೋಗಿನಲ್ಲಿ ಚಿನ್ನದ ಅಂಗಡಿಗೆ ಬಂದ ನಾಲ್ವರು, ಚಿನ್ನದ ಉಂಗುರವನ್ನು ತೋರಿಸುವಂತೆ ಅಂಗಡಿಯವರಿಗೆ ಹೇಳಿದ್ದಾರೆ. ಉಂಗುರಗಳನ್ನು ತೋರಿಸುತ್ತಿದ್ದಂತೆ ನಾಲ್ವರಲ್ಲಿದ್ದ ವ್ಯಕ್ತಿಯೊಬ್ಬ ಏಕಾಏಕಿ ತನ್ನ ಬಳಿ ಇದ್ದ ಗನ್ ತೆಗೆದು ಗನ್ ಪಾಯಿಂಟ್ ನಲ್ಲಿ ಬೆದರಿಕೆ ಹಾಕಿದ್ದಾನೆ. ಅಂಗಡಿ ಮಾಲೀಕ, ಸಿಬ್ಬಂದಿಗಳು ಕಂಗಾಲಾಗಿದ್ದಾರೆ. ತಕ್ಷಣ ಜ್ಯುವೆಲ್ಲರಿ ಶಾಪ್ ನಲ್ಲಿದ್ದ ಚಿನ್ನಾಭರಣಗಳನ್ನು ಬ್ಯಾಗ್ ಗೆ ತುಂಬಿಕೊಂಡು ಹೊರಗೋಡಿದ್ದಾರೆ.
ಈ ವೇಳೆ ಜ್ಯುವೆಲ್ಲರಿ ಶಾಪ್ ಸಿಬ್ಬಂದಿ ಮನೋಜ್ ಎಂಬಾತ ಕಳ್ಳರನ್ನು ತಡೆಯಲು ಮುಂದಾಗಿದ್ದಾರೆ. ತಕ್ಷಣ ಅಂಗಡಿ ಶೆಲ್ಟರ್ ಎಳೆದು ಆತನ ಕಾಲಿಗೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಇದನ್ನು ಕಣ್ಣಾರೆ ಕಂಡ ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ. ಯಾರಾದರೂ ಹತ್ತಿರ ಬಂದರೆ ಗುಂಡು ಹಾರಿಸುವುದಾಗಿ ಕಳ್ಳರ ಗ್ಯಾಂಗ್ ಬೆದರಿಸಿದೆ. ಚಿನ್ನಾಭರಣ ಅಂಗಡಿಯನ್ನು ಹಾಡ ಹಗಲೇ ಕಳ್ಳರು ದೋಚುತ್ತಿದ್ದರೂ ಏನೂ ಮಾಡಲು ಸಾಧ್ಯವಾಗದೇ ಸಾರ್ವಜನಿಕರು ಮೂಕ ಪ್ರೇಕ್ಷಕರಾಗಿದ್ದಾರೆ.
ಈ ಬಗ್ಗೆ ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ಪ್ರತಿಕ್ರಿಯೆ ನೀಡಿದ್ದು, ಒಂದು ಕೆಜಿಯಷ್ಟು ಚಿನ್ನಾಭರಣವನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ. ಎರಡು ಬೈಕ್ ಗಳಲ್ಲಿ ಬಂದ ನಾಲ್ವರ ತಂಡ ಈ ಕೃತ್ಯ ನಡೆಸಿದೆ. ಮಾಲೀಕರು ಕಳ್ಳನನ್ನು ಹಿಡಿಯಲು ಹೋಗಿದ್ದಾರೆ. ಆದರೆ ಕಳ್ಳರು ಗನ್ ನಿಂದ ಫೈರ್ ಮಾಡಿದ್ದಾರೆ. ಓರ್ವ ವ್ಯಕ್ತಿಗೆ ತೊಡೆ ಭಾಗಕ್ಕೆ ಗುಂಡೇಟು ತಗುಲಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳ್ಳರನ್ನು ಬಂಧಿಸಲು ನಾಲ್ವರು ಇನ್ಸ್ ಪೆಕ್ಟರ್ ಗಳ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