Belagavi NewsBelgaum NewsKannada NewsKarnataka NewsLatestPolitics

*ಬೆಳಗಾವಿಯಲ್ಲಿ ಮನಸೂರೆಗೊಂಡ ಅದ್ಧೂರಿ ಕನ್ನಡ ಹಬ್ಬ*

ಗೀತ ಗಾಯನದ ಮೂಲಕ ಕನ್ನಡಾಂಬೆಗೆ ನಮನ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕನ್ನಡನಾಡು ವಿವಿಧ ಧರ್ಮ ಮತ್ತು ಸಂಸ್ಕೃತಿಗಳ ಸಂಗಮವಾಗಿದೆ. ಪ್ರಾಚೀನ ಕಾಲದಿಂದಲೂ ತನ್ನದೇ ಆದ ಭವ್ಯ ಸಾಂಸ್ಕೃತಿಕ ಪರಂಪರೆಯನ್ನು ಬೆಳೆಸಿಕೊಂಡು ಬಂದಿದೆ. ಸಾಮರಸ್ಯವೇ ಕನ್ನಡ ಸಂಸ್ಕೃತಿಯ ಜೀವಾಳವಾಗಿದೆ. ಕರ್ನಾಟಕವು ಸಹಬಾಳ್ವೆ, ಸೌರ್ಹಾದತೆ ಮತ್ತು ಭಾವೈಕ್ಯತೆಯ ತವರು ಮನೆಯಾಗಿದೆ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ತಿಳಿಸಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ (ನ.01) ನಡೆದ 68ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ  ಭುವನೇಶ್ವರಿ ದೇವಿಯ ಮೂರ್ತಿಗೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು.

ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಬಹಳ ದಿನಗಳ ಕನಸುಗಿದ್ದು, 150 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಹಾಗೂ ಸುಸಜ್ಜಿತ ನೂತನ ಜಿಲ್ಲಾಡಳಿತ ಕಚೇರಿ ಸಂಕೀರ್ಣ ನಿರ್ಮಿಸಲಾಗುವುದು. ಮೊದಲ ಹಂತದಲ್ಲಿ‌ 100 ಕೋಟಿ ರೂಪಾಯಿ ಬಿಡುಗಡೆಯಾಗಲಿದೆ. ಉಳಿದ ಹಣ ಎರಡನೇ ಕಂತಿನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಮೂರು ವರ್ಷಗಳ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

ರಾಜ್ಯೋತ್ಸವಕ್ಕೆ ವಿಶೇಷ ಅನುದಾನ ತರಲು ಪ್ರಯತ್ನಿಸಲಾಗುವುದು. ಮಹಾತ್ಮಾ ಗಾಂಧೀಜಿ ಕಾಂಗ್ರೆಸ್ ಅಧಿವೇಶನದಲ್ಲಿ ಪಾಲ್ಗೊಂಡ ನೂರು ವರ್ಷಗಳ ಸ್ಮರಣಾರ್ಥ ವಿಶೇಷ ಕಾರ್ಯಕ್ರಮ ರೂಪಿಸುವ ಕುರಿತು ಮುಖ್ಯಮಂತ್ರಿಗಳ ಜತೆ  ಚರ್ಚೆ ನಡೆಸಲಾಗುವುದು.

ಬೆಳಗಾವಿ ತಾಲ್ಲೂಕಿನಲ್ಲಿ ಎಂಟು‌ ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವುದರಿಂದ ಬೆಳಗಾವಿ ತಾಲ್ಲೂಕು ವಿಭಜನೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಆದಷ್ಟು‌ ಬೇಗ ವಿಭಜನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಸತೀಶ ಜಾರಕಿಹೊಳಿ ಅವರು ಹೇಳಿದರು. 

