Kannada NewsKarnataka NewsLatestPolitics

*ಜನಸಮಾನ್ಯರ ದುಖಃವನ್ನು ದೂರ ಮಾಡಿದ ದೇವಿ ದುರ್ಗಾ ದೇವಿ; ಹೆಣ್ಣಿಗೆ ನಮ್ಮ ಸಂಸ್ಕೃತಿಯಲ್ಲಿ ಮೊದಲ ಆದ್ಯತೆ; ಡಿಸಿಎಂ ಡಿ.ಕೆ.ಶಿವಕುಮಾರ್*

ಪ್ರಯತ್ನ ಮಾಡಿ ಸೋಲಬಹುದು, ಆದರೆ ಪ್ರಾರ್ಥನೆ ಮಾಡಿ ಸೋಲಲು ಸಾಧ್ಯವಿಲ್ಲ‌ ಎಂದ ಡಿಸಿಎಂ


ಪ್ರಗತಿವಾಹಿನಿ ಸುದ್ದಿ; ಮೈಸೂರು: ನಮ್ಮ ಸಂಸ್ಕೃತಿಯಲ್ಲಿ ಹೆಣ್ಣಿಗೆ, ಹೆಣ್ಣು ದೇವತೆಗಳಿಗೆ ಹೆಚ್ಚು ಪ್ರಾಧಾನ್ಯತೆ ನೀಡಲಾಗಿದೆ. ಕರ್ನಾಟಕದ ಯಾವುದೇ ಊರಿಗೆ ಹೋದರು ಅಲ್ಲಿ ಗ್ರಾಮ ದೇವತೆ ಇರುತ್ತದೆಯೇ ಹೊರತು ಯಾವುದೇ ಗಂಡು ದೇವರುಗಳು ಇರುವುದಿಲ್ಲ. ತಂದೆ ಭಾಷೆಯನ್ನು ಯಾರೂ ಕೇಳುವುದಿಲ್ಲ, ಆದರೆ ಅರ್ಜಿಯಲ್ಲಿ ಮಾತೃ ಭಾಷೆ ಯಾವುದು ಎಂದು ಕೇಳುತ್ತಾರೆ. ಅದೇ ರೀತಿ ಚಾಮುಂಡಿ ತಾಯಿ ಈ ನಾಡಿಗೆ ಅಧಿದೇವತೆ. ಈ ರಾಜ್ಯದ ದುಃಖವನ್ನು ದೂರಮಾಡು, ನುಡಿದಂತೆ ನಡೆಯಲು ಶಕ್ತಿ ಕೊಡು ತಾಯಿ ಎಂದು ಚುನಾವಣೆಗೆ ಮುಂಚಿತವಾಗಿ ಬಂದು ಪ್ರಾರ್ಥನೆ ಮಾಡಿದ್ದೆವು. ತಾಯಿ ಆಶೀರ್ವಾದ ಮಾಡಿದಳು. ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಮೈಸೂರು ದಸರಾ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಡಿಸಿಎಂ, ಯಶಸ್ವಿಯಾಗಿ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ. ನಮ್ಮ ಕೈ ಹಿಡಿದ ಈ ನಾಡಿನ ಜನರ ಕಷ್ಟ ದೂರ ಮಾಡು ಎಂದು ಮುಖ್ಯಮಂತ್ರಿಗಳ ಜೊತೆ ಬಂದು ದೇವಿಗೆ 2,000 ಕಾಣಿಕೆ ಸಲ್ಲಿಸಿ, ಹರಕೆ ತೀರಿಸಿದೆವು. ಪ್ರಯತ್ನ ಮಾಡಿ ಸೋಲಬಹುದು, ಆದರೆ ಪ್ರಾರ್ಥನೆ ಮಾಡಿ ಸೋಲಲು ಸಾಧ್ಯವಿಲ್ಲ‌ ಎಂದರು.

ಈ ಕಾರ್ಯಕ್ರಮಕ್ಕೆ ಆಹ್ವಾನ ಪತ್ರಿಕೆ ನೀಡಲು ಬಂದಿದ್ದ ಅಧಿಕಾರಿಗಳು ಶ್ರೀಮತಿ, ಆನಂತರ ಶ್ರೀ ಡಿ.ಕೆ.ಶಿವಕುಮಾರ್ ಎಂದು ಬರೆದಿದ್ದರು. ಗೌರಿಯ ಹೆಸರು ಹೇಳಿ ಗಣೇಶ ಎನ್ನುತ್ತೇವೆ, ಲಕ್ಷ್ಮಿ ವೆಂಕಟೇಶ್ವರ ಎಂದು ಹೇಳುತ್ತೇವೆ. ಇದರ ಅರ್ಥ ಹೆಣ್ಣಿಗೆ ನಮ್ಮ ಸಂಸ್ಕೃತಿಯಲ್ಲಿ ಮೊದಲ ಆದ್ಯತೆ. ಈ ರಾಜ್ಯದ ಜನಸಮಾನ್ಯರ ದುಖಃವನ್ನು ದೂರ ಮಾಡಿದ ದೇವಿ ದುರ್ಗಾ ದೇವಿ. ಕರ್ನಾಟಕ ಮತ್ತು ಮೈಸೂರಿನ ಇತಿಹಾಸ ನಮ್ಮ ಪರಂಪರೆ ಮತ್ತು ಸಂಸ್ಕೃತಿಯನ್ನು ಬಿಂಬಿಸುತ್ತದೆ.

