Kannada NewsKarnataka NewsLatestPolitics

Big Breaking…. ಕಾಂಗ್ರೆಸ್ ಕಾರ್ಯಕರ್ತರಿಗೆ ಖುಷಿ ಸುದ್ದಿ ಘೋಷಿಸಿದ ಡಿ.ಕೆ.ಶಿವಕುಮಾರ್

*ಅ.25 ರ ನಂತರ ನಿಗಮ ಮಂಡಳಿ, ನೂತನ ಕಾರ್ಯಾಧ್ಯಕ್ಷರ ನೇಮಕ: ಡಿಸಿಎಂ ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:  ಅ. 25 ರ ನಂತರ ಸಭೆ ನಡೆಸಿ ನಿಗಮ ಮಂಡಳಿ ಹಾಗೂ ನೂತನ ಕಾರ್ಯಾಧ್ಯಕ್ಷರ ನೇಮಕಾತಿ ಕುರಿತು ಸಭೆ ನಡೆಸಲಾಗುವುದು ಎಂದು ಡಿಸಿಎಂ‌ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, “ಶಾಸಕರಿಗೆ, ಕಾರ್ಯಕರ್ತರಿಗೆ ಅಧಿಕಾರ ನೀಡಬೇಕು ಎನ್ನುವ  ಹಂಬಲ ತೀವ್ರವಾಗಿ ನಮಗೂ ಇದೆ. ನಾನೂ ಒಬ್ಬ ಕಾರ್ಯಕರ್ತನಾಗಿ ಈ ಮಾತನ್ನು ಹೇಳುತ್ತಿದ್ದೇನೆ ಎಂದು ದಸರಾ ಆದ ನಂತರ ಕಾರ್ಯಾಧ್ಯಕ್ಷರ, ನಿಗಮ ಮಂಡಳಿಗಳ ನೇಮಕದ ಕುರಿತಾದ ಪ್ರಶ್ನೆಗೆ ಉತ್ತರಿಸಿದ ನಂತರ ಹೇಳಿದ್ದಿಷ್ಟು. 

“20 ನೇ ತಾರೀಕಿನಂದು ಸಿಎಂ ಜೊತೆ ಮೊದಲ ಸುತ್ತಿನ ಮಾತುಕತೆ ನಡೆಸಬೇಕು ಎಂದು ಸಮಯ ನಿಗಧಿಯಾಗಿತ್ತು. ಆದರೆ ಆ ದಿನ ಬೇರೆ ಕೆಲಸಗಳ ನಿಮಿತ್ತ ಚರ್ಚೆ ನಡೆಯಲಿಲ್ಲ. ಹಬ್ಬ ಮುಗಿದ ನಂತರ ನಾವಿಬ್ಬರು ಕುಳಿತು ಚರ್ಚೆ ನಡೆಸುತ್ತೇವೆ. 

ದೆಹಲಿಯಿಂದ ಹೈಕಮಾಂಡಿನವರು ಬರುತ್ತಾರೆ. ನಮ್ಮ ರಾಜ್ಯದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಗಳು ರಾಜಸ್ಥಾನ ಸೇರಿದಂತೆ ಇತರೇ ರಾಜ್ಯಗಳ ಟಿಕೆಟ್ ಹಂಚಿಕೆಯಲ್ಲಿ ಇದ್ದಾರೆ. ನಾಳೆ ಟಿಕೆಟ್ ಘೋಷಣೆ ಆಗುವ ಸಾಧ್ಯತೆಯಿದ್ದು, ಅಷ್ಟರಲ್ಲಿ ನಾವು ಸಭೆ ನಡೆಸಿ ಮಾತುಕತೆ ನಡೆಸಿರುತ್ತೇವೆ. 

ಕರ್ನಾಟಕದ ಜನತೆ ಕಾಂಗ್ರೆಸ್ ಪಕ್ಷಕ್ಕೆ ಜನರ ಸೇವೆ ಮಾಡುವಂತಹ ಭಾಗ್ಯವನ್ನ ಕೊಟ್ಟು, ನಮ್ಮ ಮೇಲೆ ವಿಶ್ವಾಸವನ್ನಿಟ್ಟಿದ್ದಾರೆ.  

ಅಧಿಕಾರವನ್ನ ಬಹಳ ಜವಾಬ್ದಾರಿಯಿಂದ ನಿರ್ವಹಿಸಿ, ನುಡಿದಂತೆ ನಡೆದು, ಉತ್ತಮವಾದ ಆಡಳಿತ ನೀಡುತ್ತಿದ್ದೇವೆ. ರಾಜ್ಯದ ಮುಖ್ಯಮಂತ್ರಿಗಳ, ಶಾಸಕರ, ಸಂಪುಟ ಸಹೋದ್ಯೋಗಿಗಳ ಪರವಾಗಿ ನಾನು ವಿಜಯದಶಮಿಯ ದಿನ ರಾಜ್ಯದ ಜನರಿಗೆ ಉತ್ತಮ‌ ಆಡಳಿತದ ಆಶ್ವಾಸನೆ ನೀಡುತ್ತೇನೆ.