ಗೀತ ಗಾಯನದ ಮೂಲಕ ಕನ್ನಡಾಂಬೆಗೆ ನಮನ:

ಇದೇ ಸಂದರ್ಭದಲ್ಲಿ ಹುಯಿಲಗೋಳ ನಾರಾಯಣರಾಯರ “ಉದಯವಾಗಲಿ‌ ನಮ್ಮ ಚೆಲುವ ಕನ್ನಡ ನಾಡು”,ಕುವೆಂಪು ಅವರ “ಎಲ್ಲಾದರು ಇರು ಎಂತಾದರು ಇರು”, ದ.ರಾ.ಬೇಂದ್ರೆ ಅವರ “ಒಂದೇ ಒಂದೇ ಕರ್ನಾಟಕವೊಂದೇ”, ಸಿದ್ದಯ್ಯ ಪುರಾಣಿಕ ಅವರ “ಹೊತ್ತಿತ್ತೋ ಹೊತ್ತಿತ್ತು ಕನ್ನಡದ ದೀಪ” ಹಾಗೂ ಚನ್ನವೀರ ಕಣವಿ ಅವರ “ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ” ಈ ಐದು ಹಾಡುಗಳನ್ನು ಹಾಡುವ ಮೂಲಕ ಕನ್ನಡಾಂಬೆಗೆ ಗೀತ ಗಾಯನದ ಮೂಲಕ ನಮನ ಸಲ್ಲಿಸಲಾಯಿತು.

ಸಚಿವರ ಸಂದೇಶ:

  • 68ನೇ ಕರ್ನಾಟಕ ರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ ಕರ್ನಾಟಕ ಏಕೀಕರಣಕ್ಕೆ ದುಡಿದ ಎಲ್ಲ ಮಹನೀಯರನ್ನು ಸ್ಮರಿಸುತ್ತ, ಇಂದಿನ ರಾಜ್ಯೋತ್ಸವದ ಸಂಭ್ರಮದಲ್ಲಿ ಭಾಗಿಯಾಗಿರುವ ಎಲ್ಲ ಹಿರಿಯ ನಾಗರೀಕರು, ವಿದ್ವಾಂಸರು, ಕವಿ-ಸಾಹಿತಿಗಳು, ಮಾನ್ಯ ಮಹಾಪೌರರು, ಉಪ ಮಹಾಪೌರರು, ಜಿಲ್ಲೆಯ ಸಂಸದರು, ಶಾಸಕ ಮಿತ್ರರು ಹಾಗೂ ಎಲ್ಲಾ ಜನಪ್ರತಿನಿಧಿಗಳು, ಅಧಿಕಾರಿಗಳು, ನಾಗರಿಕ ಬಂಧುಗಳು, ಮುದ್ದು ಮಕ್ಕಳು ಮತ್ತು ಸುದ್ದಿ-ಮಾಧ್ಯಮದ ಸ್ನೇಹಿತರಿಗೆ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು….
  • ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಬೆಳಗಾವಿ ಜಿಲ್ಲೆಯ ಬೈಲೂರ ನಿಷ್ಕಲ ಮಂಟಪದ ನಿಜಗುಣಾನಂದ ಮಹಾಸ್ವಾಮೀಜಿ ಹಾಗೂ ಡಾ.ಎಸ್.ಬಾಳೇಶ ಭಜಂತ್ರಿ ಅವರಿಗೆ ಈ ಸಂದರ್ಭದಲ್ಲಿ ಜಿಲ್ಲೆಯ ಸಮಸ್ತ ನಾಗರಿಕರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
  • ಕನ್ನಡನಾಡು ವಿವಿಧ ಧರ್ಮ ಮತ್ತು ಸಂಸ್ಕೃತಿಗಳ ಸಂಗಮವಾಗಿದೆ. ಪ್ರಾಚೀನ ಕಾಲದಿಂದಲೂ ತನ್ನದೇ ಆದ ಭವ್ಯ ಸಾಂಸ್ಕೃತಿಕ ಪರಂಪರೆಯನ್ನು ಬೆಳೆಸಿಕೊಂಡು ಬಂದಿದೆ. ಸಾಮರಸ್ಯವೇ ಕನ್ನಡ ಸಂಸ್ಕೃತಿಯ ಜೀವಾಳವಾಗಿದೆ. ಕರ್ನಾಟಕವು ಸಹಬಾಳ್ವೆ, ಸೌರ್ಹಾದತೆ ಮತ್ತು ಭಾವೈಕ್ಯತೆಯ ತವರು ಮನೆಯಾಗಿದೆ.
