Belagavi NewsBelgaum NewsKannada NewsKarnataka NewsLatest

*ಮಹಿಳೆಯರಲ್ಲಿರುವ ಪ್ರತಿಭೆಯನ್ನು ಪ್ರೋತ್ಸಾಹಿಸಿ: ಆಶಾ ಪ್ರಭಾಕರ ಕೋರೆ*

ಕೆಎಲ್‌ಇ ಸ್ವಶಕ್ತಿ ಮಹಿಳಾ ಸಬಲೀಕರಣದಿಂದ “ದೀಪೋತ್ಸವ- 2023″ ಸಮಾರಂಭ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮಹಿಳೆಯರಲ್ಲಿರುವ ಹುದುಗಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಎಲ್ಲರ ಕರ್ತವ್ಯವಾಗಿದೆ. ಅವಳಿಗೆ ಹೆಚ್ಚು ಹೆಚ್ಚು ಅವಕಾಶಗಳನ್ನು ನೀಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವಂತಾಗಬೇಕು. ದೇಶದ ವಿಕಾಸಕ್ಕೆ ಅವಳ ಕೊಡುಗೆ ಅಪಾರವಾಗಿದೆ ಎಂದು ಕೆಎಲ್‌ಇ ಸ್ವಶಕ್ತಿ ಸಬಲೀಕರಣ ಘಟಕದ ವತಿಯಿಂದ ಕೆಎಲ್‌ಇ ಸ್ವಶಕ್ತಿ ಮಹಿಳಾ ಸಬಲೀಕರಣ ಘಟಕದ ಅಧ್ಯಕ್ಷೆ ಆಶಾ ಪ್ರಭಾಕರ ಕೋರೆ ಹೇಳಿದರು.


ಕೆಎಲ್‌ಇ ಸ್ವಶಕ್ತಿ ಮಹಿಳಾ ಸಬಲೀಕರಣ ಘಟಕದಿಂದ “ದೀಪೋತ್ಸವ- 2023″ ವಾರ್ಷಿಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಬೆಳಗಾವಿಯ ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜು ಕ್ಯಾಂಪಸ್‌ನಲ್ಲಿರುವ ಕೆಎಲ್‌ಇ ಶತಮಾನೋತ್ಸವ ಕನ್ವೆನ್ಷನ್ ಸೆಂಟರ್‌ನಲ್ಲಿ ಜರುಗಿದ ವರ್ಣರಂಜಿತ ಸಮಾರಂಭದಲ್ಲಿ ವಿಚಾರಗಳನ್ನು ಹಂಚಿಕೊಂಡರು. ‘ಪ್ರತಿವರ್ಷ ದೀಪೋತ್ಸವ ಸಮಾರಂಭವನ್ನು ಕೆಎಲ್‌ಇ ಸ್ವಶಕ್ತಿ ಮಹಿಳಾ ಸಬಲೀಕರಣ ಘಟಕವು ಆಯೋಜಿಸಿ ಮಹಿಳೆಯರಿಗೆ ವೇದಿಕೆಯನ್ನು ಕಲ್ಪಿಸಿಕೊಡುತ್ತಿದೆ. ತನ್ನಿಮಿತ್ತ ಅನೇಕ ಸ್ಪರ್ಧೆಗಳನ್ನು ಆಯೋಜಿಸುತ್ತಿದೆ. ಅವರ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಹೆಚ್ಚಿನ ಕಾಳಜಿಯನ್ನು ಘಟಕವು ವಹಿಸುತ್ತಿದೆ ಎಂದು ತಿಳಿಸಿದರು.
ಘಟಕದ ವತಿಯಿಂದ ಅನೇಕ ಸ್ಪರ್ಧೆಗಳು ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು. ರಂಗೋಲಿ, ಮೆಹಂದಿ, ಪಾಕಶಾಲೆ, ಕೇಶ ವಿನ್ಯಾಸ, ಆಕಾಶ ಕಂಡಿಲ್ ಮೇಕಿಂಗ್, ಸೀರೆ ಉಡುವುದು, ಟೈಲ್ಸ್ ಪೇಂಟಿಂಗ್, ಡ್ಯಾನ್ಸ್ ಹೀಗೆ ನಾನಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಘಟಕವು ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅಸಂಖ್ಯ ಮಹಿಳೆಯರಲ್ಲಿಯ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿತು. ಈ ಸಂದರ್ಭದಲ್ಲಿ ಮಳಿಗೆಗಳಲ್ಲಿ ಮಹಿಳೆಯರು ಸಿದ್ಧ ಪಡಿಸಿದ ಕರಕುಶಲ ವಸ್ತುಗಳ ಪ್ರದರ್ಶನವನ್ನು ಜರುಗಿಸಲಾಯಿತು. ಆಶಾ ಪ್ರಭಾಕರ ಕೋರೆಯವರು ಪ್ರತಿಭಾ ಸಂಪನ್ನ ಅನೇಕ ಮಹಿಳೆಯರನ್ನು ಗೌರವಿಸಿ ಅಭಿನಂದಿಸಿದರು.


ಈ ಘಟಕದ ಉಪಾಧ್ಯಕ್ಷೆ ಡಾ.ಎನ್.ಎಸ್.ಮಹಾಂತಶೆಟ್ಟಿ, ಡಾ.ಅಲಕಾ ಕಾಳೆ, ಡಾ.ಸುಜಾತಾ ಜಾಲಿ, ಮುಖ್ಯ ಸಂಯೋಜಕಿ ಡಾ.ಪ್ರೀತಿ ಕೋರೆ ದೊಡ್ಡವಾಡ, ಕಾರ್ಯದರ್ಶಿ ಡಾ.ನೇಹಾ ಧಾಡೆ, ಸಾಂಸ್ಕೃತಿಕ ಕಾರ್ಯಕ್ರಮಗಳ ತೀರ್ಪುಗಾರರಾದ ಧನಶ್ರೀ ಗುರವ, ಮೊದಲಾದವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.


ಕಾರ್ಯಕ್ರಮವನ್ನು ಡಾ.ಉಷಾರಾಣಿ ಎಸ್.ಸಾನು ಮತ್ತು ಡಾ.ಅರ್ಚನಾ ಎಸ್.ಪಾಟೀಲ್, ಡಯಾನಾ ಅರಳಿಕಟ್ಟಿಯವರು ಸಂಯೋಜಿಸಿದರು, ಘಟಕದ ಎಲ್ಲ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button