ವಿದ್ಯುತ್ ಖರೀದಿ ಮಾಡಲು, ಈ ಬರಗಾಲದಲ್ಲಿ ವಿದ್ಯುತ್ ಅಭಾವವನ್ನ ಸೃಷ್ಟಿ ಮಾಡಿದ್ದೇವೆ ಎಂದು ಕೆಲವರು ಹೇಳುತ್ತಿದ್ದಾರೆ. ಯಾರು ಅಂತಹ ಜ್ಞಾನ ಭಂಡಾರದಿಂದ, ಅನುಭವದ ಮಾತುಗಳನ್ನು ಆಡಿಸಿದರೊ ಗೊತ್ತಿಲ್ಲ. ನಮಗೆ ಚಿಂತೆಯಿಲ್ಲ ನಮ್ಮ ಜನರನ್ನು ಕಾಪಾಡುತ್ತೇವೆ, ಕೈಗಾರಿಕಾ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ಉತ್ಪಾದನೆ ನಿಲ್ಲಬಾರದು ಎಂದು ಸೂಚನೆ ನೀಡಿದ್ದು, ಮಾತು ಕೊಟ್ಟಂತೆ ವಿದ್ಯುತ್ ನೀಡುತ್ತಿದ್ದೇವೆ. 

ಈ ವರ್ಷ ಬರಗಾಲ ಬಂದು 200 ಕ್ಕೂ ಹೆಚ್ಚು ತಾಲ್ಲೂಕುಗಳನ್ನ ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಮಳೆ ಜಾಸ್ತಿಯಾದರೆ ವಿದ್ಯುತ್ಚಕ್ತಿ ಉತ್ಪಾದನೆ ಹೆಚ್ಚಿರುತ್ತದೆ, ಮಳೆ ಕಡಿಮೆ ಇರುವ ಕಾರಣ ವಿದ್ಯುತ್ ಉತ್ಪಾದನೆ ಕಡಿಮೆಯಾಗಿದೆ.

ಈ ಮೊದಲು 6 ಗಂಟೆ ವಿದ್ಯುತ್ ನೀಡಲಾಗುತ್ತಿತ್ತು, 2013 ರಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ 7 ಗಂಟೆ ನೀಡಲು ತೀರ್ಮಾನ ಮಾಡಿತು. ಆದರೆ ನಂತರ ಸರ್ಕಾರಗಳು ಇದಕ್ಕೆ ಪೂರಕವಾಗಿ ಕೆಲಸ ಮಾಡಲಿಲ್ಲ. ನಾವು ಏನೇ ತೊಂದರೆಯಾದರೂ ರೈತರಿಗೆ 5 ಗಂಟೆಗಳ ಕಾಲ ವಿದ್ಯುತ್ ನೀಡಲೇಬೇಕು ಎಂದು ಸೂಚನೆ ನೀಡಿದ್ದೇವೆ.

ವಿರೋಧ ಪಕ್ಷದವರು ಏನೇ ಮಾತನಾಡಲಿ, ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ನಾವು ಅಧಿಕಾರಕ್ಕೆ ಬಂದ ತಕ್ಷಣ ‘ಇವರ ಕೈಯಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಆಗವುದಿಲ್ಲ’ ಎನ್ನುತ್ತಿದ್ದರು. ಗೃಹಲಕ್ಷ್ಮಿ ಯೋಜನೆಯಿಂದ ಮನೆಗಳಲ್ಲಿ ಗಲಾಟೆ, ಅತ್ತೆ- ಸೊಸೆ ಗಲಾಟೆ ಎಂದು ಪುಕಾರು ಹಬ್ಬಿಸಿದ್ದರು. ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ ಹೀಗೆ ಪ್ರತಿಯೊಂದು ಕಾರ್ಯಕ್ರಮಕ್ಕೂ ಟೀಕೆ ಮಾಡುತ್ತಲೇ ಇದ್ದರು. ಆದರೂ ನಾವು ನಮ್ಮ ಕೆಲಸ ಮಾಡಿಕೊಂಡು ಬರುತ್ತಲೇ ಇದ್ದೇವೆ. ಅವರುಗಳು ಇರುವುದೇ ನಮ್ಮನ್ನು ಟೀಕೆ ಮಾಡಲು, ಎಚ್ಚರಿಸಲು.

ಇಡೀ ದೇಶ ಕರ್ನಾಟಕದ ಕಡೆ ತಿರುಗಿ ನೋಡುತ್ತಿದೆ. ನಮ್ಮ ಸರ್ಕಾರ ಉದ್ಯೋಗ ಹೆಚ್ಚಳ ಮಾಡಲು ಅನೇಕ ಕಾರ್ಯಗಳನ್ನು ರೂಪಿಸುತ್ತಿದೆ. ಅದಕ್ಕೆ ಎಲ್ಲರೂ ಒಟ್ಟಿಗೆ ಶಕ್ತಿಮೀರಿ ಕೆಲಸ ಮಾಡುತ್ತಿದ್ದೇವೆ. 

ಬೇರೆ ಸರ್ಕಾರ ಮಾಧ್ಯಮದವರನ್ನು ನಿಯಂತ್ರಣ ಮಾಡಿದಂತೆ ನಾವು ಮಾಡುತ್ತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯ ಒಂದು ಭಾಗ. ನಮ್ಮ ಮೇಲೆ ನೀವು ಟೀಕೆ- ಟಿಪ್ಪಣಿ ಏನೇ ಮಾಡಿದರೂ, ನೀವು ಕೂಡ ಸಮಾಜ ತಿದ್ದುವಂತಹ ಕೆಲಸ ಮಾಡುತ್ತಿದ್ದೀರಿ. ನಿಮಗೆ ಸಹಕಾರ ನೀಡುತ್ತೇವೆ, ನಿಮ್ಮ ಮಾರ್ಗದರ್ಶನವನ್ನು ತೆಗೆದುಕೊಳ್ಳುತ್ತೇವೆ.

ಈ ರಾಜ್ಯಕ್ಕೆ ಒಳ್ಳೆ ಮಳೆ, ಬೆಳೆ ಸಮೃದ್ದವಾಗಲಿ. ಎಲ್ಲಾ ರೀತಿಯ ತೊಂದರೆಗಳು ದೂರವಾಗಲಿ ಎಂದು ತಾಯಿ ಭುವನೇಶ್ವರಿ ಮತ್ತು ಚಾಮುಂಡೇಶ್ವರಿ ತಾಯಿಯಲ್ಲಿ ಪ್ರಾರ್ಥಿಸುತ್ತೇನೆ.

ಬಿಜೆಪಿಯಲ್ಲಿ ಇಷ್ಟುದಿನ ಇದ್ದಂತಹ ಗೊಂದಲ ದೂರವಾಗಿ ‘ರಾಜ್ಯಾಧ್ಯಕ್ಷರಾಗಿ ಬಹುತೇಕ ಶೋಭಾ ಕರಂದ್ಲಾಜೆ’ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕೇಳಿದಾಗ, “ಬೇರೆ ಪಕ್ಷದವರು ನಮ್ಮ ಪಕ್ಷದ ಬಗ್ಗೆ ಮಾತನಾಡಬಹುದು, ನಾನು ಮಾತನಾಡಲು ಹೋಗುವುದಿಲ್ಲ. ಅವರು ಯಾರನ್ನೇ ಅಧ್ಯಕ್ಷರನ್ನಾಗಿ ಮಾಡಿದರೂ ಬಹಳ ಸಂತೋಷ. ಅವರ ಪಕ್ಷಕ್ಕೆ ಬಿಟ್ಟ ವಿಚಾರ. ಪಕ್ಷದ ಅಧ್ಯಕ್ಷರ ಆಯ್ಕೆ ಪಕ್ಕಕ್ಕಿರಲಿ, ಆದರೆ ಐದು ತಿಂಗಳಾದರೂ ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡಿಲ್ಲ”.

ನಳಿನ್ ಕಟೀಲರು ಇನ್ನೂ ಅಧ್ಯಕ್ಷ ಸ್ಥಾನದಲ್ಲಿ ಇದ್ದಾರೆ. ವಿಧಾನಸಭಾ ಟಿಕೆಟ್ ಹಂಚಿಕೆ ವೇಳೆ ವ್ಯಾಪಾರ ನಡೆಯಿತು ಎಂದು ಬಿಜೆಪಿ ಪಕ್ಷದ ಕಾರ್ಯಕರ್ತರೇ ದೂರು ನೀಡಿ, ಎಫ್‌ಐಆರ್ ಆಗಿ, ತನಿಖೆ ಪ್ರಗತಿ ಹಂತದಲ್ಲಿದೆ. ಅಧ್ಯಕ್ಷ ಸ್ಥಾನ ಖಾಲಿಯಾಗಿಲ್ಲ, ಖಾಲಿಯಾದಾಗ ಮಾಡಬಹುದು. ಆದರೆ 65 ಸ್ಥಾನಗಳನ್ನು ಗೆದ್ದಂತಹ ಪಕ್ಷವೊಂದು ಚುನಾವಣೆ ಮುಗಿದು ಐದು ತಿಂಗಳಾದರೂ, ವಿರೋಧ ಪಕ್ಷದ ನಾಯಕನ್ನು ಆಯ್ಕೆ ಮಾಡಿಲ್ಲ ಎಂದರೆ ಪಕ್ಷದ ಒಳಗೆ ದೌರ್ಬಲ್ಯ ಏನಿದೆ ಎಂದು ನಾನು ಮಾತನಾಡಲು ಹೋಗುವುದಿಲ್ಲ. 

ಯಾರನ್ನೇ ಅಧ್ಯಕ್ಷರನ್ನಾಗಿ, ವಿರೋಧ ಪಕ್ಷದ ನಾಯಕರನ್ನಾಗಿ ಮಾಡಲಿ ಅವರಿಗೆ ಶುಭವಾಗಲಿ. ಅವರು ನಮ್ಮ ತಪ್ಪುಗಳನ್ನು ಕಂಡುಹಿಡಿಯಲಿ, ಜಾಗೃತಗೊಳಿಸಲಿ, ಪ್ರಜಾಪ್ರಭುತ್ವದ ಮೌಲ್ಯಗಳನ್ನ ಎತ್ತಿಹಿಡಿಯಲಿ ಎಂದು ಶುಭ ಹಾರೈಸುತ್ತೇನೆ. 

ಅಣ್ಣ ಮತ್ತು ಅಕ್ಕ ಒಂದಾದರೆ ಕಾಂಗ್ರೆಸ್ ಪಕ್ಷಕ್ಕೆ ಸವಾಲಲ್ಲವೇ ಎಂದಾಗ “ಇರಬೇಕು, ಕುಸ್ತಿಯಲ್ಲಿ ಎದುರಾಳಿ ಸರಿಯಾಗಿ ಇದ್ದಾಗ ಮಾತ್ರ ಕುಸ್ತಿ ಅಖಾಡಕ್ಕೂ ಗೌರವ. ಪಟ್ಟುಗಳು ಸ್ವಲ್ಪ ಬಿಗಿಯಾಗಿರಬೇಕು ಎಂದರು.

ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ಮತಗಳನ್ನು ಸೆಳೆಯಲು ಶೋಭ ಕರಂದ್ಲಾಜೆ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗುತ್ತಿದೆಯೇ ಎನ್ನುವುದನ್ನು ಪ್ರಶ್ನೆಗೆ,  “ನಾವು ಜಾತಿ ಮೇಲೆ‌ ಅಲ್ಲ, ನೀತಿ ಮೇಲೆ ರಾಜಕಾರಣ ಮಾಡುತ್ತೇವೆ” ಎಂದು ಉತ್ತರಿಸಿದರು.

ಕಾಂಗ್ರೆಸ್ ಪಕ್ಷ ಚುನಾವಣೆ ವೇಳೆ ಮಹಿಳೆಯರ ಮನಸ್ಸನ್ನು ಗೆದ್ದು ಅಧಿಕಾರಕ್ಕೆ ಬರಲು ಕಾರಣವಾಯಿತು. ಬಿಜೆಪಿ ಮಹಿಳಾ ಅಧ್ಯಕ್ಷರನ್ನು ಮಾಡುವುದು ಕಾಂಗ್ರೆಸ್ ಪಕ್ಷವನ್ನು ಕಟ್ಟಿಹಾಕುವ ಹುನ್ನಾರವೇ ಎಂದು ಕೇಳಿದಾಗ, 

“ತಪ್ಪೇನಿದೆ, ಮಾಡಲಿ ಬಿಡಿ, ನಮ್ಮ ಅಕ್ಕ ಅಧ್ಯಕ್ಷರಾದರೆ ಒಳ್ಳೆಯದಲ್ಲವೇ?  ಹಿರಿಯ ನಾಯಕರು, ಕೆಜೆಪಿ ಕಟ್ಟಿದ್ದಾರೆ, ಬಿಜೆಪಿ ಬೆಳೆಸಿದ್ದಾರೆ, ಕೇಂದ್ರದಲ್ಲಿ ಮಂತ್ರಿಯಾಗಿದ್ದಾರೆ, ಅವರದೇ ಅನುಭವವಿದೆ, ಅವರು ಆದರೆ ಸಂತೋಷ” ಎಂದು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button