  • ಕನ್ನಡ ಭಾಷೆಗೆ ಸಾವಿರಾರು ವರ್ಷಗಳಷ್ಟು ಸುದೀರ್ಘ ಇತಿಹಾಸವಿದೆ. ಆದಿಕವಿ ಪಂಪನಿAದ- ರಾಷ್ಟ್ರಕವಿ ಕುವೆಂಪುವರೆಗೂ ಮಹಾನ್ ಕವಿಗಳು ಕನ್ನಡ ಭಾಷೆಯಲ್ಲಿ ನೂರಾರು ಮಹತ್ವದ ಕೃತಿಗಳನ್ನು ರಚಿಸಿದ್ದಾರೆ. ಇಡೀ ವಿಶ್ವ ಸಾಹಿತ್ಯಕ್ಕೆ ಕನ್ನಡ ಸಾಹಿತ್ಯದ ಕೊಡುಗೆ ಅಪಾರವಾಗಿದೆ. “ಸರ್ವ ಜನಾಂಗದ ಶಾಂತಿಯ ತೋಟ..
    ರಸಿಕರ ಕಂಗಳ ಸೆಳೆಯುವ ನೋಟ…
    ಹಿಂದು, ಕ್ರೈಸ್ತ್, ಮುಸಲ್ಮಾನ, ಪಾರಸಿಕ ಜೈನರುದ್ಯಾನ…”
  • ರಾಷ್ಟ್ರಕವಿ ಕುವೆಂಪು ರಚಿಸಿರುವ ನಾಡಗೀತೆಯ ಈ ಸಾಲುಗಳು ಬೆಳಗಾವಿ ಜಿಲ್ಲೆಗೆ ಅಕ್ಷರಶಃ ಅನ್ವಯಿಸುತ್ತವೆ. ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ನಮ್ಮ ದೇಶದ ಸಂಸ್ಕೃತಿಯು ಬೆಳಗಾವಿಯಲ್ಲಿ ನೆಲೆಸಿರುವ ವಿವಿಧ ಧರ್ಮೀಯರು ಮತ್ತು ಹಲವು ಭಾಷಿಕರ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ.
  • ಸ್ವಾತಂತ್ರಂತ್ರ್ಯಕ್ಕಾಗಿ ಬ್ರಿಟೀಷರೊಡನೆ ಹೋರಾಟಕ್ಕೆ ನಾಂದಿ ಹಾಡಿದ ಕಿತ್ತೂರಿನ ರಾಣಿ ಚೆನ್ನಮ್ಮ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಮ್ಮ ನಾಡಿನವರು ಎಂಬುದು ಹೆಮ್ಮೆಯ ವಿಷಯ. ಪ್ರಪ್ರಥಮ ಮಹಿಳಾ ಸೈನ್ಯವನ್ನು ಕಟ್ಟಿದ ಬೆಳವಡಿ ಮಲ್ಲಮ್ಮ ನಮ್ಮ ನಾಡಿನ ಧೀಮಂತ ಶಕ್ತಿ.
  • ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಅಧ್ಯಕ್ಷತೆ ವಹಿಸಿದ್ದ ಏಕಮೇವ ಭಾರತೀಯ ಕಾಂಗ್ರೆಸ್ ಅಧಿವೇಶನವು ನೂರು ವರ್ಷಗಳ ಹಿಂದೆ ಅಂದರೆ 1924ರಲ್ಲಿ ನಮ್ಮ ಬೆಳಗಾವಿಯ ಪುಣ್ಯಭೂಮಿಯಲ್ಲಿಯೇ ಜರುಗಿದ್ದು, ಹಿರಿಮೆ ಎನ್ನಬಹುದಾಗಿದೆ.
  • ಅದೇ ರೀತಿ ಡಾ: ಬಾಬಾ ಸಾಹೇಬ ಅಂಬೇಡ್ಕರ್ ಅವರು ಚಿಕ್ಕೋಡಿ ನ್ಯಾಯಾಲಯದ ಪ್ರಕರಣವೊಂದರಲ್ಲಿ ವಕಾಲತ್ತು ವಹಿಸಿದ್ದು ಈ ನೆಲದ ಇನ್ನೊಂದು ವಿಶೇಷ. ಅಲ್ಲದೇ ಸಮಾನತೆಯನ್ನು ಸಾರಲು ಜಾತಿ-ಭೇದವನ್ನು ತೊಡೆದು ಹಾಕಲು ವಿಶೇಷವಾಗಿ ಅಸ್ಪೃಶ್ಯತೆಯ ನಿವಾರಣೆಗಾಗಿ ಬಹಿಷ್ಕೃತ ಹಿತಕರಣಿ ಸಭಾ ಮೂಲಕ ಜಿಲ್ಲೆಯ ನಿಪ್ಪಾಣಿಯಲ್ಲಿ ಚಳುವಳಿಯನ್ನು ರೂಪಿಸಿದ್ದು, ನಮಗೆಲ್ಲ ಹೆಮ್ಮೆಯ ವಿಷಯ.