ಈ ಬಾರಿ ಜನಸಾಮಾನ್ಯರಂತೆ ಇದ್ದು, ಉನ್ನತ ಮಟ್ಟಕ್ಕೆ ಬೆಳೆದವರ ಕೈಯಲ್ಲಿ ದಸರಾ ಉದ್ಘಾಟನೆ ಮಾಡಬೇಕು ಎನ್ನುವ ಅಭಿಪ್ರಾಯ ಬಂದ‌ ಕಾರಣ, ಈ ನಾಡಿಗೆ ಕಲಾ ಸೇವೆಯನ್ನು ಮಾಡಿದ ಹಂಸಲೇಖ ಅವರಿಂದ ಉದ್ಘಾಟನೆ ಮಾಡಿಸುವ ತೀರ್ಮಾನ ಮಾಡಲಾಯಿತು.

ಕೇಳಿ ಕೊಡುವ ನೂರಾರು ಬಹುಮಾನಕ್ಕಿಂತ, ಕೇಳದೆ ನೀಡುವ ಬಹುಮಾನಕ್ಕೆ ಹೆಚ್ಚು ಬೆಲೆ. ಕೇಳಿ ಪಡೆಯುವ ಗೌರವಕ್ಕಿಂತ, ಕೇಳದೆ ಪಡೆಯುವ ಗೌರವವೇ ದೊಡ್ಡದು. ಸಂಪತ್ತು ಎಷ್ಟೇ ಇರಲಿ ಸರಳತೆಯೇ ಮನುಷ್ಯನಿಗೆ ಹೆಚ್ಚು ಬೆಲೆ ತಂದುಕೊಡುತ್ತದೆ. ಸರಳತೆಗೆ ಎಂದಿಗೂ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಹೇಳಿದರು.

ಈ ನಿಟ್ಟಿನಲ್ಲಿ ನಮ್ಮೆಲ್ಲರ ನಡುವೆ ಅತ್ಯಂತ ಜನಸಾಮಾನ್ಯರಾಗಿ ಬದುಕುತ್ತಿರುವ ಹಂಸಲೇಖ ಅವರನ್ನು ಉದ್ಘಾಟಕರನ್ನಾಗಿ ಆಯ್ಕೆ ಮಾಡಿದ್ದೇ ಈ ಕಾರಣಕ್ಕೆ. ಮರಕ್ಕೆ ಬೇರು ಹೇಗೆ ನಂಬಿಕೆಯೋ, ಅದೇ ರೀತಿ ಹಂಸಲೇಖ ಅವರು ನಮ್ಮ ಸಂಸ್ಕೃತಿಯ ರಾಯಭಾರಿ. ಚುನಾವಣೆಯಲ್ಲಿ ನಮ್ಮ ಕೈಹಿಡಿದು ದೊಡ್ಡ ದುಃಖವನ್ನು ದೂರ ಮಾಡಿದ ಜನರು, ದೇವಸ್ಥಾನಕ್ಕೆ ಬರುವುದೇ ಮನಶಾಂತಿಗಾಗಿ. ಭಕ್ತ ಹಾಗೂ ಭಗವಂತನಿಗೆ ವ್ಯವಹಾರ ನಡೆಯುವ ಸ್ಥಳವೇ ದೇವಸ್ಥಾನ.

ಉದ್ಘಾಟನೆಯ ನಂತರ ದೇವಿಯ ಹಾಡು ಹಾಡುವಂತೆ ಹಂಸಲೇಖ ಅವರಿಗೆ ನಾನು ಮನವಿ ಮಾಡಿದ್ದೆ,‌ ಆದರೆ ಅವರು ಸಂವಿಧಾನ ಪೀಠಿಕೆಯನ್ನೇ ಹಾಡಿಸಿ ಇಡೀ ದೇಶಕ್ಕೆ ದೊಡ್ಡ ಸಂದೇಶ ನೀಡಿದ್ದಾರೆ. ಇದನ್ನ ಉಳಿಸಿ, ಬೆಳೆಸಿಕೊಳ್ಳೋಣ, ಸಂವಿಧಾನದ ಆಶಯದಂತೆ ನಡೆಯೋಣ ಎಂದರು.

ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಪ್ರಾರಂಭವಾದ ಈ ವಿಜಯದಶಮಿ ಹಬ್ಬವನ್ನು ಪಕ್ಷ ಬೇಧ ಮರೆತು ನಾವೆಲ್ಲಾ ಆಚರಿಸಿಕೊಂಡು ಹೋಗಬೇಕು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಶಯದಂತೆ ನಾವೆಲ್ಲಾ ನಡೆಯೋಣ. ಕರ್ನಾಟಕದ ಘನತೆಯನ್ನು ಎತ್ತಿಹಿಡಿಯುವ ಶಕ್ತಿ ನೀಡಲಿ ಎಂದು ದೇವತೆಯಲ್ಲಿ ಪ್ರಾರ್ಥಿಸೋಣ ಎಂಸು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button