Wanted Tailor2
Cancer Hospital 2
Bottom Add. 3

*ಕನ್ನಡದಲ್ಲಿ ಬೇಡಿಕೊಂಡರೆ ಹರಿ ವರಗಳ ಮಳೆ ಗರೆಯುತ್ತಾನೆ, ಹರ ಮುನಿಯದೆ ಪೊರೆಯುತ್ತಾನೆ; ಕುವೆಂಪು, ಪಂಪ ಮಹಾಕವಿಗಳ ಕವನ ವಾಚಿಸಿದ ಡಿಸಿಎಂ*

ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನಾಡಿನೆಲ್ಲೆಡೆ 68ನೇ ಕನ್ನಡ ರಾಜ್ಯೋತ್ಸವವನ್ನು ಸಡಗರ-ಸಂಭ್ರಮದಿಂದ ಆಚರಿಸಲಾಯಿತು. ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಮಾಹಾ ಕವಿಗಳ ಅರ್ಥಪೂರ್ಣ ಕವನಗಳ ಸಾಲುಗಳನ್ನು ಹೇಳುವ ಮೂಲಕ ರಾಜ್ಯೋತ್ಸವದ ಮಹತ್ವ ಸಾರಿದರು.

ಕರ್ನಾಟಕವೆಂದು ಹೆಸರಾಗಿ 50 ವರ್ಷಗಳು ತುಂಬಿದ ಸಂದರ್ಭದಲ್ಲಿ ಕನ್ನಡಿಗರಿಗೆ ಹೃದಯಪೂರ್ವಕ ಅಭಿನಂದನೆಗಳು. ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ

ಆಚಾರಕ್ಕೆ ಅರಸನಾಗು
ನೀತಿಗೆ ಪ್ರಭುವಾಗು
|ಮಾತಿನಲಿ ಚೂಡಾಮಣಿಯಾಗು
ಕನ್ನಡ ಜ್ಯೋತಿ ಬೆಳಗು ಜಗಕೆಲ್ಲ!

ಕನ್ನಡ.. ಕನ್ನಡಿಗ.. ಕರ್ನಾಟಕ… ಈ ಮೂರಕ್ಕೂ ನವೆಂಬರ್‌ 1 ಕ್ಕೂ ಬಿಡಿಸಲಾರದ ನಂಟು. ಆದರೆ ಕನ್ನಡದ ಅಭಿಮಾನ ಬರೀ ನವೆಂಬರ್ 1 ಕ್ಕೆ ಸೀಮಿತ ಆಗದಿರಲಿ. ಕನ್ನಡ ಹೃದಯದ ಭಾಷೆಯಾಗಲಿ. ಕನ್ನಡ ಮನಸ್ಸಿನ ಭಾಷೆಯಾಗಲಿ

ಶ್ರೀ ರಾಮ ಹೇಳುತ್ತಾನೆ ‘ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ’ ಎಂದು. ಅಂದರೆ ಹುಟ್ಟಿದ ಊರು ಸ್ವರ್ಗಕ್ಕಿಂತಲೂ ಮಿಗಿಲು ಎಂಬುದು ಇದರ ಅರ್ಥ.

ಪಂಪ ಹೇಳುತ್ತಾನೆ:
ಆರಂಕುಶ ವಿಟ್ಟೊಡಂ ನೆನವುದೆನ್ನ ಮನಂ
ಬನವಾಸಿ ದೇಶಮಂ
ಅಂದರೆ, ಅಂಕುಶದಿಂದ ಚುಚ್ಚಿದರೂ ನಾನು ಹುಟ್ಟಿದ ಊರನ್ನು ಮರೆಯುವುದಿಲ್ಲ ಎಂಬುದು ಇದರ ಅರ್ಥ.

ಕುರಾನಿನಲ್ಲಿ ಹೇಳುತ್ತಾರೆ: ಸ್ವರ್ಗವು ತಂದೆ-ತಾಯಿಯ ಪಾದದ ಕೆಳಗೆ ಇದೆ ಎಂದು. ಅಂದರೆ ತಂದೆ-ತಾಯಿ ಸ್ಪರ್ಶಿಸಿದ ನೆಲವೇ ಸ್ವರ್ಗ ಎಂದು. ನಮಗೆ ಆ ಸ್ವರ್ಗ ಕರ್ನಾಟಕ. ನಮಗೆ ಸ್ವರ್ಗ ಕನ್ನಡ ಭೂಮಿ. ತುಂಗಾ, ಭದ್ರಾ, ಕೃಷ್ಣ, ಕಾವೇರಿ ಹರಿಯುವ ಈ ತಾಯಿ ನೆಲವೇ ನಮಗೆ ಸ್ವರ್ಗ.

ಕುವೆಂಪು ಹೇಳುತ್ತಾರೆ, “ಕನ್ನಡದಲ್ಲಿ ಬೇಡಿಕೊಂಡರೆ ಹರಿ ವರಗಳ ಮಳೆ ಗರೆಯುತ್ತಾನೆ. ಹರ ಮುನಿಯದೆ ಪೊರೆಯುತ್ತಾನೆ.”