  • ಸ್ವಾತಂತ್ರಂತ್ರ್ಯ ಪೂರ್ವದಲ್ಲಿಯೇ ಕನ್ನಡ ಕುಲಪುರೋಹಿತರೆಂದು ಖ್ಯಾತಿವೆತ್ತ ಆಲೂರು ವೆಂಕಟರಾಯರು ಕರ್ನಾಟಕ ಏಕೀಕರಣ ಚಳುವಳಿಯ ಕಿಚ್ಚು ಹೊತ್ತಿಸಿದರು. 1950ರ ಸುಮಾರಿಗೆ ಭಾರತವು ಗಣರಾಜ್ಯವೆಂದು ಘೋಷಿಸಲ್ಪಟ್ಟ ನಂತರ, ಡೆಪ್ಯೂಟಿ ಚೆನ್ನಬಸಪ್ಪ, ಅ.ನ.ಕೃಷ್ಣರಾಯರು, ಬಿ.ಎಂ.ಶ್ರೀಕಂಠಯ್ಯನವರು, ಫ.ಗು.ಹಳಕಟ್ಟಿಯವರು, ಹುಯಿಲಗೋಳ ನಾರಾಯಣರಾಯರು, ಅಂದಾನೆಪ್ಪ ದೊಡ್ಡಮೇಟಿ ಮುಂತಾದ ಮಹನೀಯರ ಅವಿರತ ಹೋರಾಟದ ಫಲವಾಗಿ 1956ರ ನವೆಂಬರ್ 1 ರಂದು ನಮ್ಮ ಹೆಮ್ಮೆಯ ಕರುನಾಡು, ಚಂದನದ ತವರೂರು ಕರ್ನಾಟಕ ರಾಜ್ಯವು ಉದಯವಾಗಿದೆ.
  • ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಬೆಳಗಾವಿ ಜಿಲ್ಲೆಯಿಂದ ಹಲವಾರು ಮಹನೀಯರು ಕ್ರಿಯಾಶೀಲರಾಗಿ ಹೋರಾಡಿದ್ದು, ಡೆಪ್ಯುಟಿ ಚೆನ್ನಬಸಪ್ಪ, ಬೈಲಹೊಂಗಲದ ಗಂಗಾಧರ ತುರಮುರಿ, ಹುದಲಿಯ ಸ್ವಾತಂತ್ರಂತ್ರ್ಯ ಯೋಧರಾದ ಗಂಗಾಧರರಾವ್ ದೇಶಪಾಂಡೆ, ಚಿಂಚಲಿಯ ರಾಷ್ಟ್ರೀಯವಾದಿ ಆರ್.ಎಸ್. ಹುಕ್ಕೇರಿ, ತ್ರಿವಿಧ ದಾಸೋಹಿ ನಾಗನೂರ ಶಿವಬಸವ ಮಹಾಸ್ವಾಮಿಗಳು, ಗೋಕಾವಿ ನಾಡಿನ ಬೆಟಗೇರಿ ಕೃಷ್ಣಶರ್ಮ, ಸವದತ್ತಿಯ ಶಂ.ಬಾ.ಜೋಶಿ, ಅಥಣಿಯ ಬಿ. ಎನ್. ದಾತಾರ, ಕುಂದರನಾಡಿನ ಅಣ್ಣೂ ಗುರೂಜಿ, ದತ್ತೋಪಂತ ಬೆಳವಿ, ಸಂಪಗಾವಿಯ ಚನ್ನಪ್ಪ ವಾಲಿ ಮೊದಲಾದವರ ಕೊಡುಗೆ ಅವಿಸ್ಮರಣೀಯವಾಗಿದೆ.
  • ಈ ಎಲ್ಲಾ ಹಿರಿಯ ಮಹನೀಯರುಗಳನ್ನು ಈ ಸಂದರ್ಭದಲ್ಲಿ ಕೃತಜ್ಞತೆಯಿಂದ ಮತ್ತೊಮ್ಮೆ ನೆನೆಸಿಕೊಂಡು ಅವರುಗಳಿಗೆ ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ.
  • ಗೋವಾ ಮತ್ತು ಮಹಾರಾಷ್ಟç ರಾಜ್ಯಗಳೊಂದಿಗೆ ಗಡಿಯನ್ನು ಹಂಚಿಕೊಂಡಿರುವ ನಮ್ಮ ಬೆಳಗಾವಿಯ ಸಂಸ್ಕೃತಿಯು ವೈಶಿಷ್ಟ್ಯಪೂರ್ಣವಾಗಿದೆ. ಕನ್ನಡ-ಹಿಂದಿ-ಮರಾಠಿ ಸೇರಿದಂತೆ ಬಹುಭಾಷಾ ಸಾಮರಸ್ಯವನ್ನು ನಾವಿಲ್ಲಿ ಕಾಣಬಹುದಾಗಿದೆ.
  • ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣವಾಗಿ 50 ವರ್ಷ ಪೂರ್ಣಗೊಳ್ಳಲಿರುವ ಸುವರ್ಣ ಮಹೋತ್ಸವದ ಈ ಸುಸಂದರ್ಭದಲ್ಲಿ “ಕರ್ನಾಟಕ-50: ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ”- ಎಂಬ ಶೀರ್ಷಿಕೆಯಡಿ ರಾಜ್ಯದಾದ್ಯಂತ ವರ್ಷಪೂರ್ತಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಸರಕಾರದ ವತಿಯಿಂದ ಆಚರಿಸಲಾಗುತ್ತಿದೆ.

•ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಮ್ಮ ಸರ್ಕಾರವು ಅನ್ನಭಾಗ್ಯ, ಗೃಹಜ್ಯೋತಿ, ಶಕ್ತಿ, ಗೃಹಲಕ್ಷ್ಮೀ ಹಾಗೂ ಯುವನಿಧಿಯಂತಹ ಪಂಚ ಗ್ಯಾರಂಟಿ ಯೋಜನೆಗಳನ್ನು ಅತ್ಯಂತ ಕಡಿಮೆ ಕಾಲಾವಧಿಯಲ್ಲಿ ಅನುಷ್ಠಾನಗೊಳಿಸುವ ಮೂಲಕ “ನುಡಿದಂತೆ ನಡೆದಿದೆ”.

  • ಐದು “ಗ್ಯಾರಂಟಿ ಯೋಜನೆ”ಗಳ ಸಮರ್ಪಕ ಅನುಷ್ಠಾನ ಸೇರಿದಂತೆ ಬೆಳಗಾವಿ ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆಗೊಳಿಸುವುದರ ಜತೆಗೆ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ 350 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ರಸ್ತೆ ಮೇಲ್ಸೆತುವೆ ಹಾಗೂ ಸದ್ಯಕ್ಕೆ ಇರುವ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ನೂತನ ಜಿಲ್ಲಾಡಳಿತ ಕಚೇರಿ ಸಂಕೀರ್ಣ ನಿರ್ಮಿಸಲು ಉದ್ಧೇಶಿಸಲಾಗಿದೆ.
  • ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಜಿಲ್ಲೆಯಲ್ಲಿ ಬೆಳೆ ಹಾನಿ ಕುರಿತು ಸಮೀಕ್ಷೆ ಕೈಗೊಳ್ಳಲಾಗಿದ್ದು, ಸುಮಾರು 3.54 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಬೆಳೆ ಹಾನಿಯಾದ ರೈತರಿಗೆ ಪರಿಹಾರ ನೀಡಲು ರೂ. 410 ಕೋಟಿ ಪರಿಹಾರ ಬಿಡುಗಡೆ ಕೋರಿ ವರದಿ ಸಲ್ಲಿಸಲಾಗಿದೆ.
  • ಪ್ರಸ್ತುತ ಹಿಂಗಾರು ಹಂಗಾಮಿನಲ್ಲಿಯೂ ಸಹ ಶೇ. 81ರಷ್ಟು ಮಳೆ ಕೊರತೆಯಾಗಿರುವುದರಿಂದ ಹಿಂಗಾರು ಬೆಳೆಗಳ ಬಿತ್ತನೆಯೂ ಕುಂಠಿತವಾಗಿರುತ್ತದೆ. ಜಿಲ್ಲೆಯಲ್ಲಿ ವಿವಿಧ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳನ್ನು ಹಂಗಾಮಿಗೆ ಬೇಕಾಗುವಷ್ಟು ದಾಸ್ತಾನು ಇರುತ್ತದೆ.
  • ಜಿಲ್ಲೆಯಲ್ಲಿ ರೈತ ಬಾಂಧವರಿಗೆ ಭೂಮಿ ಸಿದ್ಧತೆಯಿಂದ ಹಿಡಿದು ಬೆಳೆ ಕಟಾವಿನವರೆಗೆ ಬೇಕಾಗುವ ವಿವಿಧ ಪರಿಕರಗಳು, ಕೃಷಿ ಯಂತ್ರೋಪಕರಣಗಳು, ಬೀಜ ವಿತರಣೆ, ಲಘು ನೀರಾವರಿ ಹಾಗೂ ಇತರೆ ಯೋಜನೆಗಳ ಮೂಲಕ ಸಹಾಯಧನದಲ್ಲಿ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಇನ್ನೂ ಹೆಚ್ಚಿನ ರೀತಿಯಲ್ಲಿ ಸಹಾಯಧನದಡಿ ಸೌಲಭ್ಯಗಳನ್ನು ಒದಗಿಸಲು ಇಲಾಖೆಯ ಮೂಲಕ ಕ್ರಮ ಕೈಗೊಳ್ಳಲಾಗಿದೆ.
  • ಜಿಲ್ಲೆಯಲ್ಲಿ 24 ವಾರಗಳಿಗೆ ಸಾಕಾಗುವಷ್ಟು 15.22 ಲಕ್ಷ ಟನ್ ಮೇವಿನ ಲಭ್ಯತೆ ಇದೆ.
  • “ಹಸಿವು ಮುಕ್ತ ಕÀರ್ನಾಟಕ” ಇದು ನಮ್ಮ ಸರರ್ಕಾರದ ಮುಖ್ಯ ಧ್ಯೇಯವಾಗಿದ್ದು, ಇದಕ್ಕಾಗಿ ರಾಜ್ಯ ಸರರ್ಕಾರವು ಅನ್ನಭಾಗ್ಯ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯಲ್ಲಿ ಪ್ರತಿ ಸದಸ್ಯರಿಗೆ 10ಕೆ.ಜಿ ಅಕ್ಕಿ ಉಚಿತವಾಗಿ ನೀಡಲು ತೀರ್ಮಾನಿಸಲಾಗಿತ್ತು. ಆದರೆ ಕೆಲ ಕಾರಣಗಳ ಹಿನ್ನಲೆಯಲ್ಲಿ ಕಳೆದ ಜುಲೈ-2023ರ ಮಾಹೆಯಿಂದ ಐದು ಕೆ.ಜಿ ಅಕ್ಕಿಯ ಜೊತೆಗೆ ಇನ್ನುಳಿದ ಐದು ಕೆ.ಜಿಯ ಅಕ್ಕಿ ಮೊತ್ತಕ್ಕೆ ಸಮನಾಗಿ ಪಡಿತರ ಚೀಟಿಯ ಕುಟುಂಬದ ಮುಖ್ಯಸ್ಥೆಯ ಬ್ಯಾಂಕ್ ಖಾತೆಗೆ ನೇರವಾಗಿ ಪಡಿತರ ಚೀಟಿಯ ಪ್ರತಿ ಸದಸ್ಯರಿಗೆ ರೂ.170 ರಂತೆ ಡಿ.ಬಿ.ಟಿ(ನೇರ ನಗದು ವರ್ಗಾವಣೆ) ಮೂಲಕ ಹಣ ಜಮೆ ಮಾಡಲಾಗಿರುತ್ತದೆ.
  • ಸದ್ಯ ಜಿಲ್ಲೆಯಲ್ಲಿ 68,557 ಅಂತ್ಯೋದಯ ಅನ್ನ ಯೋಜನೆ, 10.78 ಲಕ್ಷ ಪಿ.ಎಚ್.ಎಚ್(ಆದ್ಯತಾ ಕುಟುಂಬ) ಹಾಗೂ 3.22 ಎನ್.ಪಿ.ಎಚ್.ಎಚ್(ಆದ್ಯತೇತರ ಕುಟುಂಬ) ಹೀಗೆ ಒಟ್ಟು ಸೇರಿ 14.70 ಲಕ್ಷ ಪಡಿತರ ಚೀಟಿಗಳು ಚಾಲ್ತಿಯಲ್ಲಿವೆ.
  • ಅನ್ನಭಾಗ್ಯ ಯೋಜನೆಯಡಿ ಒಟ್ಟು 37.46 ಲಕ್ಷ ಫಲಾನುಭವಿಗಳು ಪ್ರತಿ ಮಾಹೆ ಉಚಿತವಾಗಿ ಇದರ ಸದುಪಯೋಗ ಪಡೆಯುತ್ತಿದ್ದಾರೆ. ಈ ಯೋಜನೆಗೆ ಪ್ರತಿ ಮಾಹೆ ಇಪ್ಪತ್ತು ಸಾವಿರ ಮೆಟ್ರಿಕ್ ಟನ್ ಅಕ್ಕಿ ಹಾಗೂ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಡಿ.ಬಿ.ಟಿ ಮೂಲಕ ಜಮೆ ಮಾಡಲು 58.49 ಕೋಟಿ ಅನುದಾನ ಸರರ್ಕಾರದಿಂದ ವೆಚ್ಚ ಮಾಡಲಾಗುತ್ತಿದೆ.
  • ಗೃಹಲಕ್ಷ್ಮೀ ಯೋಜನೆಯಡಿ ಬೆಳಗಾವಿ ಜಿಲ್ಲೆಯಲ್ಲಿ 11.87 ಲಕ್ಷ ಫಲಾನುಭವಿಗಳ ಗುರಿ ನಿಗದಿಪಡಿಸಿದ್ದು, 10.33 ಲಕ್ಷ ಫಲಾನುಭವಿಗಳು ನೋಂದಣಿಯಾಗಿರುತ್ತಾರೆ.
  • ಅದರನ್ವಯ ಅಗಸ್ಟ್-2023ರ ತಿಂಗಳಲ್ಲಿ 9.78 ಲಕ್ಷ ಫಲಾನುಭವಿಗಳಲ್ಲಿ 8.49 ಲಕ್ಷ ಫಲಾನುಭವಿಗಳಿಗೆ ರೂ. 2,000/- ದಂತೆ ಒಟ್ಟು ರೂ. 169 ಕೋಟಿ ಹಣ ಬ್ಯಾಂಕ್ ಖಾತೆಗಳಿಗೆ ಜಮೆಯಾಗಿರುತ್ತದೆ. ಸೆಪ್ಟೆಂಬರ್ ತಿಂಗಳಲ್ಲಿ ಒಟ್ಟು 9.73 ಲಕ್ಷ ಫಲಾನುಭವಿಗಳಲ್ಲಿ ಇಲ್ಲಿಯವರೆಗೆ 8.80 ಲಕ್ಷ ಫಲಾನುಭವಿಗಳಿಗೆ ಒಟ್ಟು ರೂ. 176 ಕೋಟಿ ಹಣ ಬ್ಯಾಂಕ್ ಖಾತೆಗಳಿಗೆ ಜಮೆಯಾಗಿರುತ್ತದೆ.
  • ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಕಲ್ಪಿಸುವ “ಶಕ್ತಿ” ಯೋಜನೆ ಜೂನ್ 11, 2023 ರಂದು ಆರಂಭಗೊAಡಿದ್ದು, ಬೆಳಗಾವಿ ಜಿಲ್ಲೆಯ ವ್ಯಾಪ್ತಿಯಲ್ಲಿ ಅಕ್ಟೋಬರ್ 26, 2023 ರವರೆಗೆ ಒಟ್ಟು 6.44 ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ. ಮಹಿಳೆಯರ ಉಚಿತ ಪ್ರಯಾಣದ ಮೊತ್ತ 149 ಕೋಟಿ ರೂಪಾಯಿ ಆಗಿರುತ್ತದೆ.
  • ರಾಜ್ಯ ಹಣಕಾಸು ಆಯೋಗದ ಅಡಿಯಲ್ಲಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಿಗೆ ಒಟ್ಟು 37 ಕೋಟಿ ರೂ.ಗಳ ಅನುದಾನ ಹಾಗೂ 15ನೇ ಹಣಕಾಸು ಆಯೋಗದ ಅಡಿ 77 ಕೋಟಿ ರೂ. ಗಳಷ್ಟು ಅನುದಾನ ಹಂಚಿಕೆಯಾಗಿದ್ದು, ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಬಳಸಿಕೊಳ್ಳಲಾಗುತ್ತಿದೆ.
  • ಕರ್ನಾಟಕ ರಾಜ್ಯೋತ್ಸವ ದಿನದಂದು ನಾವು ಸಮೃದ್ಧ ಹಾಗೂ ಬಲಿಷ್ಠ ಕರ್ನಾಟಕ ನಿರ್ಮಾಣಕ್ಕಾಗಿ ದೃಢಸಂಕಲ್ಪ ಮಾಡಬೇಕಿದೆ. ನಾಡಿನ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲು ನಾವೆಲ್ಲರೂ ಕಂಕಣ ಬದ್ಧರಾಗಬೇಕು. ಸದೃಢ, ಸಮೃದ್ಧ ಹಾಗೂ ಸ್ವಾವಲಂಬಿ ಕರ್ನಾಟಕ ನಿರ್ಮಾಣ ಮಾಡಲು ಪಣ ತೊಡೋಣ.
  • ಬೆಳಗಾವಿ ಜಿಲ್ಲೆಯೂ ಸೇರಿದಂತೆ ಇಡೀ ಕನ್ನಡ ನಾಡಿನಲ್ಲಿ ಸುಖ, ಶಾಂತಿ, ನೆಮ್ಮದಿ ಮತ್ತು ಸಾಮರಸ್ಯ ನೆಲೆಸಿ, ಸಮಸ್ತ ನಾಗರೀಕರು ಶಾಂತಿ ಮತ್ತು ಸಹ ಬಾಳ್ವೆ ನಡೆಸಲಿ ಮತ್ತು ಕನ್ನಡ ತಾಯಿ ಭುವನೇಶ್ವರಿಯ ಕೃಪೆ ನಿಮಗೆಲ್ಲರಿಗೂ ಸಿಗಲಿ ಎಂದು ಹಾರೈಸಿದರು.

ಸಂಸದ ಮಂಗಳಾ ಅಂಗಡಿ, ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ, ಬೆಳಗಾವಿ ಉತ್ತರ ವಿಧಾನ ಸಭಾ ಮತ ಕ್ಷೇತ್ರದ ಶಾಸಕ ಆಸೀಫ್ (ರಾಜು) ಸೇಠ್ ಬೆಳಗಾವಿ ದಕ್ಷಿಣ ವಿಧಾನ ಸಭಾ ಮತ ಕ್ಷೇತ್ರದ ಶಾಸಕ ಅಭಯ ಪಾಟೀಲ, ವಿಧಾನ ಪರಿಷತ್ ಸದಸ್ಯ ಸಾಬಣ್ಣ ತಳವಾರ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ನಗರ ಪೊಲೀಸ್ ಆಯುಕ್ತ ಎಸ್.ಎನ್.ಸಿದ್ದರಾಮಪ್ಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಹರ್ಷಲ್ ಭೋಯರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ್, ಮಹಾನಗರ ಪಾಲಿಕೆ ಮೇಯರ್ ಶೋಭಾ ಸೋಮನಾಚೆ, ಉಪ ಮೇಯರ್ ರೇಷ್ಮಾ ಪಾಟೀಲ ಪ್ರೊಬೇಷನರಿ ಐಎಎಸ್ ಅಧಿಕಾರಿ ಶುಭಂ ಶುಕ್ಲಾ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಬೆಳಗಾವಿ ಉಪ ವಿಭಾಗಾಧಿಕಾರಿ ಶ್ರವಣ ನಾಯಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಹಾಗೂ ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button