ಈ ಪವಿತ್ರ ದಿನದಂದು ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ಲಕ್ಷಾಂತರ ಜನರನ್ನ ನಾವು ನೆನೆಯೋಣ. 2000 ವರ್ಷಗಳ ಇತಿಹಾಸ ಇರುವ ಕನ್ನಡ ಮರೆತರೆ ತಾಯಿಯನ್ನು ಮರೆತಂತೆ.

ದೀಕ್ಷೆಯ ತೊಡು ಇಂದೇ
ಕಂಕಣ ಕಟ್ಟಿಂದೇ
ಕನ್ನಡನಾಡೊಂದೇ
ಇನ್ನೆಂದೂ ತಾನೊಂದೇ.
ಅಂದರೆ, ನಾವು ಕೋಮು ದ್ವೇಷಕ್ಕೆ ಸಿಲುಕದೆ, ಕರ್ನಾಟಕದ ಮನಸ್ಸುಗಳನ್ನು ಒಡೆಯದೇ ಯಾವ ಹೊರಗಿನ ಶಕ್ತಿಗೂ ಹೆದರದೆ ಒಂದಾಗಿ ಬದುಕುತ್ತೇವೆ. ಸರ್ವಜನಾಂಗದ ಶಾಂತಿಯ ತೋಟ ಮರಳಿ ನಿರ್ಮಿಸುತ್ತೇವೆ ಎಂಬ ದೀಕ್ಷೆ ತೊಡೋಣ.

ಬಹಳಷ್ಟು ಮಂದಿಯ ತ್ಯಾಗ ಮತ್ತು ಬಲಿದಾನದ ಫಲವೇ ಅಖಂಡ ಕರ್ನಾಟಕ. ಇದನ್ನು ಜೋಪಾನವಾಗಿ ಕಾಪಾಡಬೇಕು. ಕರ್ನಾಟಕದ ಸ್ಫೂರ್ತಿ ನಿರಂತರವಾಗಿರಲಿ. ಸಮೃದ್ಧ ಹಾಗೂ ಸ್ವಾವಲಂಬಿ ಕರ್ನಾಟಕ ಮೈದಾಳಲಿ.

ಕನ್ನಡಕೆ ಹೋರಾಡು ಕನ್ನಡದ ಕಂದಾ
ಕನ್ನಡವ ಕಾಪಾಡು ನನ್ನ ಆನಂದಾ
ಜೋಗುಳದ ಹರಕೆಯಿದು ಮರೆಯಿದಿರು ಚಿನ್ನಾ
ಮರೆತೆಯಾದರೆ ಅಯ್ಯೋ ಮರೆತಂತೆ ನನ್ನ!

ನಾವು ಹುಟ್ಟಿದ ನಂತರ ಮಾತು ಕಲಿಯಲು ಎರಡು ವರ್ಷ ಬೇಕು. ಆದರೆ ಯಾವುದನ್ನು ಆಡಬಾರದು ಎಂಬುದನ್ನು ಕಲಿಯಲು ಇಡೀ ಜೀವಮಾನ ಸಾಲದು.

ಕುವೆಂಪು ಅವರು ಹೇಳಿದಂತೆ:
ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ
ಸತ್ತಂತಿಹರನು ಬಡಿದೆಚ್ಚರಿಸು ಕಚ್ಚಾಡುವರನು ಕೂಡಿಸಿ ಒಲಿಸು
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು
ಒಟ್ಟಿಗೆ ಬಾಳುವ ತೆರದಲಿ ಹರಸು.

“ಛಿದ್ರ” ಮಾಡುವವರು ಈಗಲೂ ನಮ್ಮ ಸುತ್ತ ಇದ್ದಾರೆ. ಅವರಿಗೆ ಕುವೆಂಪು ಅವರ ಈ ಹಾಡನ್ನು ಕೇಳಿಸಬೇಕು:
“ಕರ್ನಾಟಕ ಎಂಬುದು
ಬರೀ ಹೆಸರೇ ಮಣ್ಣಿಗೆ
ಮಂತ್ರ ಕಣಾ ಶಕ್ತಿ ಕಣಾ
ತಾಯಿ ಕಣಾ ದೇವಿ ಕಣಾ
ಬೆಂಕಿ ಕಣಾ ಸಿಡಿಲು ಕಣಾ”.

ಬಸ್ ಗೆ ಬೆಂಕಿ ಹಚ್ಚುವುದರಲ್ಲಿ ಭಾಷೆ ಅಭಿಮಾನ ಇರುವುದಿಲ್ಲ. ರೈಲಿಗೆ ಬೆಂಕಿ ಹಚ್ಚುವುದರಲ್ಲಿ ರಾಜ್ಯದ ಅಭಿಮಾನ ಇರುವುದಿಲ್ಲ. ಈ ದೇಶದ ಎಲ್ಲರೂ ಒಂದೇ ತಾಯಿಯ ಮಕ್ಕಳು ಎಂಬುದನ್ನು ಅರಿಯಬೇಕು.

ಪವಿತ್ರವಾದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ನಿಮಗೆ ಹಾಗೂ ರಾಜ್ಯದ ಗೌರವ, ನೆಲ, ಜಲ, ಭಾಷೆ ಉಳಿಸಲು ಮುಂದಾಗುವವರಿಗೆ ಶುಭವಾಗಲಿ ಎಂದರು.

Bottom Add3
Bottom Ad 2

You cannot copy content of